Advertisement

ತ್ಯಾಜ್ಯ ಸಂಗ್ರಹ ನಿರ್ವಹಣೆಗೆ ಸ್ಮಾರ್ಟ್‌ ಐಡಿಯಾ

11:10 AM Sep 27, 2019 | Suhan S |

ಹುಬ್ಬಳ್ಳಿ: ಮನೆಗಳಿಂದ ಟಿಪ್ಪರ್‌ಗಳ ಮೂಲಕ ಸಮರ್ಪಕವಾಗಿ ತ್ಯಾಜ್ಯ ಸಂಗ್ರಹಿಸುವ ದಿಸೆಯಲ್ಲಿ ರೇಡಿಯೋ ಫ್ರೀಕ್ವಿನ್ಸಿ ಐಡೆಂಟಿಫೀಕೇಶನ್‌ ಡಿವೈಸ್‌ (ಆರ್‌ಎಫ್‌ಐಡಿ) ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲು ಹು-ಧಾ ಮಹಾನಗರ ಪಾಲಿಕೆ ಮುಂದಾಗಿದ್ದು, ಇದು ಉತ್ತರ ಕರ್ನಾಟಕದಲ್ಲಿಯೇ ಮೊದಲ ಪ್ರಯತ್ನವಾಗಿದೆ. ಕಸವನ್ನು ಕಂಟೇನರ್‌ಗಳಿಗೆ ಸುರಿಯುವುದರಿಂದ ಹಂದಿ, ನಾಯಿಗಳ ಕಾಟ ವಿಪರೀತವಾಗಿತ್ತು. ಕಸವನ್ನು ಪ್ರತಿಯೊಂದು ಮನೆಯಿಂದಲೇ ಎತ್ತುವ ದಿಸೆಯಲ್ಲಿ ಮನೆ ಬಾಗಿಲಿಗೆ ಟಿಪ್ಪರ್‌ ಬರುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಕೆಲ ಕಸ ಸಂಗ್ರಹಕಾರರು ಸರಿಯಾಗಿ ಕಸ ಸಂಗ್ರಹ ಮಾಡದಿರುವುದು

Advertisement

ಕಂಡು ಬಂದಿತ್ತು.  ಹಲವು ನಿವಾಸಿಗಳು ನಿರಂತರವಾಗಿ ಕಸ ಸಂಗ್ರಹದ ಸಮಸ್ಯೆ ಕುರಿತು ಮಹಾನಗರ ಪಾಲಿಕೆಗೆ ದೂರು ನೀಡುತ್ತಿದ್ದರು. ಪ್ರತಿಯೊಂದು ಕ್ರಾಸ್‌ನಲ್ಲಿಯೂ ಕಸ ಸಂಗ್ರಹ ಟಿಪ್ಪರ್‌ ಬರುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಮಹಾನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ವಿಭಾಗ ನೂತನ ಕ್ರಮಕ್ಕೆ ಮುಂದಾಗಿದ್ದು, ಆರ್‌ಎಫ್‌ಐಡಿ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲು ಸಜ್ಜಾಗಿದೆ.

ಇದರಿಂದ ಕಸ ಸಂಗ್ರಹ ವಾಹನಗಳ ನಿರ್ವಹಣೆ ಸಾಧ್ಯವಾಗಲಿದೆ. ಸದ್ಯ ಹುಬ್ಬಳ್ಳಿಯಲ್ಲಿ ಪ್ರತಿದಿನ 300 ಟನ್‌ ಹಾಗೂಧಾರವಾಡದಲ್ಲಿ 150 ಟನ್‌ ತ್ಯಾಜ್ಯ ಸಂಗ್ರಹವಾಗುತ್ತಿದೆ. ಹೊಸ ಯೋಜನೆ ತ್ವರಿತಗತಿಯಲ್ಲಿ ಅನುಷ್ಠಾನಗೊಂಡರೆ ಮನೆ ಕಸ ವಿಲೇವಾರಿ ಸಮಸ್ಯೆ ಬಹುತೇಕ ನಿವಾರಣೆಯಾಗುತ್ತದೆ ಎಂಬುದು ಅಧಿಕಾರಿಗಳ ವಿಶ್ವಾಸವಾಗಿದೆ.

