Advertisement

ಸ್ಮಾರ್ಟ್‌ಸಿಟಿ ಜತೆಗೆ ಸ್ಮಾರ್ಟ್‌ ಮೇಯರ್‌ಗಳೂ ಬೇಕು 

09:35 PM Apr 22, 2017 | Harsha Rao |

ಸ್ಮಾರ್ಟ್‌ ಸಿಟಿಯಂಥ ಪರಿಕಲ್ಪನೆ ಮೂರ್ತರೂಪ ಪಡೆದಿರುವುದು ನಗರೀಕರಣದ ಮೂಸೆಯಲ್ಲಿ. ಕ್ಷಿಪ್ರ ನಗರೀಕರಣ ಪ್ರಕ್ರಿಯೆ ಕೇವಲ ಕೌಶಲಪೂರ್ಣರಿಗಷ್ಟೇ ಅಲ್ಲ; ಸಮರ್ಥ ನಾಯಕರಿಗೂ ಸಹ. ಮುಂದಿನ ಶತಮಾನವನ್ನು ಆಳುವುದೇ ವಿವೇಕಯುಕ್ತ ತೀರ್ಮಾನ ಮತ್ತು ದೂರದೃಷ್ಟಿ. ಅಂದರೆ ಸ್ಮಾರ್ಟ್‌ ಸಿಟಿಯಷ್ಟೇ ಅಲ್ಲ; ಸ್ಮಾರ್ಟ್‌ ಮೇಯರ್‌ಗಳಷ್ಟೇ ಅಭಿವೃದ್ಧಿಯ ಹಾದಿಯಲ್ಲಿ ಸಮರ್ಥವಾಗಿ ಮುನ್ನಡೆಯಬಲ್ಲರು. 

Advertisement

ನೀವು ನಂಬಲಿಕ್ಕಿಲ್ಲ. ಹತ್ತು ವರ್ಷಗಳಲ್ಲಿ ಭಾರತದ ಒಂದಿಷ್ಟು ನಗರಗಳಲ್ಲಿ ಆಯಾ ರಾಜ್ಯದ ಮುಖ್ಯಮಂತ್ರಿಗಳಿಗಿಂತ  ಮೇಯರ್‌/ನಗರಸಭೆ ಅಧ್ಯಕ್ಷರು/ ಸ್ಥಳೀಯ ಆಡಳಿತ ನೇತೃತ್ವ ವಹಿಸಿದ್ದವರು ಪ್ರಸಿದ್ಧರಾಗಿರುತ್ತಾರೆ. ಅಲ್ಲಿಯವರಿಗೆ ಮುಖ್ಯಮಂತ್ರಿಗಿಂತ ತಮ್ಮ ಊರಿನ ಮೇಯರ್‌ ಏನು ಯೋಚಿಸುತ್ತಿದ್ದಾನೆ? ನಗರದ ಅಭಿವೃದ್ಧಿಗೆ ಯಾವ ಹೊಸ ಐಡಿಯಾ ತರುತ್ತಾನೆ? ಎಂಬುದೇ ಮುಖ್ಯವಾಗುತ್ತದೆ. ಹಾಗಾಗಿ ಅಂಥವನಿಗೆ ಟ್ವಿಟ್ಟರ್‌ನಲ್ಲೋ, ಸೋಷಿಯಲ್‌ ಮೀಡಿಯಾದಲ್ಲಿ ಮುಖ್ಯಮಂತ್ರಿಗಿಂತ ಹೆಚ್ಚು ಜನ ಫಾಲೋವರ್ ಇದ್ದರೆ ಅಚ್ಚರಿ ಪಡಬೇಕಿಲ್ಲ. ಆಯಾ ಸ್ಥಳೀಯ ಸಂಸ್ಥೆಯ ಸದಸ್ಯರೂ ಮಿನಿ ಮಂತ್ರಿಗಳಿದ್ದಂತಿರುತ್ತಾರೆ. ಇದು ನಗರೀಕರಣದ ಒಂದು ಪಾಸಿಟಿವ್‌ ಇಂಪ್ಯಾಕ್ಟ್ (ಧನಾತ್ಮಕ ಪರಿಣಾಮ). ಸ್ಥಳೀಯ ಸರಕಾರಗಳಿಗೆ, ಸ್ಥಳೀಯ ಮುಖಂಡರಿಗೆ ಸೃಷ್ಟಿಯಾಗುತ್ತಿರುವ ಅವಕಾಶವೂ ಹೌದು.

