ಬೆಂಗಳೂರು: ಸದಾ ಸಂಚಾರ ದಟ್ಟಣೆಯಿಂದ ಕೂಡಿರುವ ಗೊರಗುಂಟೆಪಾಳ್ಯ ಸರ್ಕಲ್‌ನಿಂದ ಬಿಇಎಲ್ ಸರ್ಕಲ್‌ವರೆಗಿನ ರಸ್ತೆಯಲ್ಲಿ ಸಂಚರಿಸುವುದು ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ಸವಾಲಾಗಿ ಪರಿಣಮಿಸಿದೆ. ರಸ್ತೆ ಕಿರಿದಾಗಿದ್ದರೂ ಭಾರೀ ವಾಹನಗಳಿಗೆ ಪ್ರವೇಶ ಕಲ್ಪಿಸಲಾಗಿದೆ.
ಹೀಗಾಗಿ, ಈ ರಸ್ತೆಯಲ್ಲಿ ಒಂದೊಮ್ಮೆ ಭಾರೀ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾದ ಸ್ಥಿತಿ. ಇದರಿಂದ ಪೊಲೀಸರಿಗೆ ತಲೆನೋವು ತಪ್ಪಿದ್ದಲ್ಲ. ರಸ್ತೆ ಅಕ್ಕಪಕ್ಕ ಪಾದಚಾರಿ ಮಾರ್ಗವಿಲ್ಲ. ಮಳೆ ನೀರು ಹರಿದು ಹೋಗಲು ಚರಂಡಿ ಕೂಡ ಇಲ್ಲ. ಜತೆಗೆ ರಾತ್ರಿ ವೇಳೆ ವಾಹನ ಸುಗಮವಾಗಿ ಸಾಗಲು ಬೀದಿ ದೀಪಗಳ ಬೆಳಕೂ ಇರುವುದಿಲ್ಲ. ತುಮಕೂರು ರಸ್ತೆಯಿಂದ ಬರುವ ಭಾರೀ ವಾಹನಗಳು ನಗರದ ಒಳ ಪ್ರವೇಶಿಸಿದೇ ಹೆಬ್ಟಾಳಕ್ಕೆ ಸಂಪರ್ಕಿಸಲು ಇರುವ ಏಕೈಕ ಮಾರ್ಗ ಇದಾಗಿದೆ.
ರಸ್ತೆಯಲ್ಲಿ ಪ್ರತಿ ಗಂಟೆಗೆ 4 ಸಾವಿರ ವಾಹನಗಳು ಓಡಾಟ ನಡೆಸಲಿದ್ದು, ದಟ್ಟಣೆಯ ಸಮಯದಲ್ಲಿ ವಾಹನಗಳು ಹೆಚ್ಚಾಗಿರಲಿವೆ. ಇಲ್ಲಿ ಸಂಚರಿಸುವ ವಾಹನಗಳ ವೇಗ ಗಂಟೆಗೆ ಕೇವಲ 20 ಕಿ.ಮೀ ಇದ್ದು, ರಸ್ತೆ ಗಲ ಕೇವಲ 20 ಅಡಿ. ಷ್ಟರಲ್ಲೇ ಹೆಜ್ಜೆಗೊಂದು ಗುಂಡಿಯಿದ್ದು, ಚರಂಡಿ ಇಲ್ಲದ ಪರಿಣಾಮ ಮಳೆ ನೀರೆಲ್ಲ ರಸ್ತೆ ಮೇಲೆ ಹರಿಯುತ್ತದೆ.
ಬಿಇಎಲ್ ಸರ್ಕಲ್ ಕಡೆಯಿಂದ ಬರುವ ರಸ್ತೆ ಬದಿಯಲ್ಲಿ ತಗ್ಗು ದಾರಿ ಇರುವುದರಿಂದ ವಾಹನಗಳು ಎಷ್ಟೋ ಬಾರಿ ಆಯ ತಪ್ಪಿ ಬಿದ್ದಿವೆ. ಈ ಮಾರ್ಗದ ಆಸುಪಾಸು ಇರುವ ಕಂಪನಿಗಳ ನೌಕರರು ಪಾದಚಾರಿ ಮಾರ್ಗವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಗೊರಗುಂಟೆಪಾಳ್ಯ ವೃತ್ತದಿಂದ ಬಿಇಎಲ್ ಸರ್ಕಲ್‌ವರೆಗಿನ ರಸ್ತೆಯ ನೆಲ ಮಾರ್ಗದಲ್ಲಿ “ಗೇಲ್’ ಅಡುಗೆ ಅನಿಲ ಕೊಳವೆ ಹಾದು ಹೋಗಿದ್ದು, ನೆಲ ಅಗೆಯ ಬಾರದು ಎಂಬ ಫಲಕಗಳಿವೆ.
