Advertisement

ಅಮೇಠಿಯಲ್ಲಿ ಸ್ಮತಿ ಇರಾನಿ ಆಪ್ತನ ಹತ್ಯೆ

11:41 AM May 28, 2019 | sudhir |

ಅಮೇಠಿ: ಉತ್ತರಪ್ರದೇಶದಲ್ಲಿ ಮೊದಲ ಚುನಾವಣೋತ್ತರ ಹಿಂಸಾಚಾರ ಎಂಬಂತೆ ಅಮೇಠಿಯಲ್ಲಿ ಸಂಸದೆ ಸ್ಮತಿ ಇರಾನಿ ಅವರ ಆಪ್ತ, ಬಿಜೆಪಿ ಕಾರ್ಯಕರ್ತ ಸುರೇಂದ್ರ ಸಿಂಗ್‌(50) ಎಂಬವರನ್ನು ಶನಿವಾರ ರಾತ್ರಿ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ.

Advertisement

ಶನಿವಾರ ರಾತ್ರಿ 11.30ರ ವೇಳೆಗೆ ಅಮೇಠಿಯ ತಮ್ಮ ಮನೆಯ ಹೊರಗೆ ಕುಳಿತಿದ್ದಾಗ ಅಲ್ಲಿಗೆ ಬಂದ ಇಬ್ಬರು ದುಷ್ಕರ್ಮಿಗಳು ಸುರೇಂದ್ರ ಸಿಂಗ್‌ಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು. ಇದೊಂದು ರಾಜಕೀಯ ದ್ವೇಷದ ಹತ್ಯೆ ಆಗಿರಲೂಬಹುದು ಎಂದು ಹೇಳಿರುವ ಹೆಚ್ಚುವರಿ ಎಸ್‌ಪಿ ದಯಾ ರಾಮ್‌, ಎಲ್ಲ ಕೋನಗಳಿಂದಲೂ ತನಿಖೆ ನಡೆಸುತ್ತೇವೆ ಎಂದಿದ್ದಾರೆ.

“ಹಳೆಯ ದ್ವೇಷದ ಕುರಿತೂ ಮಾಹಿತಿ ಬಂದಿದೆ. ಜತೆಗೆ, ರಾಜಕೀಯ ದ್ವೇಷದಿಂದಾಗಿ ಕೊಲೆಯಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. 7 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಆದಷ್ಟು ಬೇಗನೆ ತಪ್ಪಿತಸ್ಥರನ್ನು ಬಂಧಿಸುತ್ತೇವೆ’ ಎಂದು ಉತ್ತರಪ್ರದೇಶದ ಡಿಜಿಪಿ ಓಂಪ್ರಕಾಶ್‌ ಸಿಂಗ್‌ ಹೇಳಿದ್ದಾರೆ.

ಘಟನೆಗೆ ತೀವ್ರ ಖಂಡನೆ: ಸಿಂಗ್‌ ಹತ್ಯೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಉ.ಪ್ರದೇಶ ಉಪಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ, “ನಮ್ಮ ಪಕ್ಷದ ಕಾರ್ಯಕರ್ತನ ಸಾವು ದುರದೃಷ್ಟಕರ. ಅವರ ಕೊಲೆಗಾರರು ಭೂಮಿಯಡಿಯಲ್ಲಿ ಅವಿತಿದ್ದರೂ, ಅವರನ್ನು ಹಿಡಿದು ತರುತ್ತೇವೆ’ ಎಂದಿದ್ದಾರೆ.

ಕಾಂಗ್ರೆಸ್‌ ಕಾರ್ಯಕರ್ತರ ಕೃತ್ಯ?: ಇದೇ ವೇಳೆ, ಇದು ಕಾಂಗ್ರೆಸ್‌ ಕಾರ್ಯಕರ್ತರ ಕೃತ್ಯವಿರಬಹುದು ಎಂಬ ಶಂಕೆಯೂ ಮೂಡಿದೆ. ಮೃತರ ಪುತ್ರ ಅಭಯ್‌ ಸಿಂಗ್‌ ಮಾತನಾಡಿ, “ಅಮೇಠಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಅವರನ್ನು ಸ್ಮತಿ ಇರಾನಿ ಅವರು ಸೋಲಿಸಿದ ಬೆನ್ನಲ್ಲೇ ಬಿಜೆಪಿ ಸಂಭ್ರಮಾಚರಣೆ ನಡೆಸಿತು. ಇದನ್ನು ಸಹಿಸಲಾಗದ ಕಾಂಗ್ರೆಸ್‌ ಪರ ಸಮಾಜವಿದ್ರೋಹಿ ಶಕ್ತಿಗಳೇ ಈ ಕೃತ್ಯ ಎಸಗಿರಬಹುದು’ ಎಂದಿದ್ದಾರೆ.

