Advertisement

ಸುಗಮ ಸಂಚಾರ: ಇಂದಿನಿಂದ ಮನಪಾ- ಟ್ರಾಫಿಕ್‌ನವರಿಂದ ಜಂಟಿ ಸಮೀಕ್ಷೆ

08:55 AM Jul 26, 2017 | Team Udayavani |

ಲಾಲ್‌ಬಾಗ್‌: ನಗರದ‌ ವಿವಿಧ ಭಾಗಗಳಲ್ಲಿ ಟ್ರಾಫಿಕ್‌ ಸಮಸ್ಯೆ ಬಹುವಾಗಿ ಕಾಡುತ್ತಿದ್ದು, ಇದನ್ನು  ಸುಗಮಗೊಳಿಸುವ ಸಂಬಂಧ ಮಹಾನಗರ ಪಾಲಿಕೆ ತಂಡ ಹಾಗೂ ನಗರ ಸಂಚಾರಿ ಪೊಲೀಸರ ತಂಡವು ಜು. 26ರಿಂದ ಜಂಟಿ ಸಮೀಕ್ಷೆ ನಡೆಸಲಿದೆ ಎಂದು ಮೇಯರ್‌ ಕವಿತಾ ಸನಿಲ್‌ ಹೇಳಿದರು.

Advertisement

ಪಾಲಿಕೆಯಲ್ಲಿ ಮಂಗಳವಾರ ನಡೆದ ಮೇಯರ್‌ ಫೋನ್‌ ಇನ್‌ ಕಾರ್ಯಕ್ರಮದಲ್ಲಿ   ಸಾರ್ವಜನಿಕರೊಬ್ಬರ ದೂರಿಗೆ ಪ್ರತಿಕ್ರಿಯಿಸಿದ ಅವರು,  ನಗರದ ರಸ್ತೆಯ ಇಕ್ಕೆಲಗಳಲ್ಲಿ, ಫ‌ುಟ್‌ ಪಾತ್‌ಗಳಲ್ಲಿ ಅನಧಿಕೃತ ಗೂಡಂಗಡಿಗಳು, ಮೊಬೈಲ್‌ ಕ್ಯಾಂಟೀನ್‌ಗಳು, ಅನಧಿಕೃತ ಪಾರ್ಕಿಂಗ್‌ನಿಂದಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಥಮ ಹಂತದಲ್ಲಿ ಪಿವಿಎಸ್‌ನಿಂದ ಸ್ಟೇಟ್‌ಬ್ಯಾಂಕ್‌ವರೆಗಿನ ರಸ್ತೆಗಳ ಜಂಟಿ ಸಮೀಕ್ಷೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಚಿಲಿಂಬಿ ನಿವಾಸಿ ಪೀಟರ್‌ ಕರೆ ಮಾಡಿ, ಚಿಲಿಂಬಿ 4ನೇ ಅಡ್ಡರಸ್ತೆಯಲ್ಲಿ ಇಂಟರ್‌ಲಾಕ್‌ ಹೋಗಿದ್ದು, ತೋಡಿನ ಕಲ್ಲು ಕೂಡ ಹಾಳಾಗಿದೆ. ರಸ್ತೆಯಲ್ಲಿ ಗುಂಡಿ ಬಿದ್ದಿದೆ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಮೇಯರ್‌, ಮಳೆಗಾಲ ಮುಗಿದ ತತ್‌ಕ್ಷಣವೇ ದುರಸ್ತಿ ಮಾಡಲಾಗುವುದು ಎಂದರು. 

ಸುಭಾಶ್‌ನಗರದಿಂದ ಪ್ರಭಾ ಎಂಬವರು ಕರೆ ಮಾಡಿ, ಈ ಭಾಗದ ಸುಮಾರು 25 ಮನೆಗಳಿಗೆ ಡ್ರೈನೇಜ್‌ ವ್ಯವಸ್ಥೆ ಇಲ್ಲ. 300 ಮೀಟರ್‌ ದೂರದಲ್ಲಿ ಡ್ರೈನೇಜ್‌ ಚೇಂಬರ್‌ ಇರುವುದರಿಂದ ಸಮಸ್ಯೆಯಾಗುತ್ತಿದೆ ಎಂದರು. ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ, ಪರಿಶೀಲಿಸಲು ತಿಳಿಸಲಾಗುವುದು ಎಂದರು ಮೇಯರ್‌.

ಡಾ| ಅರುಣ್‌ ರಾವ್‌ ಕರೆ ಮಾಡಿ, ಲೈಟ್‌ಹೌಸ್‌ ಹಿಲ್‌ ರಸ್ತೆಯಲ್ಲಿ ಪದೇ ಪದೇ ಟ್ರಾಫಿಕ್‌ ಜಾಮ್‌ ಆಗುತ್ತಿದ್ದು, ಯುವಕರು ಅಲ್ಲಿನ ಫ‌ುಟ್‌ ಪಾತ್‌ ಮೇಲಿನಿಂದಲೇ ದ್ವಿಚಕ್ರ ವಾಹನಗಳನ್ನು ಚಲಾಯಿಸಿಕೊಂಡು ಹೋಗುತ್ತಾರೆ ಎಂದರು. ಈ ಬಗ್ಗೆ ಟ್ರಾಫಿಕ್‌ ಪೊಲೀಸರಿಗೆ ತಿಳಿಸುವುದಾಗಿ ಮೇಯರ್‌ ಪ್ರತಿಕ್ರಿಯಿಸಿದರು. 

