Advertisement

ಎಸ್ಎಂಎನ್ ಸೌಹಾರ್ದ ಅವ್ಯವಹಾರ: ಸಿಐಡಿ ಬಂಧಿಸಿದ ಐವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

12:15 PM Aug 08, 2021 | Team Udayavani |

ವಿಜಯಪುರ: ಎಸ್ ಎಂ ಎನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಅವ್ಯವಹಾರ ಪ್ರಕರಣಕ್ಕೆ ಸಂಬಂಧಸಿದಂತೆ ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಐದು ಜನರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

Advertisement

ಬಾಗಲಕೋಟೆ ಜಿಲ್ಲೆಯ ಮೂಲದ ಈ ಸೌಹಾರ್ದ ವಿಜಯಪುರ ಜಿಲ್ಲೆಯಲ್ಲಿ 16, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಟ್ಟು 21 ಶಾಖೆ ಹೊಂದಿದೆ. ಆದರೆ, ಈ ಸೌಹಾರ್ದ ಅವಧಿ ಮುಗಿದರೂ ಠೇವಣಿದಾರರಿಗೆ ಹಣ ನೀಡದೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ರೈತ ಮುಖಂಡ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ಠೇವಣಿದಾರರು ವಿಜಯಪುರ ನಗರದಲ್ಲಿ 37 ದಿನ ಸತತವಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಪರಿಣಾಮ ಸರಕಾರ ವಿಜಯಪುರ ಉಪ ವಿಭಾಗ ಅಧಿಕಾರಿಯನ್ನು ಸಕ್ಷಮ ಪ್ರಾಧಿಕಾರದ ಅಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಅಲ್ಲದೇ, ಸದರಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.

ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಐಡಿ ಡಿಎಸ್ಪಿ ಪ್ರಕಾಶ ರಾಠೋಡ ನೇತೃತ್ವದ ತನಿಖಾ ತಂಡ, ಈ ವರ್ಷದ ಆರಂಭದಿಂದ ತನಿಖೆ ಕೈಗೊಂಡಿದೆ.

ಕಳೆದ ಒಂದೂವರೆ ತಿಂಗಳಿಂದ ವಿಜಯಪುರ ನಗರದಲ್ಲೇ ಠಿಕಾಣಿ ಹೂಡಿದ ಸಿಐಡಿ ಡಿವೈಎಸ್ಪಿ ಪ್ರಕಾಶ ರಾಠೋಡ ನೇತೃತ್ವದ ತಂಡ ಸೌಹಾರ್ಧದ ಅಧ್ಯಕ್ಷ ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದ ಅನೀಲ ಕೆ. ದೇಶಪಾಂಡೆ, ಉಪಾಧ್ಯಕ್ಷ ಶಂಕರ ನಾಯ್ಕರ, ಗುಮಾಸ್ತ ಮೊಹ್ಮದ ಯುಸೂಫ್ ಭಾಗವಾನ, ಮುಂಡಗೋಡಿನ ಸಿಸ್ಟಂ ಎಡ್ಮಿನ್ ರಾಮು ಬಂಡಿವಾಡ ಮತ್ತು ಬಾಗಲಕೋಟೆ ಜಿಲ್ಲೆಯ ಕಂಪ್ಯೂಟರ್ ಹಾರ್ಡವೇರ್ ಉಸ್ತುವಾರಿ ಶ್ರೀಧರ ಕಾತರಕಿ ಅವರನ್ನು ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯದ ಎದುರು ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Advertisement

ಇದನ್ನೂ ಓದಿ:ಉ. ಪ್ರ ಚುನಾವಣೆ : ರಾಜ್ಯಾದ್ಯಂತ ‘ಬೂತ್ ವಿಜಯ್ ಅಭಿಯಾನ’ ಅಡಿಯಲ್ಲಿ ಕಾರ್ಯಕ್ರಮ : ಬಿಜೆಪಿ  

ಬಂಧಿತ ಐವರಲ್ಲಿ ತಲೆ ಮರೆಸಿಕೊಂಡಿದ್ದ ಉಪಾಧ್ಯಕ್ಷ ಶಂಕರ ವಿ. ನಾಯ್ಕರ ಎಂಬ ಆರೋಪಿಯನ್ನು ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಮಿರಜ್ ಬಳಿ ವಶಕ್ಕೆ ಪಡೆದಿದ್ದಾರೆ. ಉಳಿದ ನಾಲ್ಕು ಜನ ಆರೋಪಗಳನ್ನು ವಿಜಯಪುರ ನಗರದಲ್ಲೇ ಬಂಧಿಸಲಾಗಿದೆ.

ಸಿಐಡಿ ಫೈನಾನ್ಶಿಯಲ್ ಇಂಟಲಿಜನ್ಸ್ ಯುನಿಟ್ (ಎಫ್ಐಯು) ವಿಭಾಗದ ಡಿಎಸ್ಪಿ ಪ್ರಕಾಶ ರಾಠೋಡ ನೇತೃತ್ವದಲ್ಲಿ ಸಿಪಿಐ ದಿಲೀಪ, ಎಸೈ ಮಂಜುನಾಥ, ಯಶವಂತ, ಸಿಬ್ಬಂದಿ ರವಿ ಸೇರಿ ಆರು ಜನರ ತಂಡ ಕಳೆದ ಒಂದೂವರೆ ತಿಂಗಳಿಂದ ವಿಜಯಪುರ ನಗರದಲ್ಲೇ ಠಿಕಾಣಿ ಹೂಡಿದ್ದು, ಹಲವರನ್ನು ವಿಚಾರಣೆ ನಡೆಸಿತ್ತು.

ಬಹಳ ಸಂಕೀರ್ಣವಾಗಿದ್ದ ಈ ಪ್ರಕರಣದಲ್ಲಿ ತನಿಖೆ ಕೈಗೊಂಡಿರುವ ಸಿಐಡಿ ಅಧಿಕಾರಿಗಳು ಆರ್ಥಿಕ ಅಪರಾಧ ಪ್ರಕರಣ ವಿಚಾರದಲ್ಲಿ ಮಾದರಿ ತನಿಖೆ ಕೈಗೊಂಡಿದೆ ಎಂದೇ ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next