Advertisement

ಲಾಲ್‌ಬಾಗ್‌ನಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌

12:08 PM Nov 28, 2018 | |

ಬೆಂಗಳೂರು: ಲಾಲ್‌ಬಾಗ್‌ನ ಕೆ.ಎಚ್‌.ರಸ್ತೆ ಬಳಿಯ ಪ್ರವೇಶ ದ್ವಾರದ ಸನಿಹ ಬಾಷ್‌ ಕಂಪನಿಯು ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಕಾರ್ಯಕ್ರಮದಡಿ ನಿರ್ಮಿಸಿರುವ ಸ್ಮಾರ್ಟ್‌ ಪಾರ್ಕಿಂಗ್‌ ಪ್ರಾಯೋಗಿಕ ಹಂತದಲ್ಲಿದ್ದು, ಜನವರಿಯಿಂದ ಅಧಿಕೃತವಾಗಿ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ.

Advertisement

ಉದ್ಯಾನದ ಮರಿಗೌಡ ಭವನದ ಬಳಿ ಸುಮಾರು ಮೂರು ಎಕರೆ ಜಾಗವನ್ನು ಉದ್ಯಾನಕ್ಕೆ ಭೇಟಿ ನೀಡುವವರ ವಾಹನಗಳ ನಿಲುಗಡೆಂದು ಹಿಂದಿನಿಂದ ಮೀಸಲಿಡಲಾಗಿತ್ತು. ಆದರೆ ಇಲ್ಲಿ ಸುಸಜ್ಜಿತ ಪಾರ್ಕಿಂಗ್‌ ವ್ಯವಸ್ಥೆಯಿಲ್ಲದೆ ಅರ್ಧಕ್ಕಿಂತಲೂ ಹೆಚ್ಚು ಜಾಗ ಗಿಡಗಂಟಿ ಬೆಳೆದಿತ್ತು. ಇದರಿಂದಾಗಿ ವಾಹನಗಳ ನಿಲುಗಡೆಗೆ ತೊಡಕಾಗಿತ್ತು. ಈಗ ಅದೇ ಜಾಗದಲ್ಲಿ ಬಾಷ್‌ ಕಂಪನಿಯು ಸಿಎಸ್‌ಆರ್‌ ಅಡಿಯಲ್ಲಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿದೆ.

ಈ ಸ್ಮಾರ್ಟ್‌ ಪಾರ್ಕಿಂಗ್‌ ತಾಣದಲ್ಲಿ ವಿವಿಧ ಮಾದರಿಯ ವಾಹನ ಪ್ರವೇಶಿಸಲು, ನಿರ್ಗಮಿಸಲು ಹಾಗೂ ನಿಲುಗಡೆಗೆ ನಿಗದಿತ ವ್ಯವಸ್ಥೆ ಮಾಡಲಾಗಿದೆ. ಹಳೆಯ ಪಾರ್ಕಿಂಗ್‌ಗೆ ಹೋಲಿಸಿದರೆ ವಾಹನ ನಿಲುಗಡೆ ಸಾಮರ್ಥ್ಯವು ದುಪ್ಪಟ್ಟಾಗಿದ್ದು, ಏಕಕಾಲಕ್ಕೆ ಒಟ್ಟು 250ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು, 140 ಕಾರುಗಳು, 15 ಮಿನಿ ಬಸ್‌, ಆರು ಟ್ರಕ್‌ಗಳನ್ನು ನಿಲುಗಡೆ ಮಾಡಬಹುದಾಗಿದೆ.

