ಪ್ರತಿಯೊಬ್ಬರು ಸ್ನಾನ ಮಾಡಲು ಸಾಬೂನು ಬಳಸುತ್ತಾರೆ. ಆಹ್ಲಾದಕರ ಪರಿಮಳ, ಮೈನವಿರೇಳಿಸುವ ನೊರೆ, ಕಣ್ಮನ ಸೆಳೆಯುವ ಸಾಬೂನುಗಳು ಚರ್ಮದ ರಕ್ಷಣೆಗೆ ಅತ್ಯಗತ್ಯ. ಇವು ಚರ್ಮವನ್ನು ಶುಭ್ರಗೊಳಿಸುತ್ತವೆ. ಮಗುವಿನ ಕೋಮಲವಾದ ಚರ್ಮವನ್ನು ರಕ್ಷಿಸುವ ಬೇಬಿ ಸೋಪ್‌ನಲ್ಲಿಯೂ ಸಹ ಸಾಕಷ್ಟು ವಿಧಗಳಿವೆ. ಜೇನು, ಗ್ಲಿಸರಿನ್, ಬೇವು, ಗುಲಾಬಿ, ಚಂದನ, ಹಾಲು, ಅಲೋವೆರಾ, ಬಾದಾಮಿ, ಪ್ರಾಣಿಗಳ ಕೊಬ್ಬು ಪದಾರ್ಥ, ಅಪಾಯರಹಿತ ಸಸಿಗಳ ಅಂಶ, ಸೋಡಿಯಂ, ಪೊಟಾಶಿಯಂ- ಹೀಗೆ ಹಲವು ಅಂಶಗಳು ಇದರಲ್ಲಿರುತ್ತದೆ. ಮೆಡಿಕೇಟೆಡ್ ಸಾಬೂನಿನಲ್ಲಿ ಬಗೆಬಗೆಯ ಚರ್ಮ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೆಂದು ನಾನಾ ಸೋಪುಗಳಿವೆ. ತಜ್ಞ ವೈದ್ಯರ ಶಿಫಾರಸಿನಂತೆ ಬಳಸಿದರೆ ಉತ್ತಮ.
ಬ್ಯೂಟಿಬಾರ್‌ನಲ್ಲಿ ಕ್ಷಾರಗುಣವು ಒಂದು ಪರಿಮಾಣದಲ್ಲಿರುತ್ತದೆ. ಸಾಮಾನ್ಯ ಚರ್ಮ ಹೊಂದಿರುವವರು ಇದನ್ನು ಬಳಸದೇ ಇರುವುದು ಒಳ್ಳೆಯದು. ಮಾಯಿಶ್ಚರೈಸರ್ ಸೋಪಿನಲ್ಲಿ ಕೊಬ್ಬು ಪದಾರ್ಥಗಳು, ಕೆಲವು ಬಗೆಯ ಎಣ್ಣೆಗಳು, ಗ್ಲಿಸರಿನ್‌ನಂತಹ ವಸ್ತುಗಳಿವೆ. ಒಣ ಚರ್ಮಕ್ಕಿದು ಉತ್ತಮ. ಪಾರದರ್ಶಕ ವಿಧದ ಸಾಬೂನಿನಲ್ಲಿ ಗ್ಲಿಸರಿನ್ ಅಧಿಕವಾಗಿರುತ್ತದೆ. ಡಿಯೋಡರೆಂಟ್ ಸಾಬೂನಿನಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಏಜೆಂಟ್ ಸಮೃದ್ಧವಾಗಿ ಇರುತ್ತದೆ. ಬ್ಯಾಕ್ಟೀರಿಯಾದಿಂದ ಶರೀರದಲ್ಲಿ ಉಂಟಾಗುವ ದುರ್ವಾಸನೆಯನ್ನು ಇದು ಮಾಯ ಮಾಡುತ್ತದೆ. ಸೋಪ್ ಫ್ರೀ ಫೇಸ್‌ವಾಶ್‌ಗಳು ಎಲ್ಲಾ ಬಗೆ ಚರ್ಮಕ್ಕೂ ಹೊಂದುತ್ತದೆ. ಇದನ್ನು ಎಲ್ಲ ವಯೋಮಿತಿಯವರು ಬಳಸಬಹುದು. ಶ್ರೀಗಂಧದ ಸಾಬೂನು ಮೈಮನಸ್ಸಿಗೆ ಆಹ್ಲಾದವನ್ನುಂಟು ಮಾಡುತ್ತದೆ. ಚರ್ಮಕ್ಕೂ ಒಳ್ಳೆಯದು.
ಇನ್ನು ಹಲವು ಉತ್ತಮ ದರ್ಜೆಯ ಸಾಬೂನುಗಳು ಮಾರುಕಟ್ಟೆಯಲ್ಲಿವೆ. ಅವನ್ನು ಬಳಸಿಯೂ ಸೌಂದರ್ಯ ವೃದ್ಧಿಸಿಕೊಳ್ಳಬಹುದು. ಆದರೆ ಎಚ್ಚರಿಕೆ ಅವಶ್ಯ. ಆದರೂ ಮುಂಜಾನೆ ಸ್ನಾನಕ್ಕೆ ಆದಷ್ಟು ಕಡಿಮೆ ಸಾಬೂನು ಬಳಸಿ ಸಾಬೂನು ಹಚ್ಚಿಕೊಂಡ ನಂತರ ಧಾರಾಳ ನೀರು ಬಳಸಿ ಚರ್ಮ ಸ್ವಚ್ಛಗೊಳಿಸಿ. ಇಲ್ಲದಿದ್ದರೆ ಕೆಲವರಿಗೆ ಅಲರ್ಜಿಯಾಗುತ್ತದೆ.
ಒಬ್ಬರು ಬಳಸಿದ ಸೋಪು ಮತ್ತೂಬ್ಬರು ಬಳಸಬಾರದು. ಚರ್ಮಕ್ಕೆ ಹೊಂದಿಕೆಯಾಗುವ ಸಾಬೂನು ಬಳಸಿ. ತೀಕ್ಷ್ಣ ಪರಿಮಳದ ಸಾಬೂನು ಅಧಿಕ ಬಳಸಿದರೆ ಅಲರ್ಜಿ ಉಂಟಾಗುತ್ತದೆ. ಆಲ್ಫಾ ಹೈಡ್ರಾಕ್ಸಿಡ್ ಇರುವ ಸಾಬೂನು ಮೊಡವೆಯಿರುವ ಹರೆಯದ ಮಕ್ಕಳು ಬಳಸಿದರೆ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಋತುವಿಗನುಗುಣವಾಗಿ ಸೋಪನ್ನು ಬದಲಿಸಿ ಬಳಸಿ.
ಸುಜಾತಾ