ಅಮೆರಿಕದಲ್ಲಿ ಅಧ್ಯಕ್ಷ ಬರಾಕ್‌ ಒಬಾಮಾಗಿಂತ ಆಯಾ ಪ್ರಾಂತ್ಯದ ಗವರ್ನರ್‌ ಹೆಚ್ಚು ಜನಪ್ರಿಯ. ಜತೆಗೆ ಆಯಾ ಪ್ರಾಂತ್ಯದ ನಗರಗಳ ಮೇಯರ್‌ಗಳು ಅತ್ಯಂತ ಪ್ರಭಾವಶಾಲಿಗಳು. ಅವರೆಲ್ಲ ಪರಸ್ಪರ ತಮ್ಮ ತಮ್ಮ ನಗರಗಳ ಆಗುಹೋಗುಗಳು, ಪ್ರಯೋಗಗಳ ಕುರಿತು ಚರ್ಚಿಸುತ್ತಾ, ಒಳ್ಳೆಯ ಅಂಶಗಳನ್ನು ಅನ್ವಯಿಸಿಕೊಳ್ಳುತ್ತಾ ನಗರವನ್ನು ನಿರ್ಮಿಸುತ್ತಿರುತ್ತಾರೆ. ಹಾಗಾಗಿ ಮೇಯರ್‌ ಎಂದರೂ ಮುಖ್ಯಮಂತ್ರಿಯಷ್ಟೇ ಜನಪ್ರಿಯ. ಪ್ರತಿ ರಾಜಕೀಯ ಪಕ್ಷಗಳ ಅಸ್ತಿತ್ವಕ್ಕೂ ಈ ಮೇಯರ್‌, ಗವರ್ನರ್‌ಗಳ ಕೊಡುಗೆ ಉಲ್ಲೇಖನೀಯ.