ಪಾದಚಾರಿ ರಸ್ತೆ, ಚರಂಡಿ ನಿರ್ಮಾಣಕ್ಕೆ ತೊಂದರೆ ಇಲ್ಲ. ಆದರೂ, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಫುಟ್‌ಪಾತ್ ನಿರ್ಮಿಸಿಲ್ಲ. ರಸ್ತೆ ಡಾಂಬರೀಕರಣ ಮಾಡಿ ನಾಲ್ಕು ವರ್ಷವಾಗಿದೆ. “ವಾರದಿಂದ ನಗರದಲ್ಲಿ ಮಳೆಯಾಗುತ್ತಿದ್ದು, ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ನೀರು ಹೋಗಲು ಚರಂಡಿಯೇ ಇಲ್ಲ. ಪಾದಚಾರಿ ಮಾರ್ಗ ಇಲ್ಲದಿರುವುದರಿಂದ ರಸ್ತೆಯಲ್ಲೇ ನಡೆದು ಹೋಗಬೇಕು. ಮಳೆ ಬರುವಾಗ ಮ್ಯಾನ್‌ಹೋಲ್ ಗಳಿಂದ ನೀರು ಹೊರಬರುತ್ತದೆ. ಬಾರಿ ವಾಹನಗಳು ಹೆಚ್ಚಾಗಿ ಸಂಚರಿಸುವುದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನಿಸಬೇಕು’ ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಮೇಲ್ಸೇತುವೆಯಲ್ಲಿ ಗುಂಡಿಗಳು : ಗೊರಗುಂಟೆಪಾಳ್ಯ ಸರ್ಕಲ್‌ನ ಮಾಲೂರು- ಬೈರನಹಳ್ಳಿ ವರ್ತುಲ ರಸ್ತೆಯಲ್ಲಿರುವ ಮೇಲ್ಸೇತುವೆ ಗುಂಡಿಮಯವಾಗಿದ್ದು, ಸುಮಾರು 400 ಮೀ. ಉದ್ದದ ಸೇತುವೆಯಲ್ಲಿ ಟಾರ್ ಕಿತ್ತುಹೋಗಿ ಕಬ್ಬಿಣ ಮೇಲೆದ್ದಿವೆ. ವಾಹನಗಳು ಸಂಚರಿಸುವಾಗ ಟೈರ್‌ಗೆಹಾನಿಯಾಗುತ್ತಿದ್ದು, ಗುಂಡಿ ತಪ್ಪಿಸಲು ಚಾಲಕರು ಹರಸಾಹಸ ಪಡುತ್ತಾರೆ. ಈ ಹೊರವರ್ತುಲ ರಸ್ತೆ ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಬರಲಿದ್ದು, ಶಾಸಕರಿಲ್ಲದೇ ಕಾಮಗಾರಿಗಳು ನೆನಗುದಿಗೆ ಬಿದ್ದಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ರಸ್ತೆಗೆ ನಾಲ್ಕು ವರ್ಷದ ಹಿಂದೆ ಡಾಂಬರೀಕರಣ ಮಾಡಲಾಗಿತ್ತು. ಪ್ರಸ್ತುತ ಗುಂಡಿಗಳು ಬಿದ್ದಿದ್ದು, ಪಾದಚಾರಿ ರಸ್ತೆ ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ, ಸೂಕ್ತ ಕ್ರಮಕೈಗೊಳ್ಳಲಾಗುವುದು.-
ಆಶಾ, ಪಾಲಿಕೆ ಸದಸ್ಯೆ
-ಮಂಜುನಾಥ್ ಗಂಗಾವತಿ