Advertisement

ಅಂಗನವಾಡಿ ಕಾರ್ಯಕರ್ತೆಯರಿಗೆ ಶೀಘ್ರ ಸ್ಮಾರ್ಟ್‌ ಫೋನ್‌ ವಿತರಣೆ

09:55 AM Jan 08, 2020 | sudhir |

ಮಂಗಳೂರು: ಹಳ್ಳಿಗಾಡಿನಲ್ಲಿ ನೆಟ್‌ವರ್ಕ್‌ ಸಿಗದೆ ಇರುವುದರಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ರಾಜ್ಯ ಸರಕಾರ ನೀಡಲು ಉದ್ದೇಶಿಸಿರುವ ಸ್ಮಾರ್ಟ್‌ಫೋನ್‌ ಊಟಕ್ಕಿಲ್ಲದ ಉಪ್ಪಿನಕಾಯಿಯಾಗುವ ಸಾಧ್ಯತೆಯೇ ಅಧಿಕ.
ಕಾರ್ಯಕರ್ತೆಯರ ಕಾರ್ಯಭಾರ ಕಡಿಮೆ ಯಾಗಬೇಕು ಮತ್ತು ವ್ಯವಸ್ಥೆ ಪಾರದರ್ಶಕ ವಾಗಬೇಕು ಎಂಬ ಉದ್ದೇಶದಿಂದ ರಾಜ್ಯ ಸರಕಾರವು ಅವರಿಗೆ ಸ್ಮಾರ್ಟ್‌ ಫೋನ್‌ ನೀಡಲು ಮುಂದಾಗಿದೆ. ಜ. 20ರೊಳಗೆ ಸ್ಮಾರ್ಟ್‌ ಫೋನ್‌ ಕೈಸೇರಲಿದೆ. ಇದರಲ್ಲಿ “ಸ್ನೇಹ’ ಆ್ಯಪ್‌ ಅಳವಡಿಸಲಾಗುತ್ತಿದ್ದು, ಇದರ ಮೂಲಕ ಎಲ್ಲ ವಿವರ ದಾಖಲಿಸಬೇಕು.

Advertisement

ಆದರೆ ದ.ಕ., ಉಡುಪಿ ಜಿಲ್ಲೆಗಳಲ್ಲಿ ಗ್ರಾಮೀಣ ಪ್ರದೇಶವೇ ಹೆಚ್ಚಿದ್ದು, ಇಂಟರ್‌ನೆಟ್‌ ಸಿಗುವುದಿಲ್ಲ ಅಥವಾ ಸಿಕ್ಕಿದರೂ ನಿಧಾನಗತಿಯದು. ರಾಜ್ಯದ ಬಹುಪಾಲು ಅಂಗನವಾಡಿಗಳು ಗ್ರಾಮಾಂತರದಲ್ಲೇ ಇವೆ. ಇಂತಹ ಪರಿಸ್ಥಿತಿ ಎದುರಾದಾಗ ಅಪ್ಲೋಡ್‌ ಹೇಗೆ ಎಂಬ ಮಾಹಿತಿ ಇಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಆಫ್‌ಲೈನ್‌ನಲ್ಲಿ ದಾಖಲು ಮಾಡಿ ಬಳಿಕ ನೆಟ್‌ವರ್ಕ್‌ ಇರುವೆಡೆ ತೆರಳಿದಾಗ ಮೊಬೈಲ್‌ ಆನ್‌ಲೈನ್‌ ಮೋಡ್‌ನ‌ಲ್ಲಿರಿಸಬೇಕು. ಆಗ ವಿವರ ಅಪ್ಲೋಡ್‌ ಆಗುತ್ತದೆ. ಇದು ತಾತ್ಕಾಲಿಕ ವ್ಯವಸ್ಥೆ, ಹಂತಹಂತವಾಗಿ ಪೂರಕ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಅಂಗನವಾಡಿಯಲ್ಲೇ ಇರಬೇಕು
ಕೆಲಸ ಕಡಿಮೆ ಮಾಡುವುದಕ್ಕೆ ಮತ್ತು ಸಮಯ ಉಳಿತಾಯಕ್ಕೆ ಸ್ಮಾರ್ಟ್‌ಫೋನ್‌ ಪ್ರಯೋಜನಕಾರಿ. ಆದರೆ ಅಂಗನವಾಡಿಯ ಮಾಹಿತಿ ಅಪ್ಲೋಡ್‌ ಮಾಡುವಾಗ ಕಾರ್ಯಕರ್ತೆಯರು ಕೇಂದ್ರದಲ್ಲಿಯೇ ಇರಬೇಕು. ಹೊರಗಿದ್ದು ಅಪ್ಲೋಡ್‌ ಮಾಡಿದರೆ ಜಿಪಿಎಸ್‌ ಮೂಲಕ ಕೇಂದ್ರದಲ್ಲಿ ಇಲ್ಲ ಎಂಬುದು ಪತ್ತೆಯಾಗುತ್ತದೆ ಎಂಬುದಾಗಿ ಇಲಾಖೆ ಈಗಾಗಲೇ ಸೂಚನೆ ನೀಡಿದೆ.

