Advertisement

ಶ್ಶ್  ! ಸದ್ದು ಮಾಡಬೇಡಿ,ಮಗು ಮಲಗಿದೆ!

12:30 AM Mar 22, 2019 | |

ಶ್‌… ಷ್‌… ಶ್‌.. ಷ್‌… ಶಿಶು ಮಲಗಿದೆ. ಸದ್ದು ಮಾಡಬೇಡಿ.

Advertisement

“”ಇವಳೆಂಥ ಮಹಾರಾಣಿಯಾ? ಮೂರಂಬಟೆಕಾಯಿ ಉದ್ದವಿಲ್ಲ. ಅವಳು ನಿದ್ದೆ ಮಾಡಬೇಕಾದರೆ ನಾವೆಲ್ಲ ಆಡಬಾರದಾ?” 

“”ಮೆಲ್ಲ ಮೆಲ್ಲಗೆ ಮಾತಾಡೋ. ಹೀಗೆ ಬೊಬ್ಬೆ ಹಾಕಿದ್ರೆ ಬೆಚ್ಚಿ ಬೀಳ್ತಾಳೆ ಕಂದ. ಆ ಮೇಲೆ ಅಮ್ಮನಿಗೆ ಭಾಳ ಕಷ್ಟವಾಗುತ್ತೆ ಪುನ ನಿದ್ದೆ ಮಾಡಿಸಲು. ಹೊರಗೆ ಹೋಗಿ ಆಟವಾಡ್ಕೊà”

ಹೀಗೆ ಅಜ್ಜಿ ಮೊಮ್ಮಗನ ಮನವೊಲಿಸಲು ಪ್ರಯತ್ನಿಸುತ್ತಾಳೆ. ಅಷ್ಟರಲ್ಲಿ ಆ ಮಗು ಕೈಲಿದ್ದ ಬಾಲ್‌ ಎತ್ತಿ ಬಿಸಾಕಿ ಆಗಿತ್ತು. ಆ ಸದ್ದಿಗೆ ನಿದ್ರಾಭಂಗವಾಗಿ ಶಿಶು ರಾಗಾಲಾಪನೆ ಆರಂಭಿಸಿತು. ಬಾಣಂತಿತಾಯಿ ತನ್ನ ಶಿಶು ಮಲಗಿದ ಹೊತ್ತು ಕಾದು ನಿದ್ರಿಸಿದರೆ ನಿದ್ದೆ ಇದೆ. ಇಲ್ಲವಾದರೆ ಹಗಲಿರುಳೂ ವಿಶ್ರಾಂತಿ ಇಲ್ಲವೇ ಇಲ್ಲ.