ಇದು ಒಂದು ಅಮೆರಿಕದ ಕಥೆಯಲ್ಲ. ಫ್ರಾನ್ಸ್‌ನಿಂದ ಹಿಡಿದು ಬ್ರಿಟನ್‌ವರೆಗೆ ಹೋದರೂ ಇದೇ ವ್ಯವಸ್ಥೆ. ಆಯಾ ನಗರಗಳು ಮತ್ತು ಪಟ್ಟಣಗಳ ಅಭಿವೃದ್ಧಿ ನೋಡಿಕೊಳ್ಳುವುದು ಸ್ಥಳೀಯ ಪ್ರತಿನಿಧಿಗಳೇ. ಅವರು ರಾಜಕೀಯ ಪಕ್ಷದವರೇ, ರಾಜಕಾರಣಿಗಳೇ. ಆದರೆ ಅಷ್ಟೇ ಅಲ್ಲ. ಅದಷ್ಟೇ ಅವರನ್ನು ಕಾಯವುದಿಲ್ಲ. ಪುನರಾಯ್ಕೆ ಆಗಬೇಕಾದರೆ ಕೆಲಸ ಮಾಡಲೇಬೇಕು. ಇಲ್ಲದಿದ್ದರೆ ಪಕ್ಷ ಮತ್ತು ಜನರಿಂದ ತಿರಸ್ಕೃತವಾಗಿ ಕಸದ ಬುಟ್ಟಿಗೆ ಸೇರುತ್ತಾನೆ. ಈ ಭಾಗದಲ್ಲಿ ಕೆಲವೆಡೆ ಮೆಟ್ರೋಪಾಲಿಟನ್‌ ಮತ್ತು ನಾನ್‌ ಮೆಟ್ರೋ ಪಾಲಿಟನ್‌ ಎನ್ನೋ ಕ್ರಮವಿದೆ. ಇದೇ ಪದ್ಧತಿ ಭವಿಷ್ಯದಲ್ಲಿ ನಮ್ಮ ನಗರಗಳಲ್ಲೂ ಬರುತ್ತದೆ. ನಗರ ಮತ್ತು ನಗರ ಹೊರವಲಯ ಎಂಬುದನ್ನೇ ಎರಡು ಭಿನ್ನ ವ್ಯವಸ್ಥೆಗಳಿಗೆ ಅಳವಡಿಸಬಹುದು. ಆದಾಯ ಮತ್ತು ಅಭಿವೃದ್ಧಿ ಎಂಬ ಎರಡೇ ನೆಲೆಗಳಲ್ಲಿ ವ್ಯವಸ್ಥೆಗಳು ರೂಪುಗೊಳ್ಳುತ್ತವೆ. ಈ ಹಿನ್ನೆಲೆಯಲ್ಲೇ ನಮ್ಮ ಮೇಯರ್‌ಗಳು ಹೊಸ ಗಾಳಿಗೆ ಮನಸ್ಸನ್ನು ತೆರೆದುಕೊಳ್ಳಲೇಬೇಕು.

ಸ್ಮಾರ್ಟ್‌ ಮೇಯರ್‌ಗಳು ಬೇಕು
ಅವಶ್ಯಕತೆ ಮತ್ತು ಅಭಿವೃದ್ಧಿ-ಇದು ನಗರೀಕರಣದ ಮತ್ತೂಂದು ಮಂತ್ರ ಹಾಗೂ ಧ್ಯೇಯ ವಾಕ್ಯ. ನಾಗರಿಕರು ಜಪಿಸುವುದು ಇದನ್ನೇ. ಪಕ್ಷ ರಾಜಕೀಯಕ್ಕೂ ಅಭಿವೃದ್ಧಿಗೂ ಸಂಬಂಧವಿಲ್ಲ ಎಂದು ಬರೀ ಕಣ್ಣೊರೆಸುವ ತಂತ್ರ ಬಹಳ ದಿನ ನಡೆಯುವುದಿಲ್ಲ. ಸ್ಥಳೀಯ ನೆಲೆಯಲ್ಲಂತೂ ಮೇಯರ್‌ ಆಗುವವರು, ಸ್ಥಳೀಯ ಸಂಸ್ಥೆಗಳ ಚುಕ್ಕಾಣಿ ಹಿಡಿಯುವವರು ಅಭಿವೃದ್ಧಿಗೆ ಟೊಂಕ ಕಟ್ಟಿ ನಿಲ್ಲದಿದ್ದರೆ ಅಸ್ತಿತ್ವವನ್ನೇ ಕಳೆದುಕೊಳ್ಳುವುದು ಸುಳ್ಳಲ್ಲ. ಆದ ಕಾರಣ, ರಾಜಕಾರಣ ಸಾಕು, ಅಭಿವೃದ್ಧಿ ಬೇಕು ಎಂದು ಹೇಳುವ ಸ್ಮಾರ್ಟ್‌ ಮೇಯರ್‌ಗಳು ಬರಬೇಕು.