ಕೇಂದ್ರದಲ್ಲಿರುವಷ್ಟು ಹೊತ್ತು ಆಫ್‌ಲೈನ್‌ನಲ್ಲಿ ಇರುವಂತಿಲ್ಲ. ಅಲ್ಲದೆ ಸ್ಮಾರ್ಟ್‌ ಫೋನ್‌ ಇತರರ ಕೈಗೆ ಸಿಗಬಾರದು ಎಂಬ ನಿಯಮವಿದೆ. ಆದರೆ ಸರಕಾರದ ಇತರ ಕರ್ತವ್ಯಗಳೂ ಇರುವುದರಿಂದ ಕಾರ್ಯಕರ್ತೆಯರು ಒಂದೇ ಕಡೆ ಕುಳಿತು ಕಾರ್ಯನಿರ್ವಹಿಸಲಾಗುವುದಿಲ್ಲ.

ಇಲಾಖೆ ಸಂಬಂದಿ ಕೆಲಸಗಳಿಗಾಗಿ ತೆರಳುವಾಗ ಸ್ಮಾರ್ಟ್‌ಫೋನ್‌ನ್ನು ಜತೆಗೇ ಒಯ್ಯುವಂತಿಲ್ಲ, ಬಿಟ್ಟು ಹೋಗುವಂತೆಯೂ ಇಲ್ಲ. ಇನ್ನೊಂದೆಡೆ, ನೆಟ್‌ವರ್ಕ್‌ ಇಲ್ಲದಿದ್ದರೆ ಅದಿರುವೆಡೆ ತೆರಳಿ ಅಪ್ಲೋಡ್‌ ಮಾಡಬೇಕೆಂದು ಹೇಳಲಾಗುತ್ತಿದೆ. ಸ್ನೇಹ ಆ್ಯಪ್‌ ನಾವೇ ಡೌನ್‌ಲೋಡ್‌ ಮಾಡಿಕೊಳ್ಳಬೇಕೆಂದೂ ಹೇಳಲಾಗುತ್ತಿದೆ. ಇದರಿಂದ ಗೊಂದಲ ಉಂಟಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ರಾಜ್ಯಾಧ್ಯಕ್ಷೆ ಜಯಲಕ್ಷ್ಮಿ ಬಿ.ಆರ್‌. ತಿಳಿಸಿದ್ದಾರೆ.

Advertisement

ಏನೇನು ಅಪ್ಲೋಡ್‌ ಮಾಡಬೇಕು?
ಬೆಳಗ್ಗೆ ಅಂಗನವಾಡಿ ಕೇಂದ್ರಕ್ಕೆ ಮಕ್ಕಳು ಆಗಮಿಸುವ ಸಮಯ 9.30ರಿಂದ ಹಿಡಿದು ಮೂರು ಬಾರಿ ಈ ಆ್ಯಪ್‌ ಮುಖಾಂತರ ಮಕ್ಕಳ ಫೋಟೋ ತೆಗೆಯಬೇಕು. ಅನಂತರ ಊಟ, ಅದನ್ನು ತಯಾರಿಸಿದ ಫೋಟೋ, ಆ ದಿನದ ಸಮಗ್ರ ಮಾಹಿತಿಯನ್ನು ಆ್ಯಪ್‌ ಮುಖಾಂತರವೇ ನಮೂದಿಸಬೇಕು. ಆ್ಯಪ್‌ಗೆ ಜಿಪಿಎಸ್‌ ಅಳವಡಿಸಿರುವುದರಿಂದ ಎಲ್ಲ ಮಾಹಿತಿಗಳು ತನ್ನಿಂದತಾನೇ ನಮೂದಾಗುತ್ತವೆ. ಮಕ್ಕಳ ಹಾಜರಾತಿ, ಊಟದ ಪ್ರಮಾಣ, ಮಕ್ಕಳಿಗೆ ನೀಡುವ ಇತರ ಖಾದ್ಯಗಳ ಪ್ರಮಾಣವನ್ನು ತಿಳಿಯಲು ಇದು ಸಹಕಾರಿ.

ಜ. 20ರೊಳಗೆ ಸ್ಮಾರ್ಟ್‌ ಫೋನ್‌ ನೀಡಲಾಗುವುದು. ಗ್ರಾಮೀಣ ಭಾಗಗಳಲ್ಲಿ ನೆಟ್‌ವರ್ಕ್‌ ಸಮಸ್ಯೆ ಪರಿಹರಿಸಿದ ಬಳಿಕವೇ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಬಗ್ಗೆ ಗೊಂದಲ ಅಗತ್ಯವಿಲ್ಲ.
-ಶಶಿಕಲಾ ಜೊಲ್ಲೆ, ಸಚಿವರು,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಸ್ಮಾರ್ಟ್‌ಫೋನ್‌ ನೀಡುವ ಬಗ್ಗೆ ಇನ್ನೂ ಅಧಿಕೃತ ಮಾರ್ಗಸೂಚಿ ಬಂದಿಲ್ಲ. ನೆಟ್‌ವರ್ಕ್‌ ಇಲ್ಲದ ಪ್ರದೇಶಗಳು ತುಂಬಾ ಕಡಿಮೆ. ಅಂತಹ ಪ್ರದೇಶಗಳಲ್ಲಿ ಸರಕಾರ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಿದೆ.
– ಆರ್‌. ಶೇಷಪ್ಪ,
ಉಸ್ಮಾನ್‌, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಮತ್ತು ದ.ಕ.

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next