ತುಮಕೂರು: ಸ್ಮಾರ್ಟ್‌ಸಿಟಿ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳದ ಎಂಜಿನಿಯರ್‌ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‌ಕುಮಾರ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರಿಂಗ್ ರಸ್ತೆ ಕಾಮಗಾರಿಗೆ ಸಂಬಂಧಿಸಿ ಸಾರ್ವಜನಿಕರಿಂದ ಪ್ರತಿದಿನ ಕನಿಷ್ಠ 10 ಕರೆಗಳು ಬರುತ್ತಿದ್ದು, ಅಪ ಘಾತಗಳ ಸಂಖ್ಯೆ ಹೆಚ್ಚುತ್ತಿವೆ. ಕಾಮಗಾರಿ ಪ್ರಗತಿಯಲ್ಲಿರುವ ಜಾಗದಲ್ಲಿ ಸೂಚನಾ ಫಲಕ ಹಾಕದಿರುವುದು ಅಪಘಾತಗಳಿಗೆ ಕಾರಣವಾಗಿವೆ ಎಂದರು.
ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ: ರಿಂಗ್ ರಸ್ತೆ ಕಾಮಗಾರಿ ಪ್ರಗತಿ ವಿಳಂಬವಾಗುತ್ತಿರುವುದಕ್ಕೆ ಅಗತ್ಯ ಕ್ರಮವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಕಟ್ಟುನಿಟ್ಟಿನ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ನೀವು ಹೇಳುವ ನೆಪ ಕೇಳಲು ಸಿದ್ಧನಿಲ್ಲ. ಸ್ಮಾರ್ಟ್‌ಸಿಟಿ ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದ ಸಮನ್ವಯ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದಿರುವುದೇ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಅಧಿಕಾರಿಗಳು ಇನ್ನಾದರೂ ಯಾವುದೇ ನೆಪ ಹೇಳದೆ ಹಗಲಿರುಳು ಕೆಲಸ ಮಾಡಿ ನಗರದಲ್ಲಿ ಕೈಗೆತ್ತಿಕೊಂಡಿ ರುವ ಕಾಮಗಾರಿ ನಿಗದಿತ ಅವಧಿಯಲ್ಲಿ ಮುಗಿಸಬೇಕು ಎಂದು ತಾಕೀತು ಮಾಡಿದರು.
ರಿಂಗ್ ರಸ್ತೆಯಲ್ಲಿ ಕಾಮಗಾರಿಗೆ ಅಡ್ಡಿಯಾಗಿರುವ ವಿದ್ಯುತ್ ಕಂಬ ಕೂಡಲೇ ಸ್ಥಳಾಂತರಿಸಬೇಕೆಂದು ಡೀಸಿ ಸೂಚನೆಗೆ ಪ್ರತಿಕ್ರಿಯಿಸಿದ ಬೆಸ್ಕಾಂ ಅಧಿಕಾರಿ ಗೋವಿಂದಪ್ಪ, ಅರಣ್ಯ ಇಲಾಖೆಯವರು ರಿಂಗ್ ರಸ್ತೆಯಲ್ಲಿರುವ ಮರಗಳ ಅನವಶ್ಯಕ ಭಾಗ ಕತ್ತರಿಸ ದಿರುವುದರಿಂದ ಕಂಬ ಸ್ಥಳಾಂತರಿಸಲು ವಿಳಂಬ ವಾಗುತ್ತಿದೆ ಎಂದು ಹೇಳಿದರು.
ಕೂಡಲೇ ಮರಗಳ ಟ್ರಿಮ್ಮಿಂಗ್ ಕೆಲಸ ಮಾಡಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್‌ಗೆ ಡೀಸಿ ಆದೇಶಿಸಿದರು. ಶಾಶ್ವತ ಕಾಮಗಾರಿ ಕೈಗೊಳ್ಳಿ: ಗುಬ್ಬಿ ಗೇಟ್ ಬಳಿ ಒಳಚರಂಡಿ ರಸ್ತೆ ಮಧ್ಯದಲ್ಲಿ ಹಾದು ಹೋಗಿರುವುದ ರಿಂದ ಕೂಡಲೇ ಸ್ಥಳಾಂತರಿಸಿ, ಶಾಶ್ವತ ಕಾಮಗಾರಿ ಕೈಗೊಳ್ಳಬೇಕು. ರಿಂಗ್ ರಸ್ತೆಯಲ್ಲಿ ಮನೆಗಳಿಗೆ ಗೃಹ ಬಳಕೆಗಾಗಿ ಗ್ಯಾಸ್ ಸಂಪರ್ಕ, ನೀರು ಸರಬರಾಜು ಸಂಪರ್ಕ ನೀಡುವುದು ಕೈಬಿಟ್ಟು ಹೋಗಿದ್ದರೆ ತಕ್ಷಣ ಕ್ರಮ ಕೈಗೊಂಡು ದೃಢೀಕರಣ ಪತ್ರ ಒದಗಿಸಬೇಕೆಂದು ಪಾಲಿಕೆ ಹಾಗೂ ಗ್ಯಾಸ್ ಏಜೆನ್ಸಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಬಿ.ಎಚ್. ರಸ್ತೆಯ ಗುಬ್ಬಿಗೇಟ್, ಬಿ.ಜಿ. ಪಾಳ್ಯ ಹಾಗೂ ಹೊರಪೇಟೆ ಬಳಿ ಒತ್ತುವರಿ ಪ್ರಕರಣಗಳಿರುವುದರಿಂದ ಕಾಮಗಾರಿ ವಿಳಂಬವಾಗಿದೆ ಎಂದು ಪಾಲಿಕೆ ಉಪಾಯುಕ್ತ ಯೋಗಾನಂದ ಸಭೆ ಗಮನಕ್ಕೆ ತಂದಾಗ ಇನ್ನೆರಡು ದಿನಗಳಲ್ಲಿ ಸರ್ವೆ ಕೈಗೊಂಡು ಒತ್ತುವರಿ ತೆರವುಗೊಳಿಸಬೇಕೆಂದು ಸರ್ವೆ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ನಗರದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಅಮಾನಿ ಕೆರೆ, ಅಕ್ಕ-ತಂಗಿ ಕೆರೆ ಸೇರಿ ಮತ್ತಿತರ ಕೆರೆಗಳ ಮೂಲ ಸ್ವರೂಪ ಹಾಳಾಗದಂತೆ ಕಾಮಗಾರಿ ಕೈಗೊಳ್ಳಬೇಕು. ನಮ್ಮ ನಗರ ಎಂಬ ಅಭಿಮಾನದ ಮೇಲೆ ಎಲ್ಲ ಸಮನ್ವಯ ಇಲಾಖೆಗಳು ಜನರಿಗೆ ವಿಶ್ವಾಸ ಮೂಡುವಂತೆ ಸ್ಮಾರ್ಟ್‌ಸಿಟಿ ಕಾಮಗಾರಿ ಕೈಗೊಳ್ಳಬೇಕು ಎಂದು ತಿಳಿಸಿದರು. ಸ್ಮಾರ್ಟ್ ಸಿಟಿ ಲಿಮಿಟೆಡ್ ಪ್ರಧಾನ ವ್ಯವಸ್ಥಾಪಕ ಪಿ.ಎನ್. ಸ್ವಾಮಿ, ಕಾರ್ಯನಿರ್ವಾಹಕ ಎಂಜಿನಿಯರ್ ಬಸವರಾಜೇಗೌಡ, ಇತರ ಇಲಾಖೆ ಗಳ ಅಧಿಕಾರಿಗಳು ಉಪಸ್ಥಿತರಿದ್ದರು.