ಉದ್ಯಾನ ಆವರಣದ ಪಾದಚಾರಿ ಮಾರ್ಗ, ರಸ್ತೆ ವಿಭಜಕಗಳ ನಡುವೆ ಆಕರ್ಷಕ ಹೂವಿನ ಗಿಡಗಳು, ಪಕ್ಕದಲ್ಲಿ ಹುಲ್ಲುಹಾಸು ಬೆಳೆಸಲಾಗಿದೆ. ಪಾರ್ಕಿಂಗ್‌ ಪ್ರದೇಶದಲ್ಲಿ ವರ್ಣಮಯ ಟೈಲ್ಸ್‌ಗಳನ್ನು ಅಳವಡಿಸಲಾಗಿದ್ದು, ಆಕರ್ಷಕವಾಗಿವೆ. ಪಾರ್ಕಿಂಗ್‌ ಜಾಗದಲ್ಲಿ ಮಳೆನೀರು ನಿಲ್ಲದಂತೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ.

ಸ್ಮಾರ್ಟ್‌ ಪಾರ್ಕಿಂಗ್‌ಗೆ ಮೆಟಲ್‌ ಸೆನ್ಸಾರ್‌ ಅಳವಡಿಸಿರುವುದರಿಂದ ಈ ಸೆನ್ಸಾರ್‌ ಒಳ ಬರುವ ವಾಹನಗಳ ನೋಂದಣಿ ಸಂಖ್ಯೆ ದಾಖಲಿಸಿಕೊಂಡು ಶುಲ್ಕದ ಚೀಟಿ ನೀಡುತ್ತದೆ. ಜತೆಗೆ ನಿಗದಿ ಪಡಿಸಿದಷ್ಟು ವಾಹನಗಳಿಗೆ ಮಾತ್ರ ಪ್ರವೇಶ ನೀಡಿ, ಆನಂತರ ತಂತಾನೇ ಸೆನ್ಸಾರ್‌ ಬಂದ್‌ ಆಗಲಿದೆ. ಈ ಸುಧಾರಿತ ಪಾರ್ಕಿಂಗ್‌ ವ್ಯವಸ್ಥೆ ನಿರ್ವಹಣೆಗೆ ಸರ್ಕಾರ ಇತ್ತೀಚೆಗೆ ಟೆಂಡರ್‌ ಆಹ್ವಾನಿಸಿದ್ದು, ವಾರ್ಷಿಕ 4.85 ಕೋಟಿ ರೂ. ನಿಗದಿಪಡಿಸಿದೆ.

Advertisement

ಅನಗತ್ಯ ನಿಲುಗಡೆಗೆ ಕಡಿವಾಣ ಸಾಧ್ಯವೇ?: ಸದ್ಯ ಲಾಲ್‌ಬಾಗ್‌ನಲ್ಲಿ ದಿನವಿಡೀ ವಾಹನ ನಿಲುಗಡೆ ಮಾಡಿದರೂ ಏಕಪ್ರಕಾರದ ಶುಲ್ಕ ವಿಧಿಸುತ್ತಿರುವುದರಿಂದ ಸುತ್ತಮುತ್ತಲ ಕಚೇರಿಗಳ ಉದ್ಯೋಗಿಗಳು ಹಾಗೂ ಆ ಕಚೇರಿಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಲಾಲ್‌ಬಾಗ್‌ನಲ್ಲೇ ಹೆಚ್ಚು ಹೊತ್ತು ನಿಲುಗಡೆ ಮಾಡುತ್ತಾರೆ.

ಇದರಿಂದ ಲಾಲ್‌ಬಾಗ್‌ಗೆ ಬರುವ ಪ್ರವಾಸಿಗರಿಗಿಂತ ಆಯ್ದ ವ್ಯಕ್ತಿಗಳಿಗಷ್ಟೇ ಅನುಕೂಲವಾಗುತ್ತಿದೆ. ಜತೆಗೆ ಇಲಾಖೆಗೂ ಆದಾಯ ವೃದ್ಧಿಸದಂತಾಗಿದೆ. ಆ ಹಿನ್ನೆಲೆಯಲ್ಲಿ ಕನಿಷ್ಠ ಅವಧಿಗೆ ಸಾಮಾನ್ಯ ದರ ನಿಗದಿಪಡಿಸಿ ಹೆಚ್ಚುವರಿ ಅವಧಿಯ ನಿಲುಗಡೆಗೆ ದುಬಾರಿ ಶುಲ್ಕ ವಿಧಿಸಲು ಚಿಂತಿಸಲಾಗಿದೆ ರಾಜ್ಯ ತೋಟಗಾರಿಕೆ ಇಲಾಖೆ ಉಪನಿರ್ದೆಶಕ ಚಂದ್ರಶೇಖರ್‌ ತಿಳಿಸಿದರು.

