Advertisement

ಸ್ಮಾರ್ಟ್‌ ಕಾಮಗಾರಿ ಸಿಟಿಯ ಅಲ್ಲಲ್ಲೇ ಬಾಕಿ

03:38 AM May 18, 2019 | Team Udayavani |

ಮಹಾನಗರ: ಕೇಂದ್ರ, ರಾಜ್ಯ ಸರಕಾರದ ಸಹಭಾಗಿತ್ವದ ‘ಸ್ಮಾರ್ಟ್‌ ಸಿಟಿ ಮಂಗಳೂರು’ ಯೋಜನೆ ಘೋಷಣೆಯಾಗಿ ವರ್ಷಗಳೇ ಸಂದರೂ ಕಾಮಗಾರಿ ಮಾತ್ರ ಇನ್ನೂ ಆಮೆ ನಡಿಗೆಯಲ್ಲಿದೆ. ಕೆಲವು ಕಾಮಗಾರಿ ಆರಂಭವಾಗಿದ್ದರೂ ಅದು ಅಲ್ಲಲ್ಲೇ ಬಾಕಿಯಾಗಿದೆ! ಒಳಚರಂಡಿ ಯೋಜನೆ, ಬಸ್‌ ಶೆಲ್ಟರ್‌ ಕಾಮಗಾರಿಯನ್ನು ಹೊರತು ಪಡಿಸಿ, ಸದ್ಯ ಯಾವುದೇ ಕಾಮಗಾರಿಯು ಸ್ಮಾರ್ಟ್‌ ಸಿಟಿ ಯೋಜನೆಯಡಿ ನಡೆಯುತ್ತಿಲ್ಲ.

Advertisement

ಈಗಾಗಲೇ ಆರಂಭವಾಗಿರುವ ಒಂದೆರಡು ಕಾಮಗಾರಿ ಅರ್ಧದಲ್ಲಿ ಬಾಕಿಯಾಗಿದ್ದರೆ, ಇನ್ನುಳಿದ ಬಹುತೇಕ ಕಾಮಗಾರಿಗಳು ಟೆಂಡರ್‌, ಒಪ್ಪಿಗೆಯ ಹಂತದಲ್ಲಿಯೇ ನಿಂತುಬಿಟ್ಟಿವೆ. ಹೀಗಾಗಿ, ಭಾರೀ ಹೇಳಿಕೆ, ಪ್ರಚಾರದಲ್ಲಿ ಘೋಷಣೆಯಾದ ಸ್ಮಾರ್ಟ್‌ಸಿಟಿ ಯೋಜನೆ ಎಲ್ಲಿದೆ? ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

ಸದ್ಯ ಬಸ್‌ ಶೆಲ್ಟರ್‌ ಕೆಲಸ ಅಲ್ಲಲ್ಲಿ ನಡೆಯುತ್ತಿದ್ದರೂ ಅದಕ್ಕೆ ಕೆಲವು ಕಡೆಗಳಲ್ಲಿ ಆಕ್ಷೇಪ ಮತ್ತೆ ಮುಂದುವರಿದಿದೆ. ಹೊಸ ಬಸ್‌ನಿಲ್ದಾಣ ಮಾಡುವ ಜಾಗ, ಅದರ ವಿನ್ಯಾಸದ ಬಗ್ಗೆ ಇನ್ನೂ ಚರ್ಚೆ, ಪ್ರಶ್ನೆ ಮುಗಿದಿಲ್ಲ. ಅದೇ ರೀತಿ, ಕ್ಲಾಕ್‌ಟವರ್‌ನಿಂದ ಎ.ಬಿ. ಶೆಟ್ಟಿ ವೃತ್ತದವರೆಗೆ ಸ್ಮಾರ್ಟ್‌ರೋಡ್‌ ನಿರ್ಮಾಣಕ್ಕೆ ಒಮ್ಮೆ ಸ್ವಲ್ಪ ಕಾಮಗಾರಿ ಆರಂಭಿಸಿದರೂ ಅನಂತರ ‘ಡಿಸೈನ್‌ನಲ್ಲಿ ವ್ಯತ್ಯಾಸ’ ಎಂಬ ನೆಪದಿಂದ ಅದು ಕೂಡ ಸ್ಥಗಿತವಾಗಿದೆ.