ಇದು ಮನೆ ಮನೆಯ ಕಥೆ. ಎಳೆಯ ಶಿಶುಗಳಿದ್ದ ಮನೆ ಎಂದರೆ ಅಲ್ಲಿ ಅವರಿಗೇ ಪ್ರಾಧಾನ್ಯ. ಎಲ್ಲದರಲ್ಲೂ ಮೊದಲಿಗೆ ಶಿಶುವಿನ ಅನುಕೂಲ; ಅನನುಕೂಲದ ಪರಿಗಣನೆ. ಸ್ನಾನಕ್ಕೆ ಮನೆಯ ಇತರ ಸದಸ್ಯರು ಹೋಗಬೇಕಾದರೂ ಮೊದಲು ಕಂದನ ಸ್ನಾನ ಆಗಿ ಮುಗಿಯಬೇಕು. ಎಳೆಯ ಶರೀರಕ್ಕೆ ಹಸುವಿನ ಹಳೆ ತುಪ್ಪವೋ, ತೆಂಗಿನೆಣ್ಣೆಯೋ ಹಚ್ಚಿ , ಕೈಕಾಲು ಮೆದುವಾಗಿ ನೀವಿ, ಅಮ್ಮ ಹಾಲುಣ್ಣಿಸಿದ ನಂತರ ಕಂದನ ಅಭ್ಯಂಜನ. ಎಳೆ ಶಿಶುವಿನ ಸ್ನಾನ ಎಂದರೆ ಸುಲಭದ ಕಾರ್ಯವಲ್ಲ. ಮೊದಲೇ ಮೆದು ಮೆದು ಮೈ. ಅದರಲ್ಲೂ ತುಪ್ಪ, ಎಣ್ಣೆ ಹಚ್ಚಿದರೆ ಜಾರುವುದು ಹೆಚ್ಚು. ಹಿಡಿತ ಸಿಕ್ಕುವುದಿಲ್ಲ ಎಂದು ತುಸು ಬಿಗಿಯಾಗಿ ಹಿಡಿದಾಗ ಆ ಜಾಗದಲ್ಲಿ ಕೆಂಪು ಮಾರ್ಕ್‌ ಬೀಳುತ್ತದೆ. ಅಲ್ಪ ನೋವಿಗೂ ಮಗು ಕಿರುಚಿ ಕಿರುಚಿ ಅಳುವಾಗ ಹೊಸದಾಗಿ ತಾಯ್ತನಕ್ಕೇರಿದ ಅಮ್ಮನಿಗೆ ಕಳವಳ, ಕಾತರ. ಏನಾಯೊ¤à ಎಳೆ ಬೊಮ್ಮಟೆಗೆ ಎನ್ನುವ ಭಯ. ಮನೆಯಲ್ಲಿ ಹಿರಿಯ ಮಹಿಳೆಯರಿದ್ದರೆ ಅವರು ನಾಜೂಕಾಗಿ ಶಿಶುವನ್ನು ನೀಡಿದ ಕಾಲುಗಳಲ್ಲಿ ಮಲಗಿಸಿ ಬೆಚ್ಚಗಿನ ನೀರು ನಿಧಾನವಾಗಿ ಹೊಯ್ದು ಪುಟಾಣಿ ಮೈಯ ಮೂಲೆ ಮೂಲೆ ಕೈ ಬಳಚಿ ಎಣ್ಣೆ, ತುಪ್ಪದ ಜಿಡ್ಡು ತೆಗೆಯುವ ಜಾಣ್ಮೆ ಹೊಸದಾಗಿ ಅಮ್ಮನಾದಾಕೆಗೆ ಬಾರದು. ಬಿಸಿ ನೀರು ಬೀಳುವಾಗ ಕಂದ ಕಿರುಚಲು ಬಾಯೆ¤ರೆದರೆ ನಿಲ್ಲಿಸುವುದು ಅಭ್ಯಂಜನ ಮುಗಿಸಿ ನೀರಿನ ಹಬೆಗೆ ಸುಸ್ತಾಗಿ ಬಳಲಿ ಬೆಂಡಾಗಿ ಮರಳಿ ಅಮ್ಮನ ಮಡಿಲು ಸೇರಿದಾಗಲೇ. ಮಿಂದ ಸುಸ್ತಿಗೆ ಹಸಿವು ಬೇರೆ. ತಾಯ ಮಡಿಲಿನಲ್ಲಿ ಮೆತ್ತಗೆ ಕೈಕಾಲು ಅಲ್ಲಾಡಿಸುತ್ತ ಎದೆಹಾಲಿಗೆ ತಳಿರು ತುಟಿ ತೆರೆಯುವ ಶಿಶುವಿಗೆ ಅಲ್ಲೇ ಕವಿಯುತ್ತದೆ ಗಾಢ ನಿದ್ದೆ. ಅಜ್ಜಿ, ಅತ್ತೆಮ್ಮ ಎರೆದ ಆಯಾಸಕ್ಕೆ ಗಂಟೆಗಳ ಕಾಲ ನಿದ್ದೆ. 

Advertisement

ಆ ಹೊತ್ತಿನಲ್ಲಿ ಮನೆಯ ಇತರ ಮಕ್ಕಳಿಗೆ  ನಿಶ್ಶಬ್ದವಾಗಿರಲು ಹಿರಿಯರ ಕಟ್ಟಪ್ಪಣೆ. ಯಾಕೆಂದರೆ, ಚಿಕ್ಕಪುಟ್ಟ ಸದ್ದು ಮಾಡಿದರೂ ಕೂಡ ಶಿಶುವಿಗೆ ಎಚ್ಚರವಾಗುತ್ತದೆ. ಬೆಚ್ಚಿ, ಬೆದರಿ, ಮೈ ಮುಖವಿಡೀ  ಕೆಂಪು ಕೆಂಪಾಗಿ ಅಳುವಾಗ ಹೆತ್ತಮ್ಮನಿಗೆ ಸುಧಾರಿಸಲಾಗದು. ಬಾಣಂತಿಯಾದ ತಾಯಿಗೂ ವಿಶ್ರಾಂತಿ ಅತ್ಯವಶ್ಯಕ. ಆಕೆಯ ವಿಶ್ರಾಂತಿ, ಸ್ನಾನ , ಊಟ ಎಲ್ಲವೂ ಸಾಗುವುದು ಶಿಶು ಮಲಗಿರುವ ಹೊತ್ತಿನಲ್ಲಿ. ಮಗು ಮಲಗಿದಾಗ ಅಮ್ಮ ರೆಸ್ಟ್‌ ತೆಗೆದುಕೊಳ್ಳಲಿಲ್ಲವೆಂದರೆ ಹಗಲಿರುಳೂ ಜಾಗರಣೆ ನಿಶ್ಚಿತ. ತಾಯಿಯಾಗುವ ಮೊದಲಿದ್ದ ಜೀವನ ವಿಧಾನಕ್ಕೂ , ಈಗಿನದಕ್ಕೂ ಅಗಾಧ ವ್ಯತ್ಯಾಸವಿರುತ್ತದೆ. ಶಾರೀರಿಕ ಅಶಕ್ತತೆ, ನಿದ್ರಾಹೀನತೆ, ಸುಸ್ತು, ಈ ಎಲ್ಲ ಒಟ್ಟಾಗಿ ಆಕೆ ಮಾನಸಿಕವಾಗಿ, ಶಾರೀರಿಕವಾಗಿ ಅದಕ್ಕೆ ಹೊಂದಿಕೊಳ್ಳಲು ಸಮಯ  ತಗಲುತ್ತದೆ. ಆ ಸಂದರ್ಭದಲ್ಲಿ  ವಿಶ್ರಾಂತಿ ಇಲ್ಲವಾದರೆ ಆರೋಗ್ಯದಲ್ಲಿ  ವೈಪರೀತ್ಯವಾಗುವ ಸಾಧ್ಯತೆಗಳೂ ಕಾಣಿಸಬಹುದು.
 
