ಕಾರವಾರ: ಸಣ್ಣ ನೀರಾವರಿ ಅಂಕಿ ಅಂಶಗಳ ಸಮನ್ವಯೀಕರಣ ಯೋಜನೆಗಾಗಿ ನಡೆಸುತ್ತಿರುವ, 6ನೇ ಸಣ್ಣ ನೀರಾವರಿ ಗಣತಿ ಕಾರ್ಯವನ್ನು ಆದಷ್ಟು ಶೀಘ್ರವಾಗಿ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ| ಕೆ. ಹರೀಶಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾದಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ, ನೀರಿನಾಸರೆಗಳ ಗಣತಿ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಣ್ಣ ನೀರಾವರಿ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಸಂಬಂಧಿತ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿರುವ ಕಾಲುವೆ, ತೊರೆ, ಕೆರೆ, ಕುಂಟೆ ಇವುಗಳನ್ನು ಸಮೀಕ್ಷೆಗೆ ಒಳಪಡಿಸಿ ಗಣತಿಯ ಸಮಗ್ರ ವರದಿಯನ್ನು ಶೀಘ್ರದಲ್ಲಿ ನೀಡಬೇಕು ಎಂದರು.
ಗಣತಿ ಕಾರ್ಯಕ್ಕಾಗಿ ಜಿಲ್ಲೆಯ ಎಲ್ಲಾ ತಹಶೀಲ್ದಾರರು ತಮ್ಮ ವ್ಯಾಪ್ತಿಯ ಸಂಬಂಧಿಸಿದ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗೆ ತರಬೇತಿ ಆಯೋಜಿಸಬೇಕು. ಇದಕ್ಕಾಗಿ ಸಾಂಖೀಕ ಸಂಗ್ರಹಣ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳು ಅಗತ್ಯ ತರಬೇತಿ ನೀಡಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಅಗೆದ ಬಾವಿ, ಆಳವಿಲ್ಲದ ಕೊಳವೆ ಬಾವಿಗಳು, ಮಧ್ಯಮ ಆಳದ ಕೊಳವೆ ಬಾವಿಗಳು, ಆಳದ ಕೊಳವೆಬಾವಿಗಳು ಎಷ್ಟು ಇವೆ ಎಂಬ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸುವಂತಹ ಕಾರ್ಯವಾಗುವ ಮೂಲಕ ಗಣತಿ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಹೇಳಿದರು.
ಈ ಗಣತಿಯಲ್ಲಿ ಸಂಗ್ರಹಿಸಲಾಗುವ ಮಾಹಿತಿಯಿಂದ ಗ್ರಾಮೀಣ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ನೀರಿನ ಲಭ್ಯತೆ ಮತ್ತು ಅವಶ್ಯಕತೆ ಅಂದಾಜಿಸಬಹುದಾಗಿದೆ. ಮುಂದಿನ ಬೇಸಿಗೆ ದಿನಗಳಲ್ಲಿ ಇದು ಸಾಕಷ್ಟು ಸಹಕಾರಿ ಆಗುವುದರಿಂದ ಸಂಬಂಧಿಸಿದ ಇಲಾಖೆಗಳು ನೀರಿನಾಸರೆಗಳ ಗಣತಿ ಕಾರ್ಯಕ್ಕೆ ಪ್ರಾಮುಖ್ಯತೆಗೆ ಒತ್ತು ನೀಡಿ ಕಾರ್ಯನಿರ್ವಹಿಸಬೇಕು ಎಂದರು.
ಜಿಪಂ ಸಿಇಒ ಎಂ.ರೋಷನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.