ಮಹಾನಗರ: ಮಂಗಳೂರಿನ ಮೀನುಗಾರಿಕೆ ಬಂದರಿನಿಂದ ಕಣ್ಣಳತೆ ದೂರದಲ್ಲಿರುವ ಪಾಲಿಕೆಯ 60ನೇ ವಾರ್ಡ್ ಆಗಿರುವ ಬೆಂಗ್ರೆಯಲ್ಲಿ ಸುಮಾರು 2,060 ನಿವಾಸಿಗಳಿಗೆ ಹಕ್ಕುಪತ್ರ ನೀಡಿದ್ದರೂ, 26 ವರ್ಷದಿಂದ ಅವರಿಗೆ ಇನ್ನೂ ಕೂಡ ಆರ್‌ಟಿಸಿ (ಪಹಣಿ ಪತ್ರ) ಸಿಗಲೇ ಇಲ್ಲ!
ಸ್ಮಾರ್ಟ್‌ಸಿಟಿಗೆ ಹೊಂದಿಕೊಂಡಿರುವ ನಗರದ ಬಹುಮುಖ್ಯ ಭಾಗದಲ್ಲಿ 150ಕ್ಕೂ ಅಧಿಕ ವರ್ಷಗಳಿಂದ ವಾಸಿಸು ತ್ತಿ ರುವ ಜನರಿಗೆ ಸುದೀರ್ಘ ವರ್ಷಗಳ ಹೋರಾಟದ ಫಲವಾಗಿ ಹಕ್ಕುಪತ್ರ ದೊರೆತಿತ್ತು. ಆದರೆ, ಇನ್ನೂ ಅವರಿಗೆ ಆರ್‌ಟಿಸಿ ದೊರಕಿಲ್ಲ.
ಬ್ರಿಟಿಷರಿಂದ “ಸ್ಯಾಂಡ್ಸ್‌ಫಿಟ್’, ಡಾ| ಶಿವರಾಮ ಕಾರಂತರಿಂದ “ಬೆಂಗ್ರೆ’ (ಬೊಳಂಗೆರೆ), ಮದ್ರಾಸು ಸರಕಾರದಿಂದ “ತೋಟ ಬೆಂಗ್ರೆ, ಕಸಬಾ ಬೆಂಗ್ರೆ’ ಎಂದು ಹೆಸರಿಸಲ್ಪಟ್ಟು 1954ರಿಂದ ಮಂಗಳೂರು ಹಳೆ ಬಂದರಿನ ಅಧೀನಕ್ಕೊಳಪಟ್ಟ ಭೂಮಿ ಬೆಂಗ್ರೆ. ಬಳಿಕ ಎಸ್. ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಹಳೆ ಬಂದರು ಇಲಾಖೆಯಿಂದ ಮುಕ್ತಗೊಳಿಸಿ ಬೆಂಗ್ರೆಯನ್ನು “ಕಂದಾಯ ಗ್ರಾಮ’ವೆಂದು ಘೋಷಿಸಿ ಸಾಂಕೇತಿಕವಾಗಿ ಇಲ್ಲಿನವರ ಮನೆ ಅಡಿ ಸ್ಥಳಗಳಿಗೆ ಮಂಜೂರಾತಿ ಪತ್ರ ನೀಡಲಾಗಿತ್ತು.