ಹಲವಾರು ಕಂದಮ್ಮಗಳು “ಕೋಳಿ ನಿದ್ದೆ ಎಂದು ಕರೆಯುವ ಅತಿ ಸಣ್ಣ ನಿದ್ದೆ ಮಾಡುತ್ತವೆ. ಯಕಶ್ಚಿತ ಸದ್ದು ಆದರೂ ಅಲ್ಲಿಗೆ ನಿದ್ದೆ
ಮುಗಿಯಿತೆಂದೇ ಲೆಕ್ಕ. ಮತ್ತೆ ಜೋಗುಳ ಹಾಡಿ, ಲಾಲಿ ಹೇಳಿ, ಮಡಿಲ ತಲ್ಪದಲ್ಲಿ ತಟ್ಟಿ ಮಲಗಿಸಲು ಗಂಟೆಗಳ ಕಾಲ ಬೇಕಾಗುತ್ತದೆ. ಅಲ್ಲಿಗೆ ಆ ತಾಯಿಗೆ ರೆಸ್ಟ್‌ ಕನಸೇ ಸೈ. ಮನೆಯಲ್ಲಿ ಒಂದು ಚಿಕ್ಕ ಚಮಚೆ ಬಿದ್ದರೂ ಸಾಕು, ಫೋನ್‌ ಸಣ್ಣಗೆ ರಿಂಗಾದರೂ ಆ ಸದ್ದಿಗೆ ಬಿದ್ದು-ಬೆದರಿ ನಡುಗುತ್ತವೆ ಕಂದಮ್ಮಗಳು. ಆಗಾಗ ಎಚ್ಚರವಾಗಿ ರಚ್ಚೆ ಹಿಡಿಯುವ ಕಂದನನ್ನು ಸಮಾಧಾನಿಸಿ ಎದೆಗಪ್ಪಿ, ಮರಳಿ ನಿದ್ದೆ ಮಾಡಿಸುತ್ತಲೇ ಇರಬೇಕು. ಅದಕ್ಕೇ ಎಳೆಶಿಶು, ಬಾಣಂತಿ ಇರುವ ಮನೆಯಲ್ಲಿ ಹಿರಿಯ, ಅನುಭವಸ್ಥೆ ಮಹಿಳೆಯರು ಇರಬೇಕು ಎನ್ನುವುದು ! ಹೆತ್ತ ತಾಯಿ ಅಥವಾ ಅತ್ತೆ ಈ ಸಮಯದಲ್ಲಿ ಜೊತೆಗೆ ಅತ್ಯಗತ್ಯ. ಹಾಗೂ ಬಾಣಂತಿಗೂ ಅವರಿದ್ದರೆ ಒಂದು ರೀತಿಯ ಧೈರ್ಯ. ಮನೆಯ ಹಿರಿಯರು ತೊಟ್ಟಿಲಿನಲ್ಲಿ ಮಲಗಿಸಿದ ಶಿಶು ನಿದ್ದೆಗಿಳಿದ ಸಮಯ ಶಿಶುವಿನ ನಿದ್ದೆಗೆ ಭಂಗ ಬರಬಾರದೆಂದು ಎಲ್ಲ ರೀತಿಯಿಂದಲೂ ಎಚ್ಚರ ವಹಿಸುತ್ತಾರೆ.