Advertisement

ಈ ಮೇಯರ್‌ನ ಕಥೆ ಕೇಳಿ
ಮಾರ್ಟಿನ್‌ ಒ’ಮ್ಯಾಲಿ.  ಬಾಲ್ಟಿಮೋರ್‌ನ ಮೇಯರ್‌ ಆಗಿ 1999ರಿಂದ 2007ರವರೆಗೂ ಕಾರ್ಯ ನಿರ್ವಹಿಸಿದವರು. ಅದಕ್ಕಿಂತ ಮೊದಲು ಬಾಲ್ಟಿಮೋರ್‌ ಸಿಟಿ ಕೌನ್ಸಿಲರ್‌ ಆಗಿದ್ದವರು. 2007ರಿಂದ 2015ರವರೆಗೆ ಮೇರಿಲ್ಯಾಂಡ್‌ನ‌ ಗವರ್ನರ್‌ ಆಗಿ ಕೆಲಸ ಮಾಡಿದರು. ಬಳಿಕ ತಣ್ಣಗೆ ಹೋಗಿ ಕುಳಿತದ್ದು ಜಾನ್ಸ್‌ ಹಾಪ್‌ಕಿನ್ಸ್‌ ಯೂನಿವರ್ಸಿಟಿಯ ಕೇರಿ ಬ್ಯುಸಿನೆಸ್‌ ಸ್ಕೂಲ್‌ನ ವಿಸಿಟಿಂಗ್‌ ಪ್ರೊಫೆಸರ್‌ ಹುದ್ದೆಯಲ್ಲಿ. ಅಲ್ಲಿ ವಾಣಿಜ್ಯ ನಿರ್ವಹಣೆ ಮತ್ತು ನಗರೀಕರಣ ಸಮಸ್ಯೆಗಳ ಕುರಿತಾಗಿ ಉಪನ್ಯಾಸ ನೀಡುತ್ತಿದ್ದರು. 2016ರ ಅಮೆರಿಕದ ಅಧ್ಯಕ್ಷ ಹುದ್ದೆ ಚುನಾವಣೆಯ ರೇಸಿನಲ್ಲೂ ಅಭ್ಯರ್ಥಿಯಾಗಿ ಡೆಮಾಕ್ರಟಿಕ್‌ ಪಾರ್ಟಿಯಿಂದ ಸ್ಪರ್ಧಿಸಿದ್ದರು. ಬಳಿಕ ಹಿಲರಿಗೆ ಬೆಂಬಲ ವ್ಯಕ್ತಪಡಿಸಿ ಸ್ಪರ್ಧೆಯಿಂದ ಹಿಂದೆ ಸರಿದರು. ಅಲ್ಲಿಗೆ, ಒಬ್ಬ ಕೌನ್ಸಿಲರ್‌ ಆದವ ಅಮೆರಿಕದ ಅಧ್ಯಕ್ಷ ಹುದ್ದೆಗೆ ಪ್ರಯತ್ನಿಸಬಹುದೆಂದಾಯಿತು. 

ನಮ್ಮಲ್ಲೂ ಸಾಧ್ಯತೆ ಇದೆ. ಅರ್ಹತೆ ಇದ್ದರೂ ಎಷ್ಟೋ ಬಾರಿ ಬೇರೆ ಅಂಶಗಳೇ ಹೆಚ್ಚು ಪ್ರಬಲವಾಗಿರಬೇಕು. ಈ ಮಾತಿಗೆ ಬಹಳಷ್ಟು ಉದಾಹರಣೆಗಳಿವೆ. ಈ ನಗರೀಕರಣ ಮತ್ತು ಮೇಯರ್‌ಗಳ ಪ್ರಾಮುಖ್ಯದ ಮಧ್ಯೆ ಮಾರ್ಟಿನ್‌ ಮುಖ್ಯವಾಗುವುದು ಆಡಳಿತದಲ್ಲಿ ತಂದ ಸುಧಾರಣ ಕ್ರಮಗಳಿಂದ. 

