Advertisement

ಲ್ಯಾಮಿಂಗ್ಟನ್‌ ಶಾಲೆಯಲ್ಲಿ ಸ್ಮಾರ್ಟ್‌ ಬೋಧನೆ

10:54 AM Dec 04, 2019 | Suhan S |

ಹುಬ್ಬಳ್ಳಿ: ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಸರಕಾರಿ ಪ್ರೌಢಶಾಲೆಯೊಂದು ಅತ್ಯಾಧುನಿಕ 3ಡಿ ತಂತ್ರಜ್ಞಾನ ಹೊಂದಿದ ಶಾಲೆಯೆಂಬ ಕೀರ್ತಿಯನ್ನು ಲ್ಯಾಮಿಂಗ್ಟನ್‌ ಪ್ರೌಢಶಾಲೆ ಹೊಂದಿದೆ.

Advertisement

ಶೀಘ್ರವೇ ಇದು ಕಾರ್ಯಾರಂಭಗೊಳ್ಳಲಿದ್ದು, ಸ್ಮಾರ್ಟ್‌ ಸಿಟಿ ಯೋಜನೆಯ ಸ್ಮಾರ್ಟ್‌ ಶಾಲೆ ಯೋಜನೆಗೂ ಇದು ನಾಮನಿರ್ದೇಶನಗೊಂಡಿದೆ. ಯುರೋಪ್‌ ದೇಶಗಳ ಶಾಲೆಗಳಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಬಳಸಲಾಗುತ್ತಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಶತಮಾನದಷ್ಟು ಹಳೆಯದಾದ ಇಲ್ಲಿನ ಸರ್‌ ಸಿದ್ದಪ್ಪ ಕಂಬಳಿ ಮಾರ್ಗದ ಲ್ಯಾಮಿಂಗ್ಟನ್‌ ಬಾಲಕಬಾಲಕಿಯರ ಪ್ರೌಢಶಾಲೆಯಲ್ಲಿ 3ಡಿ ಸ್ಮಾರ್ಟ್‌ ಸ್ಟುಡಿಯೋ ಮತ್ತು ಸ್ಮಾರ್ಟ್‌ ಲ್ಯಾಬ್‌ ನಿರ್ಮಿಸಲಾಗಿದ್ದು, ವಾರದೊಳಗೆ ಕಾರ್ಯಾರಂಭಗೊಳ್ಳಲಿದೆ. ಹುಧಾ ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಂದಾಜು 1.17 ಕೋಟಿ ರೂ. ವೆಚ್ಚದಲ್ಲಿ ದುಬಾರಿ ತಂತ್ರಜ್ಞಾನ ಬಳಸಿಕೊಂಡು ಬಾಲಕರಿಗಾಗಿ ಸ್ಮಾರ್ಟ್‌ ಸ್ಟುಡಿಯೋ ಹಾಗೂ ಬಾಲಕಿಯರಿಗಾಗಿ ಸ್ಮಾರ್ಟ್‌ ಲ್ಯಾಬ್‌ನ್ನು ಪ್ರತ್ಯೇಕವಾಗಿ ಸ್ಥಾಪಿಸಲಾಗಿದೆ.ಇಲ್ಲಿ ಹೊಸ ತಂತ್ರಜ್ಞಾನ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಹೇಳಲಾಗುತ್ತದೆ. ವಿದ್ಯಾರ್ಥಿಗಳು ಪಠ್ಯ, ಡೈಗ್ರಾಮ್‌ ನೊಂದಿಗೆ ವಿಡಿಯೋ ನೋಡುತ್ತ ಅಧ್ಯಯನ ಕೈಗೊಳ್ಳಬಹುದಾಗಿದೆ.

ಸ್ಮಾರ್ಟ್‌ ಸ್ಟುಡಿಯೋಲ್ಯಾಬ್‌ನಲ್ಲಿ ಏನೇನುಂಟು? : ಲ್ಯಾಪ್‌ಟಾಪ್‌, ಸ್ಮಾರ್ಟ್‌ ಪ್ರೊಜೆಕ್ಟರ್‌, ಮೈಕ್ರೋಪೋನ್‌ ಹೊಂದಿದ ಸ್ಪೀಕರ್, ಹೆಡ್‌ಪೋನ್‌, ಇಂಟರ್ಯಾಕ್ಟ್ ಬೋರ್ಡ್‌, ಎಲ್‌ಇಡಿ ಪರದೆ, ಸೌಂಡ್‌ಸಿಸ್ಟಮ್‌ವುಳ್ಳ ಪೋಡಿಯಂ, ಆಡಿಯೋ ಸಿಸ್ಟಮ್‌