Advertisement

ಸ್ಮೃತಿ ಅವರಿಗೆ ಆಪ್ತರಾಗಿದ್ದ ಕಾರಣ ಸುರೇಂದ್ರ ಸಿಂಗ್‌ ಚುನಾವಣೆ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಶೂಗಳನ್ನು ವಿತರಿಸುವ ಮೂಲಕ ರಾಹುಲ್‌ಗಾಂಧಿಗೆ ಅವಮಾನ ಮಾಡಿದ್ದರು. ಇದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾರ ಕೋಪಕ್ಕೂ ಕಾರಣವಾಗಿತ್ತು.

ರಾಹುಲ್‌ ವಿರುದ್ಧ ವಾಗ್ಧಾಳಿ
ಅಮೇಠಿಯಲ್ಲಿ ಮಾತನಾಡಿದ ಸ್ಮತಿ, ಶಾಂತಿ ಕಾಪಾಡುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ಜತೆಗೆ ರಾಹುಲ್‌ಗಾಂಧಿ ವಿರುದ್ಧವೂ ವಾಗ್ಧಾಳಿ ನಡೆಸಿದ್ದಾರೆ. ಅಮೇಠಿ ಜನರಲ್ಲಿ ಭಯ ಹುಟ್ಟಿಸಿ, ಮಂಡಿಯೂರುವಂತೆ ಮಾಡಲು ಈ ರೀತಿಯ ಕೃತ್ಯ ಎಸಗಲಾಗುತ್ತಿದೆ. ಮೇ 23ರಂದು ಅಮೇಠಿಯನ್ನು ಪ್ರೀತಿಯಿಂದ ನೋಡಿಕೊಳ್ಳಿ ಎಂದು ವ್ಯಕ್ತಿಯೊಬ್ಬರು ನನಗೆ ಸಂದೇಶ ರವಾನಿಸಿದ್ದಾರೆ. ಅವರಿಗೆ ನಾನು, ನಿಮ್ಮ ಸಂದೇಶವು ನನಗೆ ಈಗ ಸ್ಪಷ್ಟವಾಗಿ ಸಿಕ್ಕಿದೆ ಎಂದು ಹೇಳಬಯಸುತ್ತೇನೆ ಎಂದಿದ್ದಾರೆ.

ಮೃತದೇಹಕ್ಕೆ ಹೆಗಲುಕೊಟ್ಟ ಸ್ಮತಿ ಇರಾನಿ
ತಮ್ಮ ಆಪ್ತ ಸುರೇಂದ್ರ ಸಿಂಗ್‌ ಹತ್ಯೆಯಾಗಿದೆ ಎಂಬ ವಿಚಾರ ತಿಳಿದೊಡನೆ ರವಿವಾರ ಬೆಳಗ್ಗೆ ಸಂಸದೆ ಸ್ಮತಿ ಇರಾನಿ ಅಮೇಠಿಗೆ ಧಾವಿಸಿದರು. ಬರೌಲಿ ಗ್ರಾಮದ ಮಾಜಿ ಮುಖ್ಯಸ್ಥರೂ ಆಗಿದ್ದ ಸುರೇಂದ್ರ ಸಿಂಗ್‌ ಅಂತ್ಯಕ್ರಿಯೆಯಲ್ಲೂ ಸ್ಮತಿ ಪಾಲ್ಗೊಂಡರು. ಬಳಿಕ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಸಿಂಗ್‌ ಅವರ ಮೃತದೇಹಕ್ಕೆ ಸ್ಮತಿ ಹೆಗಲು ಕೊಟ್ಟಿದ್ದೂ ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next