ಮನೆಯಲ್ಲಿ ಆಟವಾಡುವ ಮಕ್ಕಳಿದ್ದರಂತೂ ಅವರನ್ನು ಎಷ್ಟೇ ಎಚ್ಚರಿಸಿದರೂ ಜೋರುದನಿ, ಜಗಳ, ಹಟ, ರಂಪ, ರಾದ್ಧಾಂತ ಸಾಮಾನ್ಯ. ಮನೆಯ ಇತರ ಸದಸ್ಯರ ಮತ್ತೆಗೆ ಮಾತುಕತೆ ನಡೆಸಬಹುದು. ಆದರೆ ಮಕ್ಕಳನ್ನು ಸುಮ್ಮಗೆ ಕೂರಿಸುವುದು ಕಷ್ಟದ ಕೆಲಸವೇ ಸೈ. ಹಾಗಾಗಿಯೇ ಮಕ್ಕಳಿರುವ ಮನೆಯಲ್ಲಿ ಎಳೆಮಗು ಆಗಾಗ ಬೆಚ್ಚಿಬಿದ್ದು ಕುಸುಕುಸು ಎಂದು ಅಳುವುದು ಸಹಜ.

ಎಳೆಗಂದ ನಾಲ್ಕಾರು ತಿಂಗಳಾದ ಮೇಲೆ ಸ್ವಲ್ಪ ಮಟ್ಟಿಗೆ ಅಳು ತಗ್ಗಿಸುತ್ತದೆ. ಮನೆಯವರ ಮುಖ ನೋಡಿ ಅರಳು ಮಲ್ಲಿಗೆಯ ಮಂದಹಾಸ ಬಿರಿಯುತ್ತದೆ. ಕೈಕಾಲು ಕುಣಿಸಿ ಎತ್ತಿಕೊಳ್ಳಲು ಸೂಚಿಸುವ ಮುದ್ದುಗಂದ ಸದ್ದು-ಗದ್ದಲಗಳಿಗೆ ಬೆಚ್ಚಿ ಬೀಳುವುದನ್ನೂ ಕಡಿಮೆ ಮಾಡುತ್ತದೆ. ಹಾಗಾಗಿ, ಮನೆಯಲ್ಲಿ ಮೊದಲಿನಷ್ಟು ಕಠಿಣಾವಸ್ಥೆಯ ಮೌನಪಾಲನೆ ಬೇಕಿರುವುದಿಲ್ಲ. ಕಿರಿಯರ ಮಾತು, ನಗು, ಹಾವಭಾವ ಎಲ್ಲವನ್ನೂ ಗಮನಿಸಿ ಹವಳ ತುಟಿ ಬಿರಿದು ನಗುವ ಹಾಲು ಹಸುಳೆ ಮನೆಯವರ ಮುದ್ದಿನ ಕೈಗೂಸಾಗುತ್ತದೆ. ಮುನ್ನಿನ ಎಚ್ಚರ, ಜೋಪಾನಿಸುವ ಕಷ್ಟ, ತಾಯಿಯ ಹಗಲಿರುಳು ನಿದ್ದೆಗೆಡುವಿಕೆಗೂ ತೆರೆ ಬೀಳುತ್ತದೆ. ಹಾಗೆಂದು ನಿರ್ಲಕ್ಷ್ಯ ಮಾಡುವಂತಿಲ್ಲ. ಆಗಾಗ ಕಾಡುವ  ಚಿಕ್ಕಪುಟ್ಟ ಅನಾರೋಗ್ಯ, ರಚ್ಚೆ, ರಂಪ,  ಕಾರಣವೇ ಇಲ್ಲದೆ ಅಥವಾ ತಿಳಿಯದ ಅಳು ಎಲ್ಲವೂ ಅಮ್ಮನ ಕೈಕಾಲು ಉಡುಗಿಸುವುದುಂಟು. ಇದು ಎಲ್ಲ ತಾಯಂದಿರು ಅನುಭವಿಸುವ ಭೇದರಹಿತ ಸಮಾನವಾಗಿರುವ ತಾಯ್ತನದ ಅನುಭವ. ಅದು ಎಷ್ಟು ಸುಮಧುರ ಅನುಭವ ಎಂದರೆ ಎಳೆಯ ಶಿಶುವಿನ ಆರೈಕೆ , ಜೋಪಾನ, ನಿದ್ದೆಗೆಡುವಿಕೆಯ ಪರಿಣಾಮವಾಗಿ ಉಂಟಾದ ಅಶಕ್ತತೆ, ಹಗಲಿರುಳು ಅವಿಶ್ರಾಂತವಾಗಿ ಕಂದನ ಉಸ್ತುವಾರಿ-ಜವಾಬ್ದಾರಿ ತಾಯಿಯನ್ನು ಹಣ್ಣು ಹಣ್ಣು ಮಾಡಿದರೂ ಕಂದ ದೊಡ್ಡದಾದಾಗ ಆ ಮಧುರಾತಿ ಮಧುರ ಅನುಭೂತಿಯೇ ತಾಯ್ತನದ ಹಿರಿಮೆ.

– ಕೃಷ್ಣವೇಣಿ ಕಿದೂರು

Advertisement

Udayavani is now on Telegram. Click here to join our channel and stay updated with the latest news.

Next