ಏನಿದು ಆರ್‌ಎಫ್‌ಐಡಿ?: ಆರ್‌ಎಫ್‌ಐಡಿ ಎಂದರೆ ರೇಡಿಯೋ ಫ್ರೀಕ್ವಿನ್ಸಿ ಐಡೆಂಟಿಫೀಕೇಶನ್‌ ಡಿವೈಸ್‌. ಪ್ರತಿಯೊಂದು ಮನೆಯ ಕಾಂಪೌಂಡ್‌ ಅಥವಾ ಹೊರಗೋಡೆಗೆ 3 ಅಂಗುಲ/5 ಅಂಗುಲ ವಿಸ್ತೀರ್ಣದ ಚಿಕ್ಕ ಬೋರ್ಡ್‌ ಕೂಡ್ರಿಸಲಾಗುತ್ತದೆ. ಕಸ ಸಂಗ್ರಹಿಸುವವರಿಗೆ ಟ್ಯಾಗ್‌ ನೀಡಲಾಗಿರುತ್ತದೆ. ಅವರು ಕಸ ಸಂಗ್ರಹಿಸಿದ ತಕ್ಷಣವೇ ತಮ್ಮ ಟ್ಯಾಗನ್ನು ಆ ಬೋರ್ಡ್‌ಗೆ ಹಿಡಿಯಬೇಕು. ಇದರಿಂದ ಕಸ ಸಂಗ್ರಹಕಾರರು ಕಸ ಸಂಗ್ರಹಿಸಿದ ಬಗ್ಗೆ ಮಾಹಿತಿ ಸಿಗುತ್ತದೆ. ಇದರಿಂದ ಯಾವುದೇ ಮನೆಯೂ ಕಸ ಸಂಗ್ರಹದಿಂದ ಹೊರಗೆ ಉಳಿಯುವುದಿಲ್ಲ.

ಪ್ರಯೋಗಾರ್ಥ ಎರಡು ವಾರ್ಡ್‌ : ಅವಳಿ ನಗರದಲ್ಲಿ ಎಲ್ಲ ವಾರ್ಡ್‌ಗಳಲ್ಲಿ ಕಸ ಸಂಗ್ರಹಿಸಲು 176 ವಾಹನಗಳಿವೆ. ಈಗಾಗಲೇ ಪ್ರಯೋಗಾರ್ಥವಾಗಿ ಧಾರವಾಡದ 14ನೇ ವಾರ್ಡ್‌ ಹಾಗೂ ಹುಬ್ಬಳ್ಳಿಯ 24ನೇ ವಾರ್ಡ್‌ನಲ್ಲಿ ಮನೆಗಳಿಗೆ ಆರ್‌ ಎಫ್‌ಐಡಿ ಬೋರ್ಡ್‌ಗಳನ್ನು ಜೋಡಿಸಲಾಗಿದೆ.ಆರ್‌ಎಫ್‌ಐಡಿ ಯೋಜನೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ವಿಲೀನಗೊಳಿಸಿದ್ದರಿಂದ ಸ್ಮಾರ್ಟ್‌ ಸಿಟಿ ಯೋಜನೆಯಡಿ ಉಳಿದ ವಾರ್ಡ್‌ಗಳಲ್ಲಿ ಯೋಜನೆ ಅನುಷ್ಠಾನ ಗೊಳ್ಳಲಿದೆ.

