ಬೆಂಗಳೂರು: ಸಿಲಿಕಾನ್ ಸಿಟಿಯ ಸಾರ್ವಜನಿಕ ಪ್ರದೇಶಗಳಲ್ಲಿ ವೈ-ಫೈ ಸೇವೆ ವಿಸ್ತರಿಸುವುದು ಸೇರಿದಂತೆ ಸಂಚಾರದಟ್ಟಣೆ ನಿವಾರಣೆ, ಅತ್ಯಾಧುನಿಕ ಪಾರ್ಕಿಂಗ್ ವ್ಯವಸ್ಥೆ, ತ್ರಂತ್ರಜ್ಞಾನಾಧಾರಿತ ಬೀದಿ ದೀಪ ವ್ಯವಸ್ಥೆಯನ್ನು “ಸ್ಮಾರ್ಟ್ ಸಿಟಿ’ ಕಾರ್ಯಕ್ರಮದಡಿ ಅನುಷ್ಠಾನಗೊಳಿಸುವ ಸಂಬಂಧ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಬುಧವಾರ ಖಾಸಗಿ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿದರು.
ಬುಧವಾರ ಬಿಎಂಆರ್‌ಡಿಎ ಕಚೇರಿಯಲ್ಲಿ ನಡೆಸಿದ ಎರಡು ಪ್ರತ್ಯೇಕ ಸಭೆಗಳಲ್ಲಿ ಬಿಬಿಎಂಪಿ ಪ್ರಗತಿ ಪರಿಶೀಲನೆ ಹಾಗೂ ಸ್ಮಾರ್ಟ್ ಸಿಟಿ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ, ಖಾಸಗಿ ಕಂಪೆನಿ ಜತೆ ಸಮಾಲೋಚಿಸಿದರು.
ಈ ವೇಳೆ ಲುಕ್‌ಅಪ್ ಮೀಡಿಯಾ ಕಂಪೆನಿ ಪ್ರತಿನಿಧಿಗಳು “ಸ್ಮಾರ್ಟ್ ಸಿಟಿ’ ಅಭಿಯಾನದಡಿ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ ಜತೆಗೆ ಮತ್ತಷ್ಟು ರಸ್ತೆಗಳಲ್ಲಿ ಉಚಿತ ವೈಫೈ ಒದಗಿಸಲು ಸಿದ್ಧಪಡಿಸಿದ್ದ ಪ್ರಸ್ತಾವನೆ ಬಗ್ಗೆ ಮಾಹಿತಿ ನೀಡಿದರು. ಇದರ ಜತೆಗೆ, ಸಂಚಾರದಟ್ಟಣೆ ನಿರ್ವಹಣೆ, ಭದ್ರತೆ, ಪಾರ್ಕಿಂಗ್ ವ್ಯವಸ್ಥೆ, ಡಸ್ಟ್ ಬಿನ್ ನಿರ್ವಹಣೆ, ಬೀದಿ ದೀಪ ವ್ಯವಸ್ಥೆ ಹಾಗೂ ರಸ್ತೆ ಗುಣಮಟ್ಟದ ಬಗ್ಗೆಯೂ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯಡಿ ನಿರ್ವಹಣೆ ಮಾಡಬಹುದು ಎಂದು ತಿಳಿಸಿದರು.