ನೂತನ ಕ್ಲಾಕ್‌ ಟವರ್‌ ಕಾಮಗಾರಿ ನಡೆಯುತ್ತಿದ್ದರೂ ಅದು ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಸ್ಮಾರ್ಟ್‌ ರೋಡ್‌ ಯೋಜನೆಯ ವಿನ್ಯಾಸ ಬದಲಾಗುವ ಕಾರಣದಿಂದ ಕ್ಲಾಕ್‌ ಟವರ್‌ ಕಾಮಗಾರಿ ತಡವಾಗಿದೆ ಎಂಬುದು ಸದ್ಯದ ಮಾಹಿತಿ. ಇನ್ನು, ಎ.ಬಿ. ಶೆಟ್ಟಿ ವೃತ್ತ-ಹ್ಯಾಮಿಲ್ಟರ್‌ ಸರ್ಕಲ್-ರಾವ್‌ ಆ್ಯಂಡ್‌ ರಾವ್‌ ಸರ್ಕಲ್-ಕ್ಲಾಕ್‌ ಟವರ್‌ ನಡುವೆ ಸ್ಮಾರ್ಟ್‌ ರೋಡ್‌ ರಸ್ತೆ ಯೋಜನೆಯು ಕೂಡ ಕಾಗದ ಹಂತದಲ್ಲಿಯೇ ಇದೆ.

ಕಮಾಂಡ್‌ ಕಂಟ್ರೋಲ್ ಸೆಂಟರ್‌, ಸರಕಾರಿ ಕಚೇರಿಗಳಿಗೆ ಸೋಲಾರ್‌ ಅಳವಡಿಕೆ, ಸರಕಾರಿ ಶಾಲೆಗಳಿಗೆ ಸ್ಮಾರ್ಟ್‌ ಭಾಗ್ಯ, ಮಲ್ಟಿ ಲೆವೆಲ್ ಕಾರ್‌ ಪಾರ್ಕಿಂಗ್‌, ಪಡೀಲ್ನಲ್ಲಿ ಬಸ್‌ ನಿಲ್ದಾಣ ಸೇರಿದಂತೆ ವಿವಿಧ ಮಹತ್ವದ ಯೋಜನೆಗಳು ಇನ್ನೂ ಕೂಡ ಆರಂಭವಾಗಿಲ್ಲ. ಜತೆಗೆ, ಸಚಿವ ಯು.ಟಿ. ಖಾದರ್‌ ಅವರ ಸೂಚನೆ ಮೇರೆಗೆ ಉದ್ದೇಶಿಸಲಾಗಿರುವ ಜಪ್ಪಿನಮೊಗರು – ಮೋರ್ಗನ್‌ಗೇಟ್ ಹೊಸ ರಸ್ತೆ, ಮಂಗಳಾ ಸ್ಟೇಡಿಯಂ ಅಭಿವೃದ್ಧಿ ಸಹಿತ ಹಲವು ಯೋಜನೆಗಳು ಸದ್ಯ ಮಾತುಕತೆಯಲ್ಲಿಯೇ ಇದೆ.

