Advertisement

ಸ್ಮಾರ್ಟ್‌ ಮಣಿಪಾಲ್‌ ನೀಲನಕಾಶೆ ಸಿದ್ಧ

09:45 AM Sep 11, 2019 | Sriram |

ಉಡುಪಿ: ಯುರೋಪ್‌ ಸೇರಿದಂತೆ 50ಕ್ಕೂ ಅಧಿಕ ದೇಶಗಳ ವಿದ್ಯಾರ್ಥಿಗಳಿರುವ ಜಾಗತಿಕ ಶಿಕ್ಷಣ ಕೇಂದ್ರ ಮಣಿಪಾಲ ನಗರಿ “ಸ್ಮಾರ್ಟ್‌ ಸಿಟಿ’ಯಾಗಿ ರೂಪುಗೊಳ್ಳುವ ಪರಿಕಲ್ಪನೆಗೆ ರೂಪ ಸಿಕ್ಕಿದೆ. 30 ಕೋ.ರೂ. ಹೂಡಿಕೆಯಲ್ಲಿ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ(ಪಿಪಿಪಿ ಮಾಡೆಲ್‌) “ಸ್ಮಾರ್ಟ್‌ ಮಣಿಪಾಲ್‌’ ನಿರ್ಮಿಸಲು ಪ್ರಸ್ತಾವನೆಯೊಂದು ಸಿದ್ಧಗೊಳ್ಳುತ್ತಿದೆ.

Advertisement

ಅಂತಾರಾಷ್ಟ್ರೀಯ ಮಟ್ಟದ ಮೂಲಸೌಕರ್ಯ, ಸಂಚಾರ ನಿಯಂತ್ರಣ, ಸುರಕ್ಷತೆ, ಪ್ರವಾಸೋದ್ಯಮ, ಸ್ಥಳೀಯ ಹೂಡಿಕೆ ಹೆಚ್ಚಳ ಮೊದಲಾದವು “ಸ್ಮಾರ್ಟ್‌ ಮಣಿಪಾಲ್‌’ ಯೋಜನೆಯ ಉದ್ದೇಶಗಳು. ಸ್ಮಾರ್ಟ್‌ ಸಿಟಿ ನಿರ್ಮಾಣದಲ್ಲಿ ಖ್ಯಾತಿ ಪಡೆದಿರುವ ಸಂಸ್ಥೆ ಈ ಯೋಜನೆಯ ನೀಲನಕಾಶೆಯನ್ನು ಸಿದ್ಧಪಡಿಸಿದ್ದು ಇದಕ್ಕೆ ಸ್ಥಳೀಯಾಡಳಿತ, ಸರಕಾರ ಮಟ್ಟದ ಒಪ್ಪಿಗೆಗಳು ಇನ್ನಷ್ಟೇ ದೊರೆಯಬೇಕಿದೆ.


ಏನೆಲ್ಲಾ ಸ್ಮಾರ್ಟ್‌?
“ಸ್ಮಾರ್ಟ್‌ ಮಣಿಪಾಲ್‌’ ಮುಖ್ಯವಾಗಿ ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ಅತ್ಯಾಧುನಿಕ ದರ್ಜೆಗೇರಿಸುತ್ತದೆ. ಸ್ಮಾರ್ಟ್‌ಪೋಲ್ಸ್‌/ಸ್ಮಾರ್ಟ್‌ ಟವರ್, ಕಂಟ್ರೋಲ್‌ ಸೆಂಟರ್‌, ಬಸ್‌ಬೇ, ಆಟೋ ಬೇ, ಬೈಕ್‌ ಬೇ, ಸೈಕ್ಲಿಂಗ್‌ ಪಾಥ್‌, ಇ-ಟಾಯ್ಲೆಟ್‌, ಸ್ಮಾರ್ಟ್‌ ಲಾಂಜ್‌ ಮೊದಲಾದವುಗಳು ಯೋಜನೆಯ ಪ್ರಮುಖ ಭಾಗಗಳು. ಸ್ಮಾರ್ಟ್‌ ಲೈಟ್ಸ್‌, ಕೆಮರಾ, ಸರ್ವೀಲೆನ್ಸ್‌, ವೈಫೈ ಹಾಟ್‌ಸ್ಪಾಟ್‌, ಡಿಜಿಟಲ್‌ ಡಿಸ್‌ಪ್ಲೇ, ಆರ್‌ಎಫ್ಐಡಿ ಕಾರ್ಡ್‌ ರೀಡರ್‌ ಮೊದಲಾದವುಗಳನ್ನು ಒಳಗೊಂಡ 10ಕ್ಕೂ ಅಧಿಕ ಸ್ಮಾರ್ಟ್‌ ಪೋಲ್‌/ಸ್ಮಾಟ್‌ ಟವರ್‌ಗಳು ಯೋಜನೆಯ ನೀಲನಕಾಶೆಯಲ್ಲಿವೆ. ಮಲ್ಟಿಲೆವೆಲ್‌ ಪಾರ್ಕಿಂಗ್‌, ಇಲೆಕ್ಟ್ರಾನಿಕ್‌ ವಾಹನಗಳ ಚಾರ್ಜಿಂಗ್‌ ವ್ಯವಸ್ಥೆಯೂ ಇದರಲ್ಲಿ ಅಡಕವಾಗಿರುತ್ತದೆ.