ಜತೆಗೆ ತಮ್ಮ ಲೈಟ್‌ಅಪ್ 1ಜಿ2ಪಿ, ಲೈಟ್‌ಅಪ್ 1ಜಿಎಂಪಿ ತಂತ್ರಜ್ಞಾನದಿಂದ ವೇಗವಾದ ವೈ-ಫೈ ಸೇವೆಯನ್ನು ಒದಗಿಸಬಹುದು. 1 ಕಿ.ಮೀ. ದೂರದವರೆಗೆ 1ಜಿಬಿಪಿಎಸ್ ವೇಗದಲ್ಲಿ ಬ್ರೌಸ್ ಮಾಡಬಹುದಾದ ವೈ-ಫೈ ಇಂಟರ್‌ನೆಟ್ ಸೇವೆ ಒದಗಿಸಲು ಕಂಪೆನಿ ಸಮರ್ಥವಿದೆ ಎಂದು ಹೇಳಿದರು. ಆದರೆ, ಈ ಬಗ್ಗೆ ಮತ್ತಷ್ಟು ತಾಂತ್ರಿಕ ಮಾಹಿತಿ ಕೇಳಿದ ಕೆ.ಜೆ. ಜಾರ್ಜ್, ಮತ್ತೂಮ್ಮೆ ಸೂಕ್ತ ಮಾಹಿತಿಯೊಂದಿಗೆ ಬರುವಂತೆ ಹೇಳಿ ವಾಪಸ್ಸು ಕಳುಹಿಸಿದರು ಎಂದು ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಬಜೆಟ್ ಅನುಷ್ಠಾನ ಹಾಗೂ ಕಾಮಗಾರಿಗಳ ಪ್ರಗತಿ ಬಗ್ಗೆ ಪರಿಶೀಲನಾ ಸಭೆ ನಡೆಸಿದ ಕೆ.ಜೆ. ಜಾರ್ಜ್, ಪ್ರಸ್ತುತ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಮಾರ್ಚ್ ಒಳಗಾಗಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಆದೇಶ ಮಾಡಿದರು. ಸಿಎಂ ನಗರೋತ್ಥಾನ ನಿಧಿ, ಕೇಂದ್ರ ಸರ್ಕಾರದ ನಿಧಿಗಳು ಹಾಗೂ ಬಿಬಿಎಂಪಿ ಆದಾಯದಿಂದ ಸಂಗ್ರಹವಾದ ಹಣವನ್ನು ಸಮರ್ಪಕವಾಗಿ ವೆಚ್ಚ ಮಾಡಬೇಕು ಎಂದರು.
ಈವರೆಗೂ ಅನುಮೋದನೆ ಪಡೆದಿರುವ ಹಣಕಾಸು ಬಳಕೆ ಬಗ್ಗೆ ಮಾಹಿತಿ ಕೇಳಿದರು. ಮೇಯರ್ ಜಿ. ಪದ್ಮಾವತಿ, ಉಪಮೇ ಯರ್ ಆನಂದ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಬಿಬಿಎಂಪಿ ಆಯುಕ್ತ ಎನ್. ಮಂಜುನಾಥಪ್ರಸಾದ್, ವಿಶೇಷ ಆಯುಕ್ತ (ಆದಾಯ) ಮನೋಜ್ ಉಪಸ್ಥಿತರಿದ್ದರು.
94 ಪ್ಯಾಕೇಜ್‌ಗಳಲ್ಲಿ ಆಭಿವೃದ್ಧಿ ಕಾಮಗಾರಿ
2015-16ನೇ ಸಾಲಿನಲ್ಲಿ ಒಟ್ಟು 1,476 ಕೋಟಿ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ. ಇವುಗಳಲ್ಲಿ ಒಟ್ಟು 94 ಪ್ಯಾಕೇಜ್‌ಗಳಾಗಿ ಕಾಮಗಾರಿಗಳನ್ನು ವಿಂಗಡಿಸಿ ಗುತ್ತಿಗೆ ಕರೆಯಲಾಗಿದ್ದು, 797 ಕೋಟಿ ಮೊತ್ತದ ವಿವಿಧ ವಾರ್ಡ್ ಕಾಮಗಾರಿಗಳಲ್ಲಿ 84 ಪ್ಯಾಕೇಜ್‌ಗಳು ಮುಗಿಯುವ ಹಂತದಲ್ಲಿವೆ. ಸಾರ್ವಜನಿಕ ಕಾಮಗಾರಿಗಳ ವಿಭಾಗವು 201 ಕೋಟಿ ವೆಚ್ಚದಲ್ಲಿ 114 ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದೆ. ಇದರಲ್ಲಿ 29 ಕಾಮಗಾರಿಗಳನ್ನು ವಿವಿಧ ಕಾರಣಗಳಿಗೆ ಶುರು ಮಾಡಲಾಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.