Advertisement

ಆದರೆ ಕಾಮಗಾರಿ ಯಾವುದೇ ಕಾರಣಕ್ಕೂ ನಿಧಾನವಾಗಿಲ್ಲ ಎಂದು ಸ್ಮಾರ್ಟ್‌ಸಿಟಿ ಅಧಿಕಾರಿಗಳು ವಾದಿಸುತ್ತಿದ್ದಾರೆ. ಈಗಾಗಲೇ ಸ್ಮಾರ್ಟ್‌ಸಿಟಿ ಸಮಿತಿ ಸಭೆಯಲ್ಲಿ ಒಪ್ಪಿಗೆ ದೊರೆತು ಮಂಜೂರಾತಿ ಪಡೆದ ಒಳಚರಂಡಿ, ಬಸ್‌ ಶೆಲ್ಟರ್‌ ಕೆಲಸಗಳು ಈಗಾಗಲೇ ನಡೆಯುತ್ತಿವೆ. ಆದರೆ ಈ ಎರಡೂ ಯೋಜನೆ ಅನುಷ್ಠಾನ ಹಂತದಲ್ಲಿ ಸಾರ್ವಜನಿಕರಿಂದ ಬರುವ ಎಲ್ಲ ರೀತಿಯ ಸಲಹೆ- ಸೂಚನೆಗಳನ್ನು ಪರಿಶೀಲಿಸಿ ಅದಕ್ಕೆ ಪೂರಕವಾಗಿಯೇ ಕೆಲಸ ಮಾಡಲಾಗುತ್ತಿದೆ. ಇತರ ಯೋಜನೆಗಳ ರೀತಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿ ನಡೆಸುವಂತಿಲ್ಲ; ಯಾಕೆಂದರೆ, ಈ ಯೋಜನೆ ಶಾಶ್ವತ ಯೋಜನೆಯಾಗಿ ಮಂಗಳೂರಿನ ಹೆಗ್ಗುರುತಾಗಿ ನಿಲ್ಲಬೇಕಿದೆ. ಅದಕ್ಕಾಗಿ ಎಲ್ಲ ರೀತಿಯ ಅಭಿಪ್ರಾಯ, ತಜ್ಞರ ಸಲಹೆಗಳನ್ನು ಪಡೆದು ಕೆಲಸ ಮಾಡುತ್ತಿರುವಾಗ ಸ್ವಲ್ಪ ತಡವಾಗಿರಬಹುದು ಎನ್ನುವುದು ಸ್ಮಾರ್ಟ್‌ ಸಿಟಿ ಕಂಪೆನಿಯ ವಾದ.

