ಆಂಟಿಗುವಾ: ಭಾರತೀಯ ಮಹಿಳಾ ಕ್ರಿಕೆಟ್ ನ ಸೂಪರ್ ಸ್ಟಾರ್ ಸ್ಮ್ರತಿ ಮಂಧನಾ ಹೊಸ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್ ನಲ್ಲಿ ಅತೀ ವೇಗದಲ್ಲಿ ಎರಡು ಸಾವಿರ ರನ್ ಬಾರಿಸಿದ ಭಾರತೀಯ ಆಟಗಾರ್ತಿ ಎಂಬ ಕೀರ್ತಿ ಇದೀಗ ಮಂಧನಾ ಅವರದಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಮಂಧನಾ ಈ ದಾಖಲೆ ಬರೆದರು.
ಇಲ್ಲಿನ ಸರ್ ವಿವಿಯನ್ ರಿಚರ್ಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸ್ಮ್ರತಿ 74 ರನ್ ಗಳಿಸಿದ್ದರು. ಇದೇ ವೇಳೆ ಎರಡು ಸಾವಿರ ರನ್ ದಾಖಲೆ ಬರೆದರು. ಇದಕ್ಕಾಗಿ ಮಂಧನಾ 51 ಇನ್ನಿಂಗ್ಸ್ ಬಳಸಿದರು.
ವಿಶ್ವ ಕ್ರಿಕೆಟ್ ನಲ್ಲಿ ಸ್ಮ್ರತಿಗೆ ಮೂರನೇ ಸ್ಥಾನ. ಬೆಲಿಂಡಾ ಕ್ಲಾರ್ಕ್ ಮತ್ತು ಮೆಗ್ ಲ್ಯಾನಿಂಗ್ ಮೊದಲೆರಡು ಸ್ಥಾನದಲ್ಲಿದ್ದಾರೆ. ಅವರಿಬ್ಬರು ಕ್ರಮವಾಗಿ 41 ಮತ್ತು 45 ಇನ್ನಿಂಗ್ಸ್ ಗಳಲ್ಲಿ ಎರಡು ಸಾವಿರ ರನ್ ಗುರಿ ಮುಟ್ಟಿದ್ದರು.
ಪಂದ್ಯವನ್ನು ಭಾರತ ಆರು ವಿಕೆಟ್ ಗಳಿಂದ ಗೆದ್ದುಕೊಂಡು ಸರಣಿಯನ್ನೂ ವಶಪಡಿಸಿಕೊಂಡಿತು. ಅರ್ಹವಾಗಿ ಮಂಧನಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.