Advertisement

ವಿಕಲಚೇತನರಿಗೆ ಬಂತು ಸ್ಮಾರ್ಟ್‌ ಕಾರ್ಡ್‌

11:13 AM Jul 23, 2019 | Suhan S |

ಹರಪನಹಳ್ಳಿ: ವಿಶಿಷ್ಟ ವಿಕಲಚೇತನರ ಗುರುತಿನ ಚೀಟಿಗಳನ್ನು ನೀಡುವ ವಿಧಾನ ಪರಿಷ್ಕರಿಸಿದ್ದು, ಆನಲೈನ್‌ ಮೂಲಕ ನೋಂದಣಿ ಮಾಡಿಕೊಂಡವರಿಗೆ ಸ್ಮಾಟ್ಕಾರ್ಡ್‌ ವಿತರಿಸಲಾಗುತ್ತಿದೆ. ಈಗಾಗಲೇ ಗುರುತಿನ ಚೀಟಿ ಪಡೆದಿರುವ ಎಲ್ಲ ವಿಕಲಚೇತನರು ಹಾಗೂ ಹೊಸದಾಗಿ ಗುರುತಿನ ಚೀಟಿ ಪಡೆಯಲು ಇಚ್ಛಿಸುವ ಎಲ್ಲ ವಿಕಲಚೇತನರು ಅನ್‌ಲೈನ್‌ನಲ್ಲೇ ನೋಂದಣಿ ಮಾಡಿಸಬೇಕಾಗಿದೆ.

Advertisement

ಆನಲೈನ್‌ನಲ್ಲಿ ನೋಂದಣಿ ಮಾಡಿದ ನಂತರ ವಿಕಲಚೇತನರಿಗೆ ರಾಜ್ಯದ ವೈದ್ಯಕೀಯ ಪ್ರಾಧಿಕಾರದಿಂದ ದೃಢೀಕರಿಸಲಾದ ವೈದ್ಯಕೀಯ ಪ್ರಮಾಣಪತ್ರದ ಸಮಗ್ರ ಮಾಹಿತಿಯುಳ್ಳ ಗಣಕೀಕೃತ ವಿಶಿಷ್ಟ ಅಂಗವಿಕಲರ ಗುರುತಿನ ಚೀಟಿ (ಯುಡಿಐಡಿ ಸ್ಮಾಟ್ ಕಾರ್ಡ್‌) ಅಂಚೆ ಮೂಲಕ ಅವರ ವಿಳಾಸಕ್ಕೆ ನೇರವಾಗಿ ಕಳಿಸಲಾಗುತ್ತಿದೆ. ಸ್ಮಾರ್ಟ್‌ಕಾರ್ಡ್‌ ಪಡೆಯುವ ಬಗ್ಗೆ ಅರಿವು ಮೂಡಿಸುವಂತೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ಗ್ರಾಮ, ತಾಲೂಕುಮಟ್ಟದ ವಿಆರ್‌ಡಬ್ಲೂ ಹಾಗೂ ಎಂಆರ್‌ಡಬ್ಲೂಗಳಿಗೆ ಸೂಚನೆ ನೀಡಿದೆ.

