ತುಮಕೂರು: ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ರಿಂಗ್ ರಸ್ತೆ, ಸ್ಟೇಡಿಯಂ ಸೇರಿದಂತೆ ಸ್ಮಾರ್ಟ್‌ಸಿಟಿ ಕಾಮಗಾರಿಗಳ ಕುರಿತು ಇನ್ನೊಂದು ತಿಂಗಳೊಳಗೆ ಸಂಪೂರ್ಣ ಸಮಗ್ರ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಇಲ್ಲದಿದ್ದರೆ ಸ್ಮಾರ್ಟ್ ಸಿಟಿ ವಿರುದ್ಧ ಉಗ್ರ ಹೋರಾಟ ನಡೆಸ ಲಾಗುವುದು ಎಂದು ಮಾಜಿ ಶಾಸಕ ಡಾ. ಎಸ್. ರಫೀಕ್ ಅಹಮದ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2016 ರಲ್ಲಿ ತಾವು ಶಾಸಕರಾಗಿದ್ದ ಅವಧಿಯಲ್ಲಿ ತುಮಕೂರು ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದ್ದು, ಅಂದಿನಿಂದ ಅನುದಾನ ಬರಲು ಪ್ರಾರಂಭವಾಯಿತು. ನಗರದಲ್ಲಿ 154 ಯೋಜನೆ ಅನುಷ್ಠಾನಕ್ಕೆ ತಂದು 924 ಕೋಟಿ ರೂ. ಮೊತ್ತದ ಕಾಮಗಾರಿಗಳ ಪೈಕಿ ಈಗಾಗಲೇ 471 ಕೋಟಿ ರೂ. ಮೊತ್ತದ ಕಾಮಗಾರಿ ಪೂರ್ಣಗೊಂಡಿವೆ ಎಂದು ಸ್ಮಾರ್ಟ್‌ಸಿಟಿ ಅಧಿಕಾರಿಗಳು ಹೇಳುತ್ತಾರೆ.
ಆದರೆ, ಈ ಕಾಮಗಾರಿಗಳ ಗುಣಮಟ್ಟ ಸೇರಿದಂತೆ ಸಮಗ್ರ ಮಾಹಿತಿ ಕೇಳಿದರೆ ಮಾತ್ರ ಸಂಪೂರ್ಣ ಮಾಹಿತಿ ಕೊಡದೆ ಇಲ್ಲಸಲ್ಲದ ಸಬೂಬು ಹೇಳುತ್ತಿದ್ದಾರೆ ಎಂದು ದೂರಿದರು.
ಸಮರ್ಪಕ ಮಾಹಿತಿ ನೀಡುತ್ತಿಲ್ಲ: ಈಗಾಗಲೇ ಸ್ಮಾರ್ಟ್‌ಸಿಟಿ ಯೋಜನೆಗೆ ಕೇಂದ್ರದಿಂದ 294ಕೋಟಿ ರೂ. ಹಾಗೂ ರಾಜ್ಯ ಸರ್ಕಾರದಿಂದ 297 ಕೋಟಿ ರೂ. ಅನುದಾನ ಬಂದಿದೆ. ನಗರದಲ್ಲಿ ನಡೆದಿರುವ ಮತ್ತು ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳ ಕುರಿತು ಸಮಗ್ರ ಮಾಹಿತಿನೀಡುವಂತೆ ಆರ್‌ಟಿಐ ಅಡಿ ಕೇಳಿದರೂ, ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಅಲ್ಲದೆ ಸ್ಮಾರ್ಟ್‌ಸಿಟಿ ವೆಬ್‌ಸೈಟ್‌ನಲ್ಲೂ ಅರೆಬರೆ ಮಾಹಿತಿ ಮಾತ್ರ ಪ್ರಕಟಿಸಿದ್ದಾರೆ. ಕಾಮಗಾರಿಗಳಕುರಿತು ಸಮಗ್ರ ಮಾಹಿತಿ ಹಾಕಬೇಕು. ಈ ಮೂಲಕ ನಗರದ ನಾಗರಿಕರಿಗೆ ಸ್ಮಾರ್ಟ್‌ಸಿಟಿಕುರಿತು ಮಾಹಿತಿ ತಿಳಿಯುವಂತಾಗಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.
ಸಸಿಗಳನ್ನು ನೆಟ್ಟಿಲ್ಲ: ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆದಿರುವ ರಿಂಗ್ ರಸ್ತೆ ಕಾಮಗಾರಿಯೂ ಕಳಪೆಯಿಂದ ಕೂಡಿದೆ. ಮಹಾತ್ಮಗಾಂಧಿ ಕ್ರೀಡಾಂಗಣ, ಇಂಟಿಗ್ರೇಟೆಡ್ ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಾಮಗಾರಿ ಗುಣಮಟ್ಟದಿಂದಕೂಡಿಲ್ಲ. ಇನ್ನು ಬೀದಿದೀಪ ಸಹಸಮರ್ಪಕವಾಗಿಲ್ಲ. ರಿಂಗ್ ರಸ್ತೆಯಲ್ಲಿ ಸರಿಯಾಗಿ ಸಸಿಗಳನ್ನು ನೆಟ್ಟಿಲ್ಲ. ಈ ರೀತಿಯ ಕಳಪೆ ಕಾಮಗಾರಿ ಮಾಡಿರುವ ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ನಾಚಿಕೆಯಾಗಬೇಕು ಎಂದು ಗುಡುಗಿದರು.
ರಾಷ್ಟ್ರಮಟ್ಟದ ಟೆಂಡರ್ ಕರೆದಿಲ್ಲ: ಸ್ಮಾರ್ಟ್‌ಸಿಟಿ ವತಿಯಿಂದ ಕೇಳಿದ ಮಾಹಿತಿ ಬಗ್ಗೆ ನೀಡಿರುವಉತ್ತರವನ್ನು ಕೇಂದ್ರ, ರಾಜ್ಯ ಸರ್ಕಾರದ ಗಮನಕ್ಕೂ ತರುತ್ತೇನೆ. ಸ್ಮಾರ್ಟ್‌ಸಿಟಿಯವರು ಸ್ಥಳೀಯಶಾಸಕರು ಹಾಗೂ ಸಚಿವರಿಗೂ ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ ಎಂದ ಅವರು, ನಗರದಲ್ಲಿ ಕೈಗೊಂಡಿರುವ ಸ್ಮಾರ್ಟ್‌ಕಾಮಗಾರಿಗಳಿಗೆ ರಾಷ್ಟ್ರಮಟ್ಟದ ಟೆಂಡರ್ ಕರೆಯಬೇಕಿತ್ತು. ರಾಷ್ಟ್ರಮಟ್ಟದ ಟೆಂಡರ್ ಕರೆದು ಗುತ್ತಿಗೆ ನೀಡಿದ್ದರೆ ಗುಣಮಟ್ಟದ ಕಾಮಗಾರಿ ನಡೆಯುತ್ತಿದ್ದವು ಎಂದರು.
ಪಾಲಿಕೆ ಸದಸ್ಯ ನಯಾಜ್ ಅಹಮದ್, ಜೆ. ಕುಮಾರ್, ಮಹೇಶ್, ಮುಖಂಡ ಆಟೋರಾಜು, ಮೆಹಬೂಬು ಪಾಷ, ಪ್ರಭಾವತಿ ಸುದೀಶ್ವರ್, ಡಾ. ಕುರಾನ ಬೇಗಂ, ಜಗದೀಶ್ ಹಾಗೂ ಮತ್ತಿತರರು ಇದ್ದರು.