ಹೊಂದಿದ ಎಂಪ್ಲಿಪ್‌ವಾಯರ್‌, ಸ್ಮಾರ್ಟ್‌ ಪ್ರೊಜೆಕ್ಟರ್‌, ವರ್ಚುವಲ್‌ ಹೆಡ್‌ಗೇರ್ಸ್ ಗಳಿವೆ. ಪ್ರತಿ ಕ್ಲಾಸ್‌ನಲ್ಲಿ 20 ಲ್ಯಾಪ್‌ಟಾಪ್‌, ಹೆಡ್‌ಗೇರ್ಸ್, ಮೈಕ್ರೋಪೋನ್‌ ವುಳ್ಳ ಸ್ಪೀಕರ್, ಮೌಸ್‌, ಸರ್ವರ್‌ ಇವೆ. ಪ್ರತಿ ವಿದ್ಯಾರ್ಥಿಗಳು ಈ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಪಾಠ ಕಲಿಯಬಹುದು.

ಪಾಠ ಪ್ರವಚನ ನಡೆಯೋದು ಹೇಗೆ? : ಸ್ಮಾರ್ಟ್‌ ಸ್ಟುಡಿಯೋ ಮತ್ತು ಲ್ಯಾಬ್‌ನಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಅನುಮೋದಿಸಿದ ಪ್ರಕಾರ ಪಠ್ಯಕ್ರಮಗಳನ್ನು ಕಲಿಸುತ್ತಾರೆ. ಶಿಕ್ಷಕರು ಆನ್‌ಲೈನ್‌ ಮೂಲಕವು ವಿದ್ಯಾರ್ಥಿಗಳಿಗೆ ಪಾಠ ಮಾಡಬಹುದಾಗಿದೆ. ವಿದ್ಯಾರ್ಥಿಗಳು ವಿಡಿಯೋ ಚಿತ್ರಗಳನ್ನು ವರ್ಚುವಲ್‌ ಹೆಡ್‌ಗೇರ್ಸ್ ಮೂಲಕ 360 ಡಿಗ್ರಿ ಮೂವೇಬಲ್‌ 3ಡಿ ಇಮೇಜ್‌ ಮೂಲಕ ಅನುಭವವನ್ನು ಪಡೆಯಬಹುದಾಗಿದೆ. ಆ ವಿಷಯದ ಕುರಿತು ಮನನ ಮಾಡಿಕೊಳ್ಳಬಹುದಾಗಿದೆ. ಬಾಲಕರ ಶಾಲೆಯಲ್ಲಿ ಏಕಕಾಲಕ್ಕೆ 40 ವಿದ್ಯಾರ್ಥಿಗಳು ಹಾಗೂ ಬಾಲಕಿಯರ ಶಾಲೆಯಲ್ಲಿ 20 ವಿದ್ಯಾರ್ಥಿನಿಯರು ವಿಷಯವೊಂದರ ಕುರಿತು ಪಾಠ ಕೇಳಬಹುದಾಗಿದೆ. ಒಂದು ವೇಳೆ ವಿದ್ಯಾರ್ಥಿಯು ಕ್ಲಾಸ್‌ಗೆ ಬರಲು ಆಗದಿದ್ದರೆ ಸ್ಮಾರ್ಟ್‌ಪೋನ್‌ ಮೂಲಕ ಮನೆಯಲ್ಲಿಯೇ ಕುಳಿತು ಯುಆರ್‌

Advertisement

ಎಲ್‌, ಆ್ಯಪ್‌, ಸ್ಕೂಲ್‌ ಲಾಗಿನ್‌ ಬಳಸಿ ಪಾಠ ಕಲಿಯಬಹುದಾಗಿದೆ.