ಸ್ಮಾರ್ಟ್‌ ಲೈಟಿಂಗ್‌: ಲಾಲ್‌ಬಾಗ್‌ನಲ್ಲಿನ ಹಳೆಯ ವಿದ್ಯುತ್‌ ದೀಪಗಳನ್ನು ಬದಲಿಸಲು ತೋಟಗಾರಿಕೆ ಇಲಾಖೆ ಮುಂದಾಗಿದ್ದು, 500ಕ್ಕೂ ಹೆಚ್ಚು ಪರಿಸರ ಸ್ನೇಹಿ ಎಲ್‌ಇಡಿ ಸ್ಮಾರ್ಟ್‌ ಲೈಟ್‌ಗಳನ್ನು ಉದ್ಯಾನಕ್ಕೆ ಅಡವಡಿಸಲಿದೆ. ಸೆನ್ಸಾರ್‌ ತಂತ್ರಜ್ಞಾನ, ಪ್ರಖರ ಬೆಳಕು ಇರುವುದರಿಂದ ವಾಯುವಿಹಾರಿಗಳಿಗೆ ಅನುಕೂಲವಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದರು.

ಸ್ಮಾರ್ಟ್‌ ಪಾಕಿಂಗ್‌ನಿಂದ ವಾಹನ ನಿಲುಗಡೆಗೆ ಹೆಚ್ಚುವರಿ ಜಾಗ ಲಭ್ಯವಾಗುವ ಜತೆಗೆ ಅನಧಿಕೃತ ನಿಲುಗಡೆ ಸಮಸ್ಯೆಗೆ ಮುಕ್ತಿ ಸಿಗಲಿದೆ. ಜತೆಗೆ ಈ ತಾಣದಲ್ಲಿ ಹುಲ್ಲುಹಾಸು, ಆಕರ್ಷಕ ಹೂಗಿಡಗಳನ್ನು ನೆಟ್ಟಿರುವುದರಿಂದ ಸೌಂದರ್ಯ ಹೆಚ್ಚಲಿದೆ. ಯಾವುದೇ ರೀತಿ ಸಮಸ್ಯೆಗಳು ಉಂಟಾಗದಂತೆ ತಡೆಯಲು ಒಂದು ತಿಂಗಳ ಕಾಲ ಪ್ರಾಯೋಗಿಕವಾಗಿಯೇ ಪಾರ್ಕಿಂಗ್‌ ವ್ಯವಸ್ಥೆ ನಿರ್ವಹಿಸಿ ಜನವರಿಯಿಂದ ಅಧಿಕೃತ ಸೇವೆಗೆ ಚಾಲನೆ ನೀಡಲಾಗುವುದು.
-ಎಂ.ಆರ್‌. ಚಂದ್ರಶೇಖರ್‌, ಲಾಲಾಬಾಗ್‌ ಸಸ್ಯತೋಟದ ಉಪ ನಿರ್ದೇಶಕ

ಪ್ರಸ್ತಾಪಿತ ನಿಲುಗಡೆ ಶುಲ್ಕ
ದ್ವಿಚಕ್ರ ವಾಹನ- 25 ರೂ.
ಕಾರು- 30 ರೂ.
ಮಿನಿ ಬಸ್‌- 60 ರೂ.

Advertisement

Udayavani is now on Telegram. Click here to join our channel and stay updated with the latest news.

Next