Advertisement

ಸ್ಮಿತ್‌, ಕೊಹ್ಲಿ ಯಾರು ಶ್ರೇಷ್ಠ ?

02:27 PM Jan 13, 2018 | |

ಕೊಹ್ಲಿ ಮತ್ತು ಸ್ಮಿತ್‌ ಸಮಕಾಲೀನರಾಗಿ ತಂಡಗಳ ನಾಯಕತ್ವವನ್ನು ವಹಿಸಿಕೊಂಡವರು. ಕ್ರಿಕೆಟ್‌ನಲ್ಲಿ ಒಂದೊಂದು ಮೈಲುಗಲ್ಲು ಸ್ಥಾಪಿಸುತ್ತಾ ಹೊರಟ ಅಪ್ರತಿಮ ಸಾಧಕರು. ಹಿರಿಯ ಕ್ರಿಕೆಟಿಗರು, ಕ್ರೀಡಾ ಪಂಡಿತರು, ವಿಶ್ಲೇಷಕರು ಅಲ್ಲದೇ ಅಭಿಮಾನಿಗಳಲ್ಲೂ ಕೂಡ ಯಾರು ಶ್ರೇಷ್ಠರು ಎಂಬ ವಾದ, ವಿಶ್ಲೇಷಣೆಗಳು, ಚರ್ಚೆಗಳು ನಡೆಯುತ್ತಿವೆ.

Advertisement

ಅವರಿಬ್ಬರೂ ವಿಶ್ವ ಕ್ರಿಕೆಟ್‌ ಕಂಡ ದೈತ್ಯ ಪ್ರತಿಭೆಗಳು, ಸಾಲು ಸಾಲು ದಾಖಲೆಗಳ ಸರದಾರರು, ಜಿದ್ದಿಗೆ ಬಿದ್ದವರಂತೆ ದಾಖಲೆಗಳ ಬೆನ್ನತ್ತಿ ಹೊರಟ ಸಾಹಸಿಗರು. ಅವರೇ, ಕ್ರಿಕೆಟ್‌ ಜಗತ್ತಿನ ಎರಡು ಬಲಿಷ್ಠ ತಂಡಗಳ ನಾಯಕರಾದ ವಿರಾಟ್‌ ಕೊಹ್ಲಿ ಮತ್ತು ಸ್ಟೀವನ್‌ ಸ್ಮಿತ್‌! ಇದೀಗ ಇವರಲ್ಲಿ ಯಾರು ಶ್ರೇಷ್ಠ ಅನ್ನುವ ಚರ್ಚೆ ಕ್ರೀಡಾ ಜಗತ್ತಿನಲ್ಲಿ ಶುರುವಾಗಿದೆ.

ಒಬ್ಬರು ಸ್ಟೀವನ್‌ ಸ್ಮಿತ್‌ ಶ್ರೇಷ್ಠ ಎಂದರೆ, ಮತ್ತೂಬ್ಬರು ಪ್ರಸ್ತುತ ವಿರಾಟ್‌ ಕೊಹ್ಲಿಯೇ ಶ್ರೇಷ್ಠ ಆಟಗಾರ ಎಂದು ಹೇಳುತ್ತಾರೆ. ಈ ನಡುವೆ ಆಸ್ಟ್ರೇಲಿಯಾದ ಸ್ಪಿನ್‌ ದಂತಕತೆ ಶೇನ್‌ ವಾರ್ನ್ ಕೂಡ ವಿರಾಟ್‌ ಕೊಹ್ಲಿ, ಸ್ಮಿತ್‌ ಇಬ್ಬರೂ ಶ್ರೇಷ್ಠರು ಎಂದಿದ್ದಾರೆ.