“1994ರಲ್ಲಿ ಸರಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯವರ ಒಪ್ಪಿಗೆ ಪಡೆದು ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 5ರಡಿ ಹೊಸತಾಗಿ ರಚಿತವಾದ ಬೆಂಗ್ರೆ ಗ್ರಾಮದ ನಿವಾಸಿಗರಿಗೆ ಹಳೆ ಬಂದರು ಇಲಾಖೆಯಿಂದ 577.44 ಎಕ್ರೆ ಭೂಮಿಯನ್ನು ಕಂದಾಯ ಇಲಾಖೆಗೆ ವರ್ಗಾಯಿಸಲಾಗಿತ್ತು. ವಾಸ್ತವ್ಯಕ್ಕಾಗಿ “ಆಶ್ರಯ ಯೋಜನೆ’ಯಡಿಯಲ್ಲಿ ಅಂದು ಮಂಗಳೂರು ನೆಹರೂ ಮೈದಾನದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಪರ್ಯಾಯ ದ್ವೀಪ ಬೆಂಗ್ರೆಯ (ತೋಟ ಬೆಂಗ್ರೆ, ಕಸ್ಬಾ ಬೆಂಗ್ರೆ, ಕುದ್ರೋಳಿ ಬೆಂಗ್ರೆ, ಬೊಕ್ಕಪಟ್ಣ ಬೆಂಗ್ರೆ, ಬೋಳೂರು ಬೆಂಗ್ರೆ) ಸುಮಾರು 2,060 ಮನೆಯವರಿಗೆ 200 ಚ.ಮೀ.ನಂತೆ ನಿವೇಶನದ ಹಕ್ಕುಪತ್ರ ವಿತರಿಸಲಾಗಿತ್ತು. ವೀರಪ್ಪ ಮೊಲಿ ಅವರು 1994ರ ಸೆ. 5ರಂದು ಆಶ್ರಯ ಯೋಜನೆಯಡಿಯಲ್ಲಿ 2,060 ಮನೆಯವರಿಗೆ 200 ಚ.ಮೀ. ನಂತೆ ನಿವೇಶನವನ್ನು 20 ವರ್ಷದವರೆಗೆ ಪರಭಾರೆ ಮಾಡಬಾರದೆಂದು ಹಕ್ಕುಪತ್ರ ನೀಡಿ 26 ವರ್ಷ ಕಳೆದರೂ ಕೂಡ ಯಾರಿಗೂ ಪಹಣಿ ಪತ್ರ ನೀಡದೆ ತ್ರಿಶಂಕು ಸ್ಥಿತಿಯಲ್ಲಿಡಲಾಗಿದೆ’ ಎನ್ನುತ್ತಾರೆ ಬೆಂಗ್ರೆ ಮಹಾಜನ ಸಭಾ ಮಾಜಿ ಅಧ್ಯಕ್ಷ ಧನಂಜಯ ಪುತ್ರನ್ ಬೆಂಗ್ರೆ.
ಸರಕಾರದ ಆದೇಶದಂತೆ ಆಶ್ರಯ ಯೋಜನೆ ನಿಯಮ ಪಾಲಿಸುತ್ತಾ ಬಂದ ಇಲ್ಲಿಯ ನಿವಾಸಿಗರು ಮನ ಪಾಗೆ ಸೇರಿದಂದಿನಿಂದ ಇಂದಿನವರೆಗೆ ಕಟ್ಟಡ ತೆರಿಗೆ ಪಾವತಿಸುತ್ತಿದ್ದಾರೆ. 26 ವರ್ಷದಿಂದ ಚುನಾವಣ ನೀತಿ ಸಂಹಿತೆ, ಸಿ.ಆರ್.ಝಡ್. ವ್ಯಾಪ್ತಿ, 94ಸಿ, 94ಸಿಸಿ ಕಾನೂನು, ಕರಾವಳಿ ನಿಯಂತ್ರಣ ವಲಯ, ಪ್ರಕೃತಿ ವಿಕೋಪ ಇನ್ನಿತರ ಕಾರಣ ನೀಡಿ ಆರ್‌ಟಿಸಿ ದೊರೆಯಲೇ ಇಲ್ಲ.
