Advertisement
ಸ್ಮಾರ್ಟ್‌ಸಿಟಿಗಳ ಪಟ್ಟಿಗೆ ಸೇರಿರುವ ಮಂಗಳೂರು, ಸ್ವಚ್ಛ ಸುಂದರ ನಗರ ಎಂಬ ಹೆಸರನ್ನು ಪಡೆದುಕೊಂಡಿದೆ. ಆದರೆ ಕೆಲವು ಸಣ್ಣಪುಟ್ಟ ಸಮಸ್ಯೆಗಳಿಂದ ನಗರಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗಿದೆ. ನಗರದ ಪ್ರಮುಖ ಭಾಗಗಳಲ್ಲಿ ಹಳೆಯ, ಉಪಯೋಗ ಶೂನ್ಯವಾದ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗಿದ್ದು, ಇದು ನಗರದ ಸ್ವಚ್ಛ ಪರಿಕಲ್ಪನೆಗೆ ಧಕ್ಕೆ ತರುವಂತಿದೆ. ಇದರೊಂದಿಗೆ ಟ್ರಾಫಿಕ್ ಸಹಿತ ಹಲವು ಸಮಸ್ಯೆಗಳನ್ನು ಜನರು ಎದುರಿಸುವಂತಾಗಿದೆ. ನಗರದ ಮಣ್ಣಗುಡ್ಡೆ, ಲಾಲ್‌ಬಾಗ್- ಮಣ್ಣಗುಡ್ಡೆ ಒಳರಸ್ತೆ, ಕದ್ರಿ ಪಾರ್ಕ್ ಮುಂಭಾಗ, ಮರೋಳಿ, ಬಂದರು, ಬರ್ಕೆ ಸಹಿತ ಹಲವು ಭಾಗಗಳಲ್ಲಿ ಉಪಯೋಗ ಶೂನ್ಯ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.
ನಗರದ ಬಹುತೇಕ ಗ್ಯಾರೇಜ್ ಆವರಣಗಳಲ್ಲಿ ತುಕ್ಕು ಹಿಡಿದ ಉಪಯೋಗ ಶೂನ್ಯ ವಾಹನಗಳನ್ನು ನಿಲುಗಡೆ ಮಾಡಲಾಗಿದೆ. ಅದರಲ್ಲೂ ಕೆಲವು ಗ್ಯಾರೇಜ್‌ಗಳು ಸಾರ್ವಜನಿಕ ಸ್ಥಳಗಳನ್ನು ದುರ್ಬಳಕೆ ಮಾಡಿಕೊಂಡು ವಾಹನ ನಿಲುಗಡೆ ಮಾಡುತ್ತಿವೆ. ಇದರಿಂದ ಅದರ ಆಸುಪಾಸಿನಲ್ಲಿ ವಾಸಿಸುವ ಹಾಗೂ ಸಂಚರಿಸುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅದರೊಂದಿಗೆ ಆ ಭಾಗದ ಸ್ವಚ್ಛತೆಯನ್ನು ಕಡೆಗಣಿಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡಿರುವ ಕುರಿತು ಅಧಿಕಾರಿಗಳ ಗಮನಕ್ಕೆ ಬಂದರೂ ಆ ಬಗ್ಗೆ ಕ್ರಮ ಜರಗಿಸಲು ಹಿಂದೇಟು ಹಾಕುತ್ತಿದ್ದಾರೆ. ಸೀಸ್ ಮಾಡಿದ ವಾಹನ ಠಾಣೆ ಮುಂಭಾಗ
ರಸ್ತೆ ಬದಿಗಳಲ್ಲಿ ನಿರುಪಯುಕ್ತ ವಾಹನಗಳನ್ನು ಪಾರ್ಕ್ ಮಾಡಿದಾಗ ಸಮಸ್ಯೆಯಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲು ಹೋದರೆ ಪೊಲೀಸ್ ಠಾಣೆ ಆವರಣಗಳಲ್ಲೇ ಹಳೆ ವಾಹನಗಳ ಸಾಲೇ ಕಾಣಸಿಗುತ್ತದೆ. ನಗರದ ಬಹುತೇಕ ಪೊಲೀಸ್ ಠಾಣೆ ಆವರಣ ಸೀಸ್ ಮಾಡಿದ ವಾಹನಗಳನ್ನು ನಿಲ್ಲಿಸಲು ಸ್ಥಳವಕಾಶದ ಕೊರತೆಯಿಂದ ಠಾಣೆಯ ಆಸುಪಾಸಲ್ಲಿ ವಾಹನಗಳನ್ನು ಪಾರ್ಕ್ ಮಾಡುತ್ತಿದ್ದಾರೆ. ಇದರಿಂದ ಇತರ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ.
Related Articles
ನಗರದ ಬಹುತೇಕ ಸರಕಾರಿ ಕಚೇರಿಗಳ ಆವರಣದಲ್ಲೇ ಉಪಯೋಗ ಶೂನ್ಯ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿದೆ. ಪಾಲಿಕೆ ಆವರಣ, ಅರಣ್ಯ ಇಲಾಖೆ ಕಟ್ಟಡ ಸಹಿತ ಸರಕಾರಿ ಕಚೇರಿಗಳ ಆವರಣಗಳಲ್ಲೇ ತುಕ್ಕು ಹಿಡಿದ ವಾಹನಗಳು ಹಲವು ಸಮಯಗಳಿಂದ ನಿಲುಗಡೆಯಾಗಿವೆ. ಅಚ್ಚರಿ ಎಂದರೆ ಹೀಗೆ ನಿಂತ ವಾಹನಗಳ ಸುತ್ತ ಹುಲ್ಲು ಬೆಳೆದರೂ ಅಧಿಕಾರಿಗಳು ಮಾತ್ರ ಗಮನ ಹರಿಸುತ್ತಿಲ್ಲ.
Advertisement
ನಿರುಪಯುಕ್ತ ವಾಹನ ಪತ್ತೆಹಚ್ಚಲು ಸೂಚನೆನಿರುಪಯುಕ್ತ ವಾಹನಗಳನ್ನು ಪತ್ತೆಹಚ್ಚಿ ಅವುಗಳ ಫೋಟೋ ಸಹಿತ ವಿವರಗಳನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಂಗ್ರಹಿಸಿದ ಮಾಹಿತಿಯನ್ನು ಟ್ರಾಫಿಕ್ ಪೊಲೀಸರಿಗೆ ನೀಡಿ ತೆರವಿಗೆ ಮನವಿ ಮಾಡಲಾಗುವುದು.
– ಗೋಕುಲ್‌ದಾಸ್ ನಾಯಕ್,
ಜಂಟಿ ಆಯುಕ್ತರು ಮನಪಾ ವಿಶೇಷ ವರದಿ