Advertisement

ಸ್ಮಾರ್ಟ್‌ ಸಿಟಿ ಕಾಮಗಾರಿ ಶೀಘ್ರದಲ್ಲೇ ಮುಗಿಯಲಿ

01:59 AM Jul 12, 2022 | Team Udayavani |

ದೇಶದಲ್ಲಿ ಇರುವ ನಗರಗಳನ್ನು ಇನ್ನಷ್ಟು ಸ್ಮಾರ್ಟ್‌ ಮಾಡಬೇಕು, ಇವುಗಳಿಗೊಂದು ಹೊಸ ರೂಪಕೊಡಬೇಕು ಎಂಬ ಉದ್ದೇಶದಿಂದ ಜಾರಿಗೆ ತರಲಾಗಿದ್ದ ಸ್ಮಾರ್ಟ್‌ಸಿಟಿ ಕಾಮಗಾರಿ ವೇಗ ಕುಂಠಿತಗೊಂಡಿದ್ದು, ಟ್ರಾಫಿಕ್‌ ಸೇರಿದಂತೆ ವಿವಿಧ ಸಮಸ್ಯೆಗಳಿಂದಾಗಿ ಜನರೂ ಬೇಸರಗೊಂಡಿ ದ್ದಾರೆ. ರಾಜ್ಯದ ಏಳು ನಗರಗಳಲ್ಲಿ ಸುಮಾರು 7 ವರ್ಷಗಳಿಂದ ಈ ಕಾಮಗಾರಿ ನಡೆಯುತ್ತಿದ್ದು ಇನ್ನೂ ಅಂತ್ಯವಾಗಿಲ್ಲ. ಅಲ್ಲದೇ, 2023ಕ್ಕೆ ಕಾಮಗಾರಿ ಮುಗಿಸಬೇಕು ಎಂಬ ಗಡುವನ್ನು ನೀಡಲಾಗಿದ್ದು, ಇದರೊಳಗೆ ಮುಗಿಸಲು ಎಲ್ಲಾ ಕ್ರಮ ಕೈಗೊಳ್ಳಬೇಕಾಗಿದೆ.

Advertisement

ಬೆಂಗಳೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಮಂಗಳೂರು, ತುಮಕೂರು ನಗರಗಳಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಬೆಂಗಳೂರಿನ ಮಧ್ಯಭಾಗದಲ್ಲೇ ಈ ಕಾಮಗಾರಿ ನಡೆಸಲಾಗುತ್ತಿದ್ದು, ಒಂದಲ್ಲ ಒಂದು ರಸ್ತೆಗಳು ಮುಚ್ಚಿವೆ. ಅಷ್ಟೇ ಅಲ್ಲ, ಇದರಿಂದಾಗಿ ವಾಹನ ಸವಾರರಂತೂ ಕಿರಿಕಿರಿ ಅನುಭವಿಸುತ್ತಿದ್ದು, ಕಾಮಗಾರಿ ಮುಗಿದರೆ ಸಾಕು ಎಂದು ಹೇಳುತ್ತಿದ್ದಾರೆ.

ಸ್ಮಾರ್ಟ್‌ಸಿಟಿ ಅನುದಾನ ಮತ್ತು ಇತರೆ ಖಾಸಗಿ ಸಹಭಾಗಿತ್ವದ ಆಧಾರದಲ್ಲಿ ಈ ಕಾಮಗಾರಿಗಳು ನಡೆಯುತ್ತಿವೆ. ಕೆಲವು ಕಡೆಗಳಲ್ಲಿ ಇನ್ನೂ ಡಿಪಿಆರ್‌ ಆಗಿಲ್ಲ. ಇನ್ನೂ ಕೆಲವೆಡೆ ಟೆಂಡರ್‌ ಕೂಡ ಕರೆದಿಲ್ಲ. ಹೀಗಾಗಿ 2023ರ ಜೂನ್‌ ಅಂತ್ಯದ ವೇಳೆಗೆ ಕಾಮಗಾರಿ ಮುಗಿಸಲು ಸಾಧ್ಯವೇ ಎಂಬುದನ್ನು ನೋಡಬೇಕಾಗಿದೆ.

ಕೇಂದ್ರ ಸರಕಾರವೇ ಈ ಗಡುವು ನೀಡಿರುವುದರಿಂದ ಸ್ಥಳೀಯಾಡಳಿತಗಳು ಮತ್ತು ಕಾಮಗಾರಿಗಳ ಉಸ್ತುವಾರಿ ಹೊತ್ತವರು ಇನ್ನು ನಿಧಾನ ಮಾಡಬಾರದು. ಒಂದು ವಿಚಾರವೆಂದರೆ, ಈ ಕಾಮಗಾರಿ ಮುಗಿದ ಮೇಲೆ ಜನರಿಗೆ ಸಹಾಯವಾಗುತ್ತದೆ ಎಂಬುದು ಸತ್ಯ. ಆದರೆ, ಇಂಥ ಕಾಮಗಾರಿಗಳಿಗೆ ಇಂತಿಷ್ಟು ದಿನವೆಂದು ನಿಗದಿ ಪಡಿಸಿಕೊಂಡೇ ಮಾಡಬೇಕು. ಆಗ ಜನರಿಗೂ ಒಂದಷ್ಟು ಸಹಾಯ ಮಾಡಿದಂತೆ ಆಗುತ್ತದೆ.

ಈಗಿನ ಲೆಕ್ಕಾಚಾರದ ಪ್ರಕಾರ ಸದ್ಯ ರಾಜ್ಯದಲ್ಲಿ 208 ಕಾಮಗಾರಿಗಳು ಮುಗಿದಿವೆ. ಇದಕ್ಕಾಗಿ ಈಗಾಗಲೇ 1,363 ಕೋಟಿ ರೂ. ವೆಚ್ಚ ಮಾಡಲಾಗಿದೆ. 251 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇವುಗಳಿಗೆ 5,268 ಕೋಟಿ ರೂ.ಗಳನ್ನು ನೀಡಲಾಗಿದೆ. ಇನ್ನು 21 ಕಾಮಗಾರಿಗಳು ಟೆಂಡರ್‌ ಹಂತದಲ್ಲಿದ್ದರೆ, ಎರಡು ಕಾಮಗಾರಿಗಳು ಡಿಪಿಆರ್‌ ಹಂತದಲ್ಲಿವೆ. ಈಗ ಸರಕಾರ ತುರ್ತಾಗಿ ಮಾಡಬೇಕಾಗಿರುವ ಕೆಲಸವೆಂದರೆ, ಅತ್ಯಂತ ಶೀಘ್ರವಾಗಿ ಟೆಂಡರ್‌ ಮತ್ತು ಡಿಪಿಆರ್‌ ಅನ್ನು ಮುಗಿಸಬೇಕು. ಅಲ್ಲದೆ, ಮಳೆಗಾಲವು ಶುರುವಾಗಿರುವುದರಿಂದ ಹುಶಾರಾಗಿ ಕೆಲಸ ಮಾಡಬೇಕು. ಗಡುವು ನೀಡಿದ್ದಾರೆ ಎಂಬ ಕಾರಣದಿಂದಾಗಿ ಗುಣಮಟ್ಟದಲ್ಲೂ ರಾಜಿಯಾಗಬಾರದು. ಇದನ್ನು ಗಮನದಲ್ಲಿಟ್ಟುಕೊಂಡೇ ಕೆಲಸ ಮಾಡಬೇಕು.

Advertisement

ಕಾಮಗಾರಿ ಸ್ಥಳಗಳಲ್ಲಿ ಜನರು ಅನುಭವಿಸುತ್ತಿರುವ ತೊಂದರೆಗಳನ್ನು ಗಮನದಲ್ಲಿ ಇರಿಸಿಕೊಂಡು ಅವರಿಗೆ ಪೂರಕ ವ್ಯವಸ್ಥೆ ಮಾಡಬೇಕು. ಮಳೆಗಾಲದಲ್ಲಂತೂ, ಕಾಮಗಾರಿಯಿಂದ ಆಗಿರುವ ಗುಂಡಿಗಳು,ರಸ್ತೆ ಅಗೆದಿರುವ ಸ್ಥಳಗಳನ್ನು ರಿಪೇರಿ ಮಾಡಿಕೊಡುವ ಕೆಲಸವನ್ನೂ ಮಾಡಬೇಕು. ಏನೇ ಆಗಲಿ ಇನ್ನೊಂದು ವರ್ಷದಲ್ಲಿ ಕಾಮಗಾರಿಯನ್ನು ಮುಗಿಸುವ ಕೆಲಸವಾಗಲೇಬೇಕು. ಇವುಗಳಿಂದ ಜನರಿಗೆ ಉಪಯೋಗವಾದರಷ್ಟೇ ಈ ಯೋಜನೆಗಳ ಸಾರ್ಥಕತೆ ಸಿಗಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next