ಧಾರವಾಡ: ಮನೆ-ಮನಗಳಲ್ಲಿ ಸದಾ ನಗುವಿನ ಕ್ಷಣಗಳು ತುಂಬುವಂತೆ ಮಾಡುವ ಆನಂದವೇ ಬದುಕಿನ ಅಂತಿಮ ವೈಭವವಾಗಿದೆ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಇಲ್ಲಿಯ ಸಂಪಿಗೆ ನಗರಕ್ಕೆ ಹೊಂದಿಕೊಂಡ ಸಿದ್ಧೇಶ್ವರ ಬಡಾವಣೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ 35 ಸಾವಿರ ಚದುರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಬಿ.ಡಿ.ಪಾಟೀಲ ಸಮಾವೇಶ ಭವನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆರ್ಶೀವಚನ ನೀಡಿದರು. ನಯ, ವಿನಯ, ಮೈತ್ರಿ ಭಾವದ ಸಮಾಧಾನದ ನೆರಳಿನಲ್ಲಿ ಜನರ ಹೃದಯ ಗೆಲ್ಲಬೇಕು. ಆ ಮೂಲಕ ಎಲ್ಲರಿಗೂ ಹಿತವಾಗುವ ಉನ್ನತ ಕಾರ್ಯಗಳನ್ನು ಮಾಡಬೇಕು. ಅದನ್ನು ನೋಡಿ ಎಲ್ಲರೂ ಆನಂದ ಪಡಬೇಕು. ಈ ಆನಂದವೇ ನಿಜ ಸಂಪತ್ತು ಎಂದರು.
ಭವನ ಉದ್ಘಾಟಿಸಿದ ಮೈಸೂರು ಸುತ್ತೂರುಮಠದ ಡಾ| ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಮನುಷ್ಯನ ಮನಸ್ಸು ಹಾಗೂ ಜೀವನ ಎಲ್ಲಿಯೂ ಸ್ವೇಚ್ಛಾಚಾರಕ್ಕೆ ಅವಕಾಶ ನೀಡದೇ ನಿಯಮಿತವಾದ ಸುಸಂಸ್ಕೃತ ದಾರಿಯಲ್ಲಿ ಎಲ್ಲರಿಗೂ ಒಪ್ಪುವ ಸಮಾಜಮುಖೀ ಚಿಂತನೆ ಕಾರ್ಯಗಳನ್ನು ಮಾಡಬೇಕು. ಬದುಕಿನಲ್ಲಿ ಸನ್ಯಾಸವೇ ಇರಲಿ ಇಲ್ಲವೇ ಗ್ರಹಸ್ಥರೇ ಆಗಿರಲಿ ತಮಗೆ ತಕ್ಕುದಾದ ನಿಯಮ ಬದ್ಧತೆಯನ್ನು ಹೊಂದಿದಾಗ ಅಲ್ಲಿ ಪವಿತ್ರವಾದ ಜೀವನ ವಿಧಾನ ಸಾಧ್ಯವಾಗುತ್ತದೆ ಎಂದರು.
ಕೊಲ್ಲಾಪುರ ಕನ್ನೇರಿ ಸಿದ್ಧಗಿರಿಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಗದಗ ಶಿವಾನಂದ ಮಠದ ಶ್ರೀ ಕೈವಲ್ಯಾನಂದ ಸ್ವಾಮೀಜಿ, ಬೆಳಗಾವಿ ರುದ್ರಾಕ್ಷಿಮಠದ ಡಾ|ಸಿದ್ಧರಾಮ ಸ್ವಾಮೀಜಿ, ವಿಜಯಪುರ ಇಸ್ಲಾಂ ಧರ್ಮಗುರು ಡಾ| ಸಯ್ಯದ ಮುರ್ತುಜಾ ಹುಸೈನಿ ಹಾಷ್ಮಿ ಸಾನ್ನಿಧ್ಯ ವಹಿಸಿದ್ದರು.
ಡಾ|ಗುರುಲಿಂಗ ಕಾಪಸೆ, ಪ್ರೊ|ಐ.ಜಿ. ಸನದಿ, ಡಾ|ವೀರಣ್ಣ ಮತ್ತಿಕಟ್ಟಿ, ಬಸವರಾಜ ಹೊರಟ್ಟಿ, ಅರವಿಂದ ಬೆಲ್ಲದ, ಆನಂದ ನ್ಯಾಮಗೌಡ, ಎ.ಎಂ. ಹಿಂಡಸಗೇರಿ, ಚಂದ್ರಕಾಂತ ಬೆಲ್ಲದ, ಎ.ಬಿ.ದೇಸಾಯಿ, ಪಿ.ಸಿ. ಸಿದ್ಧನಗೌಡರ, ಎನ್.ಎಚ್. ಕೋನರಡ್ಡಿ, ಶಂಕರಣ್ಣ ಮುನವಳ್ಳಿ, ಪ್ರಕಾಶ ಕರೆಣ್ಣವರ, ಎಂ.ಕೆ. ಹೆಗಡೆ, ಕುಮಾರ ಕರನಿಂಗ್ ಗೋಕಾಕ ಇನ್ನಿತರರಿದ್ದರು.
ನಿವೃತ್ತ ಡಿವೈಎಸ್‌ಪಿ ಬಿ.ಡಿ. ಪಾಟೀಲ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ, ಡಾ| ವೈ.ಪಿ. ಕಲ್ಲನಗೌಡರ ನಿರೂಪಿಸಿದರು. ವಿಕ್ರಮ ಪಾಟೀಲ ವಂದಿಸಿದರು.