Advertisement

ಮಾರ್ಚ್‌ನೊಳಗೆ ಸ್ಮಾರ್ಟ್ ಫೋನ್

11:01 AM Feb 22, 2020 | Suhan S |

ಬೆಂಗಳೂರು: ಅಂಗನವಾಡಿ ದಾಖಲಾತಿ, ಮಕ್ಕಳ ಅಪೌಷ್ಠಿಕತೆಯ ನಿಖರ ಸಂಖ್ಯೆ, ಟಿ.ಟಿ ಚುಚ್ಚುಮದ್ದು ಸೇರಿ ವಿವಿಧ ಮಾಹಿತಿ ನೀಡಲು ಅನುಕೂಲವಾಗಲೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಜ್ಯದ 66 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್‌ ನೀಡಲು ಮುಂದಾಗಿದ್ದು, ಮಾರ್ಚ್‌ ಮಾಸಾಂತ್ಯದಲ್ಲಿ ಎಲ್ಲಾ ಕಾರ್ಯಕರ್ತೆಯರ ಕೈ ಸೇರಲಿವೆ.

Advertisement

ರಾಜ್ಯದಲ್ಲಿ 62,580 ಅಂಗನವಾಡಿ, 3,331 ಮಿನಿ ಅಂಗನವಾಡಿ ಕೇಂದ್ರಗಳಿದ್ದು, ಒಟ್ಟಾರೆ 66 ಸಾವಿರ ಕಾರ್ಯಕರ್ತೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಪೋಷಣ್‌ ಅಭಿಯಾನ ಯೋಜನೆಯಡಿ ಎಲ್ಲ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್‌ ನೀಡಲು 129 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. 19 ಜಿಲ್ಲೆಗಳ 42 ಸಾವಿರ ಕಾರ್ಯಕರ್ತರಿಗೆ ಪ್ರಾಥಮಿಕ ಹಂತದಲ್ಲಿ. 11 ಜಿಲ್ಲೆಗಳ 24 ಸಾವಿರ ಕಾರ್ಯಕರ್ತೆರಿಗೆ ಎರಡನೇ ಹಂತದಲ್ಲಿ ಫೋನ್‌ ಗಳನ್ನು ವಿತರಿಸಲಿದೆ.

ಸ್ಯಾಮ್‌ಸಾಂಗ್‌ ಕಂಪನಿಯ ಎ10 ಎಸ್‌ ಸ್ಮಾರ್ಟ್‌ಫೋನ್‌ಗಳು ಫೆಬ್ರವರಿ ಮಾಸಾಂತ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಕೈ ಸೇರಲಿದ್ದು, ಪ್ರತಿಯೊಂದು ಸ್ಮಾರ್ಟ್‌ಫೋನ್‌ನಲ್ಲಿ ಸ್ನೇಹ ಆ್ಯಪ್‌ ಅಪ್ಲಿಕೇಶನ್‌, ಟ್ರ್ಯಾಕಿಂಗ್‌ ಸಿಸ್ಟಮ್‌ ಅಳವಡಿಸಲಿದ್ದಾರೆ. ಒಂದು ಸ್ಮಾರ್ಟ್‌ಫೋನ್‌ನ ಬೆಲೆ 10 ಸಾವಿರ ರೂ. ಆಗಿದ್ದು, ಪ್ರತಿ ಜಿಲ್ಲೆಯ ಕಾರ್ಯಕರ್ತೆಯರಿಗೂ ಹಂಚಿಕೆಯಾಗಲಿವೆ.

ಫೋನ್‌ ಜತೆ ಪವರ್‌ ಬ್ಯಾಂಕ್‌ ವಿತರಣೆ: ಎ10 ಎಸ್‌ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೇ ಪ್ರತಿಯೊಬ್ಬರಿಗೂ 10,000 ಎಂಎಎಚ್‌ ಬ್ಯಾಟರಿ ಪವರ್‌ ಬ್ಯಾಂಕ್‌ ಸಹ ನೀಡಲು ಮುಂದಾಗಿದೆ. ಮೊಬೈಲ್‌ನಲ್ಲಿ 32 ಜಿ.ಬಿ. ಮೆಮೊರಿ ಕಾರ್ಡ್‌ ಕೂಡ ಇರಲಿದೆ. ಇಲಾಖೆಯಿಂದಲೇ ಸಿಮ್‌ ಕಾರ್ಡ್‌ ನೀಡಲಿದ್ದು, ಪ್ರತಿ ತಿಂಗಳು ಇಂಟರ್‌ನೆಟ್‌ ಬಿಲ್‌ನ್ನು ಇಲಾಖೆಯೇ ಭರಿಸಲಿದೆ. ಫೋನ್‌ಗಳು ಜಿಲ್ಲಾಧಿಕಾರಿ ಮೂಲಕ ವಿತರಣೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

