Advertisement

ವಿರೋಧದ ನಡುವೆ ಹಳೆ ವಿನ್ಯಾಸದಲ್ಲೇ “ಸ್ಮಾರ್ಟ್‌ ಬಸ್‌ ನಿಲ್ದಾಣ’!

09:15 PM Jun 04, 2019 | mahesh |

ಮಹಾನಗರ: ಸಾರ್ವಜನಿಕ ವಲಯದಲ್ಲಿ ಅಪಸ್ವರ ಕೇಳಿ ಬಂದ ಹಿನ್ನೆಲೆಯಲ್ಲಿ ತಡೆ ಹಿಡಿಯಲಾಗಿದ್ದ ಸ್ಮಾರ್ಟ್‌ ಬಸ್‌ ನಿಲ್ದಾಣ ಕಾಮಗಾರಿ ಈಗ ಮತ್ತೆ ಹಿಂದಿನ ವಿನ್ಯಾಸದಲ್ಲೇ ನಡೆಯುತ್ತಿದೆ.

Advertisement

ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ನಗರದ 46 ಕಡೆಗಳಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣಗಳನ್ನು ರಚಿಸಲು ಟೆಂಡರ್‌ ಕರೆದು ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಬಸ್‌ ನಿಲ್ದಾಣದ ವಿನ್ಯಾಸದ ನಗರದ ಹವಾಮಾನಕ್ಕೆ ಪೂರಕವಾಗಿಲ್ಲ ಎಂಬ ಕಾರಣಕ್ಕಾಗಿ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬಸ್‌ ನಿಲ್ದಾಣ ಕಾಮಗಾರಿ ಸ್ಥಗಿತಗೊಂಡಿತ್ತು. ಈ ಕುರಿತಂತೆ ಜಿಲ್ಲಾಧಿಕಾರಿ, ಸ್ಮಾರ್ಟ್‌ಸಿಟಿ ಎಂಡಿ, ಅಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ವಿನ್ಯಾಸ ಬದಲಿಸುವ ಕುರಿತಂತೆ ಚರ್ಚಿಸಲಾಗಿತ್ತು. ಬಳಿಕ ಚುನಾವಣ ನೀತಿ ಸಂಹಿತೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಕಾಮಗಾರಿ ಪ್ರಾರಂಭಿಸಿರಲಿಲ್ಲ. ಆದರೆ ಇದೀಗ ಬಸ್‌ ನಿಲ್ದಾಣದ ಕಾಮಗಾರಿ ಆರಂಭಗೊಂಡಿದ್ದು, ಈ ಹಿಂದಿನ ವಿನ್ಯಾಸದ ಮಾದರಿಯಲ್ಲೇ ಬಸ್‌ ಶೆಲ್ಟರ್‌ಗಳನ್ನು ನಿರ್ಮಿಸಲಾಗುತ್ತಿದೆ.

ಹಳೆ ವಿನ್ಯಾಸ ದಲ್ಲೇ ಬಸ್‌ ನಿಲ್ದಾಣ ಕಾಮಗಾರಿ
ನಗರದಲ್ಲಿ ಸಾಮಾನ್ಯವಾಗಿ ಮಳೆಗಾಲದಲ್ಲಿ ವಿಪರೀತ ಮಳೆ ಸುರಿಯು ತ್ತಿರುತ್ತದೆ. ಅಲ್ಲದೆ ವಿಪರೀತ ಗಾಳಿ ಇರುವ ಕಾರಣ ಈ ಮಾದರಿಯ ಸ್ಮಾರ್ಟ್‌ ಬಸ್‌ ಶೆಲ್ಟರ್‌ ಕೇವಲ ನೆಪ ಮಾತ್ರಕ್ಕೆ ಎಂಬಂತಾಗಲಿದೆ. ಪ್ರಯಾಣಕರು ಶೆಲ್ಟರ್‌ ಅಡಿಯಲ್ಲಿ ನಿಂತರೂ ಮಳೆಯಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗದು. ಇನ್ನು ಬಿಸಿಲಿನ ಸಂದರ್ಭದಲ್ಲೂ ತೆರೆದ ಜಾಗದಲ್ಲಿ ಈ ಮಾದರಿಯ ಬಸ್‌ ಶೆಲ್ಟರ್‌ ಪ್ರಯೋಜನಕಾರಿಯಲ್ಲ ಎಂಬ ಅಭಿಪ್ರಾಯ ಸಾರ್ವ ಜನಿಕರದ್ದು. ಅದಕ್ಕಾಗಿ ಅಧಿಕಾರಿಗಳಿಗೆ ಲಿಖೀತ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