“ಎಜುಕೇಶನಲ್‌ ಹಬ್‌’ ಎಂದು ಗುರುತಿಸಲ್ಪಟ್ಟ ಮಣಿಪಾಲ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳನ್ನು ಸಂಪರ್ಕಿಸುವ ಕೇಂದ್ರಸ್ಥಳವೂ ಆಗಿದ್ದು ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದಲೂ ಮಹತ್ವದ ಪಟ್ಟಣವಾಗಿದೆ. ಮಣಿಪಾಲದ ಬಳಿಕ ಉಡುಪಿ ನಗರ ಮತ್ತು ಮಲ್ಪೆಯಲ್ಲಿ ಸ್ಮಾರ್ಟ್‌ ಸಿಟಿ ಮಾದರಿಯ ಸೌಲಭ್ಯ ಒದಗಿಸುವ ಉದ್ದೇಶ ಹೊಂದಲಾಗಿದೆ. ಈ ಮೂಲಕ ಸ್ಟಾರ್ಟ್‌ಅಪ್‌ಗ್ಳಿಗೂ ಉತ್ತೇಜನ ನೀಡುವ ಉದ್ದೇಶವಿದೆ ಎಂದು ಮೂಲಗಳು ತಿಳಿಸಿವೆ. ಯೋಜನೆ ಪ್ರಸ್ತಾವನೆ ರೂಪಕ್ಕೆ ಇನ್ನಷ್ಟೇ ಬರಬೇಕಿದೆ.


ಮಣಿಪಾಲ ನಗರಕ್ಕೆ ಸೀಮಿತ
ಮಣಿಪಾಲ ನಗರಕೇಂದ್ರ ಭಾಗಕ್ಕೆ ಮಾತ್ರ ಈ ಸ್ಮಾರ್ಟ್‌ ಸಿಟಿ ಅನ್ವಯಗೊಳ್ಳಲಿದೆ. ಭೋಪಾಲ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಇರಾದೆ ಹೊಂದಲಾಗಿದೆ. ಈಶ್ವರನಗರ, ಎಂಐಟಿ, ಟೈಗರ್‌ ಸರ್ಕಲ್‌, ಸಿಂಡಿಕೇಟ್‌ ಸರ್ಕಲ್‌ ಮೊದಲಾದೆಡೆ ಸ್ಮಾರ್ಟ್‌ ಬಸ್‌ನಿಲ್ದಾಣಗಳನ್ನು ಯೋಜನೆಯ ರೂಪುರೇಷೆ ಒಳಗೊಂಡಿದೆ.

“ಅಂತಿಮಗೊಂಡಿಲ್ಲ’
ಕೇಂದ್ರ ಸರಕಾರದ ಸ್ಮಾರ್ಟ್‌ಸಿಟಿ ಯೋಜನೆಗೆ ಉಡುಪಿ ಅಥವಾ ಮಣಿಪಾಲ ಆಯ್ಕೆಯಾಗಿಲ್ಲದಿದ್ದರೂ ಖಾಸಗಿ ಸಹಭಾಗಿತ್ವದಲ್ಲಿ ಸ್ಮಾರ್ಟ್‌ ಸಿಟಿ ಮಾದರಿಯ ಸೌಲಭ್ಯಗಳನ್ನು ಇಲ್ಲಿಯೂ ಒದಗಿಸಲು ಸಾಧ್ಯವಿದೆ. ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ಹಣಕಾಸು ಕ್ಷೇತ್ರಗಳಲ್ಲಿ ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆದು ಬೆಳೆಯುತ್ತಿರುವ ಮಣಿಪಾಲಕ್ಕೆ ಪೂರಕವಾಗಿ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ “ಸ್ಮಾರ್ಟ್‌ ಸಿಟಿ’ ಯೋಜನೆ ಅನುಕೂಲವಾಗಲಿದೆ. ಈ ಬಗ್ಗೆ ಪ್ರಾಥಮಿಕ ಹಂತದ ನೀಲನಕಾಶೆಯನ್ನು ಖಾಸಗಿ ಸಂಸ್ಥೆ ಸಿದ್ಧಪಡಿಸಿದೆ. ಅಂತಿಮಗೊಂಡಿಲ್ಲ. ಸರಕಾರದ ಮಟ್ಟಕ್ಕೆ ಬಂದಿಲ್ಲ.
– ಕೆ.ರಘುಪತಿ ಭಟ್‌, ಶಾಸಕರು, ಉಡುಪಿ

ಸಂತೋಷ್‌ ಬೊಳ್ಳೆಟ್ಟು

Advertisement
Advertisement

Udayavani is now on Telegram. Click here to join our channel and stay updated with the latest news.

Next