Advertisement

ಸ್ಮಾರ್ಟ್‌ ಸಿಟಿ: ಏಳು ಯೋಜನೆಗಳು ಟೆಂಡರ್‌ಗೆ ಸಜ್ಜು!

12:16 PM Nov 08, 2017 | |

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಒಟ್ಟು 37 ಯೋಜನೆಗಳನ್ನು ರೂಪಿಸಿದ್ದು, ಇದರಲ್ಲಿ 19 ಯೋಜನೆಗಳ ಡಿಪಿಆರ್‌ ಬಹುತೇಕ ಸಿದ್ಧಗೊಂಡಿದ್ದರೆ, 7 ಯೋಜನೆಗಳು ಟೆಂಡರ್‌ಗೆ ಸಜ್ಜುಗೊಂಡಿವೆ. ಸ್ಮಾಟ್‌ ಸಿಟಿ ಯೋಜನೆಯ ಪ್ರತಿಯೊಂದು ಕಾಮಗಾರಿಯ ತಾಂತ್ರಿಕ ಹಾಗೂ ಆಡಳಿತಾತ್ಮಕ ಅನುಮೋದನೆಗೆ ರಾಜ್ಯ ಸರ್ಕಾರದ ಉನ್ನತಾಧಿಕಾರ ಸಮಿತಿ ಹಾಗೂ ಎಸ್‌ಪಿವಿ ಆಡಳಿತ ಮಂಡಳಿಯಿಂದಲೇ ಆಗಬೇಕಾಗಿತ್ತು.

Advertisement

ಆದರೆ, ರಾಜ್ಯ ಸರ್ಕಾರ ಸೆ.15ರಂದು ಆದೇಶವೊಂದನ್ನು ಹೊರಡಿಸಿ ಅನುಮೋದನೆ ಅಧಿಕಾರ ವಿಕೇಂದ್ರೀಕರಣಗೊಳಿಸಿದ ಹಿನ್ನೆಲೆಯಲ್ಲಿ 5 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಕಾಮಗಾರಿಗಳಿಗೆ ಸ್ಥಳೀಯವಾಗಿ ತಾಂತ್ರಿಕ ಅನುಮೋದನೆ ಹಾಗೂ ಟೆಂಡರ್‌ ಕರೆಯುವ ಅಧಿಕಾರ ಹಿನ್ನೆಲೆಯಲ್ಲಿ ಏಳು ಕಾಮಗಾರಿಗಳಿಗೆ ಶೀಘ್ರವೇ ಟೆಂಡರ್‌ ಕರೆಯಲಾಗುತ್ತಿದೆ. 

ಯಾವ ಕಾಮಗಾರಿಗಳಿಗೆ ಟೆಂಡರ್‌?: ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಪ್ರಸ್ತುತ 19 ಯೋಜನೆಗಳ ವಿನ್ಯಾಸ, ವಿಸ್ತೃತ ಯೋಜನಾ ವರದಿ(ಡಿಪಿಆರ್‌) ಬಹುತೇಕ ಪೂರ್ಣಗೊಂಡಿದ್ದರೂ, ಸದ್ಯಕ್ಕೆ ಏಳು ಕಾಮಗಾರಿಗಳು ಟೆಂಡರ್‌ಗಾಗಿ ಎದುರು ನೋಡುತ್ತಿವೆ.

ಘನತ್ಯಾಜ್ಯ ನಿರ್ವಹಣೆ, ವಿದ್ಯುತ್‌ ಚಿತಾಗಾರ, ಇ- ಟಾಯ್ಲೆಟ್‌, ಮಳೆ ನೀರು ಕೊಯ್ಲು, ಎನ್‌ಎಂಟಿ ವಲಯ, ಮಳೆ ನೀರು ಚರಂಡಿಗಳು, ಸಮಗ್ರ ವಾಹನ ಟರ್ಮಿನಲ್‌(ಇಂಟಿಗ್ರೇಟೆಡ್‌ ಟ್ರಾನ್ಸ್‌ಪೊರ್ಟ್‌ ಟರ್ಮಿನಲ್‌-ಐಪಿಟಿ) ಸಂಪರ್ಕದ ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗುತ್ತದೆ. 

ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಕುರಿತಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಾದಷ್ಟು ಚರ್ಚೆ, ಪ್ರಯೋಗಾತ್ಮಕ ಯತ್ನಗಳು, ಹೇಳಿಕೆಗಳು ಬಹುಶಃ ರಾಜ್ಯದ ಎಲ್ಲಿಯೂ ಆಗಿಲ್ಲ ಎಂದೆನಿಸುತ್ತದೆ. ಕಳೆದ ಏಳೆಂಟು ವರ್ಷಗಳಿಂದಲೂ ಘನತ್ಯಾಜ್ಯ ವಿಲೇವಾರಿ ಘಟಕ ಇನ್ನೇನು ಬಂದೇ ಬಿಟ್ಟಿತು ಎಂದು ಪಟ್ಟಕ್ಕೇರಿದ ಮಹಾಪೌರರು ಇಲ್ಲಿವರೆಗೂ ಹೇಳುತ್ತಲೇ ಬಂದಿದ್ದಾರೆ. 

Advertisement

ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಪುಣೆ, ಅಹ್ಮದಾಬಾದ್‌, ಸೂರ್ಯಪೇಟೆ, ಸೂರತ್‌ ಹೀಗೆ ವಿವಿಧ ಮಾದರಿಗಳು ಪ್ರಸ್ತಾಪಗೊಂಡಿದ್ದವಾದರೂ ಯಾವೊಂದು  ಅನುಷ್ಠಾನ ಭಾಗ್ಯ ಪಡೆಯಲಿಲ್ಲ. ಇದೀಗ ಸ್ಮಾರ್ಟ್‌ ಸಿಟಿ ಅಡಿಯಲ್ಲಿ ಯೋಜನೆ ಜಾರಿಗೆ ಮುಂದಡಿ ಇರಿಸಲಾಗಿದೆ.  

ಕಸ ಮುಕ್ತ ವಲಯ: ಸ್ಮಾರ್ಟ್‌ ಸಿಟಿ ಯೋಜನೆಯಡಿ ಕಸಮುಕ್ತ ವಲಯಗಳನ್ನು ರೂಪಿಸಲು ನಿರ್ಧರಿಸಲಾಗಿದೆ. ಪ್ರಾಯೋಗಿಕವಾಗಿ ಇದನ್ನು ಕೈಗೊಳ್ಳಲಾಗುತ್ತಿದ್ದು, ಯೋಜನೆಗೆ ಒಟ್ಟು 54 ಲಕ್ಷ ರೂ.ಗಳ ಅಂದಾಜು ವೆಚ್ಚ ರೂಪಿಸಲಾಗಿದೆ.

ಸ್ಮಾರ್ಟ್‌ ಸಿಟಿ ಮಿಷನ್‌ ನಿಂದ ಇದಕ್ಕಾಗಿ 24 ಲಕ್ಷ ರೂ. ನೀಡಲಾಗುತ್ತದೆ. ಸಮಗ್ರ ವಾಹಕ ಟರ್ಮಿನಲ್‌ (ಇಂಟಿಗ್ರೇಟೆಡ್‌ ಟ್ರಾನ್‌ ಪೋರ್ಟ್‌ ಟರ್ಮಿನಲ್‌ -ಟಿಪಿಟಿ) ರಚಿಸಲಾಗುತ್ತದೆ. ಇಲ್ಲಿನ ಹೊಸೂರಿನಲ್ಲಿನ ಪಾಲಿಕೆ ಒಡೆತನದ ಡಾ.ಗಂಗಲ್‌ ಆಸ್ಪತ್ರೆ ಕಟ್ಟಡ ಜಾಗದಲ್ಲಿ ಇದು ಸ್ಥಾಪಿಸಲಾಗುತ್ತಿದೆ.

ಅಂದಾಜು 4.75 ಕೋಟಿ ರೂ. ವೆಚ್ಚದಲ್ಲಿ ಇದನ್ನು ರೂಪಿಸಲಾಗುತ್ತಿದೆ. ಅದೇ ರೀತಿ ಇ-ಶೌಚಾಲಯ ನಿರ್ಮಾಣಕ್ಕೆ ಅಂದಾಜು 96 ಲಕ್ಷ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಈ ಎರಡು ಯೋಜನೆಗಳಿಗೂ ಒಟ್ಟು ಹಣವನ್ನು ಸ್ಮಾರ್ಟ್‌ ಸಿಟಿ ಮಿಷನ್‌ನಿಂದ ನೀಡಲಾಗುತ್ತದೆ. 

ಮಳೆ ನೀರು ಕೊಯ್ಲು ಯೋಜನೆಯಡಿ ಆರಂಭಿಕವಾಗಿ ಪಾಲಿಕೆ ಎಲ್ಲ ಕಟ್ಟಡಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಈ ವ್ಯವಸ್ಥೆ ಅಳವಡಿಸಲು ಯೋಜಿಸಲಾಗಿದೆ. ಅಂದಾಜು 2 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಸ್ಮಾರ್ಟ್‌ ಸಿಟಿ ಮಿಷನ್‌ ಹಾಗೂ ರಾಜ್ಯ ಸರ್ಕಾರ ತಲಾ 1 ಕೋಟಿ ರೂ. ನೀಡಲಿವೆ.

ಮಳೆಗಾಲ ಸಂದರ್ಭದಲ್ಲಿ ರಭಸವಾಗಿ ಬರುವ ನೀರು ಹರಿಯಲು ಚರಂಡಿ ನಿರ್ಮಾಣಕ್ಕೆ ಅಂದಾಜು 5 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿದ್ದು, ಸ್ಮಾರ್ಟ್‌ ಸಿಟಿ ಮಿಷನ್‌ ಹಾಗೂ ರಾಜ್ಯ ಸರ್ಕಾರ ತಲಾ 2.50 ಕೋಟಿ ರೂ. ನೀಡಲಿವೆ. ಎನ್‌ಎಂಟಿ ವಲಯ ನಿರ್ಮಿಸಲಾಗುತ್ತಿದ್ದು, ಇದು ಅಂದಾಜು 4 ಕೋಟಿ ರೂ. ವೆಚ್ಚದ್ದಾಗಿದ್ದು, ಸ್ಮಾರ್ಟ್‌ ಸಿಟಿ ಮಿಷನ್‌ನಿಂದ ಇದನ್ನು ಭರಿಸಲಾಗುತ್ತಿದೆ.

ಈ ಎಲ್ಲ ಕಾಮಗಾರಿಗಳಿಗೆ ಶೀಘ್ರವೇ ಟೆಂಡರ್‌ ಕರೆಯಲಾಗುತ್ತಿದೆ. ಈಗಾಗಲೇ ಸ್ಮಾರ್ಟ್‌ ಸಿಟಿ ಯೋಜನೆಯ ವಿಶೇಷ ವಾಹಕ(ಎಸ್‌ಪಿವಿ) ವೆಬ್‌ಸೈಟ್‌ ಅನಾವರಣಗೊಂಡಿದೆ. ಇದಲ್ಲದೆ ಬೀದಿ ದೀಪಗಳಿಗೆ ಎಲ್‌ಇಡಿ ಅಳವಡಿಕೆ, ಕಟ್ಟಡಗಳ ಮೇಲ್ಛಾವಣಿಯಲ್ಲಿ ಸೌರವಿದ್ಯುತ್‌ ಶಕ್ತಿ ಉಪಕರಣ ಅಳವಡಿಕೆ, ಬಹುಪಯೋಗಿ ಕಾರು ನಿಲುಗಡೆ ಕಟ್ಟಡ, ಸ್ಮಾರ್ಟ್‌ ಐಟಿ-ತ್ಯಾಜ್ಯ ನಿರ್ವಹಣೆ ವ್ಯವಸ್ಥೆ,

ವೈಫೈ ಕಾರಿಡಾರ್‌, ಸಮಗ್ರ ಆದೇಶ ಮತ್ತು ನಿಯಂತ್ರಣ ಕೇಂದ್ರ, ನಗದು ರಹಿತ ಹಾಗೂ ಕಾಗದ ರಹಿತ ಪಾಲಿಕೆ ಆಡಳಿತ, ಸ್ಮಾರ್ಟ್‌  ಆಸ್ತಿಕರ ನಿರ್ವಹಣೆ ವ್ಯವಸ್ಥೆ, ಸ್ಮಾರ್ಟ್‌ ಸಾರ್ವಜನಿಕ ಜಾಹೀರಾತು ನಿರ್ವಹಣಾ ವ್ಯವಸ್ಥೆ ಹೀಗೆ ವಿವಿಧ ಯೋಜನೆಗಳ ವಿನ್ಯಾಸ, ಡಿಪಿಆರ್‌ ಬಹುತೇಕ ಸಿದ್ಧಗೊಂಡಿದ್ದು ತಾಂತ್ರಿಕ, ಆಡಳಿತಾತ್ಮಕ ಅನುಮೋದನೆ ದೊರೆತರೆ ಇವು ಸಹ ಟೆಂಡರ್‌ ಪ್ರಕ್ರಿಯೆಗೆ ಮುಂದಾಗಲಿವೆ.

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next