Advertisement

Smriti Irani ದೆಹಲಿ ಬಿಜೆಪಿಯಲ್ಲಿ ಸಕ್ರಿಯ: ”ಸಿಎಂ ಫೇಸ್” ಆಗಿ ಕೇಳಿ ಬರುತ್ತಿರುವ ಹೆಸರು!

11:08 PM Sep 16, 2024 | ವಿಷ್ಣುದಾಸ್ ಪಾಟೀಲ್ |

ಮಾಜಿ ಕೇಂದ್ರ ಸಚಿವೆ,ಅಮೇಠಿಯ ಮಾಜಿ ಸಂಸದೆ ಸ್ಮೃತಿ ಇರಾನಿ(Smriti Irani) ಅವರು ಸದ್ಯ ದೆಹಲಿಯ ಬಿಜೆಪಿ(BJP) ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವಿಕೆಯು ಹಲವು ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ. ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನ ಸ್ಥಳೀಯ ರಾಜಕೀಯದಲ್ಲಿ ಅವರ ಸಂಭಾವ್ಯ ಪಾತ್ರವೇನು ಎಂಬ ಕುರಿತು ಕೇಸರಿ ಪಾಳಯದ ನಗರ ಘಟಕದೊಳಗೆ ದೊಡ್ಡದೊಂದು ಸಂಚಲನ ಮೂಡಿಸಿದೆ.

Advertisement

ದೆಹಲಿಯಲ್ಲೇ ಹುಟ್ಟಿ ಬೆಳೆದ ಮಾಜಿ ಕೇಂದ್ರ ಸಚಿವೆ ಸೆಪ್ಟೆಂಬರ್ 2 ರಿಂದ ನಗರದಲ್ಲಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ದೆಹಲಿ ಬಿಜೆಪಿಯ 14 ಜಿಲ್ಲಾ ಘಟಕಗಳ ಪೈಕಿ ಏಳರಲ್ಲಿ ಸದಸ್ಯತ್ವ ಅಭಿಯಾನದ ಮೇಲ್ವಿಚಾರಣೆಯನ್ನು ಸ್ಮೃತಿ ಇರಾನಿ ಅವರಿಗೆ ವಹಿಸಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಪಕ್ಷದ ಒಳಗಿನವರು ಇರಾನಿ ಅವರು ದಕ್ಷಿಣ ದೆಹಲಿಯಲ್ಲಿ ಮನೆಯೊಂದನ್ನು ಖರೀದಿಸಿದ್ದಾರೆ ಎಂದು ಹೇಳಿದ್ದು, ನಗರ ಘಟಕದ ಚಟುವಟಿಕೆಗಳಲ್ಲಿ ಅವರು ಮತ್ತಷ್ಟು ತೊಡಗಿಸಿಕೊಳ್ಳುವ ಸುಳಿವು ನೀಡಿದ್ದಾರೆ.

“ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿಗೆ ಕಠಿಣ ಹೋರಾಟ ನೀಡಲು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನಾಯಕತ್ವ ವಹಿಸುವ ಮುಖವಾಗಿ ಪಕ್ಷದ ಕೆಲ ಉನ್ನತ ನಾಯಕರು ಒತ್ತಾಯಿಸುತ್ತಿರುವ ಮಧ್ಯೆ ಈ ಬೆಳವಣಿಗೆಗಳು ನಡೆದಿವೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

Advertisement

2020 ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಘೋಷಿಸದೆ ಸ್ಪರ್ಧಿಸಿತ್ತು ಆದರೆ 70 ಸ್ಥಾನಗಳಲ್ಲಿ ಕೇವಲ ಎಂಟು ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಈಗ ಬದಲಾದ ಸನ್ನಿವೇಶದಲ್ಲಿ ದೆಹಲಿಯ ಅಧಿಕಾರವನ್ನು ಆಮ್ ಆದ್ಮಿ ಪಕ್ಷದಿಂದ ಕಸಿದುಕೊಳ್ಳಲು ಬಿಜೆಪಿ ಈಗಾಗಲೇ ರಣತಂತ್ರ ರೂಪಿಸಲು ಆರಂಭಿಸುತ್ತಿದೆ.

ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯೊಂದಿಗೆ ಚುನಾವಣೆಗೆ ಹೋಗುವ ಆಲೋಚನೆ ಬಂದರೆ, ಆ ಜವಾಬ್ದಾರಿಗೆ ಸೂಕ್ತ ನಾಯಕನ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ ಎಂದು ಮತ್ತೊಬ್ಬ ದೆಹಲಿ ಬಿಜೆಪಿ ನಾಯಕ ಹೇಳಿರುವುದು ಇನ್ನಷ್ಟು ಕುತೂಹಲ ಹೆಚ್ಚಿಸಿದೆ.

ಬಿಜೆಪಿ ಸಂಸದರಾದ ಮನೋಜ್ ತಿವಾರಿ ಮತ್ತು ಬಾನ್ಸುರಿ ಸ್ವರಾಜ್, ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ಮತ್ತು ಪಶ್ಚಿಮ ದೆಹಲಿಯ ಮಾಜಿ ಸಂಸದ ಪರ್ವೇಶ್ ವರ್ಮ ಅವರಂತಹ ಇತರ ಪ್ರಬಲ ನಾಯಕರೊಂದಿಗೆ ಇರಾನಿ ಅವರು ಸಿಎಂ ಅಭ್ಯರ್ಥಿಗೆ ಸಂಭಾವ್ಯ ಸ್ಪರ್ಧಿಗಳಾಗಬಹುದು. ಒಂದು ನಾಯಕತ್ವದ ಹಿಂದೆ ಒಟ್ಟುಗೂಡುವುದರಿಂದ ಇಡೀ ಪಕ್ಷವು ಏಕತೆಯ ಸಂದೇಶವನ್ನು ಕಳುಹಿಸುತ್ತದೆ ಮತ್ತು ಪ್ರಚಾರವನ್ನು ಸುಗಮಗೊಳಿಸುತ್ತದೆ” ಎಂದು ಹೇಳಿದ್ದಾರೆ.

2015 ರ ವಿಧಾನಸಭಾ ಚುನಾವಣೆಯಲ್ಲಿ ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿ ಬಿಜೆಪಿ ಸ್ಪರ್ಧಿಸಿತ್ತು ಆದರೆ ದಯನೀಯ ವೈಫಲ್ಯ ಅನುಭವಿಸಿದ್ದನ್ನು ಮನಗಂಡು ಕೆಲವು ನಾಯಕರು ಚುನಾವಣೆಯನ್ನು ಸಿಎಂ ಅಭ್ಯರ್ಥಿ ಘೋಷಿಸಿ ಎದುರಿಸುವುದು ಒಳ್ಳೆಯದಲ್ಲ ಎಂದು ಅಭಿಪ್ರಾಯವನ್ನೂ ಹೊರ ಹಾಕಿದ್ದಾರೆ.

ಚರ್ಚೆ ಇನ್ನೂ ಮುಕ್ತವಾಗಿದ್ದು, ರಾಷ್ಟ್ರೀಯ ನಾಯಕತ್ವಕ್ಕೆ ವಿಷಯ ತಿಳಿದಿದ್ದು ಈ ಬಗ್ಗೆ ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಅಬಕಾರಿ ನೀತಿ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಎಎಪಿ ಮುಖ್ಯಸ್ಥ ಕೇಜ್ರಿವಾಲ್ ಅವರು ಜಾಮೀನು ಪಡೆದು ಸಿಎಂ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿದ ಬೆನ್ನಲ್ಲೇ ಬಿಜೆಪಿಯ ಸಿಎಂ ಫೇಸ್ ಚರ್ಚೆ ತೀವ್ರಗೊಳ್ಳುವ ಎಲ್ಲಾ ಸಾಧ್ಯತೆಗಳು ತೀವ್ರವಾಗಿದೆ.

ಕೇಜ್ರಿವಾಲ್ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಎಲ್ಲ ಲಕ್ಷಣಗಳಿದ್ದು, ದೆಹಲಿಯಲ್ಲಿ ಧೂಳಿಪಟವಾಗಿರುವ ಕಾಂಗ್ರೆಸ್ ನೊಂದಿಗೆ ಕೈಜೋಡಿಸಿ ಚುನಾವಣೆ ಎದುರಿಸಿದರೆ ಬಿಜೆಪಿಗೆ ಪರಿಸ್ಥಿತಿ ಇನ್ನಷ್ಟು ಸವಾಲಿನಿಂದ ಕೂಡಿರುವ ಸಾಧ್ಯತೆಯೂ ಅಲ್ಲಗಳೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಮತ್ತು ಆಮ್ ಆದ್ಮಿ ನಡುವೆ ಮೈತ್ರಿಯಾಗುವುದೇ ಎನ್ನುವುದನ್ನು ಕಾದು ನೋಡಬೇಕಿದೆ.