24 ಬಸ್‌ ನಿಲ್ದಾಣಗಳು ಹಳೆ ಮಾದರಿ
ನಗರದ 46 ಕಡೆಗಳಲ್ಲಿ ಪ್ರಥಮ ಹಂತದ ಸುಸಜ್ಜಿತ ಬಸ್‌ ಶೆಲ್ಟರ್‌ ನಿರ್ಮಾಣಕ್ಕೆ ಟೆಂಡರ್‌ ಆಗಿದೆ. ವಿನ್ಯಾಸದ ಕುರಿತಂತೆ ಸಾರ್ವಜನಿಕರಿಗೆ ಅಸಮಾಧಾನ ಇರುವ ಹಿನ್ನೆಲೆಯಲ್ಲಿ 24 ಬಸ್‌ ನಿಲ್ದಾಣಗಳ ಕಾಮಗಾರಿ ಮಾತ್ರ ಹಳೆ ಮಾದರಿಯಲ್ಲಿ ನಿರ್ಮಾಣವಾಗಲಿದೆ.

ಸ್ಮಾರ್ಟ್‌ ಬಸ್‌ ನಿಲ್ದಾಣಗಳನ್ನು ಕ್ರಮವಾಗಿ ಎ, ಬಿ, ಸಿ ಶ್ರೇಣಿಗಳು ಎಂದು ವಿಂಗಡಿಸಲಾಗಿತ್ತು. ಉತ್ತಮ ಜಾಗದ ವ್ಯವಸ್ಥೆ ಇದ್ದಲ್ಲಿ ಎ ಶ್ರೇಣಿ ಶೆಲ್ಟರ್‌ ಜತೆಗೆ ಶೌಚಾಲಯ, ಬಿ ಶ್ರೇಣಿಯಲ್ಲಿ ಇ ಶೌಚಾಲಯ , ಸಿ ಶ್ರೇಣಿಗೆ ಯಾವುದೇ ಶೌಚಾಲಯ ವ್ಯವಸ್ಥೆ ಇರುವುದಿಲ್ಲ. ಹೀಗೆ ಟೆಂಡರ್‌ ರೂಪಿಸಲಾಗಿತ್ತು. ಎ ಶ್ರೇಣಿ ಶೆಲ್ಟರ್‌ 13.5 ಮೀಟರ್‌ ಉದ್ದ, ಬಿ ಶ್ರೇಣಿ 11.5 ಮೀಟರ್‌ ಉದ್ದ, ಸಿ ಶ್ರೇಣಿ 8.5 ಮೀಟರ್‌ ಉದ್ದದಲ್ಲಿ ನಿರ್ಮಾಣವಾಗಲಿದೆ. ಆದರೆ ಇವೆಲ್ಲವೂ ಕೇವಲ 2.4 ಮೀಟರ್‌ ಅಗಲ ಮಾತ್ರ ಹೊಂದಲಿವೆ. ಆದರೆ ಇವುಗಳ ಎತ್ತರ ಮಾತ್ರ ಫೌಂಡೇಶನ್‌ ಸೇರಿ ಬರೋಬ್ಬರಿ 15 ಅಡಿಗಳಿಗಿಂತಲೂ ಅಧಿಕವಿದೆ. ಇಷ್ಟು ಎತ್ತರದ ಶೆಲ್ಟರ್‌ನಲ್ಲಿ ಕೇವಲ 2.4 ಮೀಟರ್‌ ಅಡಿ ಅಗಲದಲ್ಲಿ ಪ್ರಯಾಣಿಕರಿಗೆ ಮಳೆ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ.