Advertisement

ನಿರ್ವಹಣಾ  ಕೇಂದ್ರ : ಅವಳಿ ನಗರದ ಪ್ರತಿ ಮನೆಯಲ್ಲಿಯೂ ಕಸ ಸಂಗ್ರಹ ಮಾಡಿದ ಬಗ್ಗೆ ಇಂಟಿಗ್ರೇಟೆಡ್‌ ಕಮಾಂಡೆಂಟ್‌ ಕಂಟ್ರೋಲ್‌ ಸೆಂಟರ್‌ನಲ್ಲಿ ಮಾಹಿತಿ ದೊರೆಯಲಿದೆ. ನ್ಯೂ ಕಾಟನ್‌ಮಾರ್ಕೆಟ್‌ನ ಸಾಂಸ್ಕೃತಿಕ ಭವನದ ಮೇಲ್ಮಹಡಿಯಲ್ಲಿ ಸೆಂಟರ್‌ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕೇಂದ್ರದಿಂದ ಯಾವ ವಾಹನ ಎಲ್ಲಿ ಕಸ ಸಂಗ್ರಹ ಮಾಡುತ್ತಿದೆ ಎಂಬ ಬಗ್ಗೆ ಕೂಡ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಕಸ ಸಂಗ್ರಹ ವಾಹನಗಳಿಗೆ ಪ್ಯುಯೆಲ್‌ ಸೆನ್ಸಾರ್‌ ಅಳವಡಿಸಲಾಗುತ್ತಿದೆ. ಇದರಿಂದ ಇಂಧನದ ಸದ್ಬಳಕೆ ಸಾಧ್ಯವಾಗುತ್ತದೆ. ಆರಂಭದಲ್ಲಿ 10 ದೊಡ್ಡವಾಹನಗಳಿಗೆ ಸೆನ್ಸಾರ್‌ಅಳವಡಿಸ ಲಾಗುತ್ತದೆ.

ನ್ಯೂ ಕಾಟನ್‌ ಮಾರ್ಕೆಟ್‌ನ ಸಾಂಸ್ಕೃತಿಕ ಭವನದ ಮೇಲ್ಮಹಡಿಯಲ್ಲಿ ತಾತ್ಕಾಲಿಕ ಇಂಟಿಗ್ರೇಟೆಡ್‌ ಕಮಾಂಡೆಂಟ್‌ ಕಂಟ್ರೋಲ್‌ ಸೆಂಟರ್‌ 10-15 ದಿನಗಳಲ್ಲಿ ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ 10,000 ಮನೆಗಳಿಗೆ ಐಆರ್‌ಎಫ್‌ಡಿ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಮನೆಗಳಿಗೆ ಅಳವಡಿಸಲಾಗುವುದು. ಇದು ಸಮರ್ಪಕ ಕಸ ಸಂಗ್ರಹಕ್ಕೆ ಪೂರಕವಾಗಲಿದೆ.-ಎಸ್‌.ಎಚ್‌.ನರೇಗಲ್‌, ಸ್ಮಾರ್ಟ್‌ಸಿಟಿ ಯೋಜನಾಧಿಕಾರಿ

 ಉಕದಲ್ಲಿ ಮೊದಲ ಬಾರಿ ಕಸ ಸಂಗ್ರಹ ವಾಹನಗಳಿಗೆ ಆರ್‌ಎಫ್‌ ಐಡಿ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ನಗರದ ಬಡಾವಣೆಗಳಲ್ಲಿ ಕಸ ಸಂಗ್ರಹಿಸುವ ಎಲ್ಲ 176 ವಾಹನಗಳಲ್ಲಿ ಕಸ ಎತ್ತುವ ಸಿಬ್ಬಂದಿಗೆ ಟ್ಯಾಗ್‌ ನೀಡಲಾಗುತ್ತಿದೆ. ಎಲ್ಲ ಮನೆಗಳ ಕಸ ಸಂಗ್ರಹ ಯೋಜನೆ ಉದ್ದೇಶವಾಗಿದೆ. ಅವಳಿನಗರದಲ್ಲಿ ಸದ್ಯಕ್ಕೆ 2 ವಾರ್ಡ್‌ಗಳಲ್ಲಿ ಇದನ್ನು ಅನುಷ್ಠಾನಗೊಳಿಸಲಾಗಿದ್ದು, ಮುಂದೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಎಲ್ಲ ವಾರ್ಡ್‌ಗಳಿಗೆ ವಿಸ್ತರಿಸಲಾಗುತ್ತದೆ.ನಾಗರಿಕರು ಹಸಿಕಸ ಹಾಗೂ ಒಣ ಕಸ ಪ್ರತ್ಯೇಕಿಸಿ ನೀಡಬೇಕು.-ವಿಜಯಕುಮಾರ,ಕಾರ್ಯನಿರ್ವಾಹಕ ಅಭಿಯಂತ, ಪಾಲಿಕೆ ಘನತ್ಯಾಜ್ಯ ನಿರ್ವಹಣಾ ವಿಭಾಗ

 

-ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next