ಬೆಂಗಳೂರು: ನಗರದಲ್ಲಿ ಲೋಡ್ ಶೆಡ್ಡಿಂಗ್ ಸಂದರ್ಭದಲ್ಲಿ ಇಡೀ ಬಡಾವಣೆಗೆ ವಿದ್ಯುತ್ ಕಡಿತ ಮಾಡುವ ಬದಲಿಗೆ ಬಡಾವಣೆಯ ಪ್ರತಿ ಕಟ್ಟಡಗಳಲ್ಲಿ ಬೆರಳೆಣಿಕೆ ದೀಪಗಳು ಉರಿಯುವಷ್ಟು ವಿದ್ಯುತ್ ಮಾತ್ರ ಪೂರೈಸುವ ವ್ಯವಸ್ಥೆ ಸದ್ಯದಲ್ಲೇ ಜಾರಿಯಾಗಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, “ಮೈಸೂರಿನಲ್ಲಿ ನಡೆಸಿದ ಪ್ರಾಯೋಗಿಕ ಪ್ರಯತ್ನದಲ್ಲಿ ಯಶಸ್ವಿಯಾಗಿರುವ ಸ್ಮಾರ್ಟ್ ಮೀಟರ್‌ಗಳನ್ನು ಬೆಂಗಳೂರು ನಗರದಲ್ಲಿ ಅಳವಡಿಸಲು ಚಿಂತನೆ ನಡೆಸಲಾಗಿದೆ. ಅದರಂತೆ ನಗರಕ್ಕೆ ಐದು ಲಕ್ಷ ಸ್ಮಾರ್ಟ್ ಮೀಟರ್‌ಗಳನ್ನು ಹಂತ ಹಂತವಾಗಿ ಅಳವಡಿಸಲಾಗುವುದು’ ಎಂದು ಹೇಳಿದರು.
ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ನಾನಾ ಪ್ರಯೋಜನಗಳಿವೆ. ಅದರಂತೆ ಪ್ರತಿ ಸಂಪರ್ಕಕ್ಕೂ ನಿರ್ದಿಷ್ಟ ಪ್ರಮಾಣದ ವಿದ್ಯುತ್ ಪೂರೈಕೆ ವ್ಯವಸ್ಥೆಗೂ ಅವಕಾಶವಿರಲಿದ್ದು, ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದೆ. ಸ್ಮಾರ್ಟ್ ಮೀಟರ್‌ಗೆ ಸುಮಾರು 6000 ರೂ.ವರೆಗೆ ವೆಚ್ಚವಾಗಲಿದೆ. ಈ ಮೀಟರ್‌ನಿಂದ ಗ್ರಾಹಕರಿಗೂ ಅನುಕೂಲವಾಗುವುದರಿಂದ ಮೊತ್ತವನ್ನು ಗ್ರಾಹಕರಿಂದಲೇ ಪಡೆಯಬಹುದೇ ಎಂಬ ಬಗ್ಗೆ ಎಲ್ಲ ಎಸ್ಕಾಂಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಮಾಡಿದ್ದು, ಪ್ರತಿಕ್ರಿಯೆ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.
ಸ್ಮಾರ್ಟ್‌ಮೀಟರ್‌ನಲ್ಲಿರುವ ವಿಶೇಷ ಸೌಲಭ್ಯದಿಂದ ಸಾಕಷ್ಟು ಪ್ರಯೋಜನವಿದೆ. ಒಂದೊಮ್ಮೆ ವಿದ್ಯುತ್ ಕೊರತೆ ತಲೆದೋರಿದಾಗ ಲೋಡ್ ಶೆಡ್ಡಿಂಗ್ ಮೂಲಕ ಪರಿಸ್ಥಿತಿ ನಿಭಾಯಿಸಬೇಕಾಗುತ್ತದೆ. ಆಗ ಒಂದು ಇಡೀ ಬಡಾವಣೆಗೆ ವಿದ್ಯುತ್ ಕಡಿತಗೊಳಿಸುವ ಬದಲಿಗೆ ಪ್ರತಿ ಮನೆ, ಕಟ್ಟಡಗಳಿಗೆ ಇಂತಿಷ್ಟೇ ಪ್ರಮಾಣದ ವಿದ್ಯುತ್ ಪೂರೈಸಲು ಅವಕಾಶವಿದೆ (ಉದಾಹರಣೆಗೆ 10 ಲೈಟ್‌ಗಳಿದ್ದರೆ 2- 3 ಲೈಟ್‌ಗಳಷ್ಟೇ ಬೆಳಗುವಷ್ಟು ವಿದ್ಯುತ್ ಪೂರೈಕೆ ಮಾಡುವ ವ್ಯವಸ್ಥೆ). ಇದರಿಂದ ಸಂಪೂರ್ಣ ವಿದ್ಯುತ್ ಕಡಿತಗೊಳಿಸದೆ ಕೊರತೆ ನಿಭಾಯಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಸ್ಕಾಂನ ವಿಶೇಷ ಆ್ಯಪ್
ಬೆಸ್ಕಾಂ ವತಿಯಿಂದ ವಿಶೇಷ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ. ತುರ್ತು ನಿರ್ವಹಣೆಗೆ ವಿದ್ಯುತ್ ಕಡಿತ, ಮಾಸಿಕ ಬಿಲ್ ಮೊತ್ತ, ಪಾವತಿ ವಿವರ ಸೇರಿದಂತೆ ಇತರೆ ಮಾಹಿತಿ ಇದರಲ್ಲಿ ಸಿಗಲಿದೆ. ನಗರದ ಪಾದಚಾರಿ ಮಾರ್ಗಗಳಲ್ಲಿನ ಟ್ರಾನ್ಸ್‌ಫಾರ್ಮರ್‌ಗಳನ್ನು ಪಾದಚಾರಿಗಳಿಗೆ ತೊಂದರೆಯಾಗದಂತೆ ವಿಶೇಷ ವಿನ್ಯಾಸದಲ್ಲಿ ಸ್ಥಳಾಂತರಿಸಲು ಆದ್ಯತೆ ನೀಡಲಾಗುತ್ತಿದೆ. 3919 ಟ್ರಾನ್ಸ್‌ಫಾರ್ಮರ್‌ಗಳನ್ನು ಹಂತ ಹಂತವಾಗಿ ಸ್ಥಳಾಂತರ, ಮರು ವಿನ್ಯಾಸಗೊಳಿಸಿ ಅಳವಡಿಸಲಾಗುವುದು. ಅಗತ್ಯವಿರುವ ಕಡೆ ನಾಗರಿಕ ಬಳಕೆಗೆ ಮೀಸಲಾದ ನಿವೇಶನಗಳಿಗೆ (ಸಿ.ಎ) ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.