ಜೆ.ಆರ್. ಲೋಬೋ ಅವರು 2018ರ ಫೆ. 10ರಂದು ಬೆಂಗ್ರೆ ದ್ವೀಪದ 1,138 ಕುಟುಂಬದವರಿಗೆ ತಲಾ 10,000ರೂ. ಗಳಂತೆ 1,200 ಚ. ಅಡಿಗೆ ಕಂದಾಯ ವಸೂಲು ಮಾಡಿ ಮಂಜೂರಾದ ಮನೆಯಡಿ ಸ್ಥಳವನ್ನು 15 ವರ್ಷದ ಅವಧಿಯವರೆಗೆ ಪರಭಾರೆ ಮಾಡಬಾರದೆಂದೂ ಹಾಗೂ ನಿವೇಶನವನ್ನು ಒತ್ತೆಯಿಟ್ಟು ಗೃಹ ನಿರ್ಮಾಣಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಸಹಕಾರಿ ಸಂಘ-ಸಂಸ್ಥೆಗಳಲ್ಲಿ ಸಾಲ ಪಡೆಯಬಹುದು ಎಂದು ಷರತ್ತುಬದ್ಧ ಮನೆ ಅಡಿ ಸ್ಥಳದ ಸಕ್ರಮೀಕರಣದ ಹಕ್ಕುಪತ್ರವನ್ನು 94ಸಿಸಿ ಕಾನೂನಿನನ್ವಯ ನೀಡಿದ್ದರು. ಬಳಿಕ ಶಾಸಕ ವೇದವ್ಯಾಸ ಕಾಮತ್ ಅವರು ಕೂಡ ನೂರಾರು ಮಂದಿಗೆ ಹಕ್ಕು ಪತ್ರವನ್ನು ನೀಡಿದ್ದರು. ಆದರೆ, ಆರ್‌ಟಿಸಿ ಮಾತ್ರ ಇಲ್ಲಿನವರಿಗೆ ಇನ್ನೂ ಗಗನಕುಸುಮ!
ಬೆಂಗ್ರೆ ನಿವಾಸಿಗಳಿಗೆ ಹಲವು ವರ್ಷಗಳ ಹಿಂದಿನ ತಾಂತ್ರಿಕ ಸಮಸ್ಯೆಯ ಕಾರಣದಿಂದ ಆರ್‌ಟಿಸಿ ನೀಡುವ ಪ್ರಕ್ರಿಯೆ ಆಗಿರಲಿಲ್ಲ. ಹಿಂದೆ ಹಕ್ಕುಪತ್ರ ನೀಡಿದ್ದರೂ ಸರ್ವೆ ನಂಬರ್ ನೀಡಿರಲಿಲ್ಲ. ಈ ಎಲ್ಲ ವಿಚಾರಗಳ ಪರಾಮರ್ಶೆ ನಡೆಸಲಾಗುತ್ತಿದೆ. ಜತೆಗೆ ಈ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೂಡ ಹಂತ ಹಂತವಾಗಿ ಕಾರ್ಯ ನಡೆಸುತ್ತಿದ್ದಾರೆ. ಶೀಘ್ರದಲ್ಲಿ ಇದರ ಬಗ್ಗೆ ಅಂತಿಮ ಕ್ರಮವನ್ನು ಕೈಗೊಳ್ಳಲಾಗುವುದು.
–ಡಿ. ವೇದವ್ಯಾಸ್ ಕಾಮತ್, ಶಾಸಕರು, ಮಂಗಳೂರು ದಕ್ಷಿಣ.
ಬೆಂಗ್ರೆ ನಿವಾಸಿಗಳಿಗೆ ಆರ್‌ಟಿಸಿ ನೀಡುವ ವಿಚಾರದಲ್ಲಿ ಕೆಲವು ವರ್ಷದಿಂದ ತಾಂತ್ರಿಕ ಸಮಸ್ಯೆ ಇದೆ. ಈ ಬಗ್ಗೆ ಮುಂದಿನ 3 ತಿಂಗಳೊಳಗೆ ಸ್ಥಳ ಸಮೀಕ್ಷೆ ನಡೆಸಿ, ಪರಿಶೀಲನೆ ಮಾಡಿಕೊಂಡು, ಕಾನೂನು ಪ್ರಕಾರ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
–ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.