Advertisement

ಸಾರ್ವಜನಿಕರಿಂದ ವಿನ್ಯಾಸ ಆಹ್ವಾನ
ಹೊಸ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಸಾರ್ವಜನಿಕರಿಂದ ಆಕರ್ಷಕ ವಿನ್ಯಾಸವನ್ನು ಕೂಡ ಆಹ್ವಾನಿಸಲಾಗಿತ್ತು. ಎಂಜಿನಿಯರ್, ಎಂಜಿನಿಯರಿಂಗ್‌ ವಿದ್ಯಾರ್ಥಿಗಳು, ವಾಸ್ತು ಶಿಲ್ಪಿಗಳು ಸಹಿತ ಎಲ್ಲ ನಾಗರಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸಿ ವಿನ್ಯಾಸ ಕಳುಹಿಸಿ ಕೊಡಬಹುದಾಗಿತ್ತು. ಮಂಗಳೂರಿನ ಹವಾಮಾನ ಪರಿಸ್ಥಿತಿಗೆ ಹೊಂದಿಕೆಯಾಗುವ ಬಸ್‌ ಶೆಲ್ಟರ್‌ನ ವಿನ್ಯಾಸ ನಕ್ಷೆ, ತ್ರಿಡಿ ನಕ್ಷೆಗಳನ್ನು ಕಳುಹಿಸಬೇಕಿತ್ತು. ವಿಜೇತರಿಗೆ ಪ್ರಥಮ 10 ಸಾವಿರ, ದ್ವಿತೀಯ 5 ಸಾವಿರ ಮತ್ತು ತೃತೀಯ 3 ಸಾವಿರ ಬಹುಮಾನ ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಆದರೆ ಈಗ ನಡೆಯುತ್ತಿರುವ ಬಸ್‌ ನಿಲ್ದಾಣ ಕಾಮಗಾರಿಯಲ್ಲಿ ಆ ವಿನ್ಯಾಸಗಳನ್ನು ಪರಿಗಣಿಸಲು ಸಾಧ್ಯವಾಗಿಲ್ಲ. ಇನ್ನು ಮುಂದೆ ನಿರ್ಮಿಸುವ ಬಸ್‌ ನಿಲ್ದಾಣಗಳಿಗೆ ಸಾರ್ವಜನಿಕರಿಂದ ಬಂದ ವಿನ್ಯಾಸಗಳನ್ನು ಪರಿಗಣಿಸಲಾಗುವುದು ಎಂದು ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

 ಮುಂದಿನಬಸ್‌ ನಿಲ್ದಾಣಗಳಲ್ಲಿ ಬದಲಾವಣೆ
ಪ್ರಸ್ತುತ ನಗರದಲ್ಲಿ 24 ಬಸ್‌ ನಿಲ್ದಾಣಗಳ ಕಾಮಗಾರಿ ನಡೆಯುತ್ತಿದೆ. ಅದಕ್ಕೆ ಈಗಾಗಲೇ ಡೆಂಟರ್‌ ಆಗಿದೆ. ಅದರಲ್ಲಿ ದೊಡ್ಡ ಮಟ್ಟದ ಬದಲಾವಣೆ ತರುವುದು ಕಷ್ಟ. ಆದರೆ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಾಗುವುದು. ಮುಂದಿನ ಬಸ್‌ ನಿಲ್ದಾಣಗಳಲ್ಲಿ ಹೊಸ ವಿನ್ಯಾಸ ಅಳವಡಿಸಲಾಗುವುದು.
 - ನಾರಾಯಣಪ್ಪ, ವ್ಯವಸ್ಥಾಪಕ ನಿರ್ದೇಕರು, ಸ್ಮಾರ್ಟ್‌ ಸಿಟಿ

Advertisement

Udayavani is now on Telegram. Click here to join our channel and stay updated with the latest news.

Next