Advertisement

ಸ್ಮಾರ್ಟ್‌ಸಿಟಿ ದಿಕ್ಕು-ದೆಸೆ ಪರಿಶೀಲನೆ

09:00 AM Jun 10, 2019 | Team Udayavani |

ಹುಬ್ಬಳ್ಳಿ: ಅವಳಿ ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನ ಕುರಿತಾಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅಧಿಕಾರಿಗಳ ಜತೆ ರವಿವಾರ ಚರ್ಚಿಸಿ, ಮಾಹಿತಿ ಪಡೆದರು.

Advertisement

ಸ್ಮಾರ್ಟ್‌ ಸಿಟಿ ಯೋಜನೆ ಮುಖ್ಯ ಎಂಜಿನಿಯರ್‌ ನಾರಾಯಣ ಇನ್ನಿತರ ಅಧಿಕಾರಿಗಳು ವಿವಿಧ ಯೋಜನೆಗಳ ಕುರಿತಾಗಿ ಮಾಹಿತಿ ನೀಡಿದರು. ಸ್ಮಾರ್ಟ್‌ ಸಿಟಿ ಯೋಜನೆಯಡಿ ಒಟ್ಟು 242.82 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿ ಪ್ರಗತಿಯಲ್ಲಿವೆ. ಅಂದಾಜು 3.16 ಕೋಟಿ ರೂ. ವೆಚ್ಚದ ಆರು ಕಾಮಗಾರಿಗಳು ಪೂರ್ಣಗೊಂಡಿವೆ.

ಅಂದಾಜು 266.44 ಕೋಟಿ ರೂ. ವೆಚ್ಚದ ಕಾಮಗಾರಿಗಳು ಟೆಂಡರ್‌ ಹಂತದಲ್ಲಿದ್ದರೆ, 77 ಕೋಟಿ ವೆಚ್ಚದ 5 ಯೋಜನೆಗಳು ಡಿಪಿಆರ್‌ ಹಂತದಲ್ಲಿವೆ ಎಂದರು.

ಮಳೆ ನೀರು ಕೊಯ್ಲು ಯೋಜನೆಯನ್ನು ಪಾಲಿಕೆ ಆವರಣ, ಲ್ಯಾಮಿಂಗ್ಟನ್‌ ಶಾಲೆ, ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿ ಅಂದಾಜು 34 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಕಾಮಗಾರಿ ಪೂರ್ಣಗೊಂಡಿದೆ. ಅದೇ ರೀತಿ ಚಿಟಗುಪ್ಪಿ ಆಸ್ಪತ್ರೆ, ಪಾಲಿಕೆ ಹಾಗೂ ಲ್ಯಾಮಿಂಗ್ಟನ್‌ ಬಾಲಕಿಯರ ಪ್ರೌಢಶಾಲೆಯಲ್ಲಿ ಸ್ಯಾನಿಟರಿ ಪ್ಯಾಡ್‌ ವಿತರಣೆ ಹಾಗೂ ವಿಲೇವಾರಿ ಯಂತ್ರ ಅಳವಡಿಸಲಾಗಿದೆ. ಒಂದು ಅಂಗವಿಕಲರಿಗೆ ಸೇರಿದಂತೆ ಒಟ್ಟು 7 ಕಡೆ ಇ-ಶೌಚಾಲಯ ಅಳವಡಿಸಲಾಗಿದೆ ಎಂದು ವಿವರಿಸಿದರು.

ದೇಶಮಟ್ಟದಲ್ಲಿ 28-ರಾಜ್ಯಕ್ಕೆ 5ನೇ ಸ್ಥಾನ | ಸಕಾಲಕ್ಕೆ ಆಗದ ಬಿಲ್-ಗುತ್ತಿಗೆದಾರರ ಹಿಂದೇಟು:

Advertisement

ಅವಳಿನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಇದಕ್ಕೆ ರಾಜ್ಯದಲ್ಲಿ ಸಮರ್ಥ ಆಡಳಿತ ಹಾಗೂ ನಾಯಕತ್ವ ಇಲ್ಲದಿರುವುದೇ ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನದಲ್ಲಿ ಅವಳಿನಗರ ದೇಶಮಟ್ಟದಲ್ಲಿ 28ನೇ ಹಾಗೂ ರಾಜ್ಯದಲ್ಲಿ ಏಳು ನಗರಗಳಲ್ಲಿ ಐದನೇ ಸ್ಥಾನದಲ್ಲಿದೆ. ಅವಳಿನಗರದಲ್ಲಿ ಯೋಜನೆ ನಿರೀಕ್ಷಿತ ವೇಗದಲ್ಲಿ ಅನುಷ್ಠಾನ ಆಗುತ್ತಿಲ್ಲ ಎಂಬುದು ಸ್ಪಷ್ಟ ಎಂದರು.

