Advertisement
ಭಯಂಕರ ಹಠಕ್ಕೆ ಬಿದ್ದಿದ್ದೇನೆ. ಇಂದು ಅವನನ್ನು ಮನೆಯಿಂದ ಆಚೆ ಕಳುಹಿಸೋದಕ್ಕೆ ಎಲ್ಲ ರೀತಿಯ ಸ್ಕೆಚ್ ಹಾಕಿದ್ದೇನೆ. ಅವನ ಜಾಗಕ್ಕೆ ಇನ್ನೂ ಸ್ಮಾರ್ಟ್ ಆಗಿರುವವನ್ನು ಕರೆತರಬೇಕು. ಈ ಬಾಯ್‌ಫ್ರೆಂಡ್ ನನ್ನೊಂದಿಗೆ ಎಂಟು ವರ್ಷಗಳಿಂದ ಇದ್ದಾನೆ. ಅವನನ್ನು ಕಳುಹಿಸಿಕೊಡಲು ಒಳಗೇನೋ ನೋವಿದ್ದರೂ, ಹಾಗೆ ಬೀಳ್ಕೊಡುವುದು ಅನಿವಾರ್ಯ. ಯಾಕೋ ಅವನು, ಆಗಿಂದ್ದಾಗ್ಗೆ ಮೌನ ತಳೆದು ತಟಸ್ಥನಾಗಿ ಬಿಡುತ್ತಿದ್ದ. ಅದನ್ನು ನೋಡಿ ನನಗೂ ಸಾಕಾಗಿ ಹೋಗಿದೆ. ನನ್ನ ನಡವಳಿಕೆಯಿಂದ ಅವನಿಗೆ ಬೇಸರವಾಗುತ್ತದೆ, ನಿಜ. ಆದರೆ, ಬೇರೆ ದಾರಿಯೇ ಇಲ್ವಲ್ಲಾ? ಇಷ್ಟು ದಿನ ಅವನನ್ನು ಓಲೈಸಿ ಜೊತೆಗಿದ್ದುದೇ ಹೆಚ್ಚಾಯ್ತು.
Related Articles
Advertisement
ಅವನೊಂದಿಗಿನ ಬಂಧ ಶುರುವಿಟ್ಟುಕೊಂಡ ದಿನದಿಂದಲೇ ಅದೊಂಥರಾ ಧ್ಯಾನ ಸ್ಥಿತಿ ನನ್ನದು. ಊಟ ಮಾಡುವಾಗ ಇರಲಿ, ಬಾತ್‌ರೂಮ್‌ಗೂ ಅವನದೇ ಸಾಂಗತ್ಯ ಬೇಕೆನ್ನಿಸುವಷ್ಟು ಅಹವಾಲು ಈ ಮನಸ್ಸಿನದ್ದು. ಮೂರೊತ್ತೂ ಮಾತು, ಅದೆಂಥಧ್ದೋ ದಿಟ್ಟಿಸಿ ನೋಡುತ್ತಲೇ ಇರಬಯಸುವ ಕಣ್ಣುಗಳು, ಜೊತೆಗೆ ಬೆರಳುಗಳಿಂದ ನೇವರಿಸುತಲೇ ಮುದ್ದಿಸುವ ಕೈಗಳು… ಹೀಗೆ ದಿನಗಳು ಉರುಳಿದ್ದು ಗೊತ್ತಾಗಲೇ ಇಲ್ಲ. ಅವನೆಷ್ಟು ತುಂಟನೆಂದರೆ, ಕಾಲೇಜು, ಪರೀಕ್ಷೆ, ಆಫೀಸು… ಅದೆಂಥದ್ದೇ ಮುಖ್ಯ ಕೆಲಸಗಳಿದ್ದರೂ ಅವನ ಕಾಟವನ್ನೇ ಸಹಿಸಿಕೊಳ್ಳಬೇಕು. ನನಗೂ ಅದೇ ಚಂದಿತ್ತು. ಕೆಲವೊಮ್ಮೆ ರಾತ್ರಿ ಎಬ್ಬಿಸಿಬಿಡುತ್ತಿದ್ದ. ಅವನ ನೆನಪು, ಅವನ ಸನಿಹ ಖುಷಿಕೊಡುತ್ತಿತ್ತು. ಅಪ್ಪ- ಅಮ್ಮ ಕೆಲವೊಮ್ಮೆ ಅವನೊಟ್ಟಿಗಿರುವದನ್ನು ಕಂಡು ಬೈದರೂ, ನೋಟ್ಸು- ಪಾಠಗಳ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ ಕೂಡ.
