Advertisement
ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆ ಕಳೆದ ಐದು ವರ್ಷಗಳಲ್ಲಿ ಗಣನೀಯ ಬದಲಾವಣೆ ಕಂಡಿದೆ. ಅಂದು ಟಾಪ್ 5 ರಲ್ಲಿದ್ದ ಕಂಪೆನಿಗಳಲ್ಲಿ ಸ್ಯಾಮ್ ಸಂಗ್ ಬಿಟ್ಟರೆ ಬೇರೆಯವು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಐದು ವರ್ಷಗಳ ಹಿಂದೆ ಹೆಸರೇ ಕೇಳಿರದಿದ್ದ ಕಂಪೆನಿಗಳು ಇಂದು ಅತ್ಯಂತ ಜನಪ್ರಿಯ ಬ್ರಾಂಡ್ ಗಳಾಗಿವೆ. ಐದು ವರ್ಷಗಳ ಹಿಂದಿನ ಅಂಕಿ ಅಂಶಗಳನ್ನು ಅವಲೋಕಿಸಿದಾಗ ಭಾರತದಲ್ಲಿ ಟಾಪ್ 5 ಸ್ಥಾನದಲ್ಲಿದ್ದ ಮೊಬೈಲ್ ಕಂಪೆನಿಗಳೆಂದರೆ 1. ಸ್ಯಾಮ್‌ಸಂಗ್ 2. ಮೈಕ್ರೊಮ್ಯಾಕ್ಸ್, 3. ಕಾರ್ಬನ್, 4. ನೋಕಿಯಾ, 5. ಸೋನಿ.ಈ ಐದು ವರ್ಷಗಳಲ್ಲಿ ಭಾರತದ ಮೊಬೈಲ್ ಫೋನ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಐದು ವರ್ಷಗಳ ಹಿಂದೆ ಸಕಲ ಸೌಲಭ್ಯಗಳುಳ್ಳ ಒಂದು ಸ್ಮಾರ್ಟ್ ಫೋನ್ ಅಥವಾ ಉತ್ತಮ ಬ್ರಾಂಡ್ ಮೌಲ್ಯ ಉಳ್ಳ ಫೋನ್ ಕೊಳ್ಳಬೇಕೆಂದರೆ ಗ್ರಾಹಕರು ತಮ್ಮ ಕಿಸೆಗೆ ಎಟುಕದ ದರವನ್ನು ವ್ಯಯಿಸಬೇಕಿತ್ತು. ಸಾಧಾರಣ ಮಧ್ಯಮ ವರ್ಗದ ಜನರು ಉತ್ತಮ ಸೌಲಭ್ಯಗಳುಳ್ಳ ಮೊಬೈಲ್ ಕೊಳ್ಳಲು ಸಾಧ್ಯವಿರಲಿಲ್ಲ. ಅಂದಿನ ಸ್ಯಾಮ್ ಸಂಗ್, ಗೆಲಾಕ್ಸಿ, ಸೋನಿ, ಎಚ್ ಟಿ ಸಿ, ನೋಕಿಯಾ ಲೂಮಿಯಾ ಫೋನ್‌ಗಳನ್ನು ಅಂಗಡಿಗಳ ಶೋಕೇಸ್ ನಲ್ಲಿ ನೋಡಿ, ಅವರು ನೀಡುವ ಡಮ್ಮಿ ಮೊಬೈಲ್ ಗಳನ್ನು ಮುಟ್ಟಿ ಆನಂದಿಸಬೇಕಿತ್ತು.
