ಧಾರವಾಡ: ರೈತರ ಸಾಲಮನ್ನಾದ ಬದಲು ಉದ್ಯಮಿಗಳ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರ ಇದೀಗ ಸ್ಮಾರ್ಟ್‌ಸಿಟಿ ಮಾಡುವ ಮೂಲಕ ಬಡ ರೈತರ ಭೂಮಿಗೆ ಕನ್ನಾ ಹಾಕುತ್ತಿದೆ ಎಂದು ಸ್ಲಂ ಜನಾಂದೋಲನಾ ಕರ್ನಾಟಕದ ರಾಜ್ಯ ಸಂಘಟನಾ ಸಂಚಾಲಕ ಇಮ್ತಿಯಾಜ ಮಾನ್ವಿ ಹೇಳಿದರು.
ನಗರದಲ್ಲಿ ಸ್ಲಂ ಜನಾಂದೋಲನಾ ಕರ್ನಾಟಕ ಸಹಕಾರ ಮತ್ತು ಹು-ಧಾ ಸ್ಲಂ ಸಮಿತಿಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅವಳಿನಗರದ ನಾಗರಿಕರ ಮೇಲೆ ಸ್ಮಾರ್ಟ್‌ಸಿಟಿ ಯೋಜನೆ ಬೀರುವ ಪರಿಣಾಮ ಕುರಿತ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದ ಕೊಳಗೇರಿ ಕುಟುಂಬಗಳ ಎತ್ತಂಗಡಿ ಮಾಡುವ ಇಂತಹ ಜನರ ವಿರೋಧಿ ಯೋಜನೆಯಿಂದ ಕೊಳಗೇರಿ ನಿವಾಸಿಗಳ ಬದುಕು ಅತಂತ್ರವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಅವಳಿನಗರದ ಸುಮಾರು 992 ಎಕರೆ ಭೂಮಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಮಾರ್ಟ್‌ಸಿಟಿ 1.17 ಲಕ್ಷ ಜನ ಸಂಖ್ಯೆ ವಾಸಿಸುವುದನ್ನು ಒಳಗೊಂಡಿದೆ.
ಸುಮಾರು 32405 ಕುಟುಂಬಗಳು ಸ್ಮಾರ್ಟ್‌ಸಿಟಿಯಲ್ಲಿ ವಾಸಿಸುತ್ತವೆ ಎಂದು ಅಂಕಿಸಂಖ್ಯೆ ನೀಡಿದ್ದು, ಇದರಲ್ಲಿ ಕೊಳಗೇರಿ ನಿವಾಸಿಗಳ ಪಾಲೇನೆಂಬುವುದನ್ನು ತಿಳಿಸದೆ ಕೊಳಗೇರಿ ಜನರ ಭೂಮಿಯಲ್ಲಿ ಬಂಡವಾಳ ಶಾಹಿಗಳಿಂದ ದೊಡ್ಡ ದೊಡ್ಡ ಕೈಗಾರಿಕ ಕೇಂದ್ರಗಳ ಸ್ಥಾಪನೆ ಮಾಡಲು ಹೊರಟಿದ್ದಾರೆ ಎಂದು ದೂರಿದರು.
ಮಹಿಳಾ ಸಮಿತಿ ಸಂಚಾಲಕಿ ಶೋಭಾ ಕಮತರ ಮಾತನಾಡಿ, ಬಂಡವಾಳ ಶಾಹಿಗಳ ಪರವಾಗಿರುವ ಸರ್ಕಾರಗಳ ವಿರುದ್ಧ ಕೊಳಗೇರಿ ನಿವಾಸಿಗಳು ಜಾಗೃತರಾಗಿ ಹೋರಾಟ ಮಾಡಬೇಕು ಎಂದರು. ಸ್ಲಂ ಜನಾಂದೋಲನಾ ಕರ್ನಾಟಕ ಧಾರವಾಡ ಜಿಲ್ಲಾ ಸಂಚಾಲಕ ರಸೂಲ್ ಎಮ್. ನದಾಫ್ ಮಾತನಾಡಿದರು.
ಸ್ಲಂ ಜನಾಂದೋಲನಾ ಕರ್ನಾಟಕ ಹುಬ್ಬಳ್ಳಿ ತಾಲೂಕಾಧ್ಯಕ್ಷ ಗ್ರೇಸ್ಸಾ ಸಿಂಪಿಗೇರ, ಧಾರವಾಡ ಸ್ಲಂ ಸಮಿತಿ ಸಲಹೆಗಾರ ಷಣ್ಮುಖಪ್ಪ ಬಡಿಗೇರ ಇದ್ದರು. ಮಾರುತಿ ಶಿರೋಳ ನಿರೂಪಿಸಿದರು. ವಿನೋದ ಪೈಲವಾನವಾಲೆ ಸ್ವಾಗತಿಸಿದರು. ಮುಸ್ತಾಕ ರಿತ್ತಿ, ಬಸವರಾಜ ಬೆಳ್ಳಿಗಟ್ಟಿಮಠ, ದುರ್ಗವ್ವ ದುರ್ಗಮುರ್ಗಿ, ಸೈನಾಜ ದಫೆದಾರ, ವಿಲಾಸ ಗೋಸಾವಿ ಇದ್ದರು.