ಅವ್ಯವಸ್ಥೆಯನ್ನು ತಹಬದಿಗೆ ತರಲು ಮೊದಲು ಮಾಡಿದ್ದು ಸ್ಥಳೀಯ ಸಂಸ್ಥೆಯಡಿ ಕಾರ್ಯ ನಿರ್ವಹಿಸುತ್ತಿದ್ದ ಹಲವು ಇಲಾಖೆಯ ನೌಕರರಿಗೆ ಉತ್ತರದಾಯಿತ್ವವೆಂದರೆ ಏನು ಎಂದು ಪರಿಚಯಿಸಿದ್ದು. ಅದುವರೆಗೆ ಇಡೀ ವ್ಯವಸ್ಥೆ ನಡೆಯುವ ಬಗೆಯೇ ತಿಳಿದಿರಲಿಲ್ಲ. ಯಾವುದೋ ಇಲಾಖೆಯ ಯಾವುದೋ ನೌಕರ ಯಾವಾಗಲೋ ಬಂದು ಹೋಗುತ್ತಿದ್ದ. ಯಾವುದೋ, ಯಾರದೋ ಕೆಲಸ ಮಾಡುತ್ತಿದ್ದ. ಬಹಳ ಸ್ಥೂಲವಾಗಿ ಹೇಳುವುದಾದರೆ ಹೇಳುವವರು, ಕೇಳುವವರು ಇಲ್ಲ ಎನ್ನುತ್ತೇವಲ್ಲ ಹಾಗೆಯೇ. ನಾಗರಿಕರು ದೂರು ನೀಡಿದರೆ ಅದನ್ನು ಬಗೆಹರಿಸುವುದಕ್ಕೆ ಹಲವು ತಾಸುಗಳು ಬೇಕಿತ್ತು. ನಮ್ಮಲ್ಲಿನ್ನೂ ಈ ವ್ಯವಸ್ಥೆ ಇದೆ. 