ಸ್ಥಳೀಯ ಸಂಸದ ಪ್ರವೀಣ್ ಖಂಡೇಲ್ವಾಲ್ ಅವರೊಂದಿಗೆ ಚಾಂದಿನಿ ಚೌಕ್‌ನಲ್ಲಿ ನಡೆದ ಸದಸ್ಯತ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಮೃತಿ ಇರಾನಿ, ಬಿಜೆಪಿಯನ್ನು ತಳಮಟ್ಟದಲ್ಲಿ ಬಲಪಡಿಸಲು ಒತ್ತು ನೀಡಿದ್ದು ಬೂತ್ ಮಟ್ಟದ ಕಾರ್ಯಕರ್ತರು ಪಕ್ಷದ ಯಶಸ್ಸು ಮತ್ತು ಬೆಳವಣಿಗೆಯ ಹಿಂದಿನ ಶಕ್ತಿಯ ಮೂಲ ಎಂದು ಹೇಳುವ ಮೂಲಕ ಸದ್ದಿಲ್ಲದೇ ತನ್ನ ಕೆಲಸ ಆರಂಭಿಸಿದ್ದಾರೆ.

ಈಗಾಗಲೇ ಸದಸ್ಯತ್ವ ಅಭಿಯಾನದ ಅಡಿಯಲ್ಲಿ ದೆಹಲಿ ಬಿಜೆಪಿಯಲ್ಲಿ ಮೂರು ದಿನಗಳ ಸಾಂಸ್ಥಿಕ ಭೇಟಿ ನೀಡಿದ್ದು, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನವೀನ್ ಶಹದಾರ, ಕರೋಲ್ ಬಾಗ್ ಮತ್ತು ನವದೆಹಲಿಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಸಂಘಟನಾ ಪರ್ವ ಸದಸ್ಯತ್ವ ಅಭಿಯಾನ-2024 ಅಡಿಯಲ್ಲಿ ಮಯೂರ್ ವಿಹಾರ್ ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನದ ಸಭೆಯಲ್ಲಿಯೂ ಭಾಗವಹಿಸಿದ್ದಾರೆ.

ತನ್ನದೇ ಆದ ವರ್ಚಸ್ಸು ಹೊಂದಿದ್ದು, ನಿಧಾನವಾಗಿ ಪಕ್ಷದಲ್ಲಿ ಚಟುವಟಿಕೆ ತೀವ್ರಗೊಳಿಸಿ ಸಿಎಂ ಫೇಸ್ ಎಂದು ಬಿಂಬಿತವಾಗಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸವಾಲೊಡ್ಡುವ ಸಾಧ್ಯತೆಗಳು ಹೆಚ್ಚಳವಾದಂತೆ ಕಂಡು ಬರುತ್ತಿದೆ.

2025 ರ ಫೆಬ್ರವರಿ ಒಳಗೆ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ. ಒಂದು ದಶಕದ ಅಧಿಕಾರ ಅನುಭವಿಸಿರುವ ಆಮ್ ಆದ್ಮಿ ಭಾವಾನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಇನ್ನಷ್ಟು ರಣತಂತ್ರದೊಂದಿಗೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಅಮೇಠಿಯಲ್ಲಿ ಸೋಲು ಅನುಭವಿಸಿರುವ 48 ರ ಹರೆಯದ ಸ್ಮೃತಿ ಇರಾನಿ ಪಕ್ಷದ ಕಾರ್ಯಕರ್ತರ ಮನಗೆಲ್ಲುವುದು ಮಾತ್ರವಲ್ಲದೆ ದೆಹಲಿ ಬಿಜೆಪಿ ಘಟಕದ ಒಳಗಿನ ಮುಂಚೂಣಿ ನಾಯಕರ ವಿಶ್ವಾಸ ಗಳಿಸಿದರಷ್ಟೇ ಸಿಎಂ ಫೇಸ್ ಆಗಿ ಬಿಂಬಿತವಾಗಲು ಸಾಧ್ಯ ಎನ್ನಬಹುದು.

Advertisement

Udayavani is now on Telegram. Click here to join our channel and stay updated with the latest news.

Next