ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳ ಹಿತ ಕಾಯುವ ದೃಷ್ಟಿಯಿಂದ ರಾಜ್ಯ ಸರ್ಕಾರ ಆರಂಭಿಸಿದ್ದ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ “ಬಡವರ ಬಂಧು’ ಈಗ ಕಷ್ಟದಲ್ಲಿರುವ ಬೀದಿ ಮತ್ತು ಸಣ್ಣ ವ್ಯಾಪಾರಿಗಳಿಗೆ ನೆರವಾಗುತ್ತಿಲ್ಲ. ಈ ಯೋಜನೆಯಡಿ ಬ್ಯಾಂಕ್‌ಗಳು ವ್ಯಾಪಾರಿಗಳಿಗೆ ಸಾಲ ನೀಡುತ್ತಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಹಲವು ಬೀದಿ ಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಜ್ಯದಲ್ಲಿರುವ ಸುಮಾರು 4 ಲಕ್ಷ ಬೀದಿ ಬದಿ ಮತ್ತು ಸಣ್ಣ ವ್ಯಾಪಾರಿಗಳನ್ನು ಮೀಟರ್ ಬಡ್ಡಿ ಮಾಫಿಯಾದಿಂದ ರಕ್ಷಿಸುವ ಹಿನ್ನೆಲೆ ಯಲ್ಲಿ ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ಈ ಯೋಜನೆ ಪ್ರಾರಂಭಿಸಿದ್ದರು. ಈ ಯೋಜನೆಯಡಿ ನೋಂದಾಯಿತ ಬೀದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಡಿಸಿಸಿ ಬ್ಯಾಂಕ್ ಹಾಗೂ ಪಟ್ಟಣ ಸಹಕಾರ ಬ್ಯಾಂಕ್‌ಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ 2,000 ರೂ.ನಿಂದ 10,000 ರೂ.ವರೆಗೆ ಸಾಲ ಒದಗಿಸಲಾಗುತ್ತಿತ್ತು. ಹೀಗಾಗಿ ಸುಮಾರು 25 ಸಾವಿರ ದಿಂದ 30 ಸಾವಿರ ಜನರು ಈ ಯೋಜನೆ ಲಾಭ ಪಡೆದಿದ್ದಾರೆ. ಬೆಂಗಳೂರಿನಲ್ಲಿ 24,650 ಬೀದಿ ವ್ಯಾಪಾರಿಗಳು ಹೆಸರು ನೋಂದಾಯಿಸಿ ಕೊಂಡಿದ್ದಾರೆ.
ಸುಮಾರು 15 ಸಾವಿರ ಜನರಿಗೆ ಗುರುತಿನ ಚೀಟಿ ನೀಡಲಾಗಿದೆ. ಇದರಲ್ಲಿ 5 ಸಾವಿರ ಜನರು ಈ ಯೋಜನೆಯಡಿ ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆದಿದ್ದಾರೆ ಎಂದು ಕರ್ನಾಟಕ ಬೀದಿ ವ್ಯಾಪಾರಿಗಳ ಸಂಘಟನೆ ಒಕ್ಕೂಟದ ರಾಜ್ಯಾಧ್ಯಕ್ಷ ಸಿ.ಇ.ರಂಗಸ್ವಾಮಿ ಹೇಳಿದ್ದಾರೆ.
ಈ ಹಿಂದೆ ಸರ್ಕಾರ ಬ್ಯಾಂಕ್‌ಗಳಿಗೆ ಬಡ್ಡಿ ನೀಡಿ ವ್ಯಾಪಾರಸ್ಥರಿಗೆ ಬ್ಯಾಂಕ್‌ಗಳ ಮೂಲಕ ಹಣ ಪಾವತಿ ಮಾಡುತ್ತಿತ್ತು. ಈಗ ಸರ್ಕಾರ ಬ್ಯಾಂಕ್‌ಗಳಿಗೆ ಬಡ್ಡಿ ಪಾವತಿ ಮಾಡುತ್ತಿಲ್ಲ. ಆ ಹಿನ್ನೆಲೆಯಲ್ಲಿಯೇ ಬಡವರು ಬಂಧು ಯೋಜನೆಯಡಿ ಸಾಲ ನೀಡಲು ಸಾಧ್ಯವಿಲ್ಲ ಎಂದು ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳು ಹೇಳುತ್ತಾರೆ ಎಂದು ರಂಗಸ್ವಾಮಿ ಮಾಹಿತಿ ನೀಡಿದರು. ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕುಟುಂಬ ನಿರ್ವಹಣೆ ಕಷ್ಟವಾಗಿದೆ: ಈ ಹಿಂದೆ “ಬಡವರ ಬಂಧು’ ಯೋಜನೆಯಡಿ 10 ಸಾವಿರ ರೂ. ಸಾಲ ಪಡೆದು ಜೀವನ ರೂಪಿಸಿ ಕೊಂಡಿದ್ದೆ. ಪ್ರತಿ ದಿನದ ವ್ಯಾಪಾರ ದಲ್ಲಿ ಬ್ಯಾಂಕ್‌ಗೆ ಸಾಲದ ರೂಪದ ಹಣವಾಗಿ 100 ರೂ. ಪಾವತಿ ಮಾಡುತ್ತಿದ್ದೆ. 3 ತಿಂಗಳಿಗೆ ಸಾಲದ ಹಣ ಹಿಂದುರುಗಿಸಿದ್ದೆ. ಈಗ “ಬಡವರ ಬಂಧು’ ಯೋಜನೆಯಡಿ ಸಾಲ ದೊರಕದ ಹಿನ್ನೆಲೆಯಲ್ಲಿ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ಇಸ್ರೋ ಲೇಔಟ್‌ನ ಹೂವಿನ ವ್ಯಾಪಾರಿ ಮುನಿಯಮ್ಮ ಹೇಳಿದರು.
ನೀಲಸಂದ್ರದ ತರಕಾರಿ ವ್ಯಾಪಾರಿ ಸುನಿಲ್, ಖಾಸಗಿಯವರಲ್ಲಿ ಸಾಲ ಪಡೆದರೆ 10 ರಿಂದ 15 ಪರ್ಸೆಂಟ್ ಬಡ್ಡಿ ನೀಡ ಬೇಕಾಗುತ್ತದೆ. ವ್ಯಾಪಾರ ಇಲ್ಲದಿದ್ದರೂ ಬಡ್ಡಿ ಕಟ್ಟಬೇಕಾದ ಪ್ರಸಂಗ ಎದುರಾಗಿದೆ. ಬಡವರ ಬಂಧು ಯೋಜನೆ ಸಾಕಷ್ಟು ಅನುಕೂಲವಾಗಿತ್ತು ಎಂದರು.