Advertisement

ಸ್ಮಿತ್‌ ಮಿಂಚಿನಾಟ: ಆಸೀಸ್‌ ಜಯಭೇರಿ

09:27 AM Nov 06, 2019 | sudhir |

ಕ್ಯಾನ್‌ಬೆರಾ: ಸ್ಟೀವನ್‌ ಸ್ಮಿತ್‌ ಅವರ ಸ್ಫೋಟಕ ಆಟದಿಂದಾಗಿ ಆಸ್ಟ್ರೇಲಿಯ ತಂಡವು ಪ್ರವಾಸಿ ಪಾಕಿಸ್ಥಾನ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನವು ಬಾಬರ್‌ ಅಜಂ ಮತ್ತು ಇಫ್ತಿಕಾರ್‌ ಅಹ್ಮದ್‌ ಅವರ ಅರ್ಧಶತಕಗಳ ನೆರವಿನಿಂದ 6 ವಿಕೆಟಿಗೆ 150 ರನ್‌ ಪೇರಿಸಿತ್ತು. ಇದಕ್ಕುತ್ತರವಾಗಿ ಸ್ಮಿತ್‌ ಅವರ ಸ್ಫೋಟಕ ಆಟದಿಂದಾಗಿ ಆಸ್ಟ್ರೇಲಿಯ 18.3 ಓವರ್‌ಗಳಲ್ಲಿ ಕೇವಲ ಮೂರು ವಿಕೆಟಿಗೆ 151 ರನ್‌ ಪೇರಿಸಿ ಜಯಭೇರಿ ಬಾರಿಸಿದೆ.

ಈ ಗೆಲುವಿನಿಂದ ಆಸ್ಟ್ರೇಲಿಯ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿ ನಿರ್ಣಾಯಕ ಪಂದ್ಯ ಪರ್ತ್‌ನಲ್ಲಿ ನ. 8ರಂದು ನಡೆಯಲಿದೆ. ಭಾರೀ ಮಳೆಯಿಂದಾಗಿ ಸರಣಿಯ ಮೊದಲ ಪಂದ್ಯದಲ್ಲಿ ಫ‌ಲಿತಾಂಶ ಬಂದಿರಲಿಲ್ಲ.

ಸ್ಮಿತ್‌ ಅಜೇಯ
ಗೆಲ್ಲಲು 151 ರನ್‌ಗಳ‌ ಗುರಿ ಪಡೆದ ಆಸ್ಟ್ರೇಲಿಯ ತಂಡಕ್ಕೆ ಸ್ಟೀವನ್‌ ಸ್ಮಿತ್‌ ಆಸರೆಯಾದರು. ಅವರ ಏಕಾಂಗಿ ಅಜೇಯ ಹೋರಾಟದಿಂದ ಆತಿಥೇಯ ತಂಡ ಯಾವುದೇ ಒತ್ತಡಕ್ಕೆ ಒಳಗಾಗದೇ ಸುಲಭವಾಗಿ ಜಯಭೇರಿ ಬಾರಿಸುವಂತಾಯಿತು.

ಆರಂಭಿಕರಾದ ಡೇವಿಡ್‌ ವಾರ್ನರ್‌ ಮತ್ತು ಫಿಂಚ್‌ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು. ಬಿರುಸಿನ ಆಟವಾಡಿದ ಅವರಿಬ್ಬರು ಮೊದಲ 3 ಓವರ್‌ಗಳಲ್ಲಿ 30 ರನ್‌ ಪೇರಿಸಿದ್ದರು. ಈ ಜೋಡಿ ಮುರಿದ ಬಳಿಕ ಕ್ರೀಸ್‌ಗೆ ಆಗಮಿಸಿದ ಸ್ಮಿತ್‌ ಮಿಂಚಿನ ಆಟವಾಡಿದರು. ಮೆಕ್‌ಡರ್ಮಟ್‌ ಮತ್ತು ಟರ್ನರ್‌ ಜತೆಗೂಡಿ ಪಾಕ್‌ ದಾಳಿಯನ್ನು ಧ್ವಂಸಗೈದ ಸ್ಮಿತ್‌ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.

Advertisement

ಅನುಭವಿ ಮೊಹಮ್ಮದ್‌ ಆಮಿರ್‌ ಸಹಿತ ಪಾಕ್‌ ಬೌಲರ್‌ಗಳನ್ನು ದಂಡಿಸಿದ ಸ್ಮಿತ್‌ ಕೇವಲ 51 ಎಸೆತಗಳಲ್ಲಿ 80 ರನ್‌ ಸಿಡಿಸಿ ತಂಡದ ಗೆಲುವಿನ ಆತಂಕವನ್ನು ದೂರ ಮಾಡಿದರು. 11 ಬೌಂಡರಿ ಬಾರಿಸಿದ ಅವರು ಒಂದು ಸಿಕ್ಸರ್‌ ಸಿಡಿಸಿದ್ದರು. ಇನ್ನೂ 9 ಎಸೆತ ಬಾಕಿ ಇರುವಾಗಲೇ ತಂಡ ಗೆಲುವಿನ ನಗೆ ಚೆಲ್ಲಿತು.

ಪಾಕಿಸ್ಥಾನ 150
ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನವು ಆರಂಭಿಕ ಬಾಬರ್‌ ಅಜಂ ಮತ್ತು ಇಫ್ತಿಕಾರ್‌ ಅಹ್ಮದ್‌ ಅವರ ಅರ್ಧಶತಕದಿಂದಾಗಿ ಸಾಧಾ ರಣ ಮೊತ್ತ ಪೇರಿಸುವಂತಾಯಿತು. ಆರಂಭದಲ್ಲಿ ಬಾಬರ್‌ ಬಿರುಸಿನ ಆಟವಾಡಿದರೆ ಉಳಿದವರು ಮಿಂಚಲು ವಿಫ‌ಲರಾದರು. ಫ‌ಕಾರ್‌ ಜಮಾನ್‌, ಹ್ಯಾರಿಸ್‌ ಸೊಹೈಲ್‌ ಬ್ಯಾಟಿಂಗ್‌ ವೈಫ‌ಲ್ಯದಿಂದಾಗಿ ತಂಡದ ರನ್‌ವೇಗಕ್ಕೆ ಕಡಿವಾಣ ಬಿತ್ತು. ಬಾಬರ್‌ ಅಜಂ 38 ಎಸೆತಗಳಿಂದ ಸರಿಯಾಗಿ 50 ರನ್‌ ಹೊಡೆದಿದ್ದರು.

ಕೊನೆಯ ಹಂತದಲ್ಲಿ ಇಫ್ತಿಕಾರ್‌ ಅಹ್ಮದ್‌ ಸ್ಫೋಟಕವಾಗಿ ಆಡಿದ್ದರಿಂದ ತಂಡದ ಮೊತ್ತ 150ರ ಗಡಿ ತಲುಪಿತು. ಇಫ್ತಿಕಾರ್‌ 34 ಎಸೆತ ಗಳಲ್ಲಿ 62 ರನ್‌ ಸಿಡಿಸಿ ಅಜೇಯರಾಗಿ ಉಳಿ ದರು. 5 ಬೌಂಡರಿ, 3 ಸಿಕ್ಸರ್‌ ಸಿಡಿಸಿ ರಂಜಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next