ಒಳಚರಂಡಿ ಕಾಮಗಾರಿ ಸದ್ಯ ಹೊಗೆಬಜಾರ್‌, ಬಂದರ್‌ ವ್ಯಾಪ್ತಿಯಲ್ಲಿ ನಡೆಯುತ್ತಿದ್ದರೂ ಇದಕ್ಕೆ ಕೆಲವರಿಂದ ಆಕ್ಷೇಪವೂ ವ್ಯಕ್ತವಾಗಿದೆ. ಮುಖ್ಯ ಲೈನ್‌ ಹಾಕಿದ್ದರೂ ಹಳೆಯ ಲೈನ್‌ನ ಲಿಂಕ್‌ ಇನ್ನೂ ಕೂಡ ಹೊಸ ಲೈನ್‌ಗೆ ಯಾಕೆ ನೀಡಿಲ್ಲ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಈಗಾಗಲೇ ಈ ವ್ಯಾಪ್ತಿಯಲ್ಲಿ 12 ಇಂಚು ವ್ಯಾಸದ ಒಳಚರಂಡಿ ಪೈಪ್‌ಲೈನ್‌ ಇದ್ದಾಗಲೇ, ಸ್ಮಾರ್ಟ್‌ಸಿಟಿ ಯೋಜನೆಯಡಿ ಕೇವಲ 8 ಇಂಚು ವ್ಯಾಸದ ಒಳಚರಂಡಿ ಪೈಪ್‌ಲೈನ್‌ ಅಳವಡಿಸಿದ್ದಕ್ಕೆ ಸ್ಥಳೀಯರು ಆಕ್ಷೇಪವೆತ್ತಿದ್ದಾರೆ. ಆದರೆ, ಆ ಭಾಗದ ಸಾಮರ್ಥ್ಯವನ್ನು ಪರಿಗಣಿಸಿ, ನಿಯಮದ ಪ್ರಕಾರವೇ ಇಂತಹ ಪೈಪ್‌ಲೈನ್‌ ಅಳವಡಿಕೆ ನಡೆಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಒಳಚರಂಡಿ ಪೈಪ್‌ಲೈನ್‌; ಆಕ್ಷೇಪ
ಒಳಚರಂಡಿ ಕಾಮಗಾರಿ ಸದ್ಯ ಹೊಗೆಬಜಾರ್‌, ಬಂದರ್‌ ವ್ಯಾಪ್ತಿಯಲ್ಲಿ ನಡೆಯುತ್ತಿದ್ದರೂ ಇದಕ್ಕೆ ಕೆಲವರಿಂದ ಆಕ್ಷೇಪವೂ ವ್ಯಕ್ತವಾಗಿದೆ. ಮುಖ್ಯ ಲೈನ್‌ ಹಾಕಿದ್ದರೂ ಹಳೆಯ ಲೈನ್‌ನ ಲಿಂಕ್‌ ಇನ್ನೂ ಕೂಡ ಹೊಸ ಲೈನ್‌ಗೆ ಯಾಕೆ ನೀಡಿಲ್ಲ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಈಗಾಗಲೇ ಈ ವ್ಯಾಪ್ತಿಯಲ್ಲಿ 12 ಇಂಚು ವ್ಯಾಸದ ಒಳಚರಂಡಿ ಪೈಪ್‌ಲೈನ್‌ ಇದ್ದಾಗಲೇ, ಸ್ಮಾರ್ಟ್‌ಸಿಟಿ ಯೋಜನೆಯಡಿ ಕೇವಲ 8 ಇಂಚು ವ್ಯಾಸದ ಒಳಚರಂಡಿ ಪೈಪ್‌ಲೈನ್‌ ಅಳವಡಿಸಿದ್ದಕ್ಕೆ ಸ್ಥಳೀಯರು ಆಕ್ಷೇಪವೆತ್ತಿದ್ದಾರೆ. ಆದರೆ, ಆ ಭಾಗದ ಸಾಮರ್ಥ್ಯವನ್ನು ಪರಿಗಣಿಸಿ, ನಿಯಮದ ಪ್ರಕಾರವೇ ಇಂತಹ ಪೈಪ್‌ಲೈನ್‌ ಅಳವಡಿಕೆ ನಡೆಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಮಳೆಗಾಲದ ಬಳಿಕ ಮಹತ್ವದ ಕಾಮಗಾರಿ
ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಳ್ಳುವ ಎಲ್ಲ ಕೆಲಸಗಳು ನಗರದ ಚೆಲುವಿಗೆ ಮಹತ್ವದ ಅಂಶವಾಗಿರುವುದರಿಂದ ಕಾಮಗಾರಿ ಆದ ಬಳಿಕ ಎಲ್ಲಿಯೂ ಲೋಪವಾಗದಂತೆ ಎಚ್ಚರಿಕೆ ವಹಿಸಲು ಪ್ರತೀ ಹಂತದಲ್ಲಿಯು ಸಾರ್ವಜನಿಕರ ಅಭಿಪ್ರಾಯಗಳಿಗೆ ಒತ್ತು ನೀಡಲಾಗಿದೆ. ಆಕ್ಷೇಪ, ಸಮಸ್ಯೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಿರುವುದರಿಂದ ಸ್ವಲ್ಪ ನಿಧಾನವಾಗಿದೆ. ಸ್ಮಾರ್ಟ್‌ಸಿಟಿ ಸಮಿತಿಯು ಎಲ್ಲ ಕಾಮಗಾರಿಗಳನ್ನು ವಿಶೇಷ ನೆಲೆಯಲ್ಲಿ ತೆಗೆದುಕೊಂಡಿದೆ. ಮಳೆಗಾಲದ ಬಳಿಕ ಮಹತ್ವದ ಕಾಮಗಾರಿಗಳು ಆರಂಭವಾಗಲಿವೆ.
– ನಾರಾಯಣಪ್ಪ, ಸ್ಮಾರ್ಟ್‌ಸಿಟಿ ಆಡಳಿತ ನಿರ್ದೇಶಕರು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next