ಬೆಂಗಳೂರು: ಭಾರತದ ಸಣ್ಣ ಕೈಗಾರಿಕಾ ವಲಯ ಚೀನಾ ಮಾರುಕಟ್ಟೆ ಮೇಲೆ ಅವಲಂಬಿತವಾಗಿದ್ದು ಒಂದು ವೇಳೆ ತರಾತುರಿ ಯಲ್ಲಿ ಸರ್ಕಾರ ಚೀನಾ ಉತ್ಪನ್ನ ನಿಷೇಧಿಸಿದರೆ ದೇಶದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಮೇಲೆ ದೊಡ್ಡ ಹೊಡೆತ ಬೀಳಲಿದೆ ಎಂದು ಕಾಸಿಯಾ ಅಧ್ಯಕ್ಷ ಆರ್.ರಾಜು ಹೇಳಿದರು.
ವಿಜಯನಗರದ ಕಾಸಿಯಾ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚೀನಾದ ರಪು¤ ಮತ್ತು ಆಮದಿನ ಬಗ್ಗೆ ಬೆಳಕು ಚೆಲ್ಲಿದರು. ಭಾರತ-ಚೀನಾ ನಡುವಿನ ವ್ಯಾಪಾರ ವ್ಯವಹಾರ ಸುಮಾರು 90 ಬಿಲಿಯನ್ ಡಾಲರ್ ಆಗಿದೆ. ಹೆಚ್ಚಿನ ಪ್ರಮಾಣದ ವ್ಯವಹಾರವನ್ನು ಚೀನಾ ಭಾರತದಲ್ಲಿ ನಡೆಸುತ್ತಿದೆ. ಹಲವು ಕಂಪನಿಗಳ ಮೇಲೆ ಚೀನಾ ಬಂಡವಾಳ ಹೂಡಿಕೆ ಮಾಡಿದೆ.
2018ರಲ್ಲಿ ಸುಮಾರು 700 ಚೀನಿ ಕಂಪನಿಗಳು 11 ರಿಂದ 12 ಬಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಮಾರುಕಟ್ಟೆಯಲ್ಲಿ ಸಕ್ರಿಯವಾಗಿದ್ದವು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು. ಅಷ್ಟೇ ಅಲ್ಲ, ಹೆಚ್ಚಿನ ಸಂಖ್ಯೆಯ ಭಾರತೀಯ ಕಂಪನಿಗಳು ಚೀನಾ ದಲ್ಲಿವೆ. ಹೀಗಾಗಿ ಯಾವುದೇ ಕಾರಣಗಳಿಗಾಗಿ ಸಂಬಂಧಗಳನ್ನು ಇದ್ದಕ್ಕಿದ್ದಂತೆ ನಿಷ್ಕ್ರಿಯ ಗೊಳಿಸುವುದು ಒಳ್ಳೆಯದಲ್ಲ ಎಂದರು.
ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿ: ಕೋವಿಡ್ -19 ಹಿನ್ನೆಲೆಯಲ್ಲಿ ಸಣ್ಣ ಕೈಗಾರಿಕಾ ಕ್ಷೇತ್ರ ಸಂಕಷ್ಟದಲ್ಲಿದ್ದು ಅದನ್ನು ಪುನಶ್ಚೇತನಗೊಳಿಸುವ ಕೆಲಸ ನಡೆಯಬೇಕಾಗಿದೆ. ಸರ್ಕಾರ ಕನಿಷ್ಠ ದಾಖಲೆಗಳೊಂದಿಗೆ ಶೇ.4ರಿಂದ 6 ರ ಬಡ್ಡಿ ದರದಲ್ಲಿ ಸಾಲನೀಡಬೇಕು. ಒಂದಿಷ್ಟು ರಿಯಾ ಯ್ತಿಗಳನ್ನೂ ಪ್ರಕಟಿಸಬೇಕು, ಷರತ್ತುಗಳಿಲ್ಲದೆ ತುರ್ತು ಪರಿಹಾರ ಪ್ಯಾಕೇಜ್ ಒದಗಿಸಬೇಕು. ಭಾರತೀಯ ರಿಸರ್ವ್ ಬ್ಯಾಂಕ್ ಯೋಜನೆಗಳ ಅನುಷ್ಠಾನದ ಕುರಿತು ಮೇಲ್ವಿ ಚಾರಣೆ ನಡೆಸಬೇಕು ಎಂದು ಒತ್ತಾಯಿಸಿದರು.
ಎಂಎಸ್ ಎಂಇಗಳು ಟೆಂಡರ್‌ಗಳಲ್ಲಿನ ಅಡಚಣೆ ತೆಗೆದುಹಾಕಬೇಕು. ಜತೆಗೆ ಇಎಂಡಿ, ಅರ್ಜಿ ಶುಲ್ಕ ಪಾವತಿಗಳಿಂದ ವಿನಾಯ್ತಿ ನೀಡುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದರು. ಈ ವೇಳೆ ಕಾಸಿಯಾ ಉಪಾಧ್ಯಕ್ಷ ಕೆ.ಬಿ. ಅರಸಪ್ಪ, ಗೌರವ ಪ್ರಧಾನ ಕಾರ್ಯದರ್ಶಿ ಎಂ.ಜಿ.ರಾಜಗೋಪಾಲ್, ಜಂಟಿ ಕಾರ್ಯದರ್ಶಿ ವಿಶ್ವನಾಥರೆಡ್ಡಿ, ಖಜಾಂಚಿ ಎಸ್.ಎಂ.ಹುಸೇನ್ ಇದ್ದರು.
ಸಣ್ಣ ಕೈಗಾರಿಕಾ ಕ್ಷೇತ್ರ ಹಲವು ಸಂಕಷ್ಟಗಳನ್ನು ಎದುರಿಸುತ್ತಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಸ್‌ಎಂಇಗಳಿಗೆ ಜಿಎಸ್‌ಟಿ ದರ ಕಡಿಮೆ ಮಾಡಬೇಕು. ಜತೆಗೆ ರಾಜ್ಯ ಸರ್ಕಾರ ವಿದ್ಯುತ್ ತೆರಿಗೆಯನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು. ಕೋವಿಡ್‌ಗೆ ಸಂಬಂಧಿಸಿದ ಪ್ರೋತ್ಸಾಹ ಧನ ಇನ್ನೂ ಸೇರಬೇಕಾದವರ ಕೈ ಸೇರಿಲ್ಲ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
-ಆರ್.ರಾಜು, ಕಾಸಿಯಾ ಅಧ್ಯಕ್ಷ