 ಅಪೌಷ್ಠಿಕತೆ ಮಕ್ಕಳ ನಿಖರ ಮಾಹಿತಿ ಲಭ್ಯ : ಪ್ರತಿಯೊಂದು ಸ್ಮಾರ್ಟ್‌ಫೋನ್‌ನಲ್ಲಿಯೂ ಸ್ನೇಹ ಆ್ಯಪ್‌ ಅಪ್ಲಿಕೇಶನ್‌ ಅನ್ನು ಅಳವಡಿಸಲಿದ್ದು, ಕಾರ್ಯಕರ್ತೆಯರು ಅಂಗನವಾಡಿ ಎಷ್ಟು ಗಂಟೆಗೆ ಆರಂಭವಾಯಿತು, ಎಷ್ಟು ಗಂಟೆ ಬಾಗಿಲು ಹಾಕಲಾಯಿತು, ಎಷ್ಟು ಮಕ್ಕಳು ಬಂದಿದ್ದಾರೆ ಮತ್ತು ಮಕ್ಕಳ ಹೆಸರು ನೋಂದಣಿ ಮಾಡಬೇಕು. ಆ್ಯಪ್‌ನಲ್ಲಿ ಪ್ರತಿಯೊಂದು ಮಗುವಿನ ಹೆಸರಿನಲ್ಲಿ ಖಾತೆ ತೆರೆದು ಆ ಮಗುವಿಗೆ ಪ್ರತಿ ತಿಂಗಳು ವೈದ್ಯಕೀಯ ಪರೀಕ್ಷೆ, ತೂಕ, ಎತ್ತರ ಎಷ್ಟು ಎಂಬುದನ್ನು ಅಪ್‌ಡೇಟ್‌ ಮಾಡಬೇಕು. ಆರೋಗ್ಯ ಇಲಾಖೆಯು ತಾಯಿ ಕಾರ್ಡ್‌ ನೀಡಲಿದ್ದು, ಹುಟ್ಟುವ ಮಗು 6 ವರ್ಷದವರೆಗೆ ಇಲಾಖೆ ಚುಚ್ಚುಮದ್ದು ನೀಡಲಿದೆ. ಆದ್ದರಿಂದ ಆ ಮಗುವಿಗೆ ಯಾವ ವರ್ಷದಲ್ಲಿ ಏನೆಲ್ಲ ಚುಚ್ಚುಮದ್ದು ಹಾಕಲಾಯಿತು. ಮಗುವಿನ ಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯಲಿದೆ. ಅಂಗನವಾಡಿ ಕಾರ್ಯಕರ್ತೆಯರು ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌), ಮಾತೃಪೂರ್ಣ, ಮಾತೃವಂದನ, ಮಾತೃಶ್ರೀ ಸೇರಿದಂತೆ 40 ಬಗೆಯ ಕಡತಗಳನ್ನು ನಿರ್ವಹಣೆ ಮಾಡಬಹುದು. ಮುಖ್ಯವಾಗಿ ಅಪೌಷ್ಠಿಕತೆ ಮಕ್ಕಳ ನಿಖರ ಸಂಖ್ಯೆ ತಿಳಿಯಲಿದ್ದು, ಅದರಂತೆ ಯೋಜನೆ ಸಿದ್ಧಪಡಿಸಲು ಅನುಕೂಲ ವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

Advertisement

ಫೋನ್‌ ಬಳಕೆ ಮತ್ತು ಸ್ನೇಹ ಆ್ಯಪ್‌ ಬಗ್ಗೆ ತರಬೇತಿ ನೀಡಲಾಗಿದ್ದು, ಮಾರ್ಚ್‌ ಎರಡನೇ ವಾರದಿಂದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್‌ ವಿತರಣೆ ಕಾರ್ಯ ಆರಂಭಿಸ ಲಾಗುವುದು. ಮಾರ್ಚ್‌ ಅಂತ್ಯದಲ್ಲಿ ಎಲ್ಲ ಕಾರ್ಯಕರ್ತೆಯರಿಗೆ ಫೋನ್‌ಗಳನ್ನು ವಿತರಿಸಲಾಗುವುದು. ಇದರಿಂದ ಅಂಗನವಾಡಿಗಳಲ್ಲಿ ಎಷ್ಟು ಮಕ್ಕಳಿದ್ದಾರೆ.  ಮಗುವಿನ ಆರೋಗ್ಯ ಸ್ಥಿತಿಗತಿ ತಿಳಿಯಲಿದೆ.  –ಕೆ.ಎ.ದಯಾನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next