Advertisement

ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟ್‌ ಫೋನ್‌

11:57 AM Sep 07, 2019 | Suhan S |

ಕೋಲಾರ: ಅಂಗನವಾಡಿ ಕೇಂದ್ರಗಳ ಮಕ್ಕಳ ದಾಖಲಾತಿ, ಹಾಜರಾತಿ, ವಿವರಗಳನ್ನು ಸುಲಲಿತವಾಗಿ ದಾಖಲಿಸಲು ಮುಂದಿನ ದಿನಗಳಲ್ಲಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಮೊಬೈಲ್ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.

Advertisement

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಬಾಲಭವನ ಸೊಸೈಟಿ ಹಮ್ಮಿಕೊಂಡಿದ್ದ ಅಭಿರಂಗ ಮಕ್ಕಳ ನಾಟಕೋತ್ಸವ ಹಾಗೂ ಜಿಲ್ಲಾ ಮಟ್ಟದ ಪೋಷಣೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅರಿವು ಕಾರ್ಯಕ್ರಮ: ಪೋಷಣೆ ಅಭಿಯಾನ ದೇಶದಲ್ಲಿ 2018-19ನೇ ಮಾ.8ರಂದು ಪ್ರಾರಂಭವಾಯಿತು. ಮೊದಲ ಹಂತದಲ್ಲಿ 315, 2ನೇ ಹಂತದಲ್ಲಿ 235, 3ನೇ ಹಂತದಲ್ಲಿ ಉಳಿದ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಅಭಿಯಾನವು ಒಂದೇ ಇಲಾಖೆಗೆ ಸೀಮಿತವಾಗಿಲ್ಲ. ಮಹಿಳೆ ಮತ್ತು ಮಕ್ಕಳ ಪೋಷಣಾ ಸಂಬಂಧಿತ ಸವಾಲುಗಳನ್ನು ಎದುರಿಸುತ್ತಿರುವವರಿಗೆ ಅರಿವನ್ನು ಮೂಡಿಸುವ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

ರಕ್ತಹೀನತೆ ತಡೆ: ಜಿಲ್ಲೆಯಲ್ಲಿ 2068 ಅಂಗನವಾಡಿ ಕೇಂದ್ರಗಳಿದ್ದು, 6 ತಿಂಗಳಿಂದ 6 ವರ್ಷದವರೆಗಿನ 95 ಸಾವಿರ ಮಕ್ಕಳು ಅಂಗನವಾಡಿ ಕೇಂದ್ರದಲ್ಲಿದ್ದಾರೆ. ಮಕ್ಕಳಲ್ಲಿನ ಕುಂಠಿತ ಬೆಳವಣಿಗೆ, ಅಪೌಷ್ಟಿಕತೆ, ರಕ್ತಹೀನತೆ ತಡೆಗಟ್ಟುವುದು, ಪೋಷಣ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ವಿವಿಧ ಚಟುವಟಿಕೆ: ಮಗು ಹುಟ್ಟಿನ ಪ್ರಾರಂಭಿಕ ಹಂತದಲ್ಲಿ ಆಹಾರ ಮತ್ತು ಪೌಷ್ಟಿಕಾಂಶಗಳನ್ನು ಹೆಚ್ಚಿಸುವುದು, ಸಾಂಸ್ಥಿಕ ಹೆರಿಗೆ, ನೀರು, ಆರೋಗ್ಯ ನೈರ್ಮಲ್ಯ ಮುಂತಾದವುಗಳನ್ನು ನೋಡಿಕೊಳ್ಳುವುದು ಮಕ್ಕಳಿಗೆ ಒಆರ್‌ಎಸ್‌ ಜಿಂಕ್‌ ನೀಡುವುದು ಹೀಗೆ ಶಿಕ್ಷಣ ಸಂವಹನದ ಮೂಲಕ ಸಮುದಾಯ ಆಧಾರಿತ ಚಟುವಟಿಕೆಗಳನ್ನು ರೂಪಿಸುವುದಾಗಿದೆ ಎಂದು ಹೇಳಿದರು