ಸಿಟಿ ಸ್ಟಾಟ್ಸ್‌ ಎಂಬ ತಂತ್ರ
ಇದಕ್ಕೆ “ಸಿಟಿ ಸ್ಟಾಟ್ಸ್‌’ ಎಂಬ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ, ಆ ಮೂಲಕ ಲೋಕೋಪಯೋಗಿ, ವಸತಿ, ಸಾರಿಗೆ, ಪೊಲೀಸ್‌ ಇಲಾಖೆಯಿಂದ ಹಿಡಿದು ಎಲ್ಲವನ್ನೂ-ಎಲ್ಲರನ್ನೂ ಒಂದು ವ್ಯವಸ್ಥೆಯೊಳಗೆ ಹಿಡಿದು ತಂದರು. ಈ ಕಾರ್ಯ ಶಿಸ್ತು ವ್ಯವಸ್ಥೆಯನ್ನೇ ಬದಲಾಯಿಸಿತು. ಹೊಸ ಕ್ರಮದಡಿ ಸಿಬ್ಬಂದಿ ಸಂಪನ್ಮೂಲವನ್ನು ಜನರ ಅಗತ್ಯಗಳಿಗೆ ತಕ್ಕಂತೆ ವ್ಯಾಪಕವಾಗಿ ಬಳಸುವ ಮತ್ತು ಅನಧಿಕೃತ ಗೈರು ಹಾಜರಿ, ಹೆಚ್ಚುವರಿ ಕೆಲಸದ ನೆಪದಲ್ಲಿ ಪೋಲಾಗುತ್ತಿದ್ದ ಹಣವನ್ನು ತಡೆಯುವ ಉದ್ದೇಶವಿತ್ತು. ಹೊಣೆಗೇಡಿತನ ಪ್ರದರ್ಶಿಸುವವರಿಗೆ “ಪಿಂಕ್‌ ಚೀಟಿ’ ಕೊಟ್ಟು ಕಳುಹಿಸಲಾಗುತ್ತಿತ್ತು. 
ಈ ಪದ್ಧತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದರಿಂದ ಸುಮಾರು 100 ಮಿಲಿಯನ್‌ ಅಮೆರಿಕನ್‌ ಡಾಲರ್‌ ನಾಗರಿಕರ ತೆರಿಗೆ ಹಣ ಉಳಿತಾಯವಾಯಿತು. ಸಾರ್ವಜನಿಕ ಪ್ರಶಂಸೆ ವ್ಯಕ್ತವಾಯಿತು. ಇದೇ ಅವರನ್ನು ಜನಪ್ರಿಯತೆಗೆ ತಂದು ನಿಲ್ಲಿಸಿತು. ಅವರ ಮಾತಿನಲ್ಲಿ ಹೇಳುವುದಾದರೆ, “ನಾವು ಸಾಂಪ್ರದಾಯಿಕ, ಪೋಷಣ ರಾಜಕೀಯ (ಅಭ್ಯರ್ಥಿಯ ವಂಶ, ಪರಂಪರೆ, ಜಾತಿ, ಆರ್ಥಿಕ ಸ್ಥಿತಿ ಇತ್ಯಾದಿಯನ್ನು ನೋಡಿ ಬೆಂಬಲಿಸುವ) ವ್ಯವಸ್ಥೆಯಿಂದ ಸಾಧನೆಯ ಫ‌ಲಿತಾಂಶ ಆಧರಿತ ರಾಜಕೀಯ ವ್ಯವಸ್ಥೆಗೆ ಸ್ಥಳಾಂತರಗೊಂಡಿದ್ದೇವೆ’. ಇದನ್ನೇ ನಾವು ಅಭಿವೃದ್ಧಿಯ ರಾಜಕಾರಣ ಎನ್ನತೊಡಗಿದ್ದು ಮತ್ತು ಈಗಲೂ ಹೇಳುತ್ತಿರುವುದು. ಅದೇ ನಮಗಿರುವ ಮುಂದಿನ ಹಾದಿ. 
ಈಗ ನಾವಿರುವುದು ಸ್ಮಾರ್ಟ್‌ ನಗರಗಳ ಹೊಸ್ತಿಲಲ್ಲಿ. ಹೆಚ್ಚುತ್ತಿರುವ  ವಲಸೆ ಮತ್ತು ಅವ್ಯವಸ್ಥಿತ ಮೂಲ ಸೌಲಭ್ಯಗಳನ್ನು ಸರಿದೂಗಿಸಲು ಬರೀ ರಾಜಕಾರಣ ಮಾಡಿದರೆ ಸಾಲದು, ಅಭಿವೃದ್ಧಿಯ ಚಿಂತನೆಯೂ ಅವಶ್ಯ. ಮಂಗಳೂರು, ದಾವಣಗೆರೆ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಬೆಳಗಾವಿಗಳು ಸ್ಮಾರ್ಟ್‌ ಸಿಟಿಯಾಗುತ್ತಿರುವಾಗ ಅದನ್ನಾಳುವವರು ಹೇಗಿರಬೇಕು? ಸರಕಾರಗಳು ಮೇಯರ್‌ಗಳನ್ನೂ ಸ್ಮಾರ್ಟ್‌ ಮಾಡುವತ್ತ, ನಾಯಕತ್ವ ಶಿಬಿರಗಳನ್ನು ನಡೆಸಿ ಹೊಸ ಸವಾಲುಗಳಿಗೆ ಸಿದ್ಧಪಡಿಸಬೇಕು. ಎಲ್ಲ ಸ್ಥಳೀಯ ಸರಕಾರಗಳ ಚುಕ್ಕಾಣಿ ಹಿಡಿಯುವವರು ಮೊದಲು ತಮ್ಮ ಮೆದುಳನ್ನು ಅಭಿವೃದ್ಧಿಯ ಹೊಸ ಪರಿಕಲ್ಪನೆಗೆ ಸಾಣೆ ಹಿಡಿದುಕೊಂಡು ಬರಬೇಕು. 
ಆಗಷ್ಟೇ ಉಳಿವು.

– ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next