ಹೊಸದಿಲ್ಲಿ: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಇಂದಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೂಪರ್ ಓವರ್ ನಲ್ಲಿ ಗೆದ್ದ ಕರ್ನಾಟಕ ತಂಡ ಸೆಮಿ ಫೈನಲ್ ಗೆ ಲಗ್ಗೆ ಇರಿಸಿದೆ. ಬಂಗಾಳ ವಿರುದ್ಧ ರೋಮಾಂಚನಕಾರಿ ಪಂದ್ಯದಲ್ಲಿ ಸೋಲಿನ ಬಾಯಿಯಿಂದ ಜಯ ಕಸಿದ ಕರ್ನಾಟಕ ಹುಡುಗರು ಸೆಮಿ ಗೆ ಎಂಟ್ರಿ ನೀಡಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ರೋಹನ್ ಕದಂ 30 ರನ್, ನಾಯಕ ಮನೀಷ್ ಪಾಂಡೆ 29 ಮತ್ತು ಕರುಣ್ ನಾಯರ್ ಅಜೇಯ 55 ರನ್ ಗಳಿಸಿದರು. ಬಂಗಾಳ ಪರ ಐವರು ಬೌಲರ್ ಗಳು ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ:“ಎಲ್ಲವೂ ಹೋಯಿತು..ಅಳುವುದೋ ಏನು ಮಾಡುವುದು ಗೊತ್ತಿಲ್ಲ”: ಮಿಮಿ ಚಕ್ರವರ್ತಿ
ಗುರಿ ಬೆನ್ನತ್ತಿದ ಬಂಗಾಳಕ್ಕೆ ಅನುಭವಿ ಶ್ರೀವತ್ಸ ಗೋಸ್ವಾಮಿ ಭರ್ಜರಿ ಆರಂಭ ನೀಡಿದರು. ವಿಜಯ್ ಕುಮಾರ್ ಎಸೆದ ಮೊದಲ ಓವರ್ ನಲ್ಲೇ 20 ರನ್ ಸಿಡಿಸಿದರು. ಬಂಗಾಳ ಉತ್ತಮ ರನ್ ರೇಟ್ ನಲ್ಲಿ ರನ್ ಗಳಿಸಿದರೂ ಸತತ ವಿಕೆಟ್ ಕಳೆದುಕೊಂಡಿತು. ವೃತ್ತಿಕ್ ಚಟರ್ಜಿ 51 ರನ್ ಗಳಿಸಿದರೆ, ಕೊನೆಯಲ್ಲಿ ಕೇವಲ 18 ಎಸೆತಗಳಲ್ಲಿ ರಿತ್ವಿಕ್ ಚೌಧರಿ 36 ರನ್ ಸಿಡಿಸಿದರು.
ಅಂತಿಮ ಓವರ್ ರೋಮಾಂಚನ: ವಿದ್ಯಾಧರ್ ಪಾಟಿಲ್ ಎಸೆದ ಅಂತಿಮ ಓವರ್ ನಲ್ಲಿ ಬಂಗಾಳ ಗೆಲುವಿಗೆ 20 ರನ್ ಅಗತ್ಯವಿತ್ತು. ರಿತ್ವಿಕ್ ಚೌಧರಿ ಮೊದಲೆರಡು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದರು. ಮೂರನೇ ಎಸೆತಕ್ಕೆ ಒಂಟಿ ರನ್, ನಾಲ್ಕನೇ ಎಸೆತಕ್ಕೆ ಬೌಂಡರಿ. ಐದನೇ ಎಸೆತಕ್ಕೆ ಮಿಸ್ ಫೀಲ್ಡ್ ಸೇರಿ ಎರಡು ರನ್. ಪಂದ್ಯ ಟೈ. ಕೊನೆಯ ಎಸೆತಕ್ಕೆ ಒಂದು ರನ್ ಅಗತ್ಯವಿತ್ತು. ಆದರೆ ಮನೀಷ್ ಪಾಂಡೆಯ ಅದ್ಭುತ ಥ್ರೋ ಗೆ ಬ್ಯಾಟ್ಸಮನ್ ರನ್ ಔಟ್. ಪಂದ್ಯ ಟೈ.
ಸೂಪರ್ ಓವರ್: ಮೊದಲು ಬ್ಯಾಟಿಂಗ್ ಬಂದ ಬಂಗಾಳದ ಆಟಗಾರರು ಕರಿಯಪ್ಪ ಬೌಲಿಂಗ್ ಗೆ ನಲುಗಿದರು. ಸೂಪರ್ ಓವರ್ ನ ಮೊದಲ ಬಾಲ್ ಡಾಟ್, ಎರಡನೇ ಎಸೆತದಲ್ಲಿ ಕೈಫ್ ಅಹಮದ್ ಔಟ್. ಮೂರನೇ ಎಸೆತಕ್ಕೆ ಬೌಂಡರಿ ಬಾರಿಸಿದರೆ, ನಾಲ್ಕನೇ ಎಸೆತದಕ್ಕೆ ಎರಡು ರನ್ ಕದಿಯುವ ಭರದಲ್ಲಿ ಗೋಸ್ವಾಮಿ ರನ್ ಔಟಾದರು.
ಆರು ಎಸೆತದಲ್ಲಿ ಆರು ರನ್ ಗಳಿಸಬೇಕಾದ ಗುರಿ ಪಡೆದ ಕರ್ನಾಟಕಕ್ಕೆ ನಾಯಕ ಮನೀಷ್ ಪಾಂಡೆ ಕೇವಲ ಎರಡು ಎಸೆತದಲ್ಲಿ ಜಯ ತಂದಿತ್ತರು. ಮೊದಲ ಎಸೆತದಲ್ಲಿ ಎರಡು ರನ್ ಓಡಿದರೆ, ಮುಂದಿನ ಎಸೆತವನ್ನು ಸಿಕ್ಸರ್ ಗೆ ಅಟ್ಟಿದರು.
ಕರ್ನಾಟಕ ಸೆಮಿ ಫೈನಲ್ ಗೇರಿದರೆ, ಬಂಗಾಳದ ಅಭಿಯಾನ ಅಂತ್ಯವಾಯಿತು.