ಏನಿದು ಸ್ಮಾಟ್ ಕಾರ್ಡ್‌?: ವಿಕಲಚೇತನರಿಗೆ ವೈದ್ಯಕೀಯ ಪ್ರಾಧಿಕಾರಗಳಿಂದ ದೃಢೀಕರಿಸಲಾಗುವ ವೈದ್ಯಕೀಯ ಪ್ರಮಾಣ ಪತ್ರದ ಸಮಗ್ರ ಮಾಹಿತಿವುಳ್ಳ ಗಣಕೀಕೃತ ಗುರುತಿನ ಚೀಟಿ ನೀಡುವ ವ್ಯವಸ್ಥೆಯಾಗಿದ್ದು, ಇದರಲ್ಲಿ ವಿಕಲಚೇತನ ವ್ಯಕ್ತಿ ವಿವರಗಳು ಹಾಗೂ ಅವರಲ್ಲಿರುವ ವಿಕಲತೆಯ ವಿವರ ಮತ್ತು ಪ್ರಮಾಣವನ್ನು ನಮೂದಿಸಲಾಗಿರುತ್ತದೆ. ಈ ಹಿಂದೆ 10 ವರ್ಷಗಳಿಗೊಮ್ಮೆ ಗುರುತಿನ ಪತ್ರವನ್ನು ನವೀಕರಿಸಿಕೊಳ್ಳಬೇಕಿತ್ತು. ಇದೀಗ ನೀಡುತ್ತಿರುವ ಸ್ಮಾರ್ಟ್‌ ಕಾರ್ಡ್‌ ಶಾಶ್ವತ ಪ್ರಮಾಣ ಪತ್ರವಾಗಿದೆ. ಅಗತ್ಯವಿದ್ದಲ್ಲಿ ಪರಿಷ್ಕರಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಈಗಾಗಲೇ ಅಂಗವೈಕಲ್ಯತೆ ಪ್ರಮಾಣ ಪತ್ರವನ್ನು ಹೊಂದಿರುವ ಮತ್ತು ಹೊಸದಾಗಿ ಪಡೆಯುವವರು ಆನಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಸ್ಮಾರ್ಟ್‌ಕಾರ್ಡ್‌ ಪಡೆಯಬಹುದು. ಅಂತರ್ಜಾಲದ ವೆಬ್‌ಸೈಟ್ www.swavlambancard.gov.in ಲಿಂಕ್‌ ಅನ್ನು ಕ್ಲಿಕ್‌ ಮಾಡುವುದರ ಮೂಲಕ ಆನಲೈನ್‌ ಮೂಲಕ ನೋಂದಣಿ ಮಾಡಬಹುದು. ಸ್ಕ್ಯಾನ್‌ ಮಾಡಲಾದ ಪಾಸ್‌ಪೋರ್ಟ್‌ ಫೋಟೋ, ಸಹಿ ಅಥವಾ ಹೆಬ್ಬೆರಳು ಗುರುತಿನ ಪ್ರತಿ, ಅಧಾರ ಕಾರ್ಡ್‌, ರೇಷನ್‌ ಕಾರ್ಡ್‌, ಮತದಾನ ಗುರುತಿನ ಪತ್ರ ಹಾಗೂ ಅಂಗವೈಕಲ್ಯತೆ ಪ್ರಮಾಣ ಪತ್ರವನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಬೇಕು. ನೋಂದಣಿ ದೃಢೀಕರಣ ಸಂಖ್ಯೆಯ ಸಂದೇಶವು ಮೊಬೈಲ್ ಸಂಖ್ಯೆಗೆ ರವಾನೆ ಆಗುತ್ತದೆ. ಜಿಲ್ಲಾಮುಖ್ಯ ವೈದ್ಯಾಧಿಕಾರಿಗಳಿಗೆ ಕಾರ್ಡ್‌ ನೀಡುವ ಮತ್ತು ತಿರಸ್ಕರಿಸುವ ನಿರ್ಣಾಯಕರಾಗಿರುತ್ತಾರೆ.

ಕಾರ್ಡ್‌ ಪಡೆಯುವುದರಿಂದ ವಿಕಲಚೇತನ ವ್ಯಕ್ತಿಗಳ ಗುರುತು, ಅಂಗವೈಕಲ್ಯತೆ ಪ್ರಮಾಣ ಹಾಗೂ ಎಲ್ಲ ಅಗತ್ಯ ವಿವರಗಳನ್ನು ದಾಖಲಿಸಿಕೊಳ್ಳುತ್ತದೆ. ಅಂಗವೈಕಲ್ಯತೆ ವಿವರಗಳನ್ನು ಇ-ರೀಡರ್‌ ಸಹಾಯದಿಂದ ಡಿಕೋಡ್‌ ಮಾಡಬಹುದು. ಆದ್ದರಿಂದ ವಿಕಲಚೇತನ ವ್ಯಕ್ತಿಗಳ ಎಲ್ಲಾ ದಾಖಲೆಗಳನ್ನು ಒದಗಿಸುವ ಅಗತ್ಯವಿರುವುದಿಲ್ಲ. ಕಾರ್ಡ್‌ ಭಾರತದಾದ್ಯಂತ ವಿಕಲಚೇತನ ವ್ಯಕ್ತಿಗಳ ಅಂಗವೈಕಲ್ಯತೆ ಪುರಾವೆಯಾಗಿ ಪರಿಗಣಿಸಲಾಗುತ್ತದೆ. ವಿಕಲಚೇತನ ವ್ಯಕ್ತಿಗಳ ಗುರುತಿನ ಏಕೈಕ ದಾಖಲೆಯಾಗಿರುತ್ತದೆ. ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು. ಕಾರ್ಡ್‌ ಸಹಾಯದಿಂದ ಎಲ್ಲ ಹಂತಗಳಲ್ಲಿ ಸುವ್ಯವಸ್ಥಿತವಾಗಿ ಫಲಾನುಭವಿಗಳ ದೈಹಿಕ ಮತ್ತು ಅರ್ಥಿಕ ಪ್ರಗತಿಗಳನ್ನು ಟ್ರ್ಯಾಕ್‌ ಮಾಡಬಹುದಾಗಿದೆ.

