Advertisement

ನಂದಿನಿ ಪಾರ್ಲರ್‌ನಲ್ಲಿ ಖಾರದ ತಿನಿಸುಗಳೂ ಲಭ್ಯ

06:00 AM Dec 06, 2018 | |

ಶಿವಮೊಗ್ಗ: ಉತ್ತಮ ಗುಣಮಟ್ಟದ ಹಾಲು, ಹಾಲಿನ ಉಪಉತ್ಪನ್ನ ಹಾಗೂ ಸಿಹಿ ತಿನಿಸುಗಳಿಗೆ ಹೆಸರುವಾಸಿಯಾಗಿರುವ ನಂದಿನಿ ಪಾರ್ಲರ್‌ಗಳಲ್ಲಿ ಇನ್ನು ಮುಂದೆ ಖಾರ ತಿನಿಸುಗಳೂ ಸಿಗಲಿವೆ. ಕೆಲ ದಿನಗಳ ಹಿಂದೆ ಮಿನರಲ್‌ ವಾಟರ್‌ ಮಾರಾಟ ಆರಂಭಿಸಿದ್ದ ಕೆಎಂಎಫ್‌ ಈಗ ಸಿಹಿ ಜತೆ ಖಾರದ ತಿನಿಸುಗಳನ್ನೂ ಮಾರಲು ಮುಂದಾಗಿದೆ.

Advertisement

ನಂದಿನಿ ಹೆಸರಿನಡಿ ತುಪ್ಪ, ಹಾಲು, ಮೊಸರು, ಮಜ್ಜಿಗೆ, ಚಾಕೋಲೇಟ್‌, ಐಸ್‌ಕ್ರೀಂ, ಪೇಡಾ, ಮೈಸೂರು ಪಾಕ್‌, ನೀರು ಹೀಗೆ 60 ತರಹದ ಹಾಲಿನ ಉತ್ಪನ್ನಗಳನ್ನು ಮಾರುತ್ತಿದ್ದ ಕೆಎಂಎಫ್‌ ಮತ್ತೂಂದು ಹೆಜ್ಜೆ ಮುಂದಿರಿಸಿದೆ. ಸಿಹಿಯೊಂದಿಗೆ ಈಗ ಖಾರದ
ತಿನಿಸುಗಳಾದ ಬಾಂಬೆ ಮಿಕ್ಸರ್‌, ಖಾರಾ ಬೂಂದಿ, ಬೆಣ್ಣೆ ಮುರುಕು, ಕೋಡುಬಳೆಯ 200 ಗ್ರಾಂ ಪ್ಯಾಕ್‌ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಐಡಿಯಾ ಬಂದಿದ್ದು ಹೇಗೆ?: ನಂದಿನಿ ಪಾರ್ಲರ್‌ ಗಳಿಗೆ ಬರುವ ಗ್ರಾಹಕರು ಬರೀ ಸಿಹಿ ಪದಾರ್ಥಗಳನ್ನು ಮಾರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹಬ್ಬ, ಹರಿದಿನಗಳಲ್ಲಿ, ಬರ್ತಡೇ ಪಾರ್ಟಿಗಳಿಗೆ ನಂದಿನಿ ಮೈಸೂರು ಪಾಕ್‌ ಹಾಗೂ ಇತರೆ ಪದಾರ್ಥಗಳಿಗೆ
ಎಲ್ಲಿಲ್ಲದ ಬೇಡಿಕೆ ಇದೆ. ಉಡುಗೊರೆ ನೀಡುವವರು ಖಾರದ ಪದಾರ್ಥಗಳಿಗೆ ಬೇರೆ ಅಂಗಡಿಗಳನ್ನು ಆಶ್ರಯಿಸಬೇಕಿತ್ತು. ಗ್ರಾಹಕರು ಡಿಮ್ಯಾಂಡ್‌ ಮಾಡಿದರೂ ಬೇರೆ ಕಂಪೆನಿಗಳ ಪ್ರಾಡಕ್ಟ್ಗಳನ್ನು ಇಲ್ಲಿ ಮಾರುವಂತಿರಲಿಲ್ಲ. ಜತೆಗೆ ಬಹುತೇಕ ಸರಕಾರಿ, ಅರೆ ಸರಕಾರಿ ಸಂಸ್ಥೆಗಳ ಔತಣಕೂಟ, ವಿಶೇಷ ದಿನಗಳಲ್ಲಿ ನಂದಿನಿ ಉತ್ಪನ್ನಗಳನ್ನೇ ಬಳಸಲಾಗುತ್ತದೆ. ಸಿಹಿ ತಿನಿಸುಗಳಷ್ಟೇ ಸಿಗುತ್ತಿರುವುದರಿಂದ ಮಿನರಲ್‌ ವಾಟರ್‌ಗೆ ಬೇಡಿಕೆ ಇಡಲಾಗಿತ್ತು. ಕೆಲ ತಿಂಗಳ ಹಿಂದೆ ಮಿನರಲ್‌ ವಾಟರ್‌ ಬಿಡುಗಡೆಗೊಳಿಸಲಾಗಿತ್ತು. ಬೇಡಿಕೆ ಹೆಚ್ಚಾಗಿದ್ದರಿಂದ ಖಾರಾ ತಿನಿಸುಗಳನ್ನೂ ತಯಾರಿಸಿ ಮಾರಲು ನಿರ್ಧರಿಸಲಾಗಿದೆ.