Advertisement

ಯಶಸ್ವಿಗೊಳಿಸಿ: 15 ರಿಂದ 45 ವಯಸ್ಸಿನ ಮಹಿಳೆಯರಿಗೆ ಮತ್ತು ಹದಿಹರೆಯದ ಹೆಣ್ಣು ಮಕ್ಕಳಿಗೆ ರಕ್ತಹೀನತೆಯ ಪ್ರಮಾಣವನ್ನು ಕಡಿಮೆಗೊಳಿಸುವುದು, ಕಡಿಮೆ ತೂಕದ ಜನನ ಪ್ರಮಾಣವನ್ನು ನಿಯಂತ್ರಿಸುವುದು, ರೋಟಾ ವೈರಸ್‌ ಲಸಿಕೆ ಹಾಕಿಸುವ ಮೂಲಕ ಅತಿಸಾರ ಭೇದಿ ತಡೆಗಟ್ಟುವುದು ಇದರ ಉದ್ದೇಶವಾಗಿದೆ. ಇದನ್ನು ಜಿಲ್ಲಾದ್ಯಂತ ಶುಶ್ರೂಕಿಯರು, ಅಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಒಟ್ಟಿಗೆ ಸೇರಿ ಪೋಷಣ ಅಭಿಯಾನ ಯಶಸ್ವಿಯಾಗಿ ನಡೆಸಬೇಕೆಂದು ತಿಳಿಸಿದರು.

ಸದುಪಯೋಗ ಪಡಿಸಿಕೊಳ್ಳಿ: ಜಿಪಂ ಸದಸ್ಯ ಅರವಿಂದ್‌ ಮಾತನಾಡಿ, ಸ್ವಾತಂತ್ರ್ಯಪೂರ್ವದಲ್ಲಿದ್ದ ದೇಶಕ್ಕೂ ಇಂದಿಗೂ ಹೋಲಿಸಿದರೆ ತುಂಬಾ ಅಭಿವೃದ್ಧಿ ಹೊಂದಿದೆ.

ಸರ್ಕಾರವು ವಿವಿಧ ಯೋಜನೆ ರೂಪಿಸುತ್ತಿದ್ದು, ಅದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು. ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ಪ್ರಜೆಗೂ ತಲುಪುವಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ: ಜಿಲ್ಲೆಯು ಬರ ಎದುರಿಸುತ್ತಿದ್ದು, ಈ ಪೋಷಣೆ ಅಭಿಯಾನವನ್ನು ಯಶಸ್ವಿಯಾಗಿ ರೂಪಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಆಹಾರ ಪದ್ಧತಿ ಬದಲಾ ಯಿಸುವ ಮೂಲಕ ಶಿಶು ಮರಣ, ಅಪೌಷ್ಟಿಕತೆ, ಕುಂಠಿತ ಬೆಳವಣಿಗೆ ನಿವಾರಿಸುವುದರ ಮೂಲಕ ಜಿಲ್ಲೆಯ ಸರ್ವಾಂಗೀಣ ಬೆಳವಣಿಗೆಗೆ ಸ್ಪಂದಿಸಬೇಕೆಂದು ತಿಳಿಸಿದರು.

ಪ್ರತಿಭೆ ವೃದ್ಧಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಂ.ಜಿ.ಪಾಲಿ ಮಾತನಾಡಿ, ಸಚಿವಾಲಯದಡಿ ಬಾಲಭವನ ಸೊಸೈಟಿಯು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ. ಮಕ್ಕಳಲ್ಲಿರುವ ಪ್ರತಿಭೆ ಪ್ರದರ್ಶನ ಮಾಡಲು ಹಾಗೂ ಅವರಲ್ಲಿರುವ ಪ್ರತಿಭೆ ವೃದ್ಧಿಸಲು ಅವಕಾಶ ಒದಗಿಸಿದೆ ಎಂದರು.

ಬಾಲವೇದಿಕೆ ಕಾರ್ಯಕ್ರಮವು ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತೆಗೆಯಲು ಗುರುಗಳನ್ನು ನೇಮಿಸಿ ತರಭೇತಿ ನೀಡುವುದರ ಮೂಲಕ ಕಾರ್ಯನಿರ್ವಹಿಸುತ್ತಿದೆ. ವಾರಾಂತ್ಯದಲ್ಲಿ ಮಕ್ಕಳಿಗೆ ತರಭೇತಿ ನೀಡುವ ಕಾರ್ಯಕ್ರಮ, ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳು ಹಾಗೂ ಸ್ವರ್ಧೆಗಳನ್ನು ಬಾಲಭವನ ಸೊಸೈಟಿಯು ಏರ್ಪಡಿಸುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ಕುಮಾರ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರತ್ನಯ್ಯ, ಆರ್‌.ಸಿ.ಎಚ್ ಅಧಿಕಾರಿಯಾದ ಡಾ.ಚಂದನ್‌, ಸಿಡಿಪಿಒ ಜಯದೇವಿ, ಆರೋಗ್ಯ ಶಿಕ್ಷಣಾಧಿಕಾರಿ ಪ್ರಸನ್ನ, ಸಮಾಜ ಸೇವಕರಾದ ಮಮತಾರೆಡ್ಡಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next