Advertisement
“ಎದ್ದೇಳು ಮಂಜುನಾಥ’ ಚಿತ್ರದಲ್ಲಿ ಪರಮ ಸೋಮಾರಿಯಾಗಿ ಮತ್ತು “ಮಂಜುನಾಥ ಬಿ.ಎ, ಎಲ್.ಎಲ್.ಬಿ’ಯಲ್ಲಿ ಲಾಯರ್ ಆಗಿ ಕಾಣಿಸಿಕೊಂಡು ಹೋಗಿದ್ದ ಜಗ್ಗೇಶ್, ಈಗ “ಮೇಲುಕೋಟೆ ಮಂಜ’ ಚಿತ್ರದಲ್ಲಿ ಎಲ್ಲರನ್ನೂ ಯಾಮಾರಿಸುವ ಮತ್ತು ಸಾಲ ಮಾಡುವುದಕ್ಕೆ ನೂರೆಂಟು ಸುಳ್ಳುಗಳನ್ನು ಹೇಳುವ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ನಾಳೆ (ಫೆಬ್ರವರಿ 10) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
Related Articles
Advertisement
ಯಾಕೆ ನಿರ್ದೇಶನ ಎಂದರೆ ಅದಕ್ಕೂ ಒಂದು ಕಾರಣವಿದೆ ಮತ್ತು ಆ ಕಾರಣವನ್ನು ಜಗ್ಗೇಶ್ ಹೀಗೆ ವಿವರಿಸುತ್ತಾರೆ. “ನಾನು ಅಭಿನಯಿಸಿರುವ 140 ಚಿತ್ರಗಳಲ್ಲಿ ಅನೇಕ ಚಿತ್ರಗಳಿಗೆ ನಾನು ಘೋಸ್ಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೀನಿ. ಆದರೆ, ಈ ವಿಷಯವನ್ನು ನಾನು ಎಲ್ಲೂ ಹೇಳಿಕೊಂಡಿರಲಿಲ್ಲ. ನನ್ನ ಹತ್ತಿರ ಚಿತ್ರತಂಡದವರು ಸೀನ್ ಮತ್ತು ಸಂಭಾಷಣೆಗಳನ್ನ ಬರೆಸಿಕೊಳ್ಳೋರು. ಕೊನೆಗೆ ಜನರಿಂದ ಚಪ್ಪಾಳೆ ಪಡೆದು ಮೆರೆಯೋರು.
ಆದರೆ, ನಾನು ಮಾತ್ರ ಆ ಕೆಲಸಕ್ಕೆ ಕ್ರೆಡಿಟ್ ಪಡೆಯುತ್ತಿರಲಿಲ್ಲ. ಈಗ ಮಾತ್ರ ಸ್ವಲ್ಪ ಬದಲಾಗಿದ್ದೇನೆ. ನನ್ನ ಕೆಲಸ ನಂದು, ನಿನ್ನ ಕೆಲಸ ನಿಂದು ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಬೇರೆ ಯಾರಿಗೋ ಸಹಾಯ ಮಾಡುವ ಬದಲು, ನನ್ನ ಚಿತ್ರವನ್ನು ನಾನೇ ಏಕೆ ನಿರ್ದೇಶಿಸಬಾರದು ಎಂಬ ಕಾರಣಕ್ಕೆ, ಈ ಚಿತ್ರಕ್ಕೆ ನಾನೇ ಆ್ಯಕ್ಷನ್, ಕಟ್ ಹೇಳಿದ್ದೇನೆ’ ಎನ್ನುತ್ತಾರೆ ಅವರು.
ಈ ಚಿತ್ರದ ಮೂಲಕ ಜಗ್ಗೇಶ್ ಗೀತರಚನೆಕಾರರೂ ಆಗಿದ್ದಾರೆ. “ಕಣ್ಮುಚ್ಚಿ ನಡೆದಾಗ ಯಾಕಿಂಗೆ ಹೇಳು ಬಾ …’ ಎಂಬ ಹಾಡೊಂದನ್ನು ಅವರು ಬರೆದಿದ್ದಾರೆ. ಕಾರ್ತಿಕ್ ಮತ್ತು ಅನುರಾಧಾ ಭಟ್ ಅವರು ಈ ಹಾಡಿಗೆ ಧ್ವನಿಯಾಗಿದ್ದಾರೆ. ಜಯಂತ್ ಕಾಯ್ಕಿಣಿ ಅವರಿಂದ ಸ್ಫೂರ್ತಿ ಪಡೆದು ಈ ಡ್ಯುಯೆಟ್ ಹಾಡನ್ನು ಬರೆದಿದ್ದಾರೆ ಜಗ್ಗೇಶ್. ಇದಲ್ಲದೆ ಯೋಗರಾಜ್ ಭಟ್ ಮುಂತಾದವರು ಸಹ ಹಾಡುಗಳನ್ನು ಬರೆದಿದ್ದಾರೆ.
ಇನ್ನು ಚಿತ್ರಕ್ಕೆ ಪುನೀತ್ ರಾಜಕುಮಾರ್, ಟಿಪ್ಪು, ನಕುಲ್ ಅಭಯಂಕರ್, “ಜೋಗಿ’ ಸುನೀತ ಮುಂತಾದವರು ಹಾಡುಗಳನ್ನು ಹಾಡಿದ್ದಾರೆ. ಇನ್ನು ಈ ಹಾಡುಗಳಿಗೆ ರಾಗ ಸಂಯೋಜಿಸಿರುವುದು ಗಿರಿಧರ್ ದಿವಾನ್. “ಮೇಲುಕೋಟೆ ಮಂಜ’ ಚಿತ್ರದಲ್ಲಿ ಬ್ಯಾಂಕ್ ಜನಾರ್ಧನ್, ಶ್ರೀನಿವಾಸಪ್ರಭು, ಕಿಲ್ಲರ್ ವೆಂಕಟೇಶ್, ಅರಸೀಕೆರೆ ರಾಜು, ಶ್ರೀನಿವಾಸ್ ಗೌಡ, ಕುರಿ ಪ್ರತಾಪ್, ಮಿಮಿಕ್ರಿ ದಯಾನಂದ್ ಸೇರಿದಂತೆ ಹಲವು ಅಭಿನಯಿಸಿದ್ದಾರೆ. ಚಿತ್ರಕ್ಕೆ ದಾಸರಿ ಸೀನು ಅವರ ಛಾಯಾಗ್ರಹಣ ಮತ್ತು ಕೆ.ಎಂ. ಪ್ರಕಾಶ್ ಅವರ ಸಂಕಲನವಿದೆ.