Advertisement
ಕಾಲೇಜಿಗೆ ಹೋಗಬೇಕೆಂದರೆ ಒಂದು ಮುಖ್ಯ ರಸ್ತೆ, ಎರಡು ಅಡ್ಡರಸ್ತೆ, ಮತ್ತೂಂದು ಗಲ್ಲಿರಸ್ತೆ ಹಾದು ಹದಿನೈದು ನಿಮಿಷ ನಡೆದು ತಲುಪುತ್ತಿದ್ದ ನನಗೆ ಇದ್ದಕ್ಕಿದ್ದಂತೆ ಒಂದು ಸಣ್ಣ ರಸ್ತೆ. ಸ್ವಲ್ಪ ಮುಂದಕ್ಕೆ ಸಾಗಿ ಬಲಕ್ಕೆ ತಿರುಗಿದರೆ ಮುಖ್ಯರಸ್ತೆ, ಐದು ನಿಮಿಷ ಹೆಜ್ಜೆ ಹಾಕುವಲ್ಲಿ ಕಾಲೇಜು ಎಂಬಂತಹ ಸ್ಥಿತಿ ಬಂದಿರುವುದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂಬ ಗೊಂದಲದಲ್ಲೇ ದಿನವೂ ಕಾಲೇಜು ತಲುಪುತ್ತಿದ್ದೇನೆ.
Related Articles
Advertisement
ರೂಮಿನ ಕುರ್ಚಿಯೊಂದನ್ನು ಹೊರಗಿಟ್ಟು ಸುಮ್ಮನೆ ಕುಳಿತುಕೊಂಡಾಗ ಹಳೆಯೂರಿನ ನೆನಪುಗಳ ಕಾದಂಬರಿ ಪುಟಪುಟವಾಗಿ ತೆರೆದುಕೊಳ್ಳುತ್ತದೆ. ಹಲವು ಅಧ್ಯಾಯಗಳು. ಕಾದಂಬರಿಯಂತಿದ್ದರೂ ಯಾವ ಅಧ್ಯಾಯದಿಂದಲೂ ತೊಡಗಬಹುದು. ನೆನಪುಗಳ ಕಾದಂಬರಿಯ ಶುರುವಿನ ಸಾಲಿನ ತಾಜಾತನ, ಕೊನೆಯಲ್ಲಿ ಕಾಣುವ ತಾರ್ಕಿಕ ಅಂತ್ಯದ ಭಾವ ಇವೆಲ್ಲವೂ ಕಣ್ಣಂಚಿನಲ್ಲಿ ಹೊಳಪೊಂದನ್ನು ತೀಡಿ ಮರೆಯಾಗುತ್ತವೆ. ಹೀಗೆ ಸುರಿಯುವ ಮಳೆ ಒಮ್ಮೆಯಾದರೂ ಆ ಅರಮನೆಗಳ ನಗರಿಯಲ್ಲಿ ಕಂಡಿದ್ದ ನೆನಪಿಲ್ಲ. ಅಬ್ಬಬ್ಬವೆಂದರೆ ಐದರಿಂದ ಹದಿನೈದು ನಿಮಿಷಗಳೊಳಗೆ ನಿಂತುಹೋಗುವ ಮಳೆಗಳು. ಆದರೆ, ಅದೊಂದು ದಿನ- ತಾತ್ಕಾಲಿಕವಾಗಿಯಾದರೂ ಅಂತಿಮವಾದ ವಿದಾಯವನ್ನು ಹೇಳಿ ಹೊರಡಬೇಕೆಂದು ಕೊಂಡಂಥ ದಿನ. ಎಂಥ ಮಳೆ! ಸಾಲಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳೆಲ್ಲವೂ ಎದ್ದು ನೀರನ್ನು ಹಿಂಬಾಲಿಸಿಕೊಂಡು ಹೋಗುವಂಥ ಮಳೆ. ಇಡೀ ಮೈಸೂರಿನ ವಾಸದಲ್ಲಿ ಕೊನೆಯ ದಿನ ಅಂತಹ ಮಳೆ ನೋಡಿದ್ದು.
