Advertisement

ಸ್ಮಾರ್ಟ್‌ಸಿಟಿ: 4 ಮಹತ್ವದ ಯೋಜನೆಗಳಿಗೆ ಟೆಂಡರ್‌

12:20 PM Dec 28, 2017 | Team Udayavani |

ಮಂಗಳೂರು: “ಮಂಗಳೂರು ಸ್ಮಾರ್ಟ್‌ ಸಿಟಿ’ಯ 65 ಯೋಜನೆಗಳ ಪೈಕಿ 4 ಮಹತ್ವದ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್‌ ಕರೆಯಲಾಗಿದ್ದು, ಶೀಘ್ರದಲ್ಲಿ ಈ ಎಲ್ಲ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಹಮ್ಮದ್‌ ನಝೀರ್‌ ತಿಳಿಸಿದ್ದಾರೆ.

Advertisement

ಪಾಲಿಕೆಯಲ್ಲಿ ಬುಧವಾರ ಸ್ಮಾರ್ಟ್‌ ಸಿಟಿ ಯೋಜನೆಯ ಪ್ರಗತಿ ವಿವರ ನೀಡಿದ ಅವರು, ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದ ಕ್ಲಾಕ್‌ ಟವರ್‌-ಎ.ಬಿ.ಶೆಟ್ಟಿ ಸರ್ಕಲ್‌ ರಸ್ತೆ 7.56 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‌ ರೋಡ್‌ ಆಗಿ ಅಭಿವೃದ್ಧಿಯಾಗಲಿದೆ. ಹಳೆ ಕ್ಲಾಕ್‌ ಟವರ್‌ ಇದ್ದ ಜಾಗದಲ್ಲೇ 90 ಲಕ್ಷ ರೂ. ವೆಚ್ಚದಲ್ಲಿ ಹೊಸ ಕ್ಲಾಕ್‌ ಟವರ್‌ ನಿರ್ಮಾಣವಾಗಲಿದೆ. ಪಂಪ್‌ವೆಲ್‌ನಲ್ಲಿ ಹೊಸ ಬಸ್‌ ನಿಲ್ದಾಣ
ನಿರ್ಮಾಣವನ್ನು ಹೊಸದಾಗಿ ಸ್ಮಾರ್ಟ್‌ ಸಿಟಿ ಯೋಜನೆಗೆ ಸೇರ್ಪಡೆ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದರು.

ಕ್ಲಾಕ್‌ ಟವರ್‌-ಎ.ಬಿ. ಶೆಟ್ಟಿ ಸರ್ಕಲ್‌ ರಸ್ತೆಯ ರಸ್ತೆ ವಿಭಾಜಕವನ್ನು ಮರು ವಿನ್ಯಾಸಗೊಳಿಸಲಾಗುವುದು. ಮೈದಾನದ ಬದಿಯಲ್ಲಿ ಫ‌ುಟ್‌ಪಾತ್‌, ಒಳಚರಂಡಿ ಮತ್ತು ಕೇಬಲ್‌ ಅಳವಡಿಕೆಗೆ ಪ್ರತ್ಯೇಕ ವ್ಯವಸ್ಥೆ ಅಳವಡಿಸಲಾಗುವುದು. ರಸ್ತೆ ಬದಿಯಲ್ಲಿ ಪಾರ್ಕ್‌ ಮಾದರಿ
ಅಂದಗೊಳಿಸಿ ಆಸನ ವ್ಯವಸ್ಥೆ ಕಲ್ಪಿಸಲಾಗುವುದು. ವೈಫೈ, ಸಿಸಿ ಕೆಮರಾ, ವಾಯು ಗುಣಮಟ್ಟ ಪ್ರದರ್ಶಿಸುವ ಫ‌ಲಕ ವ್ಯವಸ್ಥೆ ಸ್ಮಾರ್ಟ್‌ ಪೋಲ್‌ ಅಳವಡಿಕೆಯಾಗಲಿದೆ. ರಸ್ತೆಯ ಇನ್ನೊಂದು ಬದಿಯಲ್ಲಿರುವ ಈಗಿನ 9 ಬಸ್‌ ತಂಗುದಾಣಗಳನ್ನು ಸ್ಥಳಾಂತರಿಸಿ, ಹೊಸದಾಗಿ ಸ್ಮಾರ್ಟ್‌ ಬಸ್‌ ಶೆಲ್ಟರ್‌ ಹಾಗೂ ಇ ಶೌಚಾಲಯ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.