ಕೊಪ್ಪಿಕರ ರಸ್ತೆ, ದಾಜೀಬಾನಪೇಟೆ ರಸ್ತೆ ಹಾಗೂ ಸ್ಟೇಶನ್‌ ರಸ್ತೆಗಳ ಅಭಿವೃದ್ಧಿಗೆ ಯಾವುದೇ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಮಾಡಿದ ಕಾಮಗಾರಿಗೆ ಸಕಾಲಕ್ಕೆ ಬಿಲ್ ಆಗದಿರುವುದು ಗುತ್ತಿಗೆದಾರರು ಟೆಂಡರ್‌ಗೆ ಹಿಂದೇಟು ಹಾಕಲು ಕಾರಣವಾಗಿದೆ. ರಾಜ್ಯದಲ್ಲಿ ಸಮರ್ಥ ಸರಕಾರ-ಆಡಳಿತ ಇಲ್ಲದಿರುವುದೇ ಇದಕ್ಕೆ ಕಾರಣ. ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕರು, ಪಾಲಿಕೆ ಆಯುಕ್ತರು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಪೂರ್ಣಾವಧಿ ಅಧಿಕಾರಿಗಳು ಇಲ್ಲದಿರುವುದು ಇದಕ್ಕೆ ಕಾರಣವಾಗಿತ್ತು. ಇನ್ನಾದರೂ ರಾಜ್ಯ ಸರಕಾರ ಮುತುವರ್ಜಿ ವಹಿಸಿ ಕಾಮಗಾರಿಗಳ ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

15-16ರಂದು ಸ್ಥಳ ಭೇಟಿ: ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳ ಅನುಷ್ಠಾನ ಕುರಿತಾಗಿ ಜೂ. 15 ಇಲ್ಲವೆ 16ರಂದು ಸ್ಥಳ ಪರಿಶೀಲನೆ ನಡೆಸುವುದಾಗಿ ಶೆಟ್ಟರ ತಿಳಿಸಿದರು. ಉಣಕಲ್ಲ ಕೆರೆ ವಿಚಾರದಲ್ಲಿ ಜಲಾನಯನ ಪ್ರದೇಶ ಇಲ್ಲವಾಗುತ್ತಿದೆ ಎಂಬುದನ್ನು ಮನಗಂಡು, ಈ ಹಿಂದೆ ತಾವು ಸುಮಾರು 500 ಎಕರೆಯಷ್ಟು ಭೂಮಿಯನ್ನು ಹಸಿರು ವಲಯ ಎಂದು ಘೋಷಿಸಿ ಉಳಿಸುವ ಯತ್ನ ಮಾಡಿದ್ದೇನೆ. ಕೆಲವರು ಅದನ್ನು ನಿವೇಶನಗಳಾಗಿ ಪರಿವರ್ತಿಸುವ ಯತ್ನಕ್ಕೆ ಮುಂದಾಗಿದ್ದರಾದರೂ ಅದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದೇನೆ ಎಂದರು.

ಬಿಜೆಪಿ ಮುಖಂಡರಾದ ಮಹೇಶ ಬುರ್ಲಿ, ರವಿ ನಾಯಕ ಇನ್ನಿತರರಿದ್ದರು.

ನಿರೀಕ್ಷಿತ ವೇಗದಲ್ಲಿಲ್ಲ ಸ್ಮಾರ್ಟ್‌ಸಿಟಿ ಕಾಮಗಾರಿ:

ಸಂಪುಟ ವಿಸ್ತರಿಸಿದರೂ ಅಸಮಾಧಾನ ತಪ್ಪದು: ಶೆಟ್ಟರ

ರಾಜ್ಯ ಸಮ್ಮಿಶ್ರ ಸರಕಾರ ಸಂಪುಟ ವಿಸ್ತರಣೆ ಮಾಡಿ ಇಬ್ಬರು-ಮೂವರಿಗೆ ಸಚಿವರಾಗುವ ಅವಕಾಶ ನೀಡಿದರೂ ಕಾಂಗ್ರೆಸ್‌-ಜೆಡಿಎಸ್‌ನ ಅಸಮಾಧಾನ ಶಮನವಾಗದು, ಸಮ್ಮಿಶ್ರ ಸರಕಾರ ಅಸ್ಥಿರತೆ ಮುಂದುವರಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದರು. ಸಂಪುಟ ವಿಸ್ತರಣೆ ನಂತರ ಸಮ್ಮಿಶ್ರ ಸರಕಾರದ ಮಿತ್ರ ಪಕ್ಷಗಳ ಶಾಸಕರ ಅಸಮಾಧಾನ ಇನ್ನಷ್ಟು ಸ್ಫೋಟಗೊಳ್ಳಲಿದೆ. ಜನರಿಗೆ ತೀವ್ರ ಬೇಸರ ತರಿಸುವಷ್ಟರ ಮಟ್ಟಿಗೆ ಸಮ್ಮಿಶ್ರ ಸರಕಾರ ನಿಷ್ಕ್ರಿಯಗೊಂಡಿದೆ ಎಂದರು. ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ಧವಿದೆ. ಲೋಕಸಭೆ ಚುನಾವಣೆಯಲ್ಲಿ ಸುಮಾರು 171 ವಿಧಾನಭೆ ಕ್ಷೇತ್ರಗಳಲ್ಲಿ ಬಿಜೆಪಿ ಲೀಡ್‌ ಪಡೆದಿದ್ದು, ಈಗ ಚುನಾವಣೆ ನಡೆದರೆ ಕನಿಷ್ಠ 150 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಆದರೆ, ಮಧ್ಯಂತರ ಚುನಾವಣೆ ಯಾವುದೇ ಪಕ್ಷದ ಶಾಸಕರಿಗೂ ಬೇಡವಾಗಿದೆ. ಒಂದು ವೇಳೆ ಸಮ್ಮಿಶ್ರ ಸರಕಾರ ತಾನಾಗಿಯೇ ಪತನಗೊಂಡರೆ, 105 ಶಾಸಕರನ್ನು ಹೊಂದಿರುವ ಬಿಜೆಪಿ ಸರಕಾರ ರಚನೆ ಮಾಡಲಿದೆ ಎಂದು ಶೆಟ್ಟರ ತಿಳಿಸಿದರು.
ರಸ್ತೆ ಯೋಜನೆಗಳ ವಿವರ:

ರಸ್ತೆ ಯೋಜನೆಯಲ್ಲಿ ಪ್ಯಾಕೇಜ್‌ 5-6ರಲ್ಲಿ ಟೆಂಡರ್‌ ನೀಡಲಾಗಿದೆ. ಪ್ಯಾಕೇಜ್‌ 6ರಲ್ಲಿ ಅಂದಾಜು 3.15 ಕಿಮೀ ಉದ್ದದ ರಸ್ತೆಯನ್ನು ಕೋಟಿಲಿಂಗೇಶ್ವರ ನಗರ, ಡಾಲರ್ ಕಾಲೊನಿಗಳಲ್ಲಿ ಕೈಗೊಳ್ಳಲಾಗುತ್ತಿದೆ. ಪ್ಯಾಕೇಜ್‌ 5ರಲ್ಲಿ ರಾಮಲಿಂಗೇಶ್ವರ ನಗರ, ಕುಮಾರಪಾರ್ಕ್‌ ಸೇರಿದಂತೆ 3 ರಸ್ತೆಗಳನ್ನು ಕೈಗೊಳ್ಳಲಾಗುತ್ತದೆ. ಈಗಾಗಲೇ ಸಾಂಸ್ಕೃತಿಕ ಭವನದಲ್ಲಿ ಕಮಾಂಡ್‌ ಆ್ಯಂಡ್‌ ಕಂಟ್ರೋಲ್ ರೂಂ, ಸ್ಮಾರ್ಟ್‌ ಸಿಟಿ ಯೋಜನೆ ಕಚೇರಿ ಕಾಮಗಾರಿ ಆರಂಭಗೊಂಡಿದೆ. ಒಂದು ವಾರದಲ್ಲಿ ಕಮಾಂಡ್‌ ಆ್ಯಂಡ್‌ ಕಂಟ್ರೋಲ್ ರೂಂ ನಿರ್ವಹಣೆ ಏಜೆನ್ಸಿಗೆ ಟೆಂಡರ್‌ ಕರೆಯಲಾಗುವುದು ಎಂದು ಅಧಿಕಾರಿಗಳು ವಿವರಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next