Advertisement

ಯೋಗದ ಮೂಲಕ “ಸ್ಮಾರ್ಟ್‌ ಉಡುಪಿ’: ರಾಮದೇವ್‌ ಪ್ರಸ್ತಾವ

09:39 AM Nov 22, 2019 | Team Udayavani |

ಉಡುಪಿ: ಕಳೆದೈದು ದಿನಗಳಿಂದ ಉಡುಪಿ ಶ್ರೀಕೃಷ್ಣಮಠದ ಪಾರ್ಕಿಂಗ್‌ ಪ್ರದೇಶದಲ್ಲಿ ಯೋಗ ಶಿಬಿರ ನಡೆಸಿಕೊಟ್ಟ ಯೋಗಗುರು ಬಾಬಾ ರಾಮದೇವ್‌ ಅವರು ಉಡುಪಿ ಜನರಿಗೆ ಯೋಗ ನಶೆಯ ರುಚಿ ಕಲಿಸಿದರಲ್ಲದೆ ಯೋಗದ ಮೂಲಕ “ಸ್ಮಾರ್ಟ್‌ ಉಡುಪಿ’ ಪ್ರಸ್ತಾವವನ್ನೂ ಮಾಡಿದರು.

Advertisement

ಶನಿವಾರ ಆರಂಭಗೊಂಡ ಶಿಬಿರದಲ್ಲಿ ಪ್ರತಿನಿತ್ಯವೂ ಬೆಳ್ಳಂಬೆಳಗ್ಗೆ ದೂರದೂರುಗಳಿಂದ ಮಹಿಳೆಯರು, ಮಕ್ಕಳು, ಯುವಕರು, ಹಿರಿಯ ನಾಗರಿಕರಾದಿ ಎಲ್ಲ ವಯೋಮಾನದವರನ್ನು ಆಕರ್ಷಿಸಿದ್ದು ಬಾಬಾ ರಾಮದೇವ್‌ ಅವರ ಮೋಡಿಯಾಗಿತ್ತು. ಇದೊಂದು ಐತಿಹಾಸಿಕ ಯೋಗ ಶಿಬಿರವಾಗಿದೆ ಎಂದು ರಾಮದೇವ್‌ ಕೊನೆಯ ದಿನವಾದ ಬುಧವಾರ ಘೋಷಿಸಿದರು.

ಯೋಗದ ಮೂಲಕ ಭಗವಂತನ ಸಂಪೂರ್ಣ ಅನುಭೂತಿ ಪಡೆಯಲು ಸಾಧ್ಯ. “ಹೇ ಭಗವಂತ, ನಿನ್ನ ಹೆಸರಿಗೇ ಅತ್ಯದ್ಭುತವಾದ ಶಕ್ತಿ ಇದೆ’ ಎಂಬ ಮೂಲಕ ಶರಣಾಗತರಾದರೆ ಭಗವಂತನ ಅನುಭೂತಿ ಸಿಗುತ್ತದೆ. ಭಕ್ತಿಪೂರ್ವಕ ಯೋಗವನ್ನು ಮಾಡಿದರೆ ನಿರಾಶೆ, ಒತ್ತಡ, ದುಃಖ ದುಮ್ಮಾನಗಳನ್ನು ಕಣ್ಮರೆಯಾಗಿ ವ್ಯಾಧಿಮುಕ್ತ, ಸಮಾಧಿಯುಕ್ತ ಯೋಗ ದೊರಕುತ್ತದೆ ಎಂದು ರಾಮದೇವ್‌ ಹೇಳಿದರು.

ನಮ್ಮ ಎಲ್ಲ ಮುಸ್ಲಿಮರಿಗೆ ಪೂರ್ವಜ ರಾಮಚಂದ್ರ. ರಾಮರಾಜ್ಯ ಸ್ಥಾಪನೆಯಾಗಬೇಕೆಂದರೆ ಅದು ಪವಿತ್ರ ಚರಿತ್ರೆಯ ಪುನಃಸ್ಥಾಪನೆಯಾಗಬೇಕು. ಧರ್ಮ ನಮ್ಮ ಆಚರಣೆಯಲ್ಲಿ ರೂಪುಗೊಳ್ಳಬೇಕು. ಒಂದು ದೇಶ, ಒಂದು ಸಂವಿಧಾನವೆಂಬಂತೆ ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು. ನಾನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರಿಗೆ ವೇದ ಕಲಿಸುತ್ತಿದ್ದೇನೆ. ನಾನು ಯಾವುದೇ ಜಾತಿ ತಾರತಮ್ಯ ಮಾಡುತ್ತಿಲ್ಲ. ಎಲ್ಲರಿಗೂ ಯೋಗಾಭ್ಯಾಸ ಅತ್ಯವಶ್ಯ ಎಂದು ರಾಮದೇವ್‌ ಹೇಳಿದರು.

