Advertisement
ಮಂಗಳೂರು ಸ್ಮಾರ್ಟ್ ನಗರವಾಗುತ್ತಿದೆ. ನಗರದಲ್ಲಿ ವಾಣಿಜ್ಯ ವ್ಯವಹಾರ ಚಟುವಟಿಕೆಗಳು ವಿಸ್ತಾರಗೊಂಡಿವೆ. ವಾಹನ ದಟ್ಟಣೆ ಹೆಚ್ಚುತ್ತಿದೆ.ಅದಕ್ಕೆ ಪೂರಕವಾಗಿ ಪಾರ್ಕಿಂಗ್ ಸೌಕರ್ಯ ಬೆಳೆದಿಲ್ಲ . ನಗರದ ಕೆಲವು ಕಡೆಯಾದರೂ ಮಹಾನಗರ ಪಾಲಿಕೆಯಿಂದ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆಗಳು ಆಗಬೇಕು ಎಂಬ ಹಲವು ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ. ಮಂಗಳೂರು ನಗರದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆಗಳಿಲ್ಲದೆ ರಸ್ತೆಗಳ ಬದಿಗಳೇ ಪಾರ್ಕಿಂಗ್ ತಾಣಗಳಾಗಿ ಪರಿವರ್ತಿತವಾಗಿವೆ. ವಾಹನಗಳನ್ನು ರಸ್ತೆಯ ಬದಿಯಲ್ಲೇ ಪಾರ್ಕಿಂಗ್ ಮಾಡುವ ಅನಿವಾರ್ಯತೆ ಎದುರಾಗುತ್ತದೆ. ಮೊದಲೇ ಸಂಚಾರ ದಟ್ಟಣೆ ಹೆಚ್ಚುತ್ತಿರುವ ರಸ್ತೆಗಳಲ್ಲಿ ವಾಹನಗಳ ಅಡ್ಡಾದಿಡ್ಡಿ ನಿಲುಗಡೆ ಸಂಚಾರ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ. ಸೂಕ್ತ ಪಾರ್ಕಿಂಗ್ ವ್ಯವಸ್ಥೆಗಳಿಲ್ಲದೆ ವಾಹನಗಳನ್ನು ಎಲ್ಲಿ ನಿಲ್ಲಿಸುವುದು ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಎದ್ದಿದೆ.
ಮಂಗಳೂರು ನಗರದಲ್ಲಿ ಪ್ರಸ್ತುತ ಕೆಲವು ಕಡೆ ಪಾರ್ಕಿಂಗ್ ತಾಣಗಳನ್ನು ಗುರುತಿಸಿ ಪಾವತಿ ಪಾರ್ಕಿಂಗ್ ತಾಣಗಳಾಗಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಹೆಚ್ಚಿನವುಗಳು ಆನ್‌ಸ್ಟ್ರೀಟ್ (ರಸ್ತೆ ಬದಿ) ಪಾರ್ಕಿಂಗ್ ತಾಣಗಳಾಗಿವೆ. ಈ ಪಾರ್ಕಿಂಗ್ ವ್ಯವಸ್ಥೆಗಳು ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಪ್ರಮುಖವಾಗಿ ಹಳೆ ಬಸ್‌ನಿಲ್ದಾಣ, ಕ್ಲಾಕ್‌ಟವರ್ ನಿಂದ ಎ.ಬಿ. ಶೆಟ್ಟಿ ರಸ್ತೆಯಲ್ಲಿ ನೆಹರೂ ಮೈದಾನ್ ಬದಿಯ ರಸ್ತೆ, ವಿವಿ ಕಾಲೇಜು ಮುಂಭಾಗ, ಲಾಲ್‌ಬಾಗ್‌ನಿಂದ ಲೇಡಿಹಿಲ್ ವೃತ್ತದವರೆಗಿನ ರಸ್ತೆಯಲ್ಲಿ ಮಂಗಳಾ ಸ್ಡೇಡಿಯಂ ಬದಿಯ ರಸ್ತೆ, ಸ್ಟೇಟ್‌ಬ್ಯಾಂಕ್‌ನ ಅಕ್ಕಪಕ್ಕದ ರಸ್ತೆಗಳು ಹೀಗೆ ಹಲವಾರು ಜಾಗಗಳಲ್ಲಿ ಪಾರ್ಕಿಂಗ್ ಜಾಗಗಳನ್ನು ಗುರುತಿಸಿ ಬೋರ್ಡ್ ಹಾಕಲಾಗಿದೆ.
Related Articles
ಪಾರ್ಕಿಂಗ್ ವ್ಯವಸ್ಥೆಯ ಸುಗಮ ನಿರ್ವಹಣೆಯ ನಿಟ್ಟಿನಲ್ಲಿ ಕೆಲವು ನಗರಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ಈಗಾಗಲೇ ನಗರ ವ್ಯಾಪ್ತಿಯಲ್ಲಿ 85 ರಸ್ತೆಗಳಲ್ಲಿರುವ ಸಾರ್ವಜನಿಕ ಪಾರ್ಕಿಂಗ್ ಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುತ್ತಿದೆ. ಮಂಗಳೂರು ಮಹಾನಗರ ಪಾಲಿಕೆಯೂ ಸ್ಮಾರ್ಟ್ ನಗರ ಯೋಜನೆಯಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಕೂಡ ವಿಶೇಷ ಆದ್ಯತೆಯ ನೆಲೆಯಲ್ಲಿ ಕೈಗೊಳ್ಳಬೇಕಾಗಿದೆ.
Advertisement
ಸ್ಮಾರ್ಟ್ ಪಾರ್ಕಿಂಗ್ ಮಾದರಿಯಲ್ಲಿ ಗುರುತಿಸಲಾಗಿರುವ ರಸ್ತೆ ಬದಿಯ ವಾಹನ ನಿಲುಗಡೆ ಸ್ಥಳದಲ್ಲಿ ಪಾರ್ಕಿಂಗ್ ಮೀಟರ್ ಎಂಬ ಅತ್ಯಾಧುನಿಕ ಯಂತ್ರ ಅಳವಡಿಸಲಾಗುತ್ತಿದೆ. ಪಾರ್ಕಿಂಗ್ ಪ್ರದೇಶದಲ್ಲಿ ಖಾಲಿಯಿರುವ ಜಾಗಕ್ಕೆ ವಾಹನ ಬಂದ ಕೂಡಲೇ ಸ್ವಯಂ ಚಾಲಿತವಾಗಿ ವಾಹನ ಬಂದಿದೆ ಎಂಬ ಮಾಹಿತಿ ನಿರ್ವಹಣಾ ಕೊಠಡಿಗೆ ಹೋಗುತ್ತದೆ. ಪಾರ್ಕಿಂಗ್ ವ್ಯವಸ್ಥೆಯ ಹತ್ತಿರವಿರುವ ಪಾರ್ಕಿಂಗ್ ಮೀಟರ್ ಒಳಗೆ ಹೋಗಿ ವಾಹನ ಮಾಲಕ ವಾಹನ ನಿಲುಗಡೆ ಮಾಡುವ ಅವಧಿಗೆ ತಕ್ಕಂತೆ ಹಣ ಪಾವತಿಸಬೇಕಾಗುತ್ತದೆ. ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಖಾಸಗಿ ಎಜೆನ್ಸಿಗಳಿಗೆ ಟೆಂಡರ್ ಮೂಲಕ ವಹಿಸಿ ಕೊಡಲಾಗುತ್ತದೆ. ಟೆಂಡರ್ ವಹಿಸಿಕೊಳ್ಳುವ ಎಜೆನ್ಸಿಗಳು ಅಗತ್ಯ ಉಪಕರಣಗಳು ವಾಹನ , ಸಿಸಿಟವಿ ಕೆಮರಾ, ಮ್ಯಾಗ್ನೆಟಿಕ್ ಐಆರ್ ಸೆನ್ಸಾರ್, ಸಹಾಯವಾಣಿಗಳನ್ನು ಸ್ಥಾಪಿಸಿ ಶುಲ್ಕ ಸಂಗ್ರಹ ಕಾರ್ಯ ಮಾಡುತ್ತದೆ. ಸ್ಮಾರ್ಟ್ ಪಾರ್ಕಿಂಗ್‌ಗೆ ಪೂರಕವಾಗಿ ವಾಹನ ಸವಾರರಿಗೆ ನಿಲುಗಡೆ ಬಗ್ಗೆ ಮಾಹಿತಿ ಪಡೆಯಲು ಮೊಬೈಲ್ ಆ್ಯಪ್ ಸಹಾಯ ಮಾಡುತ್ತದೆ.
ನಗರದ ಪ್ರಮುಖ ರಸ್ತೆಗಳ ಬದಿಗಳಲ್ಲಿ ಸ್ಮಾರ್ಟ್‌ಸ್ಕ್ರೀನ್ ಪೋಲ್ ಅಳವಡಿಸಲಾಗುತ್ತದೆ. ಈ ಪೋಲ್‌ಗಳಲ್ಲಿ ಮುಂದಿನ ಪಾರ್ಕಿಂಗ್ ಸ್ಥಳದ ವಿವರ, ಅಲ್ಲಿ ಎಷ್ಟು ವಾಹನಗಳಿಗೆ ನಿಲುಗಡೆಗೆ ಅವಕಾಶವಿದೆ ಎಂಬ ಮಾಹಿತಿ ಕ್ಷಣಕ್ಷಣಕ್ಕೆ ಲಭ್ಯವಾಗುತ್ತಲಿರುತ್ತವೆ. ಸ್ಮಾರ್ಟ್‌ಪಾರ್ಕಿಂಗ್ ವ್ಯವಸ್ಥೆಯಲ್ಲಿ ವಾಹನ ಸವಾರರು ವಾಹನ ನಿಲುಗಡೆ ಶುಲ್ಕವನ್ನು ಪಾರ್ಕಿಂಗ್ ಅವಧಿಗೆ ಅನುಗುಣವಾಗಿ ಪಾವತಿಸಬೇಕಾಗುತ್ತದೆ. ಮೊದಲೇ ನಿಗದಿಪಡಿಸಿದ ಅವಧಿಯೊಳಗೆ ವಾಹನ ತೆಗೆಯದಿದ್ದರೆ ವಾಹನ ತೆಗೆಯುವಂತೆ ಹಾಗೂ ಮುಂದಿನ ಅವಧಿಯ ಮೊತ್ತವನ್ನು ರಿಚಾರ್ಚ್ ಮಾಡುವಂತೆ ಮೊಬೈಲ್‌ಗೆ ಸಂದೇಶ ಬರುತ್ತದೆ. ನಿಗದಿತ ಅವಧಿಯ ಅನಂತರ ಶುಲ್ಕ ಪಾವತಿಸಿ ವಿಸ್ತರಣೆ ಮಾಡದಿದ್ದರೆ ಪೊಲೀಸರು ವಾಹನಗಳನ್ನು ಟೋಯಿಂಗ್ ಮಾಡುತ್ತಾರೆ. ಸ್ಮಾರ್ಟ್ ಪಾರ್ಕಿಂಗ್ ಅನ್ನು ಪ್ರೀಮಿಯಂ, ವಾಣಿಜ್ಯ ಹಾಗೂ ಸಾಮಾನ್ಯ ಎಂದು ವರ್ಗೀಕರಿಸಲಾಗುತ್ತಿದೆ.
ಪಾರ್ಕಿಂಗ್ ತಾಣಗಳು ರೂಪುಗೊಳ್ಳಲಿನಗರದ ಪ್ರಮುಖ ಸ್ಥಳಗಳಲ್ಲಿ ಪಾರ್ಕಿಂಗ್ ತಾಣಗಳನ್ನು ಸ್ಥಾಪಿಸುವ ನಿಟ್ಟಿನಲ್ಲೂ ಕಾರ್ಯಯೋಜನೆ ರೂಪುಗೊಳ್ಳಬೇಕಾಗಿದೆ. ಮಹಾನಗರ ಪಾಲಿಕೆ ಅಧೀನದಲ್ಲಿರುವ ಸರಕಾರಿ ಜಾಗಗಳಲ್ಲಿ ಒಂದಷ್ಟು ಪ್ರದೇಶವನ್ನು ಪಾರ್ಕಿಂಗ್ ವ್ಯವಸ್ಥೆಗೆ ಮೀಸಲಿರಿಸುವುದು ಅವಶ್ಯವಾಗಿದೆ ಮತ್ತು ಖಾಸಗಿ ಸಹಭಾಗಿತ್ವವನ್ನು ಪಡೆದುಕೊಂಡು ಇಲ್ಲಿ ಬಹುಅಂತಸ್ತು ಪಾರ್ಕಿಂಗ್ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುವುದು ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಬಹುದು. ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯೂ ಒಳಗೊಂಡಿದೆ. ಅವಶ್ಯವಿರುವ ಕಡೆ ಜಾಗದ ಲಭ್ಯತೆಯನ್ನು ಪರಿಗಣಿಸಿಕೊಂಡು ಪಾರ್ಕಿಂಗ್ ವ್ಯವಸ್ಥೆಗಳನ್ನು ಕಲ್ಪಿಸುವುದು ಮತ್ತು ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಮಂಗಳೂರು ನಗರದ ಸ್ವರೂಪಕ್ಕೆ ಅನುಗುಣವಾಗಿ ಕೆಲವೊಂದು ಬದಲಾವಣೆಗಳೊಂದಿಗೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಕಾರ್ಯೋನ್ಮುಖವಾಗುವುದು ಅವಶ್ಯ. ಕೇಶವ ಕುಂದರ್