Advertisement

ಸ್ಮಾರ್ಟ್‌ ಸಿಟಿ ಯೋಜನೆ ಸ್ಲೋಗೆ ಆಕ್ಷೇಪ

05:26 PM Sep 18, 2018 | Team Udayavani |

ದಾವಣಗೆರೆ: ಸ್ಮಾರ್ಟ್‌ಸಿಟಿ ಯೋಜನೆಯಡಿ ಬಿಡುಗಡೆಯಾಗಿರುವ 394 ಕೋಟಿ ರೂ. ಅನುದಾನದಲ್ಲಿ 2 ಕೋಟಿ ರೂ. ಕಾಮಗಾರಿ ಕೈಗೊಂಡಿರುವುದು, 97 ಕೋಟಿ ವೆಚ್ಚದಲ್ಲಿ 0.2 ಟಿಎಂಸಿ ಬ್ಯಾರೇಜ್‌ ನಿರ್ಮಾಣದ ಪ್ರಸ್ತಾಪಕ್ಕೆ ತೀವ್ರ ಅಸಮಾಧಾನ, ಮಾಸಾಂತ್ಯಕ್ಕೆ ಮಂಡಿಪೇಟೆ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ… ಇವು ಸೋಮವಾರ ಶಾಬನೂರು ರಸ್ತೆಯಲ್ಲಿರುವ ಸ್ಮಾರ್ಟ್‌ಸಿಟಿ ಯೋಜನಾ ಕಚೇರಿಯಲ್ಲಿ ನಡೆದ ಸ್ಮಾರ್ಟ್‌ಸಿಟಿ ಯೋಜನೆ ಸಲಹಾ ಸಮಿತಿ ಸಭೆ ಮುಖ್ಯಾಂಶ.

Advertisement

ಸಂಸದ ಜಿ.ಎಂ. ಸಿದ್ದೇಶ್ವರ್‌ ಮಾತನಾಡಿ, ಸ್ಮಾರ್ಟಸಿಟಿ ಯೋಜನೆಯಡಿ 394 ಕೋಟಿ ರೂಪಾಯಿ ಅನುದಾನ ಬಂದಿದೆ. ಈವರೆಗೆ ಕಾಮಗಾರಿಗೆ ಬರೀ 2 ಕೋಟಿ ರೂ. ಖರ್ಚು ಮಾಡಿದ್ದರೆ ವೇತನ, ಡಿಪಿಆರ್‌ ಗೆ 17 ಕೋಟಿ ರೂ. ಖರ್ಚಾಗಿದೆ. 2 ಕೋಟಿ ರೂ. ಅಭಿವೃದ್ದಿ ಕೆಲಸ ಮಾಡುತ್ತಿರುವುದನ್ನು ನೋಡಿದರೆ ಸ್ಮಾರ್ಟ್‌ಸಿಟಿ ಯೋಜನೆ ಕೆಲಸಗಳ ಬಗ್ಗೆ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬುದು ಗೊತ್ತಾಗುತ್ತದೆ ಎಂದು ತೀವ್ರ ಅಸಮಾಧಾನ ವ್ಯಕ್ತಡಿಸಿದರು. ಆಗ ಶಾಸಕ ಶಾಮನೂರು ಶಿವಶಂಕರಪ್ಪ ಸಹ ಸಿದ್ದೇಶ್ವರ್‌ ಆಕ್ಷೇಪಕ್ಕೆ ಧ್ವನಿಗೂಡಿಸಿದರು.

ಸ್ಮಾರ್ಟ್‌ಸಿಟಿ ಯೋಜನೆಯಡಿ ಫಿಸಿಕಲ್‌ ವರ್ಕ್ಸ್ಗೆ ಈವರೆಗೆ 1 ಅಥವಾ 2 ಕೋಟಿ ರೂ. ಮಾತ್ರ ಖರ್ಚಾಗಿದೆ. ಬೇರೆ ರಾಜ್ಯಗಳಲ್ಲಿ ಎಸ್‌ವಿಪಿ ಇದೆ. ಕಾಮಗಾರಿಗೆ ಅಲ್ಲಿಯೇ ಅನುಮೋದನೆ ಪಡೆಯಬೇಕು. ರಾಜ್ಯ ಸರ್ಕಾರ 10 ಕೋಟಿವರೆಗೆ ಮಾತ್ರ ಖರ್ಚು ಮಾಡಲು ಅವಕಾಶ ನೀಡಿದೆ. 10 ಕೋಟಿ ರೂ. ಮೀರಿದ ಕಾಮಗಾರಿಗೆ ನಗರಾಭಿವೃದ್ಧಿ
ಇಲಾಖೆಯಿಂದಲೇ ಅನುಮೋದನೆ ಪಡೆಯಬೇಕು. ಅನುಮೋದನೆಗೆ 2-3 ತಿಂಗಳು ಆಗುತ್ತದೆ. ಹಾಗಾಗಿ ಕೆಲಸ ವಿಳಂಬವಾಗುತ್ತಿದೆ ಎಂದು ಯೋಜನಾ ನಿರ್ದೇಶಕ ಮಹಮ್ಮದ್‌ ಇರ್ಷಾದ್‌ ಸಮಜಾಯಿಷಿ ನೀಡಿದರು.

ಬೆಂಗಳೂರಲ್ಲಿ ನಗರಾಭಿವೃದ್ಧಿ ಇಲಾಖೆ ಸಚಿವ ಯು.ಟಿ. ಖಾದರ್‌ ಜೊತೆ ಸಭೆ ನಡೆಸಲಾಗುವುದು. ಕಾಮಗಾರಿಗೆ ಅನುಮೋದನೆಯ ಅಧಿಕಾರ ಎಸ್‌ಪಿವಿಗೆ ಅಧಿಕಾರ ಇಲ್ಲದ ಇರುವ ಬಗ್ಗೆ ಚರ್ಚಿಸಲಾಗುವುದು ಎಂದು ಸಂಸದ ಸಿದ್ದೇಶ್ವರ್‌ ಹೇಳಿದರು. 

ಬೆಂಗಳೂರಿನಲ್ಲಿ ಸಭೆ ನಡೆಸಲು ಖಾದರ್‌ಗೆ ಒತ್ತಾಯಿಸುವುದಾಗಿ ಶಾಮನೂರು ಶಿವಶಂಕರಪ್ಪ ಸಹ ಹೇಳಿದರು. ಸ್ಮಾರ್ಟ್‌ಸಿಟಿ ಯೋಜನೆಯಡಿ ಮಂಡಿಪೇಟೆ, ಎಂಜಿ ರಸ್ತೆ ಕಿತ್ತು ಹಾಕಲಾಗಿದೆ. ಕೆಲಸ ನಿಧಾನವಾಗಿ ನಡೆಯುತ್ತಿರುವುದರಿಂದ ಜನರಿಗೆ ತೊಂದರೆ ಆಗುತ್ತಿದೆ. ಈ ತಿಂಗಳ ಅಂತ್ಯಕ್ಕೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಡಿಸೆಂಬರ್‌ ಒಳಗಾಗಿ 10 ರಸ್ತೆಗಳನ್ನ ಸಮಗ್ರವಾಗಿ ಅಭಿವೃದ್ಧಿ ಮಾಡಬೇಕು ಎಂದು ಸಿದ್ದೇಶ್ವರ್‌, ಶಾಮನೂರು ಶಿವಶಂಕರಪ್ಪ ಇಬ್ಬರೂ ಸಹ ತಾಕೀತು ಮಾಡಿದರು.

Advertisement

ಸ್ಮಾರ್ಟ್‌ಸಿಟಿ ಯೋಜನೆಯಡಿ 97 ಕೋಟಿ ರೂ. ವೆಚ್ಚದಲ್ಲಿ ತುಂಗಭದ್ರಾ ನದಿಯಲ್ಲಿ ಕೇವಲ 0.2 ಟಿಎಂಸಿ ನೀರಿಗೆ ಬ್ಯಾರೇಜ್‌ ನಿರ್ಮಾಣ ಅಷ್ಟೊಂದು ಸಮಂಜಸವಲ್ಲ. ಮುಂದೆ 50 ವರ್ಷಗಳ ನಂತರವೂ ನೀರಿನ ಸಮಸ್ಯೆ ಆಗದಂತೆ ಬ್ಯಾರೇಜ್‌ ಕಟ್ಟಬೇಕು ಎಂದು ಸಿದ್ದೇಶ್ವರ್‌, ಶಾಮನೂರು ಶಿವಶಂಕರಪ್ಪ ತಿಳಿಸಿದರು.

2045ರ ವೇಳೆಗೆ ದಾವಣಗೆರೆಯ ಜನಸಂಖ್ಯೆ, ಅಭಿವೃದ್ಧಿ ಆಧಾರದಲ್ಲಿ ಬ್ಯಾರೇಜ್‌ ನಿರ್ಮಿಸಲಾಗುತ್ತಿದೆ ಎಂದು ಯೋಜನಾ ನಿರ್ದೇಶಕರು ಸಮಜಾಯಿಷಿ ನೀಡಲು ಮುಂದಾದರು. ಕೇವಲ 0.2 ಟಿಎಂಸಿ ನೀರಿಗಾಗಿ ಅಷ್ಟೊಂದು ಹಣ ಖರ್ಚು ಮಾಡುವುದು ಸರಿಯಲ್ಲ. ನೀರಿನ ಸಮಸ್ಯೆ 50 ವರ್ಷ ಉಂಟಾಗದಂತೆ ಬ್ಯಾರೇಜ್‌ ನಿರ್ಮಾಣ ಮಾಡುವಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಯಿತು.

ಸ್ಮಾರ್ಟ್‌ಸಿಟಿ ಯೋಜನೆಯಡಿ 6-7 ಪ್ರಮುಖ ಸರ್ಕಲ್‌ಗ‌ಳಲ್ಲಿ ಸ್ಮಾರ್ಟ್‌ಫೋಲ್‌ ಅಳವಡಿಸುವಂತೆ ಸಂಸದ ಸಿದ್ದೇಶ್ವರ್‌ ಅಧಿಕಾರಿಗಳಿಗೆ ಸೂಚಿಸಿದರು. ಮೇಯರ್‌ ಶೋಭಾ ಪಲ್ಲಾಗಟ್ಟೆ, ಸದಸ್ಯ ದಿನೇಶ ಕೆ. ಶೆಟ್ಟಿ, ಸಲಹಾ ಸಮಿತಿ ಸದಸ್ಯರಾದ ಅಥಣಿ ಎಸ್‌.ವೀರಣ್ಣ, ಅಜ್ಜಂಪುರಶೆಟ್ರಾ ಶಂಭುಲಿಂಗಪ್ಪ, ಡಾ| ಶಾಂತಾಭಟ್‌, ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಇತರರು ಸಭೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next