ಬಿಲ್ಲಿಂಗ್‌ ಸುಲಭ: ಸರಕಾರಿ, ಅರೆ ಸರಕಾರಿ ಕಾರ್ಯಕ್ರಮಗಳಲ್ಲಿ ಊಟ, ತಿಂಡಿ ಪೂರೈಸಬೇಕು ಎಂದರೆ ಟೆಂಡರ್‌ ಕರೆಯಲೇಬೇಕು. ಇದನ್ನು ತಪ್ಪಿಸುವ ಸಲುವಾಗಿ ಸರಕಾರಿ ಸ್ವಾಮ್ಯದ ಕೆಎಂಎಫ್‌ಗೆ ಇದರ ಹೊಣೆ ವಹಿಸಿದರೆ ಟೆಂಡರ್‌ ಕರೆಯುವ ಅಗತ್ಯವೇ ಇಲ್ಲ. ಬಿಲ್ಲಿಂಗ್‌ ಸುಲಭ ಎಂಬುದು ಅಧಿಕಾರಿಯೊಬ್ಬರ ಅನುಭವ.

200 ಗ್ರಾಂಗೆ 45 ರೂ. 15 ದಿನದ ಹಿಂದೆ ಆರಂಭವಾದ ಖಾರದ ತಿನಿಸುಗಳನ್ನು 200 ಗ್ರಾಂ. ಪ್ಯಾಕ್‌ಗಳಲ್ಲಿ ಒದಗಿಸಲಾಗುತ್ತಿದೆ. ಬಾಂಬೆ ಮಿಕ್ಸರ್‌, ಖಾರ ಬೂಂದಿ, ಕೋಡುಬಳೆ, ಬೆಣ್ಣೆ ಮುರುಕು ಎಲ್ಲವೂ 200 ಗ್ರಾಂ ಪ್ಯಾಕ್‌ನಲ್ಲಿ ಲಭ್ಯವಿದೆ. ನಾಲ್ಕೂ ಪ್ರಾಡಕ್ಟ್ಗಳ ಮಾರುಕಟ್ಟೆ ಬೆಲೆ 45 ರೂ. ಇವುಗಳ ರುಚಿಗೆ ಮಾರುಹೋಗಿರುವ ಗ್ರಾಹಕರು ಹೆಚ್ಚಿನ ಬೇಡಿಕೆ ಇಟ್ಟಿದ್ದಾರೆ. ಚಿತ್ರದುರ್ಗ ಭಾಗದಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಪ್ರಸ್ತುತ ನಂದಿನಿ ಪಾರ್ಲರ್‌ಗಳಲ್ಲಿ ಮಾತ್ರ ಮಾರಲಾಗುತ್ತಿದೆ. ಬೆಂಗಳೂರಿನ ಎಂಎನ್‌ಪಿ (ನಂದಿನಿ ಮಿಲ್ಕ್ ಪ್ರಾಡಕ್ಟ್) ಘಟಕದಲ್ಲಿ ನಾಲ್ಕು ಹೊಸ ಪದಾರ್ಥಗಳನ್ನು ತಯಾರು ಮಾಡಲಾಗುತ್ತಿದ್ದು 15 ದಿನದ ಹಿಂದೆ ಆರಂಭದಲ್ಲಿ ಪ್ರತಿ
ದಿನ 200 ಕೆಜಿ ಮಾತ್ರ ತಯಾರು ಮಾಡಲಾಗುತ್ತಿತ್ತು. ಈಗ ಪ್ರತಿ ದಿನ ಸಾವಿರ ಕೆಜಿ ಉತ್ಪಾದನೆ ಮಾಡಲಾಗುತ್ತಿದೆ. 

Advertisement

ನಂದಿನಿ ಬ್ರಾಂಡ್‌ಗೆ ಉತ್ತಮ ಹೆಸರಿದ್ದು, ನಮ್ಮಲ್ಲಿರುವ 60 ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದೆ. ಜನರ ಬೇಡಿಕೆಗೆ ತಕ್ಕಂತೆ ಹೊಸ
ಹೊಸ ಉತ್ಪನ್ನಗಳನ್ನು ಲಾಂಚ್‌ ಮಾಡಲಾಗುವುದು.

● ಎ.ಆರ್‌.ಚಂದ್ರಶೇಖರ್‌, ಎಂಡಿ, ಶಿಮುಲ್‌

ಬಾಂಬೆ ಮಿಕ್ಸರ್‌ ಗರಿಗರಿಯಾಗಿ, ರುಚಿಕರವಾಗಿದೆ. ನಂದಿನಿ ಉತ್ಪನ್ನಗಳಿಗೆ ಯಾವುದೂ ಸರಿಸಾಟಿ ಇಲ್ಲ. ಬೆಲೆ ಸ್ವಲ್ಪ ದುಬಾರಿ
ಅನಿಸಿದ್ದು ಬಿಟ್ಟರೆ ರುಚಿ ಮುಂದೆ ಇದು ನಗಣ್ಯ. 

● ಪ್ರಕಾಶ್‌, ಗ್ರಾಹಕ

● ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next