ಕುಷ್ಟಗಿ: ಸಿಗರೇಟ್ ಸೇದುವುದನ್ನು ವಿಡಿಯೋ ಮಾಡಿದ ಎನ್ನುವ ಕಾರಣಕ್ಕೆ ಶಾಲೆಯ ವಿದ್ಯಾರ್ಥಿಗಳು, ವಿಡಿಯೋ ಮಾಡಿದ ಇಬ್ಬರು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಹಲ್ಲೆ ನಡೆಸಿ ಥಳಿಸಿದ ಪ್ರಕರಣ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಕುರಬನಾಳ ಹಳೆ ರಸ್ತೆಯ ಪ್ರತಿಷ್ಠಿತ ಖಾಸಗಿ ಶಾಲಾ ಹೊರ ಆವರಣ ಲೇಔಟ್ ನಲ್ಲಿ ಕೆಲ ವಿದ್ಯಾರ್ಥಿಗಳು ಪ್ಲೇಯರ್ಸ್ ಸಿಗರೇಟ್ ಸೇದುತ್ತಿದ್ದರು. ಇದನ್ನು ಇಬ್ಬರು ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ವಿಡಿಯೋ ಮಾಡಿರುವುದು ಸಿಗರೇಟ್ ಸೇದುವ ವಿದ್ಯಾರ್ಥಿಗಳಿಗೆ ಹೇಗೋ ಗೊತ್ತಾಗಿದೆ. ಇದಕ್ಕೆ ಪ್ರತಿಕಾರವಾಗಿ 15 ರಿಂದ 20 ವಿದ್ಯಾರ್ಥಿಗಳು, ವಿಡಿಯೋ ಮಾಡಿದ ಇಬ್ಬರು ವಿದ್ಯಾರ್ಥಿಗಳ ಮನೆಗೆ ಹೋಗಿ ಉಪಾಯದಿಂದ ಹೊರಗೆ ಕರೆದು ಹಲ್ಲೆ ನಡೆಸಿದ್ದಾರೆ.
ಈ ಪ್ರಕರಣದಲ್ಲಿ ಕೃಷ್ಣಗಿರಿ ಕಾಲೋನಿಯಲ್ಲಿ ಥಳಿಸಿಕೊಂಡಿದ್ದ ವಿದ್ಯಾರ್ಥಿ ಪಾಲಕರು, ವಿದ್ಯಾರ್ಥಿಗಳ ಗುಂಪು ಕಟ್ಟಿಕೊಂಡು ಮಾದಕ ನಶೆಯಲ್ಲಿ ನಮ್ಮ ಮನೆಗೆ ಬಂದು ನನ್ನ ಮಗನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿರುವುದು ಹಾಗೂ ಥಳಿಸಲು ಬಂದ ವಿದ್ಯಾರ್ಥಿಗೆ, ತಮ್ಮ ಪುತ್ರನ ಪರ ವಹಿಸಿ ಮಹಿಳೆಯೊಬ್ಬರು ನಿಂದಿಸಿ ಪಾದರಕ್ಷೆಯಿಂದ ಹೊಡೆಯಲು ಮುಂದಾಗಿರುವ ವಿಡಿಯೋ ಸದ್ಯ ವೈರಲ್ ಆಗಿದೆ.
ಈ ಪ್ರಕರಣದ ಹಿನ್ನೆಲೆ ಸೀಗರೇಟಿನಲ್ಲಿ ಮಾದಕ ವಸ್ತು ಬೆರೆಸಿ ಸೇವಿಸುತ್ತಿದ್ದಾರೆಯೇ? ಎನ್ನುವ ಶಂಕೆ ಸಾರ್ವಜನಿಕವಾಗಿ ವ್ಯಕ್ತವಾಗಿದೆ. ಸಿಪಿಐ ಯಶವಂತ ಬಿಸನಳ್ಳಿ ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಶಾಲಾ ವಿದ್ಯಾರ್ಥಿಗಳು ವಿದ್ಯಾರ್ಜನೆ ಹಂತದಲ್ಲಿ ಸಿಗರೇಟ್ ಸೇದುವ ದುಶ್ಚಟ ಪ್ರಕರಣ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಲು ಸಾರ್ವಜನಿಕರ ಆಗ್ರಹವಾಗಿದೆ.