ಹೀಗೆಲ್ಲ ಚರ್ಚೆ ಹಾಗೂ ವಾದ ಪ್ರಾರಂಭವಾಗಲು ಕಾರಣ, 2017ನೇ ಸಾಲಿನಲ್ಲಿ ಈ ಇಬ್ಬರು ಪ್ರತಿಭಾನ್ವಿತ ಆಟಗಾರರು ತಮ್ಮ ತಂಡಗಳನ್ನು ಮುನ್ನಡಿಸಿದ ರೀತಿ, ಜತೆಗೆ ಕ್ರೀಸ್‌ನಲ್ಲಿ ಎದುರಾಳಿಗಳನ್ನು ದಂಡಿಸಿದ ವೈಖರಿ. ಕ್ರಿಕೆಟ್‌ ದಂತಕತೆಗಳಾದ ಆಸ್ಟ್ರೇಲಿಯಾದ ಡಾನ್‌ ಬ್ರಾಡ್ಮನ್‌ ಹಾಗೂ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಗಳನ್ನೂ ಇವರು ಬಿಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಸಾಲಿನಲ್ಲಿ ಸ್ಟೀವನ್‌ ಸ್ಮಿತ್‌ ಹಾಗೂ ವಿರಾಟ್‌ ಕೊಹ್ಲಿ ತಾವಾಡಿದ ಪಂದ್ಯಗಳಲ್ಲಿ ಯಾವ ರೀತಿ ಸಾಧನೆ ಮಾಡಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ…

ಟೆಸ್ಟ್‌ನಲ್ಲಿ ಸಮಬಲ ಸಾಧನೆ
ತಂಡವು ಕಷ್ಟದಲ್ಲಿದ್ದ ಸಂದರ್ಭದಲ್ಲೂ ಪಂದ್ಯದ ದಿಕ್ಕನ್ನೇ ಬದಲಾಯಿಸಿ ಗೆಲುವು ತರಬಲ್ಲ ಚಾಣಾಕ್ಷ ಸ್ಮಿತ್‌. 2017ನೇ ಸಾಲಿನಲ್ಲಿ ಸ್ಮಿತ್‌ ತಾನಾಡಿರುವ 11 ಟೆಸ್ಟ್‌ ಪಂದ್ಯಗಳ 20 ಇನಿಂಗ್ಸ್‌ಗಳಲ್ಲಿ 76.76 ಸರಾಸರಿಯಲ್ಲಿ 6 ಶತಕ, ಮೂರು ಅರ್ಧಶತಕಗಳ ಮೂಲಕ 1305 ರನ್‌ ಸಿಡಿಸಿದ್ದಾರೆ. ಇನಿಂಗ್ಸ್‌ ಒಂದರಲ್ಲಿ 239 ರನ್‌ ಬಾರಿಸಿದ ಹೆಗ್ಗಳಿಕೆಯೂ ಅವರಿಗಿದೆ. 2017ರಲ್ಲಿ ಅತ್ಯಧಿಕ ಟೆಸ್ಟ್‌ ರನ್‌ಗಳಿಸಿದ ಸಾಧನೆ ಮಾಡಿದ್ದಾರೆ. ಕೊಹ್ಲಿ ವಿಷಯಕ್ಕೆ ಬಂದರೆ, 10 ಪಂದ್ಯಗಳಾಡಿರುವ ವಿರಾಟ್‌ 16 ಇನಿಂಗ್ಸ್‌ಗಳಲ್ಲಿ 76.64 ಸರಾಸರಿಯಲ್ಲಿ 1059 ರನ್‌ ದಾಖಲಿಸಿದ್ದಾರೆ. ಇದರಲ್ಲಿ 2 ಶತಕ, 3 ಅರ್ಧಶತಕ ಸೇರಿವೆ. ಸ್ಮಿತ್‌ ಇಂಗ್ಲೆಂಡ್‌ ವಿರುದ್ಧದ ಆ್ಯಷಸ್‌ ಸರಣಿಯಲ್ಲಿ 578ಕ್ಕೂ ಅಧಿಕ ರನ್‌ ಗಳಿಸಿದರೆ, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕೊಹ್ಲಿ 447 ರನ್‌ಗಳಿಸಿದ್ದಾರೆ. ಇದು ಮೇಲ್ನೋಟಕ್ಕೆ ಇವರಿಬ್ಬರ ಸಾಧನೆಯನ್ನು ತೋರಿಸುತ್ತದೆ. ಇದನ್ನೆಲ್ಲ ಗಮನಿಸಿದರೆ ಇಬ್ಬರದೂ ಸಮಬಲ ಪ್ರದರ್ಶನ ಎಂದರೆ ತಪ್ಪಾಗಲಾರದು.