Related Articles
Advertisement
ಚೀನಾ ಕಂಪೆನಿಗಳ ಲಗ್ಗೆ ನಿಂತ ನೀರಾಗಿದ್ದ ಮೊಬೈಲ್ ಫೋನ್ ಮಾರುಕಟ್ಟೆಯನ್ನು ಚಲನಶೀಲಗೊಳಿಸಿದ್ದು ಮೋಟೋ ಜಿ. ಮೋಟೋ ಜಿ ಕೂಡ ಅಂದು ಗೂಗಲ್ ಒಡೆತನ ಹೊಂದಿತ್ತು! (ಈಗ ಲೆನೊವೋ ಒಡೆತನದಲ್ಲಿದೆ) ಮೋಟೋ ಜಿ. 2014ರ ಫೆ. 6 ರಂದು ಭಾರತದಲ್ಲಿ ಫ್ಲಿಪ್ ಕಾರ್ಟ್ ಎಕ್ಸ್‌ಕ್ಲೂಸಿವ್ ಆಗಿ ಬಿಡುಗಡೆಯಾಯಿತು. 4.5 ಇಂಚಿನ ಸ್ಕ್ರೀನ್, 8 ಜಿಬಿ ಮತ್ತು 16 ಜಿಬಿ ಮೆಮೊರಿ, 1 ಜಿಬಿ ರ್ಯಾಮ್, ಸ್ನಾಪ್‌ಡ್ರಾಗನ್ 400 ಕ್ವಾಡ್‌ಕೋರ್ ಪ್ರೊಸೆಸರ್ ಉಳ್ಳ ಈ ಫೋನ್‌ಗೆ 8 ಜಿಬಿ ಆವೃತ್ತಿಗೆ 12500 ರೂ. 16 ಜಿಬಿ ಆವೃತ್ತಿಗೆ 14000 ರೂ. ಇತ್ತು. ಈ ದರಕ್ಕೆ ಸ್ಯಾಮ್ ಸಂಗ್ ನಲ್ಲಿ ಅಂದು ಇಷ್ಟು ವೈಶಿಷ್ಟéತೆ ಇರುವ ಫೋನ್ ಗೆ 30 ಸಾವಿರ ಕ್ಕೂ ಮೇಲ್ಪಟ್ಟು ದರವಿತ್ತು. ಹಾಗಾಗಿ ಯುವಕರು ಮೋಟೋ ಜಿ ಯನ್ನು ಫ್ಲಿಪ್‌ಕಾರ್ಟ್‌ನಲ್ಲಿ ಹುಚ್ಚೆದ್ದು ಖರೀದಿಸಿದರು. ಈಗ ವಾಲ್‌ಮಾರ್ಟ್ ಕೊಳ್ಳುವಷ್ಟು ದೊಡ್ಡ ಕಂಪೆನಿಯಾಗಿ ಬೆಳೆದ ಫ್ಲಿಪ್ ಕಾರ್ಟ್ ಕ್ಲಿಕ್ ಆಗಿದ್ದು ಇಲ್ಲಿಂದಲೇ! ಬಳಿಕ ಚೀನಾದ ಶಿಯೋಮಿ 2014ರ ಜುಲೈ 15ರಂದು ಎಂ ಐ 3 ಮೊಬೈಲ್,ಫ್ಲಿಪ್ ಕಾರ್ಟ್ ಮೂಲಕ ಭಾರತಕ್ಕೆ ಕಾಲಿಟ್ಟಿತು. 15000 ರೂ.ಗಳಿಗೆ ಮೋಟೋ ಜಿ ಗಿಂತ ಎರಡು ಪಟ್ಟು ಹೆಚ್ಚಿನ ಸವಲತ್ತುಗಳನ್ನು ಈ ಫೋನ್ ನೀಡಿತ್ತು. ಸ್ನಾಪ್ ಡ್ರಾಗನ್ 800 ಕ್ವಾಡ್ ಕೋರ್ ಪ್ರೊಸೆಸರ್ 2 ಜಿಬಿ ರ್ಯಾಮ್ 16 ಜಿಬಿ ಇಂಟರ್‌ನಲ್ ಮೆಮೊರಿ, 13 ಮೆಗಾಪಿಕ್ಸಲ್ ಸೋನಿ ಕ್ಯಾಮರಾ ಇದ್ದ ಈ ಮೊಬೈಲ್ ಅಂದಿನ ದಿನಗಳಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಮಾಡಿತು. 15 ಸಾವಿರಕ್ಕೆ ಸ್ನಾಪ್ ಡ್ರಾಗನ್ 800 ಸರಣಿಯ ಪ್ರೊಸೆಸರ್ ಇರುವ ಫೋನ್ ನೀಡುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅದಾದ ಒಂದು ತಿಂಗಳಿಗೆ ಶಿಯೋಮಿ 7 ಸಾವಿರ ರೂ.