22 ಸ್ಮಾರ್ಟ್‌ ಬಸ್‌ ನಿಲ್ದಾಣ
ಮಂಗಳೂರಿನ 22 ಕಡೆಗಳಲ್ಲಿ ಸ್ಮಾರ್ಟ್‌ ಬಸ್‌ ತಂಗುದಾಣ ವನ್ನು 4.8 ಕೋಟಿ ರೂ. ವೆಚ್ಚದಲ್ಲಿ ಎ, ಬಿ ಹಾಗೂ ಸಿ ಮಾದರಿಯಲ್ಲಿ ನಿರ್ಮಿಸಲಾಗುವುದು. 7.5 ಮೀಟರ್‌ ಉದ್ದ ಹಾಗೂ ಇ ಶೌಚಾಲಯ ಸಹಿತ (ಎ ಮಾದರಿ), 7.5 ಮೀಟರ್‌ ಉದ್ದ (ಬಿ ಮಾದರಿ), 6 ಮೀ. ಉದ್ದ (ಸಿ ಮಾದರಿ)ದ ಬಸ್‌ ತಂಗುದಾಣಗಳಾಗಿವೆ. ಬಂದರು ಪ್ರದೇಶ ನೆಲ್ಲಿಕಾಯಿ ರಸ್ತೆಯಲ್ಲಿ 4.95 ಕೋಟಿ ರೂ. ವೆಚ್ಚದಲ್ಲಿ ಒಳ ಚರಂಡಿ ವ್ಯವಸ್ಥೆಯ ಪುನರ್‌ ನಿರ್ಮಾಣ ಕಾರ್ಯ ನಡೆಯಲಿದೆ. ಮುಂದಿನ ಹಂತದಲ್ಲಿ ಈ ಪ್ರದೇಶದ ರಸ್ತೆಗಳಿಗೆ 32.5 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ಕಾಮಗಾರಿ ನಡೆಯಲಿದೆ ಎಂದರು. 75.28 ಕೋಟಿ ರೂ., ವೆಚ್ಚದ ಕಮಾಂಡ್‌ ಕಂಟ್ರೋಲ್‌ ಸೆಂಟರ್‌, 79 ಕೋಟಿ ರೂ. ವೆಚ್ಚದಲ್ಲಿ ಖಾಸಗಿ ಸಹ ಭಾಗಿತ್ವದ ಮಲ್ಟಿ ಲೆವೆಲ್‌ ಪಾರ್ಕಿಂಗ್‌ ಯೋಜನೆಯ ಸಮಗ್ರ ಯೋಜನಾ ವರದಿ ಸಿದ್ಧವಾಗಿದೆ ಎಂದು ತಿಳಿಸಿದರು. 

ಸ್ಮಾರ್ಟ್‌ಸಿಟಿಯಲ್ಲಿ ಕ್ಲಾಕ್‌ ಟವರ್‌ ಮೇಯರ್‌ ಕವಿತಾ ಸನಿಲ್‌ 
ಮೇಯರ್‌ ಕವಿತಾ ಸನಿಲ್‌ ಮಾತನಾಡಿ, ಮಂಗಳೂರಿನ ಹಂಪನಕಟ್ಟೆಯಲ್ಲಿ ಹೆಗ್ಗುರುತಾಗಿದ್ದ ಹಳೆ ಕ್ಲಾಕ್‌ ಟವರ್‌ ಜಾಗದಲ್ಲಿಯೇ ಹೊಸದಾಗಿ ಕ್ಲಾಕ್‌ ಟವರ್‌ ನಿರ್ಮಿಸಬೇಕು ಎಂಬ ಬಗ್ಗೆ ನನ್ನ ಬಹುದಿನಗಳ ಕನಸನ್ನು ಈಡೇರಿಸಲಾಗುತ್ತಿದೆ. ಮಂಗಳೂರಿನ ಹಳೆಯ ನೆನಪನ್ನು ಜೀವಂತಿಕೆ ಇಡುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಇದಕ್ಕಾಗಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಇದನ್ನು ನಿರ್ಮಿಸಲಾಗುತ್ತಿದೆ. ಹಳೆ ಕ್ಲಾಕ್‌ ಟವರ್‌ ಮಾದರಿಯಲ್ಲಿ 21 ಮೀಟರ್‌ ಉದ್ದದ ಹೊಸ ಟವರ್‌ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next