ನಿರ್ಮಿಸಿದ್ದು ಯಾರು? : ಲ್ಯಾಮಿಂಗ್ಟನ್‌ ಪ್ರೌಢಶಾಲೆಯಲ್ಲಿ ಸ್ಮಾರ್ಟ್‌ ಸ್ಟುಡಿಯೋ ಮತ್ತು ಸ್ಮಾರ್ಟ್‌ ಲ್ಯಾಬ್‌ಅನ್ನು ಬೆಂಗಳೂರಿನ 9ರಿಚ್‌ ಇನ್ಫೋಟೆಕ್‌ ಹಾಗೂ ಎಸ್‌ಎಚ್‌ಎಲ್‌ ಆರ್‌ ಟೆಕ್ನೋಸಾಫ್ಟ್‌ ಜಂಟಿಯಾಗಿ ನಿರ್ಮಿಸಿವೆ. ಈ ಕಂಪನಿಗಳು ಡಿಎಸ್‌ ಇಆರ್‌ಟಿ ಪಠ್ಯಕ್ರಮದಂತೆ 85 ವಿಡಿಯೋಗಳನ್ನು ಸಾಫ್ಟ್‌ವೇರ್‌ನಲ್ಲಿ ಸಿದ್ಧಪಡಿಸಿವೆ. ಈ ಕ್ಲಾಸ್‌ಗಳನ್ನು ಕಂಪನಿಗಳು ಐದು ವರ್ಷಗಳ ವರೆಗೆ ನಿರ್ವಹಣೆ ಮಾಡಲಿವೆ.

ಆರಂಭಿಕವಾಗಿ ವಿಜ್ಞಾನಕ್ಕೆ ಆದ್ಯತೆ! : ಸ್ಮಾರ್ಟ್‌ ಸ್ಟುಡಿಯೋ ಮತ್ತು ಸ್ಮಾರ್ಟ್‌ ಲ್ಯಾಬ್‌ನಲ್ಲಿ 8, 9 ಮತ್ತು

10ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಕಲಿಸಲಾಗುತ್ತದೆ. ಆರಂಭಿಕ ಹಂತವಾಗಿ ವಿಜ್ಞಾನ ವಿಷಯ ಕಲಿಸಲಾಗುತ್ತದೆ. ಪ್ರತಿ ಕ್ಲಾಸ್‌ಗೆ ಒಂದು ಅವಧಿ(ಪಿರಿಡ್‌)ಯಲ್ಲಿ 45 ನಿಮಿರ್ಷಗಳ ಪಾಠ ಮಾಡಲಾಗುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಬೋಧನೆಯ ತಾತ್ಕಾಲಿಕ ವೇಳಾಪಟ್ಟಿ ಕೂಡ ಸಿದ್ಧಗೊಂಡಿದೆ. ಈ ಕ್ಲಾಸ್‌ ಗಳಲ್ಲಿ ಕಲಿಸುವ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಮಾಹಿತಿಯು ಸಾಫ್‌ ವೇರ್‌ನಲ್ಲಿ ಅಳವಡಿಸಲಾಗಿರುತ್ತದೆ. ಯಾವ ಸಮಯದಲ್ಲಿ ಯಾವ ಶಿಕ್ಷಕರು ಯಾವ ಪಾಠ ಕಲಿಸಿದರು, ಎಷ್ಟು ವಿದ್ಯಾರ್ಥಿಗಳು ಕಲಿತರು ಎಂಬ ಮಾಹಿತಿ ಇರುತ್ತದೆ. ಜೊತೆಗೆ ವಿದ್ಯಾರ್ಥಿಗಳ ಮೇಲೆ ಗಮನ ಹರಿಸಲು ಸಿಸಿ ಕ್ಯಾಮರಾಗಳನ್ನೂ ಅಳವಡಿಸಲಾಗಿದೆ.

ಸ್ಮಾರ್ಟ್‌ಸಿಟಿ ಯೋಜನೆಯಡಿ ಶಾಲೆಯ ಎರಡು ರೂಮ್‌ಗಳನ್ನು ಸ್ಮಾರ್ಟ್‌ ಕ್ಲಾಸ್‌ ನಿರ್ಮಿಸಲು ಪಾಲಿಕೆಗೆ ನೀಡಲಾಗಿದೆ. ಇವುಗಳ ನಿರ್ಮಾಣವನ್ನು ಅವರು ತಮ್ಮ ವೆಚ್ಚದಲ್ಲಿಯೇ ಪೂರ್ಣಗೊಳಿಸಿದ್ದಾರೆ. ಅವರು ಯಾವಾಗ ಇವುಗಳನ್ನು ಉದ್ಘಾಟಿಸುತ್ತಾರೆ ನೋಡಬೇಕು. ಎಂ.ಬಿ. ನಾತು, ಲ್ಯಾಮಿಂಗ್ಟನ್‌ ಪ್ರೌಢಶಾಲೆ ಆಡಳಿತಾಧಿಕಾರಿ

 

ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next