ಗಳಿಗೆ ರೆಡ್ ಮಿ 1 ಎಸ್ ಎಂಬ ಎಂಟ್ರಿ ಲೆವೆಲ್ ಫೋನ್ ಬಿಡುಗಡೆ ಮಾಡಿತು. ಸ್ನಾಪ್‌ಡ್ರಾಗನ್ 400, 1 ಜಿಬಿ ರ್ಯಾಮ್, 16 ಜಿಬಿ ಮೆಮೊರಿ ಸೌಲಭ್ಯ ಇರುವ ಈ ಫೋನ್ ಮಧ್ಯಮವರ್ಗದ ಜೇಬಿಗೆ ಅಗ್ಗವಾಗಿತ್ತು. ಹಾಗಾಗಿ ಭರ್ಜರಿ ಮಾರಾಟವಾಯಿತು. ಈ ಎರಡು ಫೋನ್ ಗಳಿಂದಾಗಿ ಭಾರತದಲ್ಲಿ ಅಪಾರ ಜನಪ್ರಿಯತೆ ಪಡೆದ ಶಿಯೋಮಿ ಇದುವರೆಗೂ ಹಿಂದಿರುಗಿ ನೋಡಿದ್ದಿಲ್ಲ. ಈಗ ಭಾರತದಲ್ಲಿ ನಂ 1 ಸ್ಥಾನದಲ್ಲಿದೆ. ಶಿಯೋಮಿಯ ಈ ಯಶಸ್ಸು ಚೀನಾದ ಲೆನೊವೋ, ಹುವಾವೇ ಆನರ್, ಒನ್ ಪ್ಲಸ್, ಲ ಎಕೋ (ಈಗಿಲ್ಲ), ತೈವಾನ್‌ನ ಆಸುಸ್, ಭಾರತದ ಆನ್ ಲೈನ್ ಮಾರುಕಟ್ಟೆಗೆ ಲಗ್ಗೆಯಿಡಲು ಪ್ರೇರಣೆ ನೀಡಿತು. ಭಾರತದ ಟಾಪ್ 5 ಮೊಬೈಲ್ ಬ್ರಾಂಡ್‌ಗಳು
2018ರ ಏಪ್ರಿಲ್ 24 ರಂದು ಕೌಂಟರ್ ಪಾಯಿಂಟ್ ಸಂಸ್ಥೆ ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, ಶಿಯೋಮಿ ಕಂಪನಿ, ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ನಂ. 1 ಸ್ಥಾನ ಪಡೆದಿದೆ. 2018ರ ಮೊದಲ ನಾಲ್ಕು ತಿಂಗಳ ಅವಧಿಯ ಸಾಧನೆಯಲ್ಲಿ ಅದು ಶೇ. 31.1 ಮಾರುಕಟ್ಟೆ ಪಾಲು ಹೊಂದಿದೆ. 2017ರ ಮೊದಲ ಕ್ವಾರ್ಟರ್‌ನಲ್ಲಿ ಶೇ. 13.1 ರಷ್ಟು ಪಾಲು ಹೊಂದಿತ್ತು.ಸ್ಯಾಮ್ ಸಂಗ್ ಶೇ. 26.2 ರಷ್ಟು ಪಾಲು ಹೊಂದಿದೆ. ಅದು 2017ರ ಮೊದಲ ಚಾತುರ್ಮಾಸಿಕದಲ್ಲಿ ಶೇ. 25.9ರಷ್ಟು ಪಾಲು ಹೊಂದಿತ್ತು. ವಿವೋ ಈ ಬಾರಿ ಶೇ. 5.8 ಪಾಲು ಹೊಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ವಿವೋ ಶೇ. 11.9 ಮಾರುಕಟ್ಟೆ ಪಾಲು ಹೊಂದಿತ್ತು! ಒಪ್ಪೋ ಶೇ.5.6 ರಷ್ಟು ಶೇರು ಹೊಂದಿದೆ. ಕಳೆದ ವರ್ಷ ಶೇ. 9.9 ಶೇರು ಹೊಂದಿತ್ತು. ಈ ವರ್ಷದ ಮೊದಲ ಕ್ವಾರ್ಟರ್ ಸಾಧನೆಯಲ್ಲಿ ಹುವಾವೇ ಆನರ್ ಶೇ. 3.4 ಮಾರುಕಟ್ಟೆ ಪಾಲು ಹೊಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಆನರ್ ಶೇ. 1.4 ಶೇರು ಹೊಂದಿತ್ತು. ಈ ಐದು ಕಂಪೆನಿಗಳನ್ನು ಹೊರತುಪಡಿಸಿದರೆ ಭಾರತದಲ್ಲಿ ಇನ್ನುಳಿದ ಎಲ್ಲಾ ಕಂಪೆನಿಗಳೂ ಸೇರಿ ಶೇ. 27.9ರಷ್ಟು ಸ್ಮಾರ್ಟ್‌ಫೋನ್ ಮಾರುಕಟ್ಟೆ ಪಾಲುಹೊಂದಿವೆ! ಈ ವರದಿಯ ಪ್ರಕಾರ, ಶಿಯೋಮಿ ಶೇ. 18 ರಷ್ಟು ಹೆಚ್ಚಿನ ಪಾಲು ಆಕ್ರಮಿಸಿದ್ದರೆ, ಸ್ಯಾಮ್ ಸಂಗ್ ಕೇವಲ ಶೇ. 0.3 ಬೆಳವಣಿಗೆ ಕಂಡಿದೆ. ಆನರ್ ಶೇ. 2 ರಷ್ಟು ಬೆಳವಣಿಗೆ ಸಾಧಿಸಿದೆ. ವಿವೋ ಶೇ. 6.1ರಷ್ಟು ಮಾರುಕಟ್ಟೆ ಪಾಲು ಕಳೆದುಕೊಂಡಿದ್ದರೆ, ಒಪ್ಪೋ 4.3 ರಷ್ಟು ಪಾಲು ಕಳೆದುಕೊಂಡಿದೆ. ಕೌಂಟರ್ ಪಾರ್ಟ್ ರೀಸರ್ಚ್ ಪ್ರಕಾರ ಭಾರತದಲ್ಲಿ 2018ರಲ್ಲಿ ವೇಗವಾಗಿ ಬೆಳೆವಣಿಗೆ ಹೊಂದುವ ಕಂಪೆನಿಗಳೆಂದರೆ ಶಿಯೋಮಿ, ಆನರ್ ಹಾಗೂ ಒನ್ ಪ್ಲಸ್. ಮಿಂಚಿನ ಬೆಳವಣಿಗೆಗೆ ಆನ್‌ಲೈನ್ ವಹಿವಾಟು ಕಾರಣ
ಭಾರತದಲ್ಲಿ ಮೊಬೈಲ್ ಫೋನ್ ಮಾರುಕಟ್ಟೆ ಮಿಂಚಿನ ವೇಗದಲ್ಲಿ ಬೆಳೆಯಲು ಪ್ರಮುಖ ಕಾರಣ ಆನ್‌ಲೈನ್ ಮಾರಾಟ. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಕಂಪೆನಿಗಳ ಮೂಲಕ ಮಾರಾಟ ಮಾಡತೊಡಗಿದ್ದರಿಂದ ಮಿತವ್ಯಯದ ದರಕ್ಕೆ ಗ್ರಾಹಕರಿಗೆ ಹೆಚ್ಚು ಸೌಲಭ್ಯದ ಮೊಬೈಲ್ ಗಳು ದೊರಕಲಾರಂಭಿಸಿದವು.
ಕನಿಷ್ಠ ಲಾಭ ಇಟ್ಟುಕೊಂಡು ನೇರವಾಗಿ ಫ್ಲಿಪ್‌ಕಾರ್ಟ್, ಅಮೆಜಾನ್ ಗೆ ಬಿಡುಗಡೆ ಮಾಡಿದ್ದರಿಂದ ಅಂಗಡಿಗಳಲ್ಲಿ 20-25 ಸಾವಿರಕ್ಕೆ ದೊರಕುತ್ತಿದ್ದ ಫೋನ್ ಗಳು ಆನ್‌ಲೈನ್ ಮಾರುಕಟ್ಟೆಯಲ್ಲಿ 9-10 ಸಾವಿರಕ್ಕೆ ದೊರಕಲಾರಂಭಿಸಿದವು. ಅಂಗಡಿಗಳಲ್ಲಿ ಮಾರಾಟಕ್ಕಿಡುವ ಮೊಬೈಲ್ ಫೋನ್‌ಗಳಿಗೆ ಕಂಪೆನಿಗಳು, ತಯಾರಿಕಾ ವೆಚ್ಚದ ಮೇಲೆ ಮಾರಾಟಗಾರರಿಗೆ ನೀಡಬೇಕಾದ ಕಮಿಷನ್ ಸಹ ಸೇರಿ ದುಪ್ಪಟ್ಟು ದರ ವಿಧಿಸುತ್ತವೆ. – ಕೆ.ಎಸ್. ಬನಶಂಕರ ಆರಾಧ್ಯ