ಅವನೊಬ್ಬ ಮಾಯಾವಿ. ಅವನಿಲ್ಲದೆ ನನ್ನ ದಿನ ಶುರುವಾಗುವುದೂ ಇಲ್ಲ, ಕೊನೆಯಾಗುವುದೂ ಇಲ್ಲ. ಬೆಳಗ್ಗೆ ಅವನೇ ಎಬ್ಬಿಸಬೇಕು. ಮರೆತ ಕೆಲಸಗಳನೆಲ್ಲಾ ನೆನಪಿಸಬೇಕು. ತಿಂಡಿ ತಿನ್ನಲು ಕೂತಾಗಲೂ ಅವನು ನನ್ನ ಕೈಹಿಡಿದಿರಬೇಕು. ನನಗೆ ಬೇಸರವಾದಾಗ ಹಾಡನು ಹಾಡಬೇಕು. ಗಂಟೆಗೊಮ್ಮೆಯಾದರೂ ಅವನಿರುವಿಕೆಯ ನೆನಪಿಸಬೇಕು. ಇಲ್ಲದಿದ್ದರೆ ಅದೇನೋ ತಳಮಳ ಎದೆಯಲಿ.
ಅಬ್ಟಾ! ಅವನ ಟ್ಯಾಲೆಂಟೇ ನನಗೆ ಅಚ್ಚರಿ. ಆತ ಬಹಳ ಚತುರ. ಚಾಣಾಕ್ಷ. ಮಹಾ ಪಾಕಡಾ. ಅವನ ಬಳಕೆ ಹಿತಮಿತವಾಗಿರಬೇಕು. ಇಲ್ಲದೇ ಹೋದರೆ, ನಾವ್ಯಾರೂ ಈ ಜಗತ್ತಿಗೇ ಸಂಬಂಧಿಸಿಲ್ಲ ಎನ್ನುವಷ್ಟು ದೂರ ಸರಿದು ಬಿಡುತ್ತೇವೆ. ಕೊನೆಗೆ “ಅವಳು ಮೊಬೈಲ್ ವ್ಯಸನಿ’ ಅಂತ ಪಟ್ಟ ಕಟ್ಟುಬಿಡುತ್ತಾರೆ. ಈ ಸ್ಮಾರ್ಟ್‌ಫೋನ್ ಏನಿದ್ದರೂ ಜೊತೆಗಿರೋದು ಕೆಲವೇ ವರುಷ ಮಾತ್ರವೇ. ಈ ಪುಟ್ಟ ಅವಧಿಯಲ್ಲೇ ಬಾಯ್‌ಫ್ರೆಂಡ್ ಆಗಿಬಿಡುತ್ತವೆ. ಬೇರೆ ಸಂಬಂಧಗಳನ್ನು ಬಿಟ್ಟರೂ ಪರವಾಗಿಲ್ಲ, ಮೊಬೈಲಿಲ್ಲದೆ ಜೀವನ ಮಾತ್ರ ಸಾಗಲ್ಲ ಎನ್ನುವಷ್ಟು ಇಂದು ಪ್ರಪಂಚ ಬದಲಾಗಿದೆ.
ಈಗ ಹೇಳಿ, ನಾನು ಅವನಿಗೆ ಬಾಯ್‌ಫ್ರೆಂಡ್ ಅಂದಿದ್ದು ತಪ್ಪೇ?
ಜಮುನಾ ರಾಣಿ ಎಚ್.ಎಸ್.