Advertisement

ತಿಂಗಳಾಂತ್ಯಕ್ಕೆ ರಸ್ತೆಗೆ ಸ್ಮಾರ್ಟ್‌ ಸೈಕಲ್‌

11:55 AM Mar 07, 2020 | Suhan S |

ಹುಬ್ಬಳ್ಳಿ: ಪರಿಸರ ಸ್ನೇಹಿ ಸೈಕಲ್‌ ಸಂಚಾರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಂಡಿದ್ದ ಸ್ಮಾರ್ಟ್‌ ಸೈಕಲ್‌ ಪಾಥ್‌ ಯೋಜನೆಯ ಬಹುತೇಕ ಕಾರ್ಯಗಳು ಪೂರ್ಣಗೊಂಡಿದ್ದು, ಮಹಾನಗರದಲ್ಲಿ ಸ್ಮಾರ್ಟ್‌ ರಸ್ತೆಗಳು ಸಿದ್ಧವಾಗಿರುವ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಸ್ಮಾರ್ಟ್‌ ಸೈಕಲ್‌ಗ‌ಳು ಮಾರ್ಚ್‌ ಅಂತ್ಯದೊಳಗೆ ರಸ್ತೆಗಿಳಿಯಲಿವೆ.

Advertisement

ಜನರ ಆರೋಗ್ಯ, ಮಹಾನಗರದ ವಾಯುಮಾಲಿನ್ಯ ನಿಯಂತ್ರಿಸುವ ಕಾರಣದಿಂದ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಕೈಗೊಂಡ ಈ ಯೋಜನೆಗೆ ಪೂಕರವಾಗಿ ಸ್ಮಾರ್ಟ್‌ ರಸ್ತೆಗಳ ಕೊರತೆಯಿಂದ ಯೋಜನೆ ವಿಳಂಬಕ್ಕೆ ಕಾರಣವಾಗಿತ್ತು. ಇದೀಗ ಸ್ಮಾರ್ಟ್‌ ರಸ್ತೆಗಳು ತಯಾರಾಗಿರುವುದರಿಂದ ಈ ತಿಂಗಳ ಅಂತ್ಯದೊಳಗೆ ಸೈಕಲ್‌ಗ‌ಳನ್ನು ರಸ್ತೆಗಳಿಸಲು ಸಿದ್ಧತೆ ನಡೆಯುತ್ತಿದೆ.

ಬೆಂಗಳೂರಿನ ಟ್ರಿನಿಟಿ ಎನ್ನುವ ಕಂಪನಿಗೆ ಈಗಾಗಲೇ ವರ್ಕ್‌ಆರ್ಡರ್‌ ನೀಡಲಾಗಿದ್ದು, 375 ಸೈಕಲ್‌ಗ‌ಳ ಪೈಕಿ ಮೊದಲ ಹಂತದಲ್ಲಿ ಕನಿಷ್ಠ 50 ಸೈಕಲ್‌ಗ‌ಳು ಸಂಚರಿಸಬೇಕು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಸೂಚಿಸಲಾಗಿದೆ. ಹೀಗಾಗಿ ಮಾರ್ಚ್‌ ತಿಂಗಳ ಅಂತ್ಯಕ್ಕೆ ಸ್ಮಾರ್ಟ್‌ ಸೈಕಲ್‌ಗ‌ಳು ಜನರ ಬಳಕೆಗೆ ದೊರೆಯಲಿವೆ.