Advertisement

ಏಕದಿನದಲ್ಲಿ ಕೊಹ್ಲಿ ಸಾಮ್ರಾಟ್‌
ಏಕದಿನ ಕ್ರಿಕೆಟ್‌ನ ವಿಷಯಕ್ಕೆ ಬಂದರೆ, ವಿರಾಟ್‌ ಕೊಹ್ಲಿ ನಂ.1 ಆಟಗಾರರಾಗಿದ್ದಾರೆ. 2017ರಲ್ಲಿ ಕೊಹ್ಲಿ ಆಡಿದ ಪಂದ್ಯಗಳು ಮುಟ್ಟಿದೆಲ್ಲ ಚಿನ್ನ ಎನ್ನುವಂತಾಗಿದೆ. 2017ರಲ್ಲಿ 26 ಪಂದ್ಯಗಳನ್ನು ಆಡಿರುವ ಕೊಹ್ಲಿ 76.84 ಸರಾಸರಿಯಲ್ಲಿ 6 ಶತಕ, 7 ಅರ್ಧಶತಕಗಳನ್ನೊಳಗೊಂಡು 1460 ರನ್‌ಗಳಿಸಿ ಪರಾಕ್ರಮ ಮೆರೆದಿದ್ದಾರೆ. ಇನ್ನು ಸ್ಮಿತ್‌ ಕೇವಲ 13 ಪಂದ್ಯಗಳಲ್ಲಿ 44.90 ಸರಾಸರಿಯಲ್ಲಿ 1 ಶತಕ ಹಾಗೂ 4 ಅರ್ಧಶತಕಗಳಿಂದ 449 ರನ್‌ಗಳಿಸಿ ಮಿಂಚಿದ್ದಾರೆ. ಹೀಗಾಗಿ ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿಯೇ ಸಾಮ್ರಾಟ್‌.

ಈ ಇಬ್ಬರೂ ಪ್ರಸ್ತುತ ವಿಶ್ವ ಕ್ರಿಕೆಟ್‌ ಸಾಮ್ರಾಜ್ಯದಲ್ಲಿ ಹೊಳೆಯುತ್ತಿರುವ ತಾರೆಗಳು. ಸಾಧನೆ ಶಿಖರವೇರಲು ಇವರು ಕ್ರಮಿಸಬೇಕಾದ ದಾರಿ ಬಹಳಷ್ಟಿದೆ. ಯಾರು ಶ್ರೇಷ್ಠರು ಎನ್ನುವುದು ಮುಖ್ಯವಲ್ಲ. ಇಬ್ಬರೂ ಮುಂದಿನ ಪೀಳಿಗೆಗೆ ಮಾದರಿಯಾಗಿ ನಿಂತಿದ್ದಾರೆ ಅನ್ನುವುದಷ್ಟೇ ಮುಖ್ಯ.

ಟೆಸ್ಟ್‌     
ಸ್ಟೀವನ್‌ ಸ್ಮಿತ್‌        ವಿರಾಟ್‌ ಕೊಹ್ಲಿ
ಪಂದ್ಯ    11            10
ರನ್‌    1305            1059
ಸರಾಸರಿ    76.76            76.64
ಶತಕ     6            5
ಅರ್ಧಶತಕ 3            1

ಏಕದಿನ    
ಸ್ಟೀವನ್‌ ಸ್ಮಿತ್‌        ವಿರಾಟ್‌ ಕೊಹ್ಲಿ
ಪಂದ್ಯ    13        26
ರನ್‌    449    1460
ಸರಾಸರಿ    44.90        76.84
ಶತಕ     1    6
ಅರ್ಧಶತಕ 4    7

ದೇವಲಾಪುರ ಮಹದೇವಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next