ಹೊಸಬರಿಗೆ ವೈದ್ಯಕೀಯ ಪರೀಕ್ಷೆ ಕಡ್ಡಾಯ: ಬಳ್ಳಾರಿ ಜಿಲ್ಲೆಯಲ್ಲಿ 2011ರ ಜನಗಣತಿ ಪ್ರಕಾರ 21,419 ಜನ ವಿಕಲಚೇತನರಿದ್ದು, ಈವರೆಗೆ ಸುಮಾರು 600 ಜನ ವಿಕಲಚೇತನರು ಸ್ಮಾಟ್ ಕಾರ್ಡ್‌(ಗುರುತಿನ ಪತ್ರ) ಪಡೆದುಕೊಂಡಿದ್ದಾರೆ. ಆನಲೈನ್‌ನಲ್ಲಿ ಬಂದಂಥ ಅರ್ಜಿಗಳನ್ನು ಜಿಲ್ಲಾ ವೈದ್ಯಾಧಿಕಾರಿಗಳು ದೃಢೀಕರಿಸಿ ಮುದ್ರಣಕ್ಕೆ ಕಳಿಸುತ್ತಿದ್ದಾರೆ. ಸದ್ಯ ಚನ್ನೈನಲ್ಲಿ ಕಾರ್ಡ್‌ಗಳು ಮುದ್ರಣಗೊಂಡು ಅರ್ಜಿದಾರರ ಮನೆ ವಿಳಾಸಕ್ಕೆ ಬರುತ್ತಿವೆ. ಹಳೆ ಗುರುತಿನ ಪತ್ರ ಹೊಂದಿಲ್ಲದೇ ನೂತನವಾಗಿ ಕಾರ್ಡ್‌ ಪಡೆಯಲು ಅರ್ಜಿ ಸಲ್ಲಿಸುವವರು ವೈದ್ಯಾಧಿಕಾರಿಗಳ ಪರೀಕ್ಷೆಗೆ ಹಾಜರಾಗಬೇಕು. ಮುಂದಿನ ದಿನಗಳಲ್ಲಿ ತಾಲೂಕುಮಟ್ಟದ ವೈದ್ಯಾಧಿಕಾರಿಗಳಿಗೆ ಲಾಗಿನ್‌ ಅವಕಾಶ ಕಲ್ಪಿಸಲಾಗುತ್ತದೆ. ಸರ್ಕಾರಿ ಸೌಲಭ್ಯ ಪಡೆಯಲು ಇನ್ಮುಂದೆ ಈ ಕಾರ್ಡ್‌ ಕಡ್ಡಾಯವಾಗಿರುತ್ತದೆ.•ಕೆ.ಮಹಾಂತೇಶ್‌, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ
ಕಾರ್ಡ್‌ ಪಡೆಯಲು ವಿಕಲಚೇತನರಿಗೆ ಅರಿವು: ತಾಲೂಕಿನಲ್ಲಿ ಒಟ್ಟು 4867 ಜನ ವಿಕಲಚೇತನರಿದ್ದಾರೆ. ಈಗಾಗಲೇ ಸ್ಮಾರ್ಟ್‌ಕಾರ್ಡ್‌ಗೆ 2159 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಪ್ರಥಮ ಕಾರ್ಡ್‌ ನನಗೆ ಬಂದಿದೆ. ಈ ಕಾರ್ಡ್‌ ಪಡೆಯುವುದರಿಂದ ಪದೇ ಪದೇ ನವೀಕರಣ ಮತ್ತು ಕಾಗದ ಪತ್ರಗಳು ಕಳೆದು ಹೋಗುವ ಭಯವಿಲ್ಲ. ತಾಲೂಕಿನಲ್ಲಿರುವ ಎಲ್ಲ ವಿಕಲಚೇತನರಿಗೆ ಕಾರ್ಡ್‌ ಪಡೆಯಲು ಅರಿವು ಮೂಡಿಸಲಾಗುತ್ತಿದೆ.•ಆರ್‌.ಧನರಾಜ್‌, ತಾಲೂಕು ವಿಕಲಚೇತನರ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ
•ಎಸ್‌.ಎನ್‌.ಕುಮಾರ್‌ ಪುಣಬಗಟ್ಟಿ
Advertisement
Advertisement

Udayavani is now on Telegram. Click here to join our channel and stay updated with the latest news.

Next