ಬೆಂಗಳೂರಿನ ಯಾದವ ಪೀಠದ ಶ್ರೀಯಾದವಾನಂದ ಸ್ವಾಮೀಜಿಯವರು ಪಾಲ್ಗೊಂಡು ರಾಮದೇವ್‌ ಮತ್ತು ಪಲಿಮಾರು ಸ್ವಾಮೀಜಿಯವರನ್ನು ಗೌರವಿಸಿ ರಾಮದೇವ್‌ ಅವರು ಯೋಗವನ್ನು ಬಿತ್ತರಿಸುವ ತ್ಯಾಗಿ ಎಂದು ಬಣ್ಣಿಸಿದರು. ರಾಮದೇವ್‌ ಅವರು ಕೆಲವು ಯೋಗಾಸನಗಳನ್ನು ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರಿಂದಲೂ ಮಾಡಿಸಿ ಚಿಕ್ಕ ಪ್ರಾಯವಾದ ಕಾರಣ ಯೋಗಾಸನಗಳನ್ನು ಅಭ್ಯಾಸ ಮಾಡಬೇಕೆಂದು ಆಶಿಸಿದರು.

Advertisement

ಶ್ರೀಕೃಷ್ಣಮಠದಿಂದ ರಾಮದೇವ್‌ ಅವರನ್ನು ಸಮ್ಮಾನಿಸಲಾಯಿತು.

ದೈನಂದಿನ ಯೋಗ ಚಟುವಟಿಕೆಗಳನ್ನು ಪರ್ಯಾಯ ಶ್ರೀಪಲಿಮಾರು ಮಠದ ದಿವಾನ್‌ ವೇದವ್ಯಾಸ ತಂತ್ರಿ ಉದ್ಘಾಟಿಸಿದರು. ರಾಜ್ಯ ಆಯುರ್ವೇದ ವೈದ್ಯರ ಸಂಘಟನೆಯ ಡಾ|ಅಶೋಕಕುಮಾರ್‌, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌, ಉದ್ಯಮಿಗಳಾದ ರಂಜನ್‌ ಕಲ್ಕೂರ, ತಲ್ಲೂರು ಶಿವರಾಮ ಶೆಟ್ಟಿ, ಮನೋಹರ ಶೆಟ್ಟಿ, ಶ್ರೀಕೃಷ್ಣಮಠದ ಆಡಳಿತಾಧಿಕಾರಿ ಪ್ರಹ್ಲಾದ ರಾವ್‌, ಪತಂಜಲಿ ಸಮಿತಿ ರಾಜ್ಯ ಪ್ರಭಾರಿ ಬವರ್‌ಲಾಲ್‌ ಆರ್ಯ, ಜಿಲ್ಲಾ ಸಂರಕ್ಷಕ ಬಾಲಾಜಿ ರಾಘವೇಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಆಗಮಿಸಿ ಯೋಗಾಸನಗಳನ್ನು ಅಭ್ಯಾಸ ಮಾಡಿದರು.

ಎಲ್ಲ ಜೀವಿಗಳಿಗೂ ಬದುಕುವ ಹಕ್ಕು ಇದೆ
ಜ್ಞಾನಯೋಗ, ಕ್ರಿಯಾಯೋಗ, ಭಕ್ತಿ ಯೋಗದ ಮೂಲಕ ಕರ್ಮಯೋಗಿಯಾಗಿ ಪುರುಷಾರ್ಥ ಸಿದ್ಧಿಸಿಕೊಳ್ಳಬೇಕು. ಪ್ರಗತಿ ಎಂದರೇನು? ಸಮ್ಯಕ್‌ ಮತಿಯಿಂದ ಪ್ರಕೃತಿಯನ್ನು ಕಾಪಾಡುವುದೇ ಪ್ರಗತಿ. ಸಸ್ಯಾಹಾರವೇ ಸಂಪೂರ್ಣ ನಿರ್ದೋಷ ಆಹಾರ ಪದ್ಧತಿಯಾಗಿದೆ. ಎಲ್ಲ ಜೀವಿಗಳಿಗೂ ಬದುಕುವ ಹಕ್ಕು ಇದೆ. ಆದ್ದರಿಂದ ಪ್ರಾಣಿಗಳನ್ನು ಆಹಾರವಾಗಿ ಸ್ವೀಕರಿಸುವುದು ಸರಿಯಲ್ಲ. ಒಂದು ವೇಳೆ ಅವುಗಳಿಗೂ ಮತದಾನದ ಹಕ್ಕು ಇದ್ದರೆ, ಎಫ್ಐಆರ್‌ ದಾಖಲಿಸಿ ಧರಣಿ ನಡೆಸುವ ಸಾಧ್ಯತೆ ಇದ್ದರೆ ಹೇಗಿರುತ್ತದೆ ಸ್ಥಿತಿ? ಗೋಹತ್ಯೆ ನಿಷೇಧ ಆಗಲೇಬೇಕು ಎಂದು ರಾಮದೇವ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next