ಆ ನಗರಕ್ಕೆ ನಾನು ಕಟ್ಟಿಕೊಂಡು ಹೋಗಿದ್ದ ಕನಸೆಲ್ಲವೂ ಹಾಗೇ ತೊಳೆದುಕೊಂಡು ಹೋದವಾ? ಅಥವಾ ಐದು ವರ್ಷದಲ್ಲಿ ಮತ್ತೇನನ್ನೂ ಉಳಿಸಿ ಕೊಂಡುಹೋಗಲಾಗದೆ ಖಾಲಿ ನೆನಪುಗಳನ್ನಷ್ಟೇ ಹೊತ್ತು ನಿಂತವನ ಅಷ್ಟೂ ನೆನಪುಗಳನ್ನು ಹೊಟ್ಟೆಕಿಚ್ಚಿನಿಂದ ತೊಳೆದುಕೊಂಡೇ ಹೋಗಬೇಕೆಂದು ಕೊಂಡುಹೋದ ಮಳೆಯೇ ಅದು? ಹೌದು. ಅದು ಎಲ್ಲವನ್ನೂ ಕೊಂಡುಹೋಗಿತ್ತು. ಆದರೆ, ಉಜಿರೆಯೆಂಬ ಪುಟ್ಟ ಊರಿನಲ್ಲಿ ಹನಿಹನಿಯಾಗಿ ಆ ಅಮರ ಕ್ಷಣಗಳನ್ನು ಮನದೊಳಗೆ ಇಳಿಸುತ್ತಿದೆ. ಮಳೆ ನೆನಪುಗಳ ಶುದ್ಧ ರೂಪ. ಇಳಿಯುವುದು ನೇರವಾಗಿ ಎದೆಯೊಳಗೆ. ಮೈಸೂರಿನಲ್ಲಿ ಅನುಭವಿಸಿದ್ದೆಲ್ಲವೂ ಇಲ್ಲಿ ಎದೆಗಿಳಿಯಿತು.
ಹಾಗಾದರೆ ಉಜಿರೆ? ಇದೊಂದು ಸಣ್ಣ ಕತೆಯಾ? ಹೌದೇನೋ… ಶುರುವಾಗುವ ಮೊದಲು ಯಾವುದಕ್ಕೂ ವಿವಿಧ ಬಗೆಯ ಆಯಾಮಗಳೇ ಇರುವುದಿಲ್ಲ. ಸಣ್ಣಕತೆಗೆ, ಬೇಗ ಮುಗಿಯುತ್ತದೆಂಬ ಚೌಕಟ್ಟಿನಲ್ಲೇ ಕತೆಗಾರ ತೊಡಗುತ್ತಾನೆ. ಆದರೆ, ಆ ವ್ಯಾಪ್ತಿಯಲ್ಲೇ ಓದುಗನಿಗೆ ಏನೇನನ್ನು ಯಾವ ಪ್ರಮಾಣದಲ್ಲಿ ದಾಟಿಸಬೇಕೋ ಅದನ್ನೂ ದಾಟಿಸಿರುತ್ತಾನೆ. ಉಜಿರೆಯೆಂಬ ಸಣ್ಣ ಕತೆಯ ಮೊದಮೊದಲ ಪುಟಗಳಿವು. ಮುಂದೇನನ್ನು ಕತೆಗಾರ ರಚಿಸಿದ್ದಾನೋ ಗೊತ್ತಿಲ್ಲ. ಇದೇ ಮಳೆ-ಬಿಸಿಲುಗಳ ನಡುವೆ ಮಗುಮ್ಮಾಗಿ ಕೂತು ಕುತೂಹಲದಿಂದ ಸಣ್ಣಕತೆಯ ಪುಟವನ್ನು ದಿನವೂ ತಿರುವುತ್ತೇನೆ. ಬೇಸರವಾದರೆ ಕಾದಂಬರಿ ಇದೆಯಲ್ಲ?!
ಶಿವಪ್ರಸಾದ್ ಹಳುವಳ್ಳಿದ್ವಿತೀಯ ಬಿಎ (ಪತ್ರಿಕೋದ್ಯಮ), ಎಸ್‌ಡಿಎಂ ಕಾಲೇಜು, ಉಜಿರೆ.