ನೋಂದಣಿ ಕಡ್ಡಾಯ :  ಸ್ಮಾರ್ಟ್‌ ಸೈಕಲ್‌ಗ‌ಳನ್ನು ಪಡೆಯಬೇಕಾದರೆ ಆಧಾರ್‌ ಕಾರ್ಡ್‌ ಹಾಗೂ ಮೊಬೈಲ್‌ ನಂಬರ್‌ ನೋಂದಣಿ ಮಾಡುವುದು ಕಡ್ಡಾಯವಾಗಿರುತ್ತದೆ. ಒಮ್ಮೆ ನೋಂದಣಿಯಾದರೆ ನಂತರದಲ್ಲಿ ಆಧಾರ್‌ ಸಂಖ್ಯೆ ನೀಡಿ ಪರಿಚಯವನ್ನು ಖಾತ್ರಿಪಡಿಸಿ ಸೈಕಲ್‌ ಪಡೆಯಬಹುದಾಗಿದೆ. ಸ್ಟೇಶನ್‌ಗಳು ಬಹುತೇಕ ಸ್ವಯಂಚಾಲಿತವಾಗಿರುತ್ತದೆ. ಒಂದು ಸ್ಟೇಷನ್‌ನಿಂದ ಪಡೆದ ಸೈಕಲ್‌ ಅನ್ನು ಇನ್ನೊಂದು ಯಾವುದೇ ಸ್ಟೇಶನ್‌ನಲ್ಲೂ ಬಿಟ್ಟು ಹೋಗಬಹುದಾಗಿದೆ.

ಬಳಕೆದಾರರ ಸ್ನೇಹಿ :  ಚಿಕ್ಕಮಕ್ಕಳಿಂದ ಹಿಡಿದು ವೃದ್ಧರೂ ಈ ಸೈಕಲ್‌ಗ‌ಳನ್ನು ಬಳಸಬಹುದಾಗಿದೆ. 25,000 ರೂ. ಮೌಲ್ಯದ ಈ ಸೈಕಲ್‌ ಕಡಿಮೆ ಭಾರ ಹೊಂದಿರುತ್ತದೆ. ಅಗತ್ಯಕ್ಕೆ ತಕ್ಕಂತೆ ಎತ್ತರ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಈ ಸೈಕಲ್‌ಗ‌ಳಿಗೆ ಪ್ರಮುಖವಾಗಿ ಆರ್‌ಎಫ್‌ಐಸಿ ತಂತ್ರಜ್ಞಾನ ಅಳವಡಿಸಲಾಗಿರುತ್ತದೆ. ಪ್ರತಿಯೊಂದು ಸೈಕಲ್‌ನ ಓಡಾಟದ ಮೇಲೆ ನಿಗಾ ಇರುತ್ತದೆ. ಒಂದು ವೇಳೆ ಗುರುತಿಸಿದ ಸೈಕಲ್‌ ಪಾಥ್‌ ಹೊರತುಪಡಿಸಿ ಇತರೆಡೆ ಸಂಚಾರ ಮಾಡಿದರೆ ಸವಾರನಿಗೆ ಬೀಪ್‌ ಸೌಂಡ್‌ ಮೂಲಕ ಎಚ್ಚರಿಕೆ ನೀಡುತ್ತದೆ. ಅನ್ಯ ಮಾರ್ಗದತ್ತ ಚಲಿಸಿದರೆ ಕಾಟನ್‌ ಮಾರ್ಕೆಟ್‌ನಲ್ಲಿರುವ ಸಾಂಸ್ಕೃತಿಕ ಭವನದಲ್ಲಿ ನಿರ್ಮಾಣವಾಗುತ್ತಿರುವ ಇಂಟಿಗ್ರೇಟೆಡ್‌ ಕಮಾಂಡ್‌ ಕಂಟ್ರೋಲ್‌ ಸೆಂಟರ್‌ಗೆ ಸಂದೇಶ ಹೋಗುತ್ತದೆ. ಸೈಕಲ್‌ ಸಂಚರಿಸುತ್ತಿರುವ ನಿರ್ದಿಷ್ಟ ಸ್ಥಳ ಗುರುತಿಸಿ ಗಸ್ತಿನಲ್ಲಿರುವ ತಂಡ ಆಗಮಿಸಿ ತನ್ನ ಸುಪರ್ದಿಗೆ ಪಡೆದು ದಂಡ ವಸೂಲಿ ಮಾಡಲಾಗುತ್ತದೆ.

Advertisement

ಎಲ್ಲೆಲ್ಲಿ ಸೈಕಲ್‌ ಪಾಥ್‌? ಎಲ್ಲೆಲ್ಲಿ ಸ್ಟೇಶನ್‌? :  ಟೆಂಡರ್‌ ಶ್ಯೂರ್‌ ರಸ್ತೆಯಲ್ಲಿ ಪ್ರತ್ಯೇಕ ಸೈಕಲ್‌ ಪಾಥ್‌ ಇರುವುದರಿಂದ ಸ್ಟೇಶನ್‌ ಮಾತ್ರ ನಿರ್ಮಾಣವಾಗಲಿವೆ. ರಿಂಗ್‌ ಮಾದರಿಯ ರಸ್ತೆಯನ್ನಾಗಿ ಸೈಕಲ್‌ ಗುರುತಿಸಲಾಗುತ್ತದೆ. ಪ್ರಮುಖವಾಗಿ ಮಾರುಕಟ್ಟೆ, ಶಿಕ್ಷಣ ಸಂಸ್ಥೆ, ಹೆಚ್ಚು ಜನಸಂಚಾರ ಮಾಡುವ ರಸ್ತೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕಾಡಸಿದ್ದೇಶ್ವರ ಕಾಲೇಜು, ಬಿವಿಬಿ, ಶಿರೂರು ಪಾರ್ಕ್‌ನ ಅಕ್ಕಪಕ್ಕದ ರಸ್ತೆಗಳು, ತತ್ವದರ್ಶ ಆಸ್ಪತ್ರೆ ಮುಂಭಾಗದ ರಸ್ತೆ, ಡೆನಿಸನ್ಸ್‌ ಹೋಟೆಲ್‌ ಬಳಿ ರಸ್ತೆ ಸೇರಿದಂತೆ ಆರಂಭದಲ್ಲಿ 7-8 ರಸ್ತೆಗಳು ಸೈಕಲ್‌ ಸವಾರಿಗೆ ದೊರಕಲಿವೆ. ಸೈಕಲ್‌ ಪಾಥ್‌ಗಳಲ್ಲಿ ವಾಹನಗಳ ಸಂಚಾರ ಹಾಗೂ ನಿಲುಗಡೆ ನಿಷಿದ್ಧವಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳುವ ಅವಕಾಶಗಳಿವೆ.

ಸ್ವಂತ ಸೈಕಲ್‌ಗ‌ಳಿಗೂ ಅವಕಾಶ : ಗುತ್ತಿಗೆದಾರರು ನೀಡುವ ಸೈಕಲ್‌ಗ‌ಳನ್ನು ಹೊರತುಪಡಿಸಿ ಇನ್ನಿತರೆ ಯಾವುದೇ ಸೈಕಲ್‌ಗ‌ಳನ್ನು ಈ ಪಾಥ್‌ನಲ್ಲಿ ಬಳಸುವಂತಿರಲಿಲ್ಲ. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಕಡಿವಾಣ ಹಾಕುವುದರಿಂದ ಶುಲ್ಕ ಪಾವತಿಸಿ ಸೈಕಲ್‌ ಸವಾರಿ ಮಾಡುವವರ ಪ್ರಮಾಣ ಕಡಿಮೆಯಾಗುತ್ತದೆ. ಯೋಜನೆಯ ಮೂಲ ಉದ್ದೇಶ ಈಡೇರುವುದಿಲ್ಲ ಎನ್ನುವ ಕಾರಣಕ್ಕೆ ಈ ನಿಯಮ ತಿದ್ದುಪಡಿ ಮಾಡಿ ಸ್ವಂತದ ಸೈಕಲ್‌ಗ‌ಳನ್ನು ಈ ಪಾಥ್‌ನಲ್ಲಿ ಸಂಚರಿಸಲು ಮುಕ್ತ ಅವಕಾಶ ನೀಡಲಾಗಿದೆ.

ಮೊದಲ ಒಂದು ಗಂಟೆ ಉಚಿತ : ಶೇ.60 ಪೆಟ್ರೋಲ್‌ ದ್ವಿಚಕ್ರ ವಾಹನಗಳಿಗೆ ಬಳಕೆಯಾಗುತ್ತಿದೆ. ಪ್ರಮುಖವಾಗಿ ದ್ವಿಚಕ್ರ ವಾಹನ ಸವಾರರನ್ನು ಸೈಕಲ್‌ನತ್ತ ಆಕರ್ಷಿಸುವುದು ಹಾಗೂ ಯೋಜನೆ ಯಶಸ್ಸುಗೊಳಿಸುವುದಕ್ಕಾಗಿ ಮೊದಲ ಒಂದು ಗಂಟೆ ಸೈಕಲ್‌ ಬಳಕೆ ಉಚಿತವಾಗಿದೆ. ನಂತರದ ಅವಧಿಗೆ ಒಂದು ಗಂಟೆಗೆ 15-20 ರೂ. ನಿಗದಿ ಮಾಡುವ ಕುರಿತು ಚರ್ಚೆಗಳು ನಡೆದಿದ್ದು, ಅಂತಿಮ ತೀರ್ಮಾನವಾಗಿಲ್ಲ. ಪೇಟಿಎಂ ಮೂಲಕವೂ ಬಳಕೆ ಶುಲ್ಕ ಪಾವತಿ ಮಾಡಬಹುದು. ಎರಡನೇ ಹಂತದಲ್ಲಿ ಧಾರವಾಡದಲ್ಲೂ ಸ್ಮಾರ್ಟ್‌ ಸೈಕಲ್‌ ಒದಗಿಸುವ ಚಿಂತನೆಯಿದೆ. ಕವಿವಿಯಿಂದ ಕೃಷಿ ವಿವಿ ವರೆಗಿನ ರಸ್ತೆ ಇದಕ್ಕೆ ಸೂಕ್ತವಾಗಿದ್ದು, ಸೈಕಲ್‌ ಪಾಥ್‌ ನಿರ್ಮಾಣ, ಸ್ಟೇಶನ್‌, ನಿರ್ವಹಣೆಗೆ ಗುತ್ತಿಗೆದಾರರು ಅಂತಿಮಗೊಳಿಸಿದರೆ ಅಲ್ಲಿಯೂ ಈ ಸೇವೆ ದೊರೆಯಲಿದೆ.

ಸೈಕಲ್‌ ಬಳಕೆಯಿಂದ ಪ್ರಮುಖವಾಗಿ ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ದೇಶದ ಆರ್ಥಿಕ ಪ್ರಗತಿ, ಇಂಧನ ಉಳಿತಾಯ, ವಾಯುಮಾಲಿನ್ಯ ತಡೆಗಟ್ಟಲು ಸಹಕಾರಿಯಾಗಿದೆ. ಸ್ಮಾರ್ಟ್‌ ರಸ್ತೆಗಳು ಬಳಕೆಗೆ ದೊರೆತಿರುವುದರಿಂದ ಆದಷ್ಟು ಬೇಗ ಸ್ಮಾರ್ಟ್‌ ಸೈಕಲ್‌ ಆರಂಭಿಸಬೇಕಾಗಿದೆ. ಬಹುತೇಕ ಮಾರ್ಚ್‌ ಅಂತ್ಯದೊಳಗೆ ಒಂದಿಷ್ಟು ಸೈಕಲ್‌ಗ‌ಳು ರಸ್ತೆಗಿಳಿಯಲಿವೆ.-ಎಸ್‌.ಎಚ್‌. ನರೇಗಲ್ಲ, ವಿಶೇಷಾಧಿಕಾರಿ, ಸ್ಮಾರ್ಟ್‌ಸಿಟಿ ಯೋಜನೆ

 

­ಹೇಮರಡ್ಡಿ ಸೈದಾಪುರ

 

Advertisement

Udayavani is now on Telegram. Click here to join our channel and stay updated with the latest news.

Next