ಸಿಡ್ನಿ: ಈ ವರ್ಷ ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಚೆಂಡು ವಿರೂಪ ಮಾಡಿ ನಿಷೇಧಕ್ಕೊಳಗಾದ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರುಪ್ರವೇಶ ಮಾಡಲು ವೇದಿಕೆ ಸಿದ್ಧವಾಗಿದೆ.
ಮುಂದಿನ ವರ್ಷ ಮಾರ್ಚ್‌ನಲ್ಲಿ ಇಬ್ಬರ 1 ವರ್ಷದ ನಿಷೇಧಾವಧಿ ಅಂತ್ಯವಾಗಲಿದೆ. ಅದೇ ವರ್ಷ ಯುಎಇನಲ್ಲಿ ಪಾಕಿಸ್ತಾನ ವಿರುದ್ಧ ನಡೆಯುವ ಏಕದಿನ ಸರಣಿ ಮುಖಾಂತರ ಆಡುವ ಸಾಧ್ಯತೆಯಿದೆ.
ಗಮನಾರ್ಹ ಸಂಗತಿಯೆಂದರೆ ಈ ಇಬ್ಬರು ಮಾರ್ಚ್ 29ರಿಂದ ಆರಂಭವಾಗುವ ಐಪಿಎಲ್ ಮೂಲಕ ಮತ್ತೆ ಕ್ರಿಕೆಟ್‌ಗೆ ತಮ್ಮ ಮರುಪ್ರವೇಶ ಸಾರುವ ಉದ್ದೇಶ ಹೊಂದಿದ್ದರು. ಆದರೆ ಅದೇ ಹೊತ್ತಿಗೆ ಮಾರ್ಚ್‌ನಿಂದ ಏಪ್ರಿಲ್‌ವರೆಗೆ ಪಾಕ್ ವಿರುದ್ಧ ಆಸ್ಟ್ರೇಲಿಯ ಏಕದಿನ ಸರಣಿ ಆಡಲಿದೆ. ಈ ಇಬ್ಬರೂ ಈ ಕೂಟದ ಮೂಲಕವೇ ತಂಡಕ್ಕೆ ಮರಳುವುದಾದರೆ ಐಪಿಎಲ್‌ನಲ್ಲಿ ಆಡುತ್ತಾರೋ, ಇಲ್ಲವೋ ಎನ್ನುವುದು ಪ್ರಶ್ನೆಯಾಗಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ ಇಬ್ಬರೂ ಕಡೆಯ ಎರಡು ಏಕದಿನದಲ್ಲಿ ಆಡುವ ಸಾಧ್ಯತೆಯಿದೆ. ಈ ಇಬ್ಬರೂ ಐಪಿಎಲ್‌ನಲ್ಲಿ ಆಡುವುದಕ್ಕೆ ಇನ್ನೊಂದು ಸಮಸ್ಯೆಯಿದೆ. ಐಪಿಎಲ್ ಮಧ್ಯಭಾಗದಲ್ಲಿ, ಏಕದಿನ ವಿಶ್ವಕಪ್‌ಗಾಗಿ ಆಸ್ಟ್ರೇಲಿಯ ಅಭ್ಯಾಸ ಶಿಬಿರ ನಡೆಸಲಿದೆ. ಅದಕ್ಕೆ ಇಬ್ಬರೂ ಹಾಜರಿರಲೇಬೇಕು. ಹಾಗಾದರೆ ಸಂಪೂರ್ಣವಾಗಿ ಐಪಿಎಲ್‌ನಿಂದ ಹೊರಗುಳಿಯುವುದು ಖಚಿತ.