Advertisement

ರಸ್ತೆ ಹಂಪ್‌ ಅಗತ್ಯ
ಗಣಪತಿ ಹೈಸ್ಕೂಲ್‌ನ ಮಹೇಶ್‌ ಎಂಬವರು ಕರೆ ಮಾಡಿ, ಹೈಸ್ಕೂಲ್‌ನ ಎದುರು  ವಾಹನ ದಟ್ಟನೆ ಅಧಿಕವಾಗಿರುವ ಕಾರಣ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ಬಿಡುವ ಹಾಗೂ ಪ್ರವೇಶಿಸುವ ಸಂದರ್ಭ ರಸ್ತೆ ದಾಟಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಅಲ್ಲಿ ಹಂಪ್‌ ಹಾಕಬೇಕು ಹಾಗೂ ಫ‌ುಟ್‌ಪಾತ್‌ ದುರಸ್ತಿ ಮಾಡಬೇಕು ಎಂದರು.ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಮೇಯರ್‌ ನೀಡಿದರು. 

ಮುಖ್ಯ ರಸ್ತೆಯಲ್ಲಿ   ಡ್ರೈನೇಜ್‌ ನೀರು..!
ಪ್ರಶಾಂತ್‌ ಎಂಬವರು ಕರೆ ಮಾಡಿ, ಕದ್ರಿ ಕಂಬಳದ ಬಳಿ ಡ್ರೈನೇಜ್‌ ನೀರು ಮುಖ್ಯ ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದ ತುಂಬಾ ಸಮಸ್ಯೆಯಾಗುತ್ತಿದೆ ಎಂದು ದೂರು ನೀಡಿದರು.  

ಪಾಲಿಕೆ ಜಾಗ ಅತಿಕ್ರಮಣ!
ಲೋವರ್‌ ಬೆಂದೂರ್‌ವೆಲ್‌ನಿಂದ ಪ್ರಕಾಶ್‌ ಎಂಬವರು ಕರೆ ಮಾಡಿ, ಲೋವರ್‌ ಬೆಂದೂರ್‌ವೆಲ್‌ನಲ್ಲಿ ಸಾರ್ವಜನಿಕ ರಸ್ತೆಗೆ ಪಿಲ್ಲರ್‌ ಹಾಕಿ ಅತಿಕ್ರಮಿಸಿದ್ದಾರೆ ಎಂದರು. ಮೇಯರ್‌ ಉತ್ತರಿಸಿ, ಅದು ಹೌದಾದರೆ ತೆರವು ಮಾಡಲಾಗುತ್ತದೆ. ನಾನೇ ಖುದ್ದಾಗಿ ಸ್ಥಳ ಸಮೀಕ್ಷೆ ನಡೆಸುವುದಾಗಿ ತಿಳಿಸಿದರು.

ವಾಟ್ಸಪ್‌ ಮೂಲಕ ಸಮಸ್ಯೆ ಅರಿಯಿರಿ !
ಬೊಕ್ಕಪಟ್ಣದ ಸಾರ್ವಜನಿಕರೊಬ್ಬರು ಕರೆ ಮಾಡಿ, ಬೀದಿ ದೀಪಗಳನ್ನು ಬೆಳಗ್ಗೆ 5-6 ಗಂಟೆಗೆ ಆಫ್‌ ಮಾಡಲಾಗುತ್ತಿದೆ. ಆದರೆ ಆ ಸಮಯ ಕತ್ತಲಿರುವುದರಿಂದ ವಾಕಿಂಗ್‌ ಮಾಡುವವರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಸರಿಪಡಿಸಿ ಎಂದರು. ಜತೆಗೆ ನಗರದ ಸಮಸ್ಯೆಗಳ ಬಗ್ಗೆ ಪಾಲಿಕೆ ಗಮನಕ್ಕೆ ತರುವ ಉದ್ದೇಶದಿಂದ ವಾಟ್ಸಪ್‌ ವ್ಯವಸ್ಥೆ ಮಾಡುವುದು ಉತ್ತಮ ಹಾಗೂ ಅಳಕೆಯಲ್ಲಿ ಅರ್ಧದಲ್ಲಿ ಬಿಟ್ಟಿರುವ ರಸ್ತೆ ಕೆಲಸವನ್ನು ಪೂರ್ಣಗೊಳಿಸಿ ಎಂದು ಮನವಿ ಮಾಡಿದರು. ಮೇಯರ್‌ ಉತ್ತರಿಸಿ, ಬೀದಿದೀಪದ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ವಾಟ್ಸಪ್‌ ಬಗ್ಗೆ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿ ಹೆಜ್ಜೆ ಇರಿಸಲಾಗುವುದು ಹಾಗೂ ಅಳಕೆಯಲ್ಲಿ  ಸೇತುವೆ ವಿನ್ಯಾಸದಲ್ಲಿ  ಸ್ವಲ್ಪ ಬದಲಾವಣೆ ಇದೆ. ಆದಷ್ಟು  ಬೇಗ ಪೂರ್ಣಗೊಳಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next