Advertisement

ಸ್ಮಾರ್ಟ್‌ಫೋನ್‌ ಭವಿಷ್ಯ ಸ್ಮಾರ್ಟಾಗಿಲ್ಲ; 2 ಬಿ. ಡಾಲರ್‌ ನಷ್ಟದ ಭಯ

09:31 AM Apr 06, 2020 | mahesh |

ಲಾಕ್‌ಡೌನ್‌ ಕಾರಣದಿಂದ ಸ್ಮಾರ್ಟ್‌ಫೋನ್‌ ಉದ್ಯಮದ ಕಾಶಿಯಂತಿದ್ದ ಭಾರತದಲ್ಲಿ ಸಣ್ಣದೊಂದು ಕಂಪನ ಸಂಭವಿಸಿದೆ. ಸ್ಮಾರ್ಟ್‌ಫೋನ್‌ ಬೇಡಿಕೆ ಸಂಪೂರ್ಣವಾಗಿ ಕುಸಿಯುತ್ತದೋ ಎಂಬ ಭಯ ಉದ್ಯಮ ವಲಯದಲ್ಲಿ ಆರಂಭವಾಗಿದೆ. ಯಾಕೆಂದರೆ ಮೊಬೈಲ್‌ ಇನ್ನೂ ಅಗತ್ಯ ವಸ್ತುವಾಗಿಲ್ಲ !

Advertisement

ಹೊಸದಿಲ್ಲಿ: ಕೋವಿಡ್-19 ಯಾವ ಕ್ಷೇತ್ರವನ್ನೂ ಕಾಡದೇ ಬಿಟ್ಟಿಲ್ಲ. ಕೋವಿಡ್-19 ಕಾಟ ತಪ್ಪಿಸಿಕೊಳ್ಳಲು ಇಡೀ ಜಗತ್ತೇ ಲಾಕ್‌ಡೌನ್‌ ತಂತ್ರಕ್ಕೆ ಮೊರೆ ಹೋಗಿದೆ. ಹೀಗಿರುವಾಗ ಎಲ್ಲ ಬಗೆಯ ಕೈಗಾರಿಕೆಗಳು ಸ್ಥಗಿತಗೊಂಡಿವೆ. ಈ ಸಾಲಿನಲ್ಲೇ ಈಗ ಸ್ಮಾರ್ಟ್‌ ಫೋನ್‌ ಉದ್ಯಮದ ಲೆಕ್ಕಾಚಾರ.

ಭಾರತದ ಲೆಕ್ಕದಲ್ಲಿ ಹೇಳುವಾದದರೆ ಮಾರ್ಚ್‌ ಮತ್ತು ಎಪ್ರಿಲ್‌ ಗ್ರಾಹಕ ಸಂಬಂಧಿ ಉತ್ಪನ್ನಗಳಿಗೆ ಒಳ್ಳೆ ಕಾಲ. ಯುಗಾದಿ ಹಬ್ಬದ ಜತೆಗೆ ಪ್ರವಾಸ ಇತ್ಯಾದಿಗೆ ಹೊರಡುವ ಸಮಯ. ಇದೇ ಸಂದರ್ಭದಲ್ಲಿ ಉತ್ಪನ್ನ ಖರೀದಿಗೆ ಮನಸ್ಸು ಮಾಡುವ ಸಾಧ್ಯತೆಯೂ ಹೆಚ್ಚು. ಆ ಹೊತ್ತಿನಲ್ಲೇ ಕೊರೊನಾ ಬಂದು ಬಡಿಯಿತು.

ಸ್ಮಾರ್ಟ್‌ ಫೋನ್‌ ಉದ್ಯಮ ಪ್ರಸ್ತುತ ವರ್ಷದ ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳುಗಳನ್ನು ಕಳೆದ ವರ್ಷಕ್ಕ ಹೋಲಿಸಿದರೆ ಭಾರಿ ಹಿಂಜರಿತ ಕಂಡಿದೆ. ಒಂದು ಅಂದಾಜು ಪ್ರಕಾರ ಎರಡು ಬಿಲಿಯನ್‌ ಅಮೆರಿಕನ್‌ ಡಾಲರ್‌ ನಷ್ಟ ಅನುಭವಿಸಿದೆ.

ಲಾಕ್‌ಡೌನ್‌ ಹೊಡೆತ
ಲಾಕ್‌ಡೌನ್‌ ಪರಿಣಾಮವೇ ಇದರಲ್ಲಿ ಪ್ರಮುಖವಾಗಿದ್ದು, ಮುಂಬರುವ ದಿನಗಳಲ್ಲಿ ಈ ಕ್ಷೇತ್ರ ಸುಮಾರು 15 ಸಾವಿರ ಕೋಟಿ ರೂ. ನಷ್ಟು ನಷ್ಟ ಅನುಭವಿಸಬೇಕಾದೀತು ಎಂದು ಮಾರುಕಟ್ಟೆ ವಿಶ್ಲೇಷಕ ಸಂಸ್ಥೆಗಳು ಅಂದಾಜಿಸಿವೆ. ಈ ತಿಂಗಳುಗಳಲ್ಲಿ ಶಿಪ್‌ಮೆಂಟ್‌ಗಳ ಪ್ರಮಾ ಣದಲ್ಲಿ ಕುಸಿತ ಕಂಡು ಬಂದಿದೆ. ಮಾರ್ಚ್‌ ತಿಂಗಳ ಮಧ್ಯದವರೆಗೂ ಸಣ್ಣ ಪ್ರಮಾಣದಲ್ಲಿದ್ದ ವ್ಯಾಪಾರ ಹಿಂಜರಿತ ಈಗ ಹೆಚ್ಚಾಗಿದೆ.. 2019 ರಲ್ಲಿ ಒಟ್ಟು 158 ಮಿಲಿಯನ್‌ ಶಿಪ್‌ಮೆಂಟ್‌ಗಳಾಗಿದ್ದರೆ, 2020 ರಲ್ಲಿ 153 ಮಿಲಿಯನ್‌ಗೆ ಕುಸಿದಿದೆ. ಅಂದರೆ ಒಟ್ಟು ಶೇ.3 ರಷ್ಟು ಶಿಪ್‌ಮೆಂಟ್‌ ಕುಸಿತವಾಗಿದೆ ಎಂದು ಕೌಂಟರ್‌ ಪಾಯಿಂಟ್‌ ರಿಸರ್ಚ್‌ನ ಅಧ್ಯಯನ ತಿಳಿಸಿದೆ.

Advertisement

ತಜ್ಞರು ಏನೇಳುತ್ತಾರೆ ?
“ಈ ಮಾರ್ಚ್‌ನಲ್ಲಿ ಶಿಪ್‌ಮೆಂಟ್‌ಗಳು ಶೇ.27 ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಏಪ್ರಿಲ್‌ ಅರ್ಧ ತಿಂಗಳು ಲಾಕ್‌ಡೌನ್‌ನಲ್ಲಿ ಇರಲಿದೆ ಎಂಬುದನ್ನು ಪರಿಗಣಿಸಿ ದರೂ ಉದ್ಯಮಕ್ಕೆ 2 ಬಿಲಿಯನ್‌ ಯುಎಸ್‌ ಡಾಲರ್‌ ರಷ್ಟು ನಷ್ಟವಾ ಗಬಹುದು ಎಂದು ಅಧ್ಯಯನ ಸಂಸ್ಥೆ ಅಭಿಪ್ರಾಯಪಟ್ಟಿದೆ. ಲಾಕ್‌ಡೌನ್‌ ಮತ್ತಷ್ಟು ಅವಧಿಗೆ ಮುಂದುವರೆದಲ್ಲಿ ನಷ್ಟ ಇನ್ನೂ ಹೆಚ್ಚಲಿದೆ ಹಾಗೂ ಸರಕು ಸೇವಾ ಜಾಲ ಸಂಪೂರ್ಣ ಕುಸಿಯಬಹುದು. ಅಲ್ಲದೇ ಬಾಕಿ ಪಾವತಿಗಳು ಸಹ ವಸೂಲಾಗದಿರಬಹುದು ಎನ್ನಲಾಗಿದೆ.

ಮೊಬೈಲ್‌ ಅಗತ್ಯ ವಸ್ತುವಲ್ಲ
ಪ್ರಸ್ತುತ ಪರಿಸ್ಥಿತಿಯಲ್ಲಿ ಹಣ ಉಳಿತಾಯದತ್ತ ಜನರು ಗಮನ ಹರಿಸಿದ್ದು, ಮಿತವ್ಯಯಕ್ಕೆ ಮೊರೆ ಹೋಗಿದ್ದಾರೆ. ಹೀಗಾಗಿ ವರ್ಷದ ಮಧ್ಯದೊಳಗೆ ಎಲ್ಲವೂ ಸಾಮಾನ್ಯವಾದರೂ ಜನ ಈ ಹಿಂದಿನಂತೆ ಫೋನ್‌ಗಳ ಖರೀದಿಗೆ ಮುಂದಾಗಲಾರರು. ಸದ್ಯಕ್ಕೆ ಸ್ಮಾರ್ಟ್‌ ಫೋನ್‌ಗಳು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ಆನ್‌ಲೈನ್‌ ಜಾಲತಾಣಗಳು ಸ್ಮಾರ್ಟ್‌ ಫೋನ್‌ಗಳ ಮಾರಾಟದಿಂದ ದೂರ ಉಳಿದಿವೆ. ಆದರೆ ಪರಿಸ್ಥಿತಿ ಸಾಮಾನ್ಯವಾದ ನಂತರ ಆನ್‌ಲೈನ್‌ ಮಾರಾಟ ಪೋರ್ಟಲ್‌ಗ‌ಳು ಆಕರ್ಷಕ ಆಫರ್‌ಗಳನ್ನು ನೀಡಿ ಗ್ರಾಹಕರನ್ನು ಸೆಳೆಯುವ ಸಾಧ್ಯತೆಯೂ ಇದೆ ಎನ್ನುತ್ತದೆ ಅಧ್ಯಯನ ನಡೆಸಿರುವ ಸಂಸ್ಥೆಯ ವರದಿ.

ಭಾರತವು ಸ್ಮಾರ್ಟ್‌ ಫೋನ್‌ ಉದ್ಯಮಕ್ಕೆ ಅಚ್ಚುಮೆಚ್ಚಿನ ತಾಣವಾಗಿದ್ದು, 2022 ರ ವೇಳೆಗೆ 442 ಮಿಲಿಯನ್‌ ಸ್ಮಾರ್ಟ್‌ ಫೋನ್‌ ಬಳಕೆದಾರರು ಇರುವರು ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ 5 ಜಿ ಬಂದರಂತೂ ಸ್ಮಾರ್ಟ್‌ ಫೋನ್‌ ಬಳಕೆದಾರರ ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂದು ಅಂದಾಜಿಸಲಾಗಿದೆ. ಹೆಚ್ಚಾಗಿ ಯುವಜನರು ಇದರ ಬಳಕೆದಾರರಾಗಿರುವುದು ಜಗತ್ತಿನ ಎಲ್ಲ ಸ್ಮಾರ್ಟ್‌ ಫೋನ್‌ ಕಂಪೆನಿಗಳು ಭಾರತದತ್ತ ಚಿತ್ತ ಹರಿಸಲು ಕಾರಣವಾಗಿದೆ.

ಕೋವಿಡ್-19 ಕಾರಣದಿಂದ ಸ್ಮಾರ್ಟ್‌ ಫೋನ್‌ ಉತ್ಪಾದನೆ ಪ್ರಮಾಣ ನಾಲ್ಕು ವರ್ಷಗಳ ಹಿಂದಿನಷ್ಟು ಹಿಂದಕ್ಕೆ ಹೋಗಲಿದೆಯೇ ಎಂಬ ಭೀತಿ ಸೃಷ್ಟಿಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next