Advertisement

ಸ್ಮಾರ್ಟ್‌ ಸಿಟಿ ವಿಳಂಬಕ್ಕೆ ಗರಂ

12:33 PM Jul 19, 2018 | |

ಬೆಂಗಳೂರು: ಸ್ಮಾರ್ಟ್‌ ಸಿಟಿ ಯೋಜನೆಗೆ ಬಿಡುಗಡೆ ಆಗಿರುವ ಹಣವನ್ನು ವೆಚ್ಚ ಮಾಡದೆ ಉಳಿಸಿಕೊಂಡಿರುವುದಕ್ಕೆ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ರಾಜ್ಯದ ಸ್ಮಾರ್ಟ್‌ ಸಿಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ರಾಜ್ಯದಲ್ಲಿ ಬೆಂಗಳೂರು, ಮಂಗಳೂರು, ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ತುಮಕೂರು ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರಗಳನ್ನು ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಣ ಬಿಡುಗಡೆ ಮಾಡಿದ್ದರೂ, ನಿಗದಿತ ಪ್ರಗತಿ ಸಾಧಿಸಲಾಗಿಲ್ಲ ಏಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಆರು ಮಹಾನಗರಗಳಿಗೆ ಈಗಾಗಲೇ 1,656 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಬೆಂಗಳೂರಿಗೆ 53 ಕೋಟಿ ರೂ.
ಬಿಡುಗಡೆಯಾಗಿದೆ. ಆದರೂ, ನಿರೀಕ್ಷಿತ ಪ್ರಗತಿ ಸಾಧಿಸದಿರಲು ಕಾರಣ ಏನು ಎಂದು ಕೇಳಿದ್ದಾರೆ.

 ಪ್ರಗತಿಯಲ್ಲಿರುವ ಸ್ಮಾರ್ಟ್‌ ಸಿಟಿ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡದೇ ಇರುವುದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತಾಗಿದೆ. ಒಂದು ತಿಂಗಳಲ್ಲಿ ಯೋಜನೆಯ ಪ್ರಗತಿ ಬಗ್ಗೆ ಮಾಹಿತಿ ನೀಡದಿದ್ದರೆ ಇದಕ್ಕೆ ಆಯಾ ನಗರಗಳ ಆಯುಕ್ತರೇ ಹೊಣೆ. ಯೋಜನೆ ಪೂರ್ಣಗೊಳಿಸಲು ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದ್ದು, ಕೆಲಸ ಮಾಡಲು ಇಷ್ಟವಿಲ್ಲದಿರುವ
ಅಧಿಕಾರಿಗಳು ಹೋಗಬಹುದು ಎಂದು ಸಚಿವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. ಚುನಾವಣೆ ಘೋಷಣೆಯಾಗಿದ್ದರಿಂದ ಸ್ಮಾರ್ಟ್‌ ಸಿಟಿ ಯೋಜನೆ ಪ್ರಗತಿ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು ಎಂದು ತಿಳಿದು ಬಂದಿದೆ.

ಸಭೆ ನಂತರ ಮಾತನಾಡಿದ ಯು.ಟಿ.ಖಾದರ್‌, ಸ್ಮಾರ್ಟ್‌ ಸಿಟಿ ಯೋಜನೆ ಪ್ರಗತಿಯಲ್ಲಿದ್ದು, ಪ್ರತಿ ತಿಂಗಳು ಆಯಾ ಸ್ಮಾರ್ಟ್‌ ಸಿಟಿ ಉಸ್ತುವಾರಿಗಳು ಹಾಗೂ ಸಂಬಂಧಪಟ್ಟ ಶಾಸಕರು ಸಭೆ ನಡೆಸಿ ಕಾಮಗಾರಿ ವೇಗ ಹೆಚ್ಚಿಸಿ ಪೂರ್ಣಗೊಳಿಸಲು ಆದೇಶಿಸಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿಗಳನ್ನು ಸ್ಮಾರ್ಟ್‌ ಸಿಟೀಸ್‌ ಕರ್ನಾಟಕ ವೆಬ್‌ಸೈಟ್‌ ಮೂಲಕ ಸಾರ್ವಜನಿಕರೂ ನೋಡಲು ಅವಕಾಶ ಕಲ್ಪಿಸಲಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

Advertisement

ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಪ್ರತಿ ನಗರಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ 100 ಕೋಟಿ ರೂ.ಬಿಡುಗಡೆ ಮಾಡಿವೆ. ಬೆಳಗಾವಿ, ದಾವಣಗೆರೆಯಲ್ಲಿ ಈಗಾಗಲೇ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ 21 ಕಾರ್ಯಕ್ರಮಗಳು ಬರುತ್ತವೆ. ಈ ಕಾರ್ಯಕ್ರಮಗಳ ಜೊತೆಗೆ ಹೊಸದಾಗಿ ಬೇರೆ ಯೋಜನೆಗಳನ್ನು ಸೇರಿಸಿಕೊಳ್ಳಲು ಅವಕಾಶವಿದೆ ಎಂದರು.

ಎಲ್ಲ ಸ್ಮಾರ್ಟ್‌ ಸಿಟಿಗಳ ಸರ್ವರ್‌ಗಳು ಬೆಂಗಳೂರಿನಲ್ಲಿ ಇರುತ್ತವೆ. ಅಲ್ಲದೇ ಆಯಾ ಸ್ಮಾರ್ಟ್‌ ಸಿಟಿಗಳಲ್ಲಿ ಒಂದೊಂದು ನಿಯಂತ್ರಣ ಕೊಠಡಿ ಇರುತ್ತದೆ. ಐದು ವರ್ಷದಲ್ಲಿ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ದಾವಣಗೆರೆ 6 ನೇ ಸ್ಥಾನ, ತುಮಕೂರು 20 ನೇ ಸ್ಥಾನ, ಬೆಳಗಾವಿ 22 ನೇ ಸ್ಥಾನ, ಹುಬ್ಬಳ್ಳಿ -ಧಾರವಾಡ 51 ನೇ ಸ